ಸಾರಾಂಶ
ಕನ್ನಡಪ್ರಭ ವಾರ್ತೆ ಸಿರಿಗೆರೆ
ಗ್ರಾಮೀಣ ಭಾಗಗಳಲ್ಲಿ ಶಾಲೆಗಳನ್ನು ತೆರೆದು ಶಿಕ್ಷಣ ವಂಚಿತರಿಗೆ ಸೌಲಭ್ಯಗಳನ್ನು ನೀಡಬೇಕೆಂಬ ಸಂಕಲ್ಪವು ನಮ್ಮ ಗುರುಗಳಾದ ಶಿವಕುಮಾರ ಶ್ರೀ ಮಹದಾಸೆಯಾಗಿತ್ತು ಎಂದು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಸಿರಿಗೆರೆಯಲ್ಲಿ ನಡೆಯುತ್ತಿರುವ ಶಿವಕುಮಾರ ಶ್ರೀ ಶ್ರದ್ಧಾಂಜಲಿ ಅಂಗವಾಗಿ ಆಯೋಜಿಸಿದ್ದ ಹಿರಿಯ ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ನಿವೃತ್ತ ನೌಕರರ ಸಮಾವೇಶದಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.ನಮ್ಮ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಸಾವಿರಾರು ವಿದ್ಯಾರ್ಥಿಗಳು ಇಂದು ಜಗತ್ತಿನ ಉದ್ದಗಲಕ್ಕೂ ಉನ್ನತ ಹುದ್ದೆ ಅಲಂಕರಿಸಿದ್ದಾರೆ. ಎಲ್ಲಾ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ತಳಹದಿ ಹಾಕಿದವರು ನಮ್ಮ ಸಂಸ್ಥೆಯ ಅಧ್ಯಾಪಕರು. ಹಿರಿಯ ವಿದ್ಯಾರ್ಥಿಗಳ ಸಮಾವೇಶಗಳಿಂದ ವಿದ್ಯಾರ್ಥಿಗಳಾದ ನೀವು ಅವರ ಸಾಧನೆಯ ಸ್ಫೂರ್ತಿ, ಪ್ರೇರಣೆಗಳನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ನಮ್ಮ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿರುವ ಎಲ್ಲಾ ವಿದ್ಯಾರ್ಥಿಗಳನ್ನು ತಂತ್ರಜ್ಞಾನದ ಸಹಾಯದಿಂದ ಒಟ್ಟುಗೂಡಿಸುವ ಕಾರ್ಯ ನಡೆಯುತ್ತಿದೆ ಎಂದರು.
ಆದಾಯ ತೆರಿಗೆ ಸಹಾಯಕ ನಿಯಂತ್ರಕ ಡಾ. ಎಸ್. ಬಾಬು ಮಾತನಾಡಿ, ತರಳಬಾಳು ಸಂಸ್ಥೆ ಶಿಸ್ತಿಗೆ ಹೆಸರುವಾಸಿಯಾಗಿದೆ. ಸಿರಿಗೆರೆಯಲ್ಲಿ ಶಿಕ್ಷಣ ಪಡೆದು ಸರ್ಕಾರದ ಉನ್ನತ ಅಧಿಕಾರಿಯಾಗಿರುವುದು ನನಗೆ ಹೆಮ್ಮೆಯೆನಿಸುತ್ತದೆ. ಹೈಸ್ಕೂಲ್ ಮತ್ತು ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ಕಲಿತ ಸಂಸ್ಕಾರವೇ ನನ್ನ ಬದುಕಿಗೆ ಪ್ರೇರಣೆಯಾಗಿದೆ ಎಂದರು. ಬೆಳಗಾಂ ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಜೆ. ಮಂಜಣ್ಣ ಮಾತನಾಡಿ, ಸಿರಿಗೆರೆ ಸಂಸ್ಥೆಯ ಸಂಸ್ಕಾರದಿಂದ ಅನೇಕ ಜನರು ಬದುಕು ಕಟ್ಟಿಕೊಳ್ಳಲು ಆಧಾರವಾಗಿದೆ. ಸಿರಿಗೆರೆ ಮಠ ಜ್ಞಾನಪರಂಪರೆಗೆ ಸಾಕ್ಷಿಯಾಗಿರುವ ಮಠ. ಹಿರಿಯ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುವ ಗುಣದಿಂದ ಧನ್ಯತಾ ಭಾವ ಹೆಚ್ಚಿಸುತ್ತದೆ ಎಂದರು. ಕ್ಯಾಪ್ಟನ್ ಅನುಶ್ರಿ ಮಾತನಾಡಿ, ನಮ್ಮ ಜೀವನ ರೂಪುಗೊಳ್ಳಲು ಪಠ್ಯದ ಜತೆಗೆ ಸಂಸ್ಕಾರ, ಶಿಸ್ತು ರೂಢಿಸಿಕೊಳ್ಳಲು ಶ್ರೀ ಮಠದ ಶಿಕ್ಷಣ ಕಾರಣವಾಗಿದೆ. ನಾನು ಓದಿದ ಅನುಭವಮಂಟಪ ಶಾಲೆಯಲ್ಲಿ ಹೆಚ್ಚಿನ ಚಟುವಟಿಕೆಗಳಲ್ಲಿ ಭಾಗವಹಿಸಿದ ಕಾರಣದಿಂದ ದೆಹಲಿ ಪೆರೇಡ್ ನಲ್ಲಿ ಭಾಗವಹಿಸಲು ಕಾರಣವಾಯಿತು ಎಮದು ತಿಳಿಸಿದರು.ಸಾಹಿತಿ ನಿಬಗೂರು ರಾಜಪ್ಪ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಅನೇಕ ಶಾಲಾ-ಕಾಲೇಜುಗಳನ್ನು ತೆರೆದು ಶಿಕ್ಷಣದಿಂದ ವಂಚಿತರಾದ ಸಾವಿರಾರು ಜನರ ಬದುಕಿಗೆ ಬೆಳಕಾದವರು ಶಿವಕುಮಾರ ಶ್ರೀಗಳು, ಉತ್ತಮ ಸಾಹಿತಿಯಾಗಿ ರೂಪುಗೊಳ್ಳಲು ಶ್ರೀಮಠದ ಶಾಲೆಯೇ ಕಾರಣ ಎಂದರು.ಪ್ರೊ. ಬಿ.ಎಂ. ಶಿವಮೂರ್ತಿ ಮಾತನಾಡಿ, ಶ್ರೀ ಸಂಸ್ಥೆಯು ಹಿಂದುಳಿದ ದೂರದೃಷ್ಟಿಯಿಂದ ನಾನಾ ಭಾಗಗಳಲ್ಲಿ ಶಾಲೆ ಹಾಗೂ ಉಚಿತ ಹಾಸ್ಟೆಲ್ ಸ್ಥಾಪಿಸಿ, ಶಿಕ್ಷಣ ನೀಡಿ ಗ್ರಾಮಿಣ ವಿದ್ಯಾರ್ಥಿಗಳ ಜೀವನಕ್ಕೆ ಆಧಾರವಾಗಿದೆ. ನಮ್ಮಂತಹ ವಿದ್ಯಾರ್ಥಿಗಳನ್ನು ಕೊಟ್ಟ ಶ್ರೀಮಠಕ್ಕೆ ನಾನು ಎಂದೆಂದಿಗೂ ಚಿರಋಣಿ ಎಂದು ತಿಳಿಸಿದರು. ಪೋಲಿಸ್ ಉಪನಿರೀಕ್ಷಕ ಬಿ.ಎಂ. ಗುರುಶಾಂತಯ್ಯ ಮಾತನಾಡಿ ಶಿಸ್ತು, ಸಂಯಮ, ಸಂಸ್ಕಾರವಂತನಾಗಿ ಮಾಡಿದ್ದು ನಮ್ಮ ಶ್ರೀಮಠ. ಇಲ್ಲಿ ಪಡೆದ ಶಿಕ್ಷಣ ನೂರು ಜನ್ಮಗಳಿಗೂ ಸಾರ್ಥಕ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಚ್.ಪಿ. ರಾಜೇಶ್, ಪ್ರಾಂಶುಪಾಲ ಎಲ್. ಲೋಕೇಶ್, ಡಾ.ಎಂ.ಎಚ್. ರವೀಂದ್ರನಾಥ್, ಉಪನಿರ್ದೇಶಕ ಎಂ.ಆರ್. ಮಂಜುನಾಥ್, ಡೆಪ್ಯೂಟಿ ಜನರಲ್ ಮ್ಯಾನೇಜರ್ ಅಮೃತ್ ಕುಮಾರ್, ಎನ್.ಸಿ. ಮೋಹನ್, ಪೋಲಿಸ್ ವೃತ್ತನಿರೀಕ್ಷರಾದ ಬಿ.ಎಂ. ಗುರುಶಾಂತಯ್ಯ, ಪ್ರಾಧ್ಯಾಪಕ ವೈ.ಎಂ. ವಿಠಲ್ ರಾವ್, ಡಾ. ಟಿ.ಪಿ. ಪುಷ್ಪಾವತಿ, ಡಾ. ಶ್ರೀಧರ್, ಡಾ. ಮಧು, ಡಾ. ರಾಜಪ್ಪ ನಿಬಗೂರು, ಅರಣ್ಯಾಕಾರಿ ಪಿ. ಶರತ್‌ಕುಮಾರ್, ಬಿ.ಸಿ. ಸಿದ್ದಪ್ಪ, ಆಡಳಿತಾಕಾರಿ ಡಾ. ಎಚ್.ವಿ. ವಾಮದೇವಪ್ಪ, ವಿಶೇಷಾಧಿಕಾರಿ ವೀರಣ್ಣ, ಎಸ್. ಜತ್ತಿ, ಶಾಲಾ-ಕಾಲೇಜು ವಿದ್ಯಾರ್ಥಿಗಳು, ನಿವೃತ್ತ ನೌಕರರು ಇದ್ದರು.