ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಜರುಗಿದಶ್ರೀಚಂಪಕಧಾಮ ಸ್ವಾಮಿ ಬ್ರಹ್ಮ ರಥೋತ್ಸವ

| Published : Mar 31 2024, 02:09 AM IST

ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಜರುಗಿದಶ್ರೀಚಂಪಕಧಾಮ ಸ್ವಾಮಿ ಬ್ರಹ್ಮ ರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬನ್ನೇರುಘಟ್ಟದ ಶ್ರೀ ಚಂಪಕಧಾಮ ಸ್ವಾಮಿ ಬ್ರಹ್ಮ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು ದಕ್ಷಿಣ

ಪರಂಪರೆಯ ಕೇಂದ್ರವಾದ ಬನ್ನೇರುಘಟ್ಟದ ಶ್ರೀ ಚಂಪಕಧಾಮ ಸ್ವಾಮಿ ಬ್ರಹ್ಮ ರಥೋತ್ಸವ ಪ್ರತಿವರ್ಷದಂತೆ ಈ ವರ್ಷವೂ ಅದ್ಧೂರಿಯಾಗಿ ನಡೆಯಿತು. ಶ್ರದ್ಧಾ ಭಕ್ತಿಯ ಆಚರಣೆಗೆ ಸಾವಿರಾರು ಭಕ್ತರು ಸಾಕ್ಷಿಯಾದರು.

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಬನ್ನೇರುಘಟ್ಟದಲ್ಲಿ ಪುರಾತನ ಕಾಲದಿಂದ ನೆಲೆಸಿರುವ ಇತಿಹಾಸ ಪ್ರಸಿದ್ಧ ದೇವಾಲಯವಾದ ಶ್ರೀ ಚಂಪಕಧಾಮ ಸ್ವಾಮಿ ದೇವಾಲಯದ ಪ್ರಾಂಗಣದಲ್ಲಿ ಶ್ರೀ ಭೂದೇವಿ ಸಮೇತ ಚಂಪಕಧಾಮಸ್ವಾಮಿಯ ಅಲಂಕೃತ ಉತ್ಸವ ಮೂರ್ತಿಗೆ ಧಾರ್ಮಿಕ ಪೂಜೆಗಳನ್ನು ನೆರವೇರಿಸಿ, ದೇವಾಲಯದ ಪ್ರಧಾನ ಅರ್ಚಕರು ಸಾಂಪ್ರದಾಯಿಕ ಪೂಜೆಗಳನ್ನು ಸಲ್ಲಿಸಿದರು. ನಂತರ ಶ್ರೀ ಭೂದೇವಿ ಸಮೇತ ಚಂಪಕಧಾಮ ಸ್ವಾಮಿಯ ಅಲಂಕೃತ ಉತ್ಸವ ಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸುತ್ತಿದ್ದಂತೆಯೇ ನೆರೆದಿದ್ದ ಭಕ್ತರು ದೇವರನ್ನು ಕಣ್ತುಂಬಿಕೊಂಡರು. ಗೋವಿಂದ, ಗೋವಿಂದ ಎಂದು ಜಯಘೋಷ ಹಾಕುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು.

ಬನ್ನೇರುಘಟ್ಟದ ರಾಜಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಗಿಬಂದ ರಥದ ಮೇಲೆ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಭಕ್ತರು ಹಾಗೂ ಗ್ರಾಮಸ್ಥರು ಇಷ್ಟಾರ್ಥ ಸಿದ್ಧಿಗಾಗಿ ದವನವನ್ನು ಚುಚ್ಚಿದ ಬಾಳೆಹಣ್ಣನ್ನು ರಥದ ಮೇಲೆ ಎಸೆದು ಭಕ್ತಿ ಪರಾಕಾಷ್ಟೆ ಮೆರೆದರು. ತೇರು ಚಂಪಕವಲ್ಲಿ ಮಾರಮ್ಮನ ದೇವಾಲಯದ ಮೂಲಕ ಸಾಗಿ ಬನ್ನೇರುಘಟ್ಟದ ಆಂಜನೇಯ ದೇವಾಲಯದವರೆಗೂ ಸಾಗಿತು. ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ.ಸುರೇಶ್, ಶಾಸಕ ಎಂ.ಕೃಷ್ಣಪ್ಪ, ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ತೆರಳಿದರು.

ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ್ದ ಎಲ್ಲಾ ಭಕ್ತರಿಗೂ ಪಾನಕ, ಮಜ್ಜಿಗೆ, ಕೋಸಂಬರಿ ಹಾಗೂ ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಜಯರಾಮ್, ಅಚ್ಯುತ್ ರಾಜ್, ಬನ್ನೇರುಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಸಿ.ಎಂ ಮಂಜು, ಮಾಜಿ ಅಧ್ಯಕ್ಷ ಮದನ್ ಗಿರಿ, ಸದಸ್ಯ ಬಾಬುಸಿಂಗ್, ರಾಜೇಶ್ವರಿ, ಚೇತನ್, ಶ್ರೀನಿವಾಸಯ್ಯ ಸೇರಿದಂತೆ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.