ಸಾರಾಂಶ
ಮುಂಡರಗಿ: ಮುಂಡರಗಿ ಇತ್ತ ಹಳ್ಳಿಯೂ ಅಲ್ಲ, ಅತ್ತ ಪ್ಯಾಟೀನೂ ಅಲ್ಲ. ಹೀಗಾಗಿ ಇಲ್ಲಿನ ಮಕ್ಕಳಿಗೆ ಪ್ಯಾಟಿ ಮಕ್ಕಳಿಗೆ ಸಿಗುವಂತಹ ಸಿಬಿಎಸ್ಇ ಶಿಕ್ಷಣ ಸಿಗಬೇಕು. ಮುಂಡರಗಿಯಲ್ಲೊಂದು ಸಿಬಿಎಸ್ಇ ಶಾಲೆ ಆಗಬೇಕೆನ್ನುವುದು ಗದುಗಿನ ಲಿಂ.ಜ. ತೋಂಟದ ಸಿದ್ಧಲಿಂಗ ಮಹಾಸ್ವಾಮೀಜಿಯವರ ಆಶಯವಾಗಿತ್ತು ಎಂದು ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಹೇಳಿದರು. ಅವರು ಶನಿವಾರ ಸಂಜೆ ಪಟ್ಟಣದ ಜ. ತೋಂಟದಾರ್ಯ ಸಿಬಿಎಸ್‌ಇ ಶಾಲೆಯ 19ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಶ್ರೀಗಳ ಆಶಯದಂತೆ ಇಲ್ಲಿ ಪ್ರಾರಂಭಿಸಿದ ಈ ಶಾಲೆ 19ನೇ ವರ್ಷಕ್ಕೆ ಕಾಲಿಟ್ಟು, ಸಾವಿರಕ್ಕೂ ಹೆಚ್ಚು ಮಕ್ಕಳು ಓದುವಂತಹ ಗುಣಮಟ್ಟದ ಶಿಕ್ಷಣ ಕೊಡುವಂತಹ ಶಾಲೆಯಾಗಿ ಹೊರಹೊಮ್ಮಿದ್ದು, ಈ ಶಾಲೆಯಿಂದ ಅನೇಕ ಪ್ರತಿಭಾವಂತ ಮಕ್ಕಳು ಶಿಕ್ಷಣ ಪಡೆದು ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುದ್ದಾರೆ. ಕನ್ನಡಭಾಷೆ ನಮ್ಮ ಮಾತೃಭಾಷೆಯಾದರೆ ಇಂಗ್ಲಿಷ್ ಅನ್ನದ ಭಾಷೆಯಾಗಿದೆ. ಹೀಗಾಗಿ ಮಕ್ಕಳು ಎರಡೂ ಭಾಷೆ ಕಲಿಯಬೇಕು ಎಂದರು. ಗದಗ ಡಿಡಿಪಿಐ ಎಂ.ಎ.ರಡ್ಡೇರ ಮಾತನಾಡಿ, ಮಕ್ಕಳಲ್ಲಿನ ಪ್ರತಿಭೆಗಳನ್ನು ಗುರುತಿಸುವುದಕ್ಕೆ ಕೇವಲ ಅಂಕಗಳಷ್ಟೇ ಮಾನದಂಡವಲ್ಲ. ಅಂಕಗಳ ಜೊತೆಗೆ ಶಾಲೆಯಲ್ಲಿ ಜರುಗಲಿರುವ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ ಪಾಲ್ಗೊಳ್ಳಬೇಕು. ಒಬ್ಬ ಮಗುವಿನ ಸಾಧನೆಯ ಹಿಂದೆ ಶಿಕ್ಷಕ, ಬಾಲಕ, ಮತ್ತು ಪಾಲಕ ಈ ಮೂರು ಅತ್ಯಂತ ಮಹತ್ವದ ಪಾತ್ರವಹಿಸುತ್ತವೆ. ಪಾಲಕರು ಮಕ್ಕಳ ಶಿಕ್ಷಣದ ಪ್ರಗತಿಯ ಕುರಿತು ತಿಳಿದುಕೊಳ್ಳಬೇಕಾದರೆ ಆಗಾಗಿ ಶಾಲೆಗೆ ಭೇಟಿ ನೀಡಿ ಮಕ್ಕಳ ಪ್ರಗತಿ ಕುರಿತು ತಿಳಿದುಕೊಳ್ಳಬೇಕು. ಮಕ್ಕಳು ಪಾಠಗಳನ್ನು ನಿರಂತರವಾಗಿ ಓದುವ ಮೂಲಕ ಮನನ ಮಾಡಿಕೊಳ್ಳಬೇಕು. ಅಂದಾಗ ಉತ್ತಮವಾಗಿ ಪರೀಕ್ಷೆ ಎದುರಿಸಲು ಸಾಧ್ಯವಾಗುತ್ತದೆ ಎಂದರು. ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಶಿಕ್ಷಣ ಪ್ರತಿಯೊಬ್ಬರ ಜೀವನದಲ್ಲಿ ಮಹತ್ವದ ಪಾತ್ರವಹಿಸಲಿದ್ದು, ಹಿಂದೆ ನಾವು ಕಲಿಯುವಾಗ ಯಾವುದೇ ಸಾಲಭ್ಯಗಳಿರಲಿಲ್ಲ. ಆದರೆ ಇಂದಿನ ಮಕ್ಕಳು ಎಲ್ಲ ಸೌಲಭ್ಯಗಳಿದ್ದರೂ ಮೊಬೈಲ್ ಗೀಳು ಅಂಟಿಸಿಕೊಂಡು ದಾರಿತಪ್ಪುತ್ತಿದ್ದಾರೆ. ಪಾಲಕರು ಮಕ್ಕಳಿಗೆ ಕೇವಲ ಶಿಕ್ಷಣ, ಸೌಲಭ್ಯ, ಹೆಚ್ಚು ಅಂಕಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿಯನ್ನು ಕಲಿಸಬೇಕು. ಅಂದಾಗ ಮಕ್ಕಳು ಸುಸಂಸ್ಕೃತಿಯಿಂದ ಬೆಳೆಯಲು ಸಾಧ್ಯವಾಗುತ್ತದೆ ಎಂದರು. ಕೊಪ್ಪಳದ ಉಪವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಬೇಲೂರು(ಹಾಸನ) ಶ್ರೀಗುರುಬಸವೇಶ್ವರ ವಿರಕ್ತ ಮಠದ ಡಾ. ಮಹಾಂತೇಶ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಮಾಜಿ ಸಚಿವ ಎಸ್. ಎಸ್. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾ.ಶರಣ್ ಕುಮಾರ ಬುಗಟಿ ಪ್ರಾಸ್ತಾವಿಕ ಮಾತನಾಡಿ, ವಾರ್ಷಿಕ ವರದಿ ವಾಚನ ಮಾಡಿದರು.
ಕಾರ್ಯಕ್ರಮದಲ್ಲಿ ಈಶ್ವರಪ್ಪ ಹಂಚಿನಾಳ, ಕೊಟ್ರೇಶ ಅಂಗಡಿ, ನಾಗೇಶ ಹುಬ್ಬಳ್ಳಿ, ಲಿಂಗರಾಜಗೌಡ ಪಾಟೀಲ, ಧ್ರುವಕುಮಾರ ಹೊಸಮನಿ, ಹೇಮಗಿರೀಶ ಹಾವಿನಾಳ, ಈಶಣ್ಣ ಬೆಟಗೇರಿ, ಆಕಾಶ ಚವ್ಹಾಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ಮಕ್ಕಳಿಗೆ ಸನ್ಮಾನಿಸಲಾಯಿತು.