ನಮ್ಮಲ್ಲಿನ ಕೊರತೆಗಳ ಸರಿಪಡಿಸಿಕೊಳ್ಳದಿದ್ದರೆ ಭಾರತ ನಂ.1 ಆಗುವುದು ಕಷ್ಟ-ಸೇಡಂ

| Published : Mar 29 2025, 12:37 AM IST

ನಮ್ಮಲ್ಲಿನ ಕೊರತೆಗಳ ಸರಿಪಡಿಸಿಕೊಳ್ಳದಿದ್ದರೆ ಭಾರತ ನಂ.1 ಆಗುವುದು ಕಷ್ಟ-ಸೇಡಂ
Share this Article
  • FB
  • TW
  • Linkdin
  • Email

ಸಾರಾಂಶ

ಜಾತೀಯತೆ ಮತ್ತು ಭ್ರಷ್ಟಾಚಾರ ಇವೆರಡರ ಮೂಲ ಬೇರು ಚುನಾವಣೆಯಾಗಿದೆ. ದೇಶಕ್ಕಾಗಿ ನಮ್ಮಲ್ಲಿನ ಕೊರತೆಗಳನ್ನು ಸರಿಪಡಿಸಿಕೊಳ್ಳದಿದ್ದರೆ ಭಾರತ ನಂ.1 ಆಗಲಿಕ್ಕೆ ಸಾಧ್ಯವಿಲ್ಲ. ನಾವು ಮಾಡುವ ನಿತ್ಯದ ಕಾಯಕದಲ್ಲಿ ದೇಶಭಕ್ತಿಯ ಅಂಶಗಳು ಇರಲೇಬೇಕೆಂದು ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಹೇಳಿದರು.

ನರಗುಂದ: ಜಾತೀಯತೆ ಮತ್ತು ಭ್ರಷ್ಟಾಚಾರ ಇವೆರಡರ ಮೂಲ ಬೇರು ಚುನಾವಣೆಯಾಗಿದೆ. ದೇಶಕ್ಕಾಗಿ ನಮ್ಮಲ್ಲಿನ ಕೊರತೆಗಳನ್ನು ಸರಿಪಡಿಸಿಕೊಳ್ಳದಿದ್ದರೆ ಭಾರತ ನಂ.1 ಆಗಲಿಕ್ಕೆ ಸಾಧ್ಯವಿಲ್ಲ. ನಾವು ಮಾಡುವ ನಿತ್ಯದ ಕಾಯಕದಲ್ಲಿ ದೇಶಭಕ್ತಿಯ ಅಂಶಗಳು ಇರಲೇಬೇಕೆಂದು ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ ಹೇಳಿದರು.

ಅವರು ಗುರುವಾರ ಸಂಜೆ ಬಸವೇಶ್ವರ ಸಮುದಾಯ ಭವನದಲ್ಲಿ ಲಯನ್ಸ್ ಕ್ಲಬ್‌ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಗನ್ನಾಥರಾವ ಜೋಶಿ ಹಾಗೂ ಅರಸ ಬಾಬಾಸಾಹೇಬ ಭಾವೆ ಅವರಂತಹ ಮಹಾನ್ ವ್ಯಕ್ತಿಗಳನ್ನು ನರಗುಂದ ನೆಲವು ನೀಡಿದೆ. ನಾವು ರೂಪದಿಂದ ಬೆಳೆಯದೇ ಮನುಷ್ಯತ್ವದ ಹತ್ತಿರ ಬೆಳೆಯಬೇಕು. ನಮಗೆಲ್ಲ ದೇಶವೇ ಮುಖ್ಯವಾಗಬೇಕು. ದೇಶದಲ್ಲಿನ ಭಾಷೆಗಳ ಕಣ್ಣೀರಿನ ಕಥೆ ಹೇಳಲಿಕ್ಕೆ ಆಗದು. 2 ಸಾವಿರ ವರ್ಷಗಳ ಕಾಲ ಪರಕೀಯರ ಆಶ್ರಯದಲ್ಲಿದ್ದ ಇಸ್ರೇಲ್ ದೇಶವು ಸಾಕಷ್ಟು ಜನರಿಂದ ಹಿಂಸೆಯನ್ನು ಅನುಭವಿಸಿದೆ. ನಂತರ ಸ್ವತಂತ್ರವಾದ ಮೇಲೆ ಬಲಿಷ್ಠ ರಾಷ್ಟ್ರವಾಗಿ ಬೆಳೆದು ನಿಂತಿದೆ. ಇಸ್ರೇಲ್ ದೇಶವು ಜಗತ್ತಿನಲ್ಲಿ ಹೆಚ್ವು ನೋಬೆಲ್ಲ ಪ್ರಶಸ್ತಿ ಪಡೆದಿದೆ. ಇಸ್ರೇಲ್ ಸುತ್ತಲೂ 36 ಶತ್ರು ರಾಷ್ಟ್ರಗಳಿವೆ. ರಾಷ್ಟ್ರ ಪ್ರೇಮ, ಸಮಯಪ್ರಜ್ಞೆ, ಪರೋಪಕಾರ ಸೇವೆ, ಬೀದಿಬದಿಯಲ್ಲಿನ ಅನಾಥರ ಸೇವೆ, ಬುದ್ಧಿಮಾಂದ್ಯ ಮಕ್ಕಳ ಸೇವೆ ಹೀಗೆ ಹಲವಾರು ಮಾನವೀಯ ಕಾರ್ಯಗಳನ್ನು ಮಾಡಬೇಕಾಗಿದೆ. ವ್ಯಕ್ತಿ ಪೂಜೆ ಬೇಡ ದೇಶಸೇವೆ ಮಾಡುವ ಧ್ಯೇಯ ಇರಲಿ ಎಂದರು. ಸಜ್ಜನರು, ತಾಯಂದಿರು ಮಕ್ಕಳ ಭವಿಷ್ಯವನ್ನು ಹಾಳು ಮಾಡಬೇಡಿ. ಮಕ್ಕಳಲ್ಲಿನ ಗುಣವನ್ನು ಕೊಲೆ ಮಾಡಬೇಡಿ. ಪುಸ್ತಕದ ಹುಳು ಮಾಡಬೇಡಿ. ಮಕ್ಕಳಲ್ಲಿ ವಿಕೃತಿ ಕಂಡರೆ ಮಾತ್ರ ಅದನ್ನು ಕೂಡಲೇ ಕಿತ್ತು ಹಾಕಿರಿ. ಇವತ್ತು ಅನ್ನ, ನೀರು, ಗಾಳಿ ವಿಷವಾಗಿದೆ. ಉತ್ತಮ ಆಹಾರದ ಬದಲು ಔಷಧಕ್ಕಾಗಿ ಹೆಚ್ಚು ಹಣ ಖರ್ಚು ಮಾಡುತ್ತಿದ್ದೇವೆ. ಸರ್ಕಾರದಿಂದ ಎಲ್ಲವನ್ನು ಉಚಿತ ಪಡೆಯುತ್ತಾ ಹೋದರೆ ನೀವು ಸರ್ಕಾರದ ಮಕ್ಕಳಾಗುತ್ತೀರಿ. ನಾವೆಲ್ಲರೂ ದುಡಿಮೆ ಹಿಂದೆ ಹೋಗೋಣ. ಜಗನ್ಮಾತೆ ಭಾರತಾಂಬೆಯನ್ನು ಆರಾಧಿಸೋಣವೆಂದು ಹೇಳಿದರು. ಶಾಸಕ ಸಿ. ಸಿ. ಪಾಟೀಲ ಮಾತನಾಡಿ, ಲಯನ್ಸ ಕ್ಲಬ್ ಪ್ರೇರಣೆಯಿಂದ ನಾನು ಶಾಸಕನಾದೆ. ಹಲವಾರು ಸೇವಾಕಾರ್ಯ ಮಾಡುವ ಮೂಲಕ ಸಮಾಜದಲ್ಲಿ ಬೆಳೆದು ಬಂದಿದ್ದೇನೆ. ಜಗನ್ನಾಥ ಜೋಶಿ ಅವರ ನೆಲದಲ್ಲಿ ಸೇವೆ ಮಾಡುವ ಭಾಗ್ಯ ಸಿಕ್ಕಿದೆ ಎಂದರು. ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶಗೌಡ ಪಾಟೀಲ ಮಾತನಾಡಿ, ಕ್ಲಬ್ ಅಡಿಯಲ್ಲಿ ಆರೋಗ್ಯ ಶಿಬಿರ, ರಕ್ತದಾನ ಶಿಬಿರ, ರಾಷ್ಟ್ರ ಮಟ್ಟದ ಎ ಗ್ರೇಡ್‌ ಕಬಡ್ಡಿ ಪಂದ್ಯಾವಳಿ, ಜ್ಞಾನದೀಪ್ತಿ ಶಿಬಿರ, ವನಮಹೋತ್ಸವ, ತಿರಂಗಾ ಯಾತ್ರೆ ಹೀಗೆ ಹಲವಾರು ಸಾಮಾಜಿಕ ಸೇವಾಕಾರ್ಯಗಳನ್ನು ಮಾಡಲಾಗಿದೆ. ನನ್ನ ವಯಕ್ತಿಕ ಬೆಳವಣಿಗೆಗೆ ಲಯನ್ಸ್ ಸಂಸ್ಥೆ ತಳಪಾಯ ಹಾಕಿಕೊಟ್ಟಿದೆ ಎಂದು ಹೇಳಿದರು. ಸಭೆಯಲ್ಲಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಸದಸ್ಯರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಗವರ್ನರ ಮನೋಜ ಮಾನೆಕ, ಆನಂದ ಪೋತ್ನಿಸ್, ಜಿ.ಟಿ. ಗುಡಿಸಾಗರ, ಸಿ. ಎಸ್ . ಸಾಲೂಟಿಗಿಮಠ, ವಿಜಯ ಮಾದಿನೂರ, ರಾಜು ಕುರಡಗಿ, ಡಾ‌.ಬಿ.ಎಂ. ಜಾಬಣ್ಣವರ, ಚಾಣಕ್ಯ ಅಕಾಡೆಮಿ ಸಂಸ್ಥಾಪಕ ಎಂ.ಎನ್. ಬಿರಾದಾರ, ಜಯಪ್ರಕಾಶ ಕಂಠಿ, ಎನ್. ವಿ. ಮೇಟಿ, ನೇಹಾ ಪಾಟೀಲ, ಭಾವನಾ ಪಾಟೀಲ ಸೇರಿದಂತೆ ಮುಂತಾದವರು ಇದ್ದರು.