ಸಾರಾಂಶ
ಚಾಮರಾಜನಗರದಲ್ಲಿ ಭಾರತೀಯ ವಿದ್ಯಾರ್ಥಿ ಸಂಘದ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ವಿದ್ಯುತ್ ಪ್ರಸರಣ ನಿಗಮಗಳಲ್ಲಿ ನಡೆಯುತ್ತಿರುವ ಲೈನ್ ಮ್ಯಾನ್ ನೇಮಕಾತಿಯಲ್ಲಿ ಐಟಿಐ ವಿದ್ಯಾರ್ಹತೆ ಬದಲು ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆಯನ್ನು ಪರಿಗಣಿಸುತ್ತಿರುವುದನ್ನು ಖಂಡಿಸಿ ಭಾರತೀಯ ವಿದ್ಯಾರ್ಥಿ ಸಂಘ (ಬಿವಿಎಸ್) ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.ನಗರದ ಚಾಮರಾಜೇಶ್ವರ ಉದ್ಯಾನವನದ ಮುಂಭಾಗದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆಯ ಮೂಲಕ ಜಿಲ್ಲಾಡಳಿತ ಭವನದ ತಲುಪಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.ಜಿಲ್ಲಾ ಸಂಯೋಜಕ ಪರ್ವತ್‌ರಾಜ್ ಮಾತನಾಡಿ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಹಾಗೂ ಅಂಗ ಸಂಸ್ಥೆಗಳಲ್ಲಿ ನಡೆಯುತ್ತಿರುವ ಲೈನ್‌ಮ್ಯಾನ್/ ಕಿರಿಯ ಪವರ್ ಮ್ಯಾನ್ ಹಾಗೂ ಸ್ಟೇಷನ್ ಪರಿಚಾರಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ್ದು, 10ನೇ ತರಗತಿ ವಿದ್ಯಾರ್ಹತೆಯನ್ನು ಕನಿಷ್ಠ ಅರ್ಹತೆಯಾಗಿ ಪರಿಗಣಿಸಲಾಗಿದೆ ಎಂದರು.ಇದು ಅವೈಜ್ಞಾನಿಕವಾದ ಮಾನದಂಡವಾಗಿದ್ದು 10ನೇ ತರಗತಿ ಪೂರೈಸಿದ ಅಭ್ಯರ್ಥಿಗಳು ಯಾವುದೇ ರೀತಿಯ ವಿದ್ಯುತ್ ಉಪಕರಣ ನಿರ್ವಹಣೆ ಸಂಬಂಧಿ ತರಬೇತಿಗಳನ್ನು ಪಡೆದಿರುವುದಿಲ್ಲ. ಇದು ಮುಂದಿನ ದಿನಗಳಲ್ಲಿ ವಿದ್ಯುತ್ ಅವಘಡ ಹಾಗೂ ಪ್ರಾಣ ಹಾನಿ ಸಂಭವಿಸಲು ಕಾರಣವಾಗುತ್ತದೆ. ಈ ಮಾನದಂಡವನ್ನು ನಿರ್ಧರಿಸುವುದರ ಹಿಂದೆ ಇಲಾಖಾ ಅಧಿಕಾರಿಗಳ ಕೈವಾಡವಿದ್ದು ಐಟಿಐ ತರಬೇತಿ ಪಡೆದ ಅಭ್ಯರ್ಥಿಗಳನ್ನು ಪರಿಗಣಿಸಿದರೆ ಸೇವಾ ನಿಯಮದ ಪ್ರಕಾರವನ್ನು ಜೆಇ/ ಜೆಇಇ ಹುದ್ದೆಗಳಿಗೆ ಪದೋನ್ನತಿ ನೀಡಬೇಕಾಗಿದ್ದು, ಇದರಿಂದ ತಮಗಿಂತ ಕೆಳಗಿನ ಸ್ತರದ ನೌಕರರ ಅಡಿಯಲ್ಲಿ ಕಾರ್ಯನಿರ್ವಹಿಸಬೇಕಾಗಿ ಬರುವ ಸಂಭವವಿರುವುದರಿಂದ ಈ ರೀತಿಯ ಅವೈಜ್ಞಾನಿಕ-ಅತಾರ್ಕಿಕ ಅರ್ಹತಾ ಮಾನದಂಡವನ್ನು ವಿಧಿಸಿದೆ ಎಂದು ಆರೋಪಿಸಿದರು.ರಾಜ್ಯದಲ್ಲಿ ಒಂದು ವರ್ಷಕ್ಕೆ ಸುಮಾರು ೩೦ ಸಾವಿರ ವಿದ್ಯಾರ್ಥಿಗಳು ಐಟಿಐ ವಿದ್ಯಾರ್ಹತೆ ತೇರ್ಗಡೆಯಾಗಿ ಹೊರಬರುತ್ತಿದ್ದು, ಸುಮಾರು ಲಕ್ಷಾಂತರ ಐಟಿಐ ಅಭ್ಯರ್ಥಿಗಳಿದ್ದು, ವಿದ್ಯುತ್ ಉಪಕರಣ ನಿರ್ವಹಣೆ ಸಂಬಂಧಿ ತರಬೇತಿಯನ್ನು ಪಡೆದು ಸಹ ಉದ್ಯೋಗವಿಲ್ಲದೆ ಅಸಹಾಯಕರಾಗಿರುವ ಇಂತಹ ಸಂದರ್ಭದಲ್ಲಿ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ಈ ನೇಮಕಾತಿಯು ಅವರ ಆಶಾಭಾವನೆಯನ್ನು ಕುಂದಿಸುವ ಹಾಗೂ ವ್ಯತಿರಿಕ್ತ ನಿರ್ಧಾಗಳನ್ನು ತೆಗೆದುಕೊಳ್ಳುವ ಮಾನಸಿಕ ಸ್ಥಿತಿಗೆ ಕಾರಣವಾಗುವ ಸಂಭವವಿದೆ. ಕೌಶಲ್ಯ ತರಬೇತಿ ಪಡೆದಿರುವ ಐಟಿಐ ವಿದ್ಯಾರ್ಹತೆ ಹೊಂದಿದವರನ್ನು ಪರಿಗಣಿಸಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು.