ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕೇಂದ್ರ ಪುರಸ್ಕೃತ ಜಲಜೀವನ್ ಮಿಷನ್ ಯೋಜನೆ ಕಾಮಗಾರಿ ಕಳಪೆ ಯಾಗಿದೆ, ನೀರು ಪೂರೈಕೆಯಾಗುತ್ತಿಲ್ಲ ಎಂಬಿತ್ಯಾದಿ ಆರೋಪಗಳ ನಡುವೆ ಅಂತೂ ಕಾಮಗಾರಿ ಆಡಿಟ್ ಶುರುವಾಗುತ್ತಿದೆ. ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರು ಸರಬರಾಜು ವಾಸ್ತವ ಸ್ಥಿತಿ ತಿಳಿಯಲು ಮುಂಬರುವ ಸೋಮವಾರದಿಂದ ಕುಡಿಯುವ ನೀರಿನ ಪೂರೈಕೆಗೆ ಸಂಬಂಧಿಸಿದಂತೆ ಸಮೀಕ್ಷೆ ಆರಂಭವಾಗಲಿದೆ.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಕುಡಿಯುವ ನೀರು ಮತ್ತು ಕಸ ವಿಲೇವಾರಿ ಸಮೀಕ್ಷೆ ಕುರಿತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್ ಈ ಕುರಿತು ಸ್ಪಷ್ಟ ಪಡಿಸಿದ್ದಾರೆ.
ಕುಡಿಯುವ ನೀರಿನ ಸಮೀಕ್ಷೆಯನ್ನು ನರೇಗಾ ಎಂಜಿನಿಯರ್‌ಗಳು, ಗ್ರಾಪಂ ಸಿಬ್ಬಂದಿ ಹಾಗೂ ನೀರು ಸರಬರಾಜು ಇಲಾಖೆಯ ಎಂಜಿನಿಯರ್‌ಗಳು ಜಂಟಿಯಾಗಿ ಕೈಗೊಳ್ಳಲಿದ್ದಾರೆ. ಪಿಡಿಒಗಳು ಖುದ್ದಾಗಿ ನಿಂತು ಮೇಲ್ವಿಚಾರಣೆ ನಡೆಸಬೇಕು ಮತ್ತು ಇಡೀ ಪ್ರಕ್ರಿಯೆಯನ್ನು ತಾಪಂ ಇಒ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಂಜಿನಿಯರ್‌ಗಳು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಸೂಚಿಸಿದರು.ಚಿತ್ರದುರ್ಗ ಅತ್ಯಂತ ಕಡಿಮೆ ಮಳೆ ಪಡೆಯುವ ಜಿಲ್ಲೆಯಾಗಿದ್ದು, ಇಲ್ಲಿ ಯಾವುದೇ ಪ್ರಮುಖ ನದಿಗಳಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕೋಟ್ಯಂತರ ರು. ವೆಚ್ಚದ ಜಲಜೀವನ್ ಮಿಷನ್ ಯೋಜನೆಗಳ ಯಶಸ್ಸಿಗೆ ನೀರಿನ ಸಮೀಕ್ಷೆ ಅತ್ಯಗತ್ಯವಾಗಿದೆ. ಜೆಜೆಎಂ ಯೋಜನೆಯಡಿಯಲ್ಲಿ ಪ್ರತಿ ವ್ಯಕ್ತಿಗೆ ದಿನಕ್ಕೆ 55 ಲೀಟರ್ ನೀರು ಕೊಡುವ ಗುರಿ ಹೊಂದಲಾಗಿದೆ. ಪಂಚಾಯಿತಿಯ ಒಟ್ಟು ಜನಸಂಖ್ಯೆ ಮತ್ತು ಓವರ್ ಹೆಡ್ ಟ್ಯಾಂಕ್ ಸಾಮಥ್ರ್ಯದ ಆಧಾರದ ಮೇಲೆ ಪ್ರಸ್ತುತ ಎಷ್ಟು ನೀರು ಸರಬರಾಜು ಆಗುತ್ತಿದೆ ಮತ್ತು 55 ಲೀಟರ್ ತಲುಪಲು ಇನ್ನು ಎಷ್ಟು ಕೊರತೆ ಇದೆ ಎಂಬುದನ್ನು ಲೆಕ್ಕ ಹಾಕುವ ಸಮೀಕ್ಷೆ ಪ್ರಕ್ರಿಯೆ ಇದಾಗಿದೆ ಎಂದು ಎಂದರು.
ಕಳೆದ 10 ವರ್ಷಗಳಲ್ಲಿ ಕುಡಿಯುವ ನೀರಿಗಾಗಿ ಜಿಲ್ಲೆಯಲ್ಲಿ ಸಾವಿರಾರು ಕೋಟಿ ರು. ಖರ್ಚಾಗಿದೆ. ಇದರ ಸತ್ಫಲ ಜನರಿಗೆ ಸಿಗಬೇಕಾದರೆ ಸದ್ಯದ ವಾಸ್ತವ ಸ್ಥಿತಿ ಅರಿಯುವುದು ಮುಖ್ಯ. ಈ ಸಮೀಕ್ಷೆಯನ್ನು ಎಲ್ಲಾ ಅಧಿಕಾರಿಗಳು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕು ಎಂದು ಡಾ. ಆಕಾಶ್ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಂ.ಬಾಬು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಅಭಿಯಂತರ ಅಮರನಾಥ್ ಜೈನ್, ಜಲಜೀವನ್ ಮಿಷನ್ ಜಿಲ್ಲಾ ಯೋಜನಾ ವ್ಯವಸ್ಥಾಪಕ ಮಂಜುನಾಥ್ ನಾಡರ್, ಜಿಲ್ಲಾ ಸಮಾಲೋಚಕರಾದ ಕಿರಣ್ ಪಾಟೀಲ್, ಚಂದ್ರಕಾಂತ್, ಯಲ್ಲಪ್ಪ, ಗೀತಾಲಕ್ಷ್ಮೀ ಸೇರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ನರೇಗಾ ತಾಂತ್ರಿಕ ಸಹಾಯಕ ಅಭಿಯಂತರರು, ಬಿಲ್ ಕಲೆಕ್ಟರ್ ಗಳು , ದ್ವಿದರ್ಜೆ ಸಹಾಯಕರು ಹಾಗೂ ಸಪೋರ್ಟ್ ಎಂಜಿನಿಯರ್‌ಗಳು ಇದ್ದರು.