ಜಿಎಸ್ಟಿ ಪರಿಷ್ಕರಣೆ ಮತ್ತೊಮ್ಮೆ ಚರ್ಚೆಯಾಗಿ ಅನುಷ್ಠಾನಗೊಂಡರೆ ಒಳ್ಳೆಯದು

| Published : Sep 07 2025, 01:01 AM IST

ಜಿಎಸ್ಟಿ ಪರಿಷ್ಕರಣೆ ಮತ್ತೊಮ್ಮೆ ಚರ್ಚೆಯಾಗಿ ಅನುಷ್ಠಾನಗೊಂಡರೆ ಒಳ್ಳೆಯದು
Share this Article
  • FB
  • TW
  • Linkdin
  • Email

ಸಾರಾಂಶ

ನ್ಯೂನತೆಗಳನ್ನು ಸರಿಪಡಿಸಲಾಗದೇ ಪರಿಷ್ಕರಣೆ ಮಾಡಿದ್ದಾರೆ.

ಶಿರಸಿ: ಜಿಎಸ್ಟಿ ಪರಿಷ್ಕರಣೆಯು ಮತ್ತೊಮ್ಮೆ ಚರ್ಚೆಯಾಗಿ ಅನುಷ್ಠಾನಗೊಂಡರೆ ಒಳ್ಳೆಯದು ಎಂದು ಕೆಪಿಸಿಸಿ ಸದಸ್ಯ ದೀಪಕ್ ಹೆಗಡೆ ದೊಡ್ಡೂರ ಹೇಳಿದರು.

ಅವರು ಶುಕ್ರವಾರ ನಗರದ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಕರೆದ ಸುದ್ದಿಗೋಷ್ಠಿ ಮಾತನಾಡಿ, ವಿರೋಧ ಪಕ್ಷವು ಆಡಳಿತ ವ್ಯವಸ್ಥೆಯಲ್ಲಿ ಎಷ್ಟು ಮುಖ್ಯ ಎಂಬುದು ಜಿಎಸ್ಟಿ ಸಡಲೀಕರಣ ವಿಚಾರದಲ್ಲಿ ತಿಳಿಯುತ್ತದೆ. ಅನೇಕ ನ್ಯೂನತೆಗಳನ್ನು ಸರಿಪಡಿಸಲಾಗದೇ ಪರಿಷ್ಕರಣೆ ಮಾಡಿದ್ದಾರೆ. ಈ ಪರಿಷ್ಕರಣೆಯೂ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗಿ ಅನುಷ್ಠಾನಗೊಂಡರೆ ಒಳ್ಳೆಯದು. ಜಾರ್ಖಂಡ್ ಮುಖ್ಯಮಂತ್ರಿ ಜಿಎಸ್ಟಿ ಪರಿಷ್ಕರಣೆಯಿಂದ ನಷ್ಟವಾಗಲಿದೆ ಎಂದು ತಿಳಿಸಿದ್ದಾರೆ. ಜನರಿಗೆ ಅನುಕೂಲವಾದರೆ ನಿಜಕ್ಕೂ ಸಂತೋಷ. ಆದರೆ ಗೊಂದಲಗಳಾಗಬಾರದು.‌ ಅಟಲ್ ಬಿಹಾರಿ ವಾಜಪೇಯಿ ಹಾಗೂ ಮನಮೋಹನ್ ಸಿಂಗ್ ಯೋಜನೆ ರೂಪಿಸಿದ್ದರೂ ಅದನ್ನು ಜಾರಿಗೆ ತರಲಾಗಲಿಲ್ಲ. 2017ರಲ್ಲಿ ಜಾರಿಗೆ ತರಲಾಯಿತು. ಜಿಎಸ್ಟಿ ವಿಚಾರದಲ್ಲಿ ಇನ್ನೊಮ್ಮೆ ಪರಿಷ್ಕರಣೆಯನ್ನು ಸಮಯಾವಕಾಶ ತೆಗೆದುಕೊಂಡು ನಂತರ ನಿರ್ಣಯ ಕೈಗೊಳ್ಳಬೇಕು ಎಂದರು.

ಅನೇಕ ವರ್ಷಗಳಿಂದ ಸರ್ಕಾರದ ಕಾರ್ಯಕ್ರಮವನ್ನಾಗಿ ಮೈಸೂರು ದಸರಾ ಆಚರಿಸಿಕೊಂಡು ಬರಲಾಗಿದೆ. ಈ ಬಾರಿ ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಮುಖ್ಯಮಂತ್ರಿ ಆಯ್ಕೆ ಮಾಡಿದ್ದಾರೆ. ಇದರಲ್ಲೂ ಜಾತಿ, ಧರ್ಮವನ್ನು ತರುವ ಕೆಲಸ ಬಿಜೆಪಿ ಮಾಡುತ್ತಿದೆ. 21ನೇ ಶತಮಾನದಲ್ಲಿ ಅಭಿವೃದ್ಧಿ ಬಯಸುತ್ತಾ ಸಂಕುಚಿತ ಭಾವನೆಯಿಂದ ಹೊರಬಂದು ರಾಷ್ಟ್ರದ ನಿರ್ಮಾಣ ಮಾಡಬೇಕು. ಸಮಾಜವನ್ನು ಬೇರೆ ದಿಕ್ಕಿಗೆ ಎಳೆಯುವ ಪ್ರಯತ್ನವನ್ನು ಬಿಜೆಪಿ ಬಿಡಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಮುಖರಾದ ಬಸವರಾಜ ದೊಡ್ಮನಿ, ಗಣೇಶ ದಾವಣಗೆರೆ, ಪ್ರದೀಪ ಶೆಟ್ಟಿ, ಜ್ಯೋತಿ ಪಾಟೀಲ್, ಗೀತಾ ಶೆಟ್ಟಿ, ಜಾಫಿ ಪೀಟರ್ ಇದ್ದರು.

ಬಿಜೆಪಿಯವರು ನಮಗೆ ಹಿಂದುತ್ವ ಪಾಠ ಕಲಿಸುತ್ತಿದ್ದಾರೆ. ಧರ್ಮಸ್ಥಳ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಎಸ್ಐಟಿ ರಚನೆ ಮಾಡಿದೆ. ಅಲ್ಲಿನ ಸತ್ಯಾಂಶ ಹೊರತರುವುದೇ ಎಸ್ಐಟಿ ಉದ್ದೇಶ. ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚಲು ಸಹಕಾರಿಯಾಗಲಿದೆ. ಬಿಜೆಪಿಯವರು ನಮಗೆ ಧಾರ್ಮಿಕ ಭಾವನೆಯ ಪಾಠವನ್ನು ಹೇಳಿಕೊಡುವ ಅವಶ್ಯಕತೆಯಿಲ್ಲ. ಆರೋಪ ಮಾಡುತ್ತಿರುವವರು ಯಾವ ಮೂಲದಿಂದ ಬಂದವರು ಎಂಬುದನ್ನು ನೋಡಬೇಕು ಎನ್ನುತ್ತಾರೆ ಕೆಪಿಸಿಸಿ ಸದಸ್ಯ ದೀಪಕ ಹೆಗಡೆ ದೊಡ್ಡೂರು.