ಹಾಸನ ಮಹಾನಗರ ಪಾಲಿಕೆ ಆಗದಿದ್ದರೆ ಒಳ್ಳೆಯದಿತ್ತು

| Published : Jul 25 2025, 12:30 AM IST

ಸಾರಾಂಶ

ಹಾಸನ ನಗರಸಭೆಯನ್ನೇನೋ ಮಹಾನಗರ ಪಾಲಿಕೆ ಎಂದು ಮೇಲಗ್ದರ್ಜೆಗೇರಿಸಿ ಘೋಷಣೆ ಮಾಡಲಾಗಿದೆ. ಆದರೆ ಅದಕ್ಕೆ ತಕ್ಕಂತೆ ಅನುದಾನ ನೀಡದಿರುವ ಬಗ್ಗೆ ಶಾಸಕ ಸ್ವರೂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂದಿನ ಬಜೆಟ್‌ನಲ್ಲಿ ೨೦೦ ಕೋಟಿ ನಿಗದಿಪಡಿಸಿದಂತೆ ಕೋರಲಾಗಿರುವ ಪ್ರಸ್ತಾವನೆಯನ್ನು ಇತ್ತೀಚೆಗೆ ಮೇಲ್ದರ್ಜೆಗೆ ಏರಿಸಲಾಗಿದ್ದ ಹೆಚ್ಚುವರಿ ಹುದ್ದೆಯಾಗಲಿ, ಅನುದಾನವನ್ನು ಒದಗಿಸಲು ಆಗುವುದಿಲ್ಲ ಎಂದು ಆರ್ಥಿಕ ಇಲಾಖೆಯಿಂದ ಸ್ಪಷ್ಟಪಡಿಸಲಾಗಿದೆ. ಪ್ರಸ್ತುತ ಪ್ರಸ್ತಾವನೆಗೆ ಯಾವ ಅನುದಾನ ಕೊಡಲಾಗುವುದಿಲ್ಲ ಎಂದು ಸರಕಾರದ ನಗರಾಭಿವೃದ್ಧಿ ಪ್ರಾಧಿಕಾರದ ಇಲಾಖೆ ತಿಳಿಸಿರುವ ಹಿಂಬರಹವನ್ನು ಶಾಸಕರು ಓದಿದರು.

ಕನ್ನಡಪ್ರಭ ವಾರ್ತೆ ಹಾಸನ

ಹಾಸನ ನಗರಸಭೆಯನ್ನೇನೋ ಮಹಾನಗರ ಪಾಲಿಕೆ ಎಂದು ಮೇಲಗ್ದರ್ಜೆಗೇರಿಸಿ ಘೋಷಣೆ ಮಾಡಲಾಗಿದೆ. ಆದರೆ ಅದಕ್ಕೆ ತಕ್ಕಂತೆ ಅನುದಾನ ನೀಡದಿರುವ ಬಗ್ಗೆ ಶಾಸಕ ಸ್ವರೂಪ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಾಸನ ಮಹಾನಗರ ಪಾಲಿಕೆಗೆ ರಾಜ್ಯ ಸರ್ಕಾರ ಕೂಡಲೇ 200 ಕೋಟಿ ರು. ಗಳ ಅನುದಾನ ಬಿಡುಗಡೆ ಮಾಡದಿದ್ದರೇ ಮುಂದಿನ ಅಧಿವೇಶನದಲ್ಲಿ ಪಕ್ಷದ ಎಲ್ಲಾ ಶಾಸಕರು ಮತ್ತು ನಗರ ಪಾಲಿಕೆ ಸದಸ್ಯರು ಸೇರಿ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಎಚ್ಚರಿಕೆ ನೀಡಿದರು. ಕಾಂಗ್ರೆಸ್ ಪಕ್ಷದ ಶಾಸಕರಿಗೆ ರಾಜ್ಯ ಸರಕಾರವು ೫೦ ಕೋಟಿ ರು. ಗಳ ಅನುದಾನ ನೀಡಿ ಜೆಡಿಎಸ್ ಶಾಸಕರಿಗೆ ೨೫ ಕೋಟಿ ಕೊಡುವ ಮೂಲಕ ಮುಖ್ಯಮಂತ್ರಿಗಳು ತಾರತಮ್ಯ ಮಾಡುತ್ತಿದ್ದಾರೆ. ಆದರೆ ಇನ್ನು ಕೂಡ ೨೫ ಕೋಟಿ ಅನುದಾನ ಬಿಡುಗಡೆ ಮಾಡಿರುವುದಿಲ್ಲ. ಗ್ಯಾರಂಟಿ ಸ್ಕೀಂ ಕೊಡುವುದು ಬೇಡ ಎಂದು ಹೇಳುತ್ತಿಲ್ಲ. ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಬೇಕಾಗಿದೆ. ಈ ಬಗ್ಗೆ ಮುಂದೆ ನಡೆಯುವ ಅಧಿವೇಶನದಲ್ಲಿ ಯಾವ ರೀತಿ ಹೋರಾಟ ಮಾಡಬೇಕು ಕುರಿತು ಪಕ್ಷದ ಎಲ್ಲಾ ಶಾಸಕರು ಕುಳಿತು ತೀರ್ಮಾನ ಮಾಡುತ್ತೇವೆ.

ಮಹಾನಗರ ಪಾಲಿಕೆ ಅಭಿವೃದ್ಧಿಗೆ ಕೂಡಲೇ ಹಣ ಬಿಡುಗಡೆ ಮಾಡುವಂತೆ ರಹಿಮ್ ಖಾನ್ ಮತ್ತು ಪೌರಾಡಳಿತ ಸಚಿವರಿಗೆ ಮನವಿ ನೀಡಿ ಕೇಳಲಾಗಿತ್ತು. ಹಿಂಬರಹ ಕೊಟ್ಟಿದ್ದಾರೆ. ಹಿಂದಿನ ಬಜೆಟ್‌ನಲ್ಲಿ ೨೦೦ ಕೋಟಿ ನಿಗದಿಪಡಿಸಿದಂತೆ ಕೋರಲಾಗಿರುವ ಪ್ರಸ್ತಾವನೆಯನ್ನು ಇತ್ತೀಚೆಗೆ ಮೇಲ್ದರ್ಜೆಗೆ ಏರಿಸಲಾಗಿದ್ದ ಹೆಚ್ಚುವರಿ ಹುದ್ದೆಯಾಗಲಿ, ಅನುದಾನವನ್ನು ಒದಗಿಸಲು ಆಗುವುದಿಲ್ಲ ಎಂದು ಆರ್ಥಿಕ ಇಲಾಖೆಯಿಂದ ಸ್ಪಷ್ಟಪಡಿಸಲಾಗಿದೆ. ಪ್ರಸ್ತುತ ಪ್ರಸ್ತಾವನೆಗೆ ಯಾವ ಅನುದಾನ ಕೊಡಲಾಗುವುದಿಲ್ಲ ಎಂದು ಸರಕಾರದ ನಗರಾಭಿವೃದ್ಧಿ ಪ್ರಾಧಿಕಾರದ ಇಲಾಖೆ ತಿಳಿಸಿರುವ ಹಿಂಬರಹವನ್ನು ಶಾಸಕರು ಓದಿದರು.

ಅಧಿವೇಶನದಲ್ಲಿ ಪ್ರತಿಭಟಿಸುತ್ತೇವೆ:

ನಗರಪಾಲಿಕೆಗೆ ಕಂದಾಯ ಕಟ್ಟಿ ಯಾವ ಅಭಿವೃದ್ಧಿ ಮಾಡದೆ ಹೋದರೇ ಜನರಿಗೆ ಏನು ಉತ್ತರ ಕೊಡುವುದು ಎಂದು ಪ್ರಶ್ನೆ ಮಾಡಿದರು. ನಮಗೆ ಕೂಡಲೇ ೨೦೦ ಕೋಟಿ ರು. ಗಳನ್ನು ನಗರ ಪಾಲಿಕೆಗೆ ಬಿಡುಗಡೆ ಮಾಡದೇ ಹೋದರೇ ಪಕ್ಷತೀತವಾಗಿ ಎಲ್ಲಾ ಶಾಸಕರು ಹಾಗೂ ನಗರ ಪಾಲಿಕೆಯರ ಸದಸ್ಯರು ಎಲ್ಲರೂ ಹೋಗಿ ಮುಂದಿನ ಅಧಿವೇಶನದಲ್ಲಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಿ ನಮಗೆ ೨೦೦ ಕೋಟಿ ಅನುದಾನ ಕೊಡುವವರೆಗೂ ನಾವು ಅಲ್ಲಿಂದ ಎದ್ದು ಬರುವುದಿಲ್ಲ ಎಂದು ಸರಕಾರವನ್ನು ಎಚ್ಚರಿಸಿದರು.

ನಗರಸಭೆ ಇದ್ದಾಗ ಸುಮಾರು ೧೫ ಕೋಟಿ ಹಣ ಸಂಗ್ರಹವಾಗುತಿತ್ತು. ಈಗ ಪಾಲಿಕೆ ಆಗಿರುವುದರಿಂದ ೨೫ರಿಂದ ೩೦ ಕೋಟಿ ರು. ಅಂದಾಜು ಕಂದಾಯ ಸಂಗ್ರಹವಾಗುತ್ತದೆ. ಆದರೇ ಇಷ್ಟು ಹಣದಲ್ಲಿ ಅಭಿವೃದ್ಧಿ ಪಡಿಸುವುದಕ್ಕೆ ಆಗುವುದಿಲ್ಲ. ಇತರೆ ನಿರ್ವಹಣೆಗಾಗಿ ಪಾಲಿಕೆಯಿಂದಲೇ ಹಣವನ್ನು ಈ ಅನುದಾನದಿಂದಲೇ ಕೊಡಬೇಕಾಗಿದೆ. ಎಇ ಹುದ್ದೆ ೪ ಖಾಲಿ ಹಾಗೂ ಜೆಇ ಹುದ್ದೆ ೭ ಅವಶ್ಯಕತೆಯಿದೆ. ಪೌರಕಾರ್ಮಿಕರು ೫೦ ಪೋಸ್ಟ್ ಹೆಚ್ಚುವರಿ ಬೇಕಾಗಿದೆ. ಮೂರು ವರ್ಷಗಳ ಕಾಲ ಯಾವ ಅನುದಾನ ಕೊಡಲಾಗುವುದಿಲ್ಲ ಎಂದು ಸರಕಾರವು ಹಿಂಬರಹದಲ್ಲಿ ತಿಳಿಸಿದ್ದು, ಇದರಿಂದ ಅಭಿವೃದ್ಧಿ ಕೆಲಸ ಮಾಡಲು ಕಷ್ಟಕರವಾಗಲಿದೆ ಎಂದು ಸಮಸ್ಯೆ ಹೇಳಿದರು. ನಮ್ಮ ಹಾಸನ ನಗರಸಭೆಯನ್ನು ನಗರ ಪಾಲಿಕೆಗೆ ಸೇರಿಸದಿದ್ದರೇ ಬಹಳ ಒಳ್ಳೆಯದಾಗಿರೊದು ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಮಾಜಿ ಸಚಿವರಾದ ಎಚ್.ಡಿ. ರೇವಣ್ಣ ಮತ್ತು ಎಲ್ಲಾ ಶಾಸಕರು ಚರ್ಚೆ ಮಾಡಲಾಗಿದ್ದು, ಸಚಿವರು ಯಾವ ಉತ್ತರ ಕೊಡುತ್ತಾರೆ ಎಲ್ಲವನ್ನು ಗಮನಿಸಿ ನಂತರ ಯಾವ ರೀತಿ ಕೋರ್ಟಿಗೆ ಹೋಗಬೇಕು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ರಾಜಕೀಯ ಎಲ್ಲಾದರಲ್ಲೂ ಹಾಸನ ಜಿಲ್ಲೆ ಕೇಂದ್ರ ಬಿಂದು. ಮುಂದಿನ ಚುನಾವಣೆಯಲ್ಲಿ ಹಾಸನ ಜಿಲ್ಲೆಯಲ್ಲಿ ಏಳಕ್ಕೆ ಏಳು ಸ್ಥಾನ ಪಡೆಯುವುದಾಗಿ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿರುವುದನ್ನ ನೋಡಿದೆ. ಆದರೇ ಅಭಿವೃದ್ಧಿ ವಿಚಾರದಲ್ಲಿ ಹಾಸನವನ್ನು ಏಕೆ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಅನ್ಯಾಯ ಮಾಡುತ್ತಿದ್ದಾರೆ. ಇದೇ ತಿಂಗಳು ೨೬ಕ್ಕೆ ಅರಸೀಕೆರೆಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುತ್ತಿದ್ದು, ನಗರಪಾಲಿಕೆಗೆ ಏಕೆ ಹಣ ಕೊಡುತ್ತಿಲ್ಲ ಎಂದು ಪ್ರಶ್ನೆ ಮಾಡಬೇಕಾಗಿದೆ. ಮೂರು ವರ್ಷಗಳ ಕಾಲ ಯಾವ ಅನುದಾನ ಕೊಡುವುದಿಲ್ಲ ಎಂದು ಹೇಳಿ ಯಾವ ಪುರುಷಾರ್ಥಕ್ಕೆ ಬಂದು ಇಲ್ಲಿ ಗುದ್ದಲಿ ಪೂಜೆ ಮಾಡುತ್ತಿದ್ದಾರೆ? ನನಗೆ ಅರ್ಥವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜುಲೈ ೨೬ ರಂದು ಸಾಧನ ಸಮಾವೇಶ ಹೆಸರಿನಲ್ಲಿ ಕಾರ್ಯಕ್ರಮ ಮಾಡಿದರೂ ಅದು ಪಕ್ಷದ ಕಾರ್ಯಕ್ರಮ. ಸರಕಾರಿ ಕಾರ್ಯಕ್ರಮ ನೆಪಕ್ಕೆ ಮಾತ್ರ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಉಪ ಮೇಯರ್ ಹೇಮಾಲತಾ ಕಮಲ್ ಕುಮಾರ್, ನಗರ ಪಾಲಿಕೆ ಸದಸ್ಯರಾದ ಸಿ.ಆರ್. ಶಂಕರ್, ಕ್ರಾಂತಿ ಪ್ರಸಾದ್ ತ್ಯಾಗಿ, ರಪೀಕ್, ನವೀನ್, ಎಚ್.ವಿ. ಚಂದ್ರೇಗೌಡ, ಮಂಜುನಾಥ್, ಜೆಡಿಎಸ್ ಮುಖಂಡರಾದ ಇಮ್ರಾನ್ ಅಕ್ಬರ್, ಅಕ್ಮಲ್ ಇತರರು ಉಪಸ್ಥಿತರಿದ್ದರು.