ಐಟಿಎಫ್‌ ಪಂದ್ಯಾವಳಿ- ಪ್ರಿ ಕ್ವಾರ್ಟರ್‌ ಫೈನಲ್‌ಗೆ ಶ್ರೇಯಾಂಕಿತರು

| Published : Oct 19 2023, 12:45 AM IST

ಐಟಿಎಫ್‌ ಪಂದ್ಯಾವಳಿ- ಪ್ರಿ ಕ್ವಾರ್ಟರ್‌ ಫೈನಲ್‌ಗೆ ಶ್ರೇಯಾಂಕಿತರು
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಥಮ ಸುತ್ತಿನ ಕೆಲ ಪಂದ್ಯಗಳು ದೀರ್ಘ ಹೋರಾಟದಿಂದ ಕೂಡಿದ್ದು, ಧಾರವಾಡ ಜಿಲ್ಲಾ ಟೆನಿಸ್‌ ಸಂಸ್ಥೆಯ ರಾಜಾಧ್ಯಕ್ಷ ಕೋರ್ಟ್‌ಗಳು ಶ್ರೇಷ್ಠ ಗುಣಮಟ್ಟದ ಟೆನಿಸ್‌ಗೆ ಸಾಕ್ಷಿಯಾದವು.

ಕನ್ನಡಪ್ರಭ ವಾರ್ತೆ ಧಾರವಾಡ

ಐಟಿಎಫ್‌ ಧಾರವಾಡ ಪುರುಷರ ವಿಶ್ವ ಟೆನಿಸ್‌ ಟೂರ್‌ ಮುಖ್ಯ ಪಂದ್ಯಾವಳಿಯ 2ನೇ ದಿನ ಬುಧವಾರ ಶ್ರೇಯಾಂಕಿತ ಆಟಗಾರರೆಲ್ಲ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ಪ್ರಥಮ ಸುತ್ತಿನ ಕೆಲ ಪಂದ್ಯಗಳು ದೀರ್ಘ ಹೋರಾಟದಿಂದ ಕೂಡಿದ್ದು, ಧಾರವಾಡ ಜಿಲ್ಲಾ ಟೆನಿಸ್‌ ಸಂಸ್ಥೆಯ ರಾಜಾಧ್ಯಕ್ಷ ಕೋರ್ಟ್‌ಗಳು ಶ್ರೇಷ್ಠ ಗುಣಮಟ್ಟದ ಟೆನಿಸ್‌ಗೆ ಸಾಕ್ಷಿಯಾದವು.

ಅಗ್ರ ಶ್ರೇಯಾಂಕಿತ ಅಮೇರಿಕಾದ ನಿಕ್‌ ಚಾಪೆಲ್‌, ಕೋರಿಯಾದ ವುಬಿನ್‌ ಶಿನ್‌ ಅವರ ಮೇಲೆ 6-3,6-3 ರಿಂದ ನೇರ ಸೆಟ್‌ಗಳಲ್ಲಿ ಜಯಶಾಲಿಯಾದರೆ, ದ್ವಿತೀಯ ಶ್ರೇಯಾಂಕಿತ ಬೋಗಡಾನ್‌ ಬೋಬ್ರೋ, ಅರ್ಹತಾ ಸುತ್ತಿನಿಂದ ಬಂದ ಅಭಿನವ ಸಂಜೀವ ಷಣ್ಮುಗಂ ಅವರನ್ನು 6-2, 6-4 ರಿಂದ ಪರಾಭವಗೊಳಿಸಿ 16ರ ಹಂತಕ್ಕೆ ಮುನ್ನಡೆದರು.

6ನೇ ಶ್ರೇಯಾಂಕಿತ ಫ್ರಾನ್ಸ್‌ನ ಫ್ಲೋರೆಂಟ್‌ ಬಾಕ್ಸ್‌ ತಮ್ಮ ಎದುರಾಳಿ ನೆದರಲ್ಯಾಂಡಿನ ಸ್ಟಿಜ್ನ ಪೆಲ್‌ ವಿರುದ್ಧ ಮೊದಲ ಸೆಟ್‌ನ್ನು 6-2 ರಿಂದ ಗೆದ್ದು 2ನೇ ಸೆಟ್‌ನಲ್ಲಿ 2-0ಯಿಂದ ಮುನ್ನಡೆಯುತ್ತಿದ್ದಾಗ, ಸ್ಟಿಜ್ನ ಸೋಲೊಪ್ಪಿಕೊಂಡು ಹಿನ್ನಡೆದರು. ಪ್ರೋರೆಂಟ್‌ ಬಾಕ್ಸ್‌ ಮೂರು ದಿನಗಳ ಹಿಂದೆ ಐಟಿಎಫ್‌ 15 ಸಾವಿರ ಡಾಲರ್‌ ಬಹುಮಾನ ಮೊತ್ತದ ಅಹಮ್ಮದಾಬಾದ್‌ ಪಂದ್ಯಾವಳಿಯಲ್ಲಿ ಜಯಶಾಲಿಯಾಗಿದ್ದರು.

4ನೇ ಶ್ರೇಯಾಂಕಿತ ರಾಮಕುಮಾರ ರಾಮನಾಥನ್‌, ಭಾರತದವರೇ ಆದ ಫೈಸಲ್‌ ಕಮರ್‌ ಅವರ ವಿರುದ್ಧ 7-6 (7), 6-3 ರಿಂದ ಗೆಲವು ಸಾಧಿಸಿ ಮುನ್ನಡೆದರು. ಮೊದಲ ಸೆಟ್‌ನಲ್ಲಿ ತುರುಸಿನ ಹೋರಾಟ ನಡೆದು ರಾಮಕುಮಾರ ಟೈ ಬ್ರೇಕರ್‌ನಲ್ಲಿ ಸೆಟ್‌ ಪಡೆದರು. ದ್ವಿತೀಯ ಸೆಟ್‌ನ ಆರಂಭದಲ್ಲಿಯೇ ಎದುರಾಳಿಯ ಸರ್ವೀಸ್‌ ಮುರಿಯುವ ಮೂಲಕ ಮಹತ್ವದ ಮುನ್ನಡೆ ಗಳಿಸಿದ ರಾಮಕುಮಾರ, ಕೆಲವು ಆಕರ್ಷಕ ಹೊಡೆತ ಮತ್ತು ಭರ್ಜರಿ ಸರ್ವೀಸ್‌ ಮೂಲಕ ಎದುರಾಳಿಗೆ ಆಘಾತ ನೀಡಿ ಪಂದ್ಯ ಜಯಿಸಿದರು.

ಏತನ್ಮಧ್ಯೆ, ಅರ್ಹತಾ ಸುತ್ತಿನಿಂದ ಮುಖ್ಯ ಡ್ರಾದಲ್ಲಿ ಆಡುತ್ತಿರುವ ಗುಜರಾತಿನ ಮಧ್ವಿನ್‌ ಕಾಮತ್‌ ಮತ್ತು ಕರ್ನಾಟಕದ ಸೂರಜ್‌ ಪ್ರಬೋಧ ತಮ್ಮ ಮೊದಲ ಸುತ್ತಿನ ಪಂದ್ಯಗಳನ್ನು ಗೆದ್ದು ಮುನ್ನಡೆದರು. ಮಧ್ವಿನ್‌ ವೈಲ್ಡ್‌ ಕಾರ್ಡ್‌ ಪ್ರವೇಶದ ಮೂಲಕ ಮೇನ್‌ ಡ್ರಾಗೆ ಬಂದಿರುವ ಮನಿಷ ಗಣೇಶ ವಿರುದ್ಧ 6-3, 6-4ರಿಂದ ಗೆದ್ದರೆ, ಸೂರಜ್‌ ದಿನದ ಅತಿ ಸುದೀರ್ಘ ಪಂದ್ಯವನ್ನಾಡಿ ವೈಲ್ಡ್‌ ಕಾರ್ಡ್‌ ಪ್ರವೇಶದ ಮೂಲಕ ಮೇನ್‌ ಡ್ರಾಗೆ ಅರ್ಹತೆ ಪಡೆದಿರುವ ರಾಘವ ಜಯಸಿಂಘಾನಿ ಅವರನ್ನು 6-4, 6-4 ರಿಂದ 2.20 ಗಂಟೆಗಳಲ್ಲಿ ಮಣಿಸಿದರು.ಸಿಂಗಲ್ಸ್‌ ಫಲಿತಾಂಶ

ಮಧ್ವಿನ್‌ ಕಾಮತ್‌ ವಿರುದ್ಧ ಮನಿಷ ಗಣೇಶ 6-3, 6-4.

ಎಸ್‌.ಡಿ. ಪ್ರಜ್ವಲ್‌ ದೇವ ವಿರುದ್ಧ ಲೂಕ್‌ ಸೊರೆನ್‌ಸೆನ್‌ (ಆಸ್ಟ್ರೇಲಿಯಾ) 7-5, 6-4.

ಇಷಾಕ್‌ ಇಕ್ಬಾಲ್‌ ವಿರುದ್ಧ ಮನಿಷ್‌ ಸುರೇಶ ಕುಮಾರ 6-3, 6-3.

ರಾಮಕುಮಾರ ರಾಮನಾಥನ್‌ ವಿರುದ್ಧ ಫೈಸಲ್‌ ಕಮರ್‌ 7-6 (7), 6-3.

ಸಿದ್ಧಾರ್ಥ ರಾವತ್‌ ವಿರುದ್ಧ ಶಿವಾಂಕ ಭಟ್ನಾಗರ 6-4, 6-2

ರಿಷಭ್ ಅಗರವಾಲ್‌ ವಿರುದ್ಧ ಜಗಮೀತಸಿಂಗ್‌ 6-4, 6-2.

ಪ್ರೋರೆಂಟ್‌ ಬಾಕ್ಸ್‌ (ಫ್ರಾನ್ಸ್‌) ವಿರುದ್ಧ ಸ್ಟಿಜ್ನ್‌ ಪೇಲ್‌ (ನೆದರಲ್ಯಾಂಡ) 6-2, 2-0 (ನಿವೃತ್ತ)

ಏನ್ರಿಕೋ ಗಿಯಾಕೊಮಿನಿ (ಇಟಲಿ) ವಿರುದ್ಧ ದೇವ್‌ ಜಾವಿಯಾ 6-3, 7-6 (2).

ಸೂರಜ್‌ ಪ್ರಬೋಧ ವಿರುದ್ಧ ರಾಘವ ಜಯಸಿಂಘಾನಿ 6-4, 6-4.

ಬೋಗಡಾನ್‌ ಬೋಗ್ರೋ ವಿರುದ್ಧ ಅಭಿನವ ಸಂಜೀವ ಷಣ್ಮುಗಂ 6-2, 6-4.

ನಿಕ್‌ ಚಾಪೆಲ್‌ (ಅಮೇರಿಕಾ) ವಿರುದ್ಧ ವುಬಿನ್‌ ಶಿನ್‌ (ಕೋರಿಯಾ) 6-3, 6-3.