ಖರೀದಿಸುವ ಮುನ್ನವೇ ಎಫ್‌ಎಕ್ಯೂ ಗುಣಮಟ್ಟ ಪರಿಶೀಲಿಸಬೇಕು. ಗುಣಮಟ್ಟ ಸರಿಯಿಲ್ಲದಿದ್ದಲ್ಲಿ ಆಗಲೇ ತಿರಸ್ಕರಿಸಬೇಕು. ಅದು ಬಿಟ್ಟು ಒಂದೊಮ್ಮೆ ಖರೀದಿಸಿ ಎನ್‌ಇಎಂಎಲ್‌ ಸಾಫ್ಟ್‌ಪ್ಟ್‌ವೇರ್‌ನಲ್ಲಿ ಎಂಟ್ರಿ ಮಾಡಿ ಕಂಪ್ಯೂಟರೈಸ್ಡ್‌ ಬಿಡುಗಡೆ ಪತ್ರದ ಮೂಲಕ ಉಗ್ರಾಣಗಳಿಗೆ ದಾಸ್ತಾನು ಮಾಡಿದರೆ ಮುಗಿತು. ದುಡ್ಡು ಕೊಡಬೇಕು.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ತಪ್ಪು ನಿಮ್ಮದೇ ರೈತರಿಗೆ ಕೊಡಬೇಕಾದ ಹಣ ಪಾವತಿಸಿ..!

ಇದು ಬೆಂಬಲ ಬೆಲೆಯಲ್ಲಿ ರೈತರಿಂದ ಹೆಸರು ಖರೀದಿಸಿ 21 ದಿನದ ಬಳಿಕ ಹೆಸರು ಎಫ್‌ಎಕ್ಯೂ ಗುಣಮಟ್ಟದಲ್ಲಿಲ್ಲ ಎಂದು ತಿರಸ್ಕರಿಸಿದ್ದ ರಾಜ್ಯ ಸಹಕಾರ ಮಾರಾಟ ಮಹಾಮಂಡಳಕ್ಕೆ ಕೃಷಿ ಮಾರುಕಟ್ಟೆ ಇಲಾಖೆಯ ಉಪನಿರ್ದೇಶಕರು ನೀಡಿರುವ ಸೂಚನೆ.

ಆಗಿದ್ದೇನು?

ರೈತರಿಗೆ ನೆರವು ಆಗಲಿ ಎಂಬ ಉದ್ದೇಶದಿಂದ ಸರ್ಕಾರವು ಕಳೆದ ಮುಂಗಾರು ಹಂಗಾಮಿನಲ್ಲಿ ಬೆಳೆದಿದ್ದ ಹೆಸರು ಕಾಳು ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ತೆರೆದಿತ್ತು. ಧಾರವಾಡ ಜಿಲ್ಲೆಯಲ್ಲಿ 23 ಕೇಂದ್ರಗಳಿದ್ದವು. ಬ್ಯಾಹಟ್ಟಿಯಲ್ಲಿ ಖರೀದಿ ಕೇಂದ್ರದಲ್ಲಿ ಹೆಸರು ಮಾರಾಟ ಮಾಡಿದ 74 ರೈತರಿಗೆ ಖರೀದಿಸಿದ 21 ದಿನಗಳ ಬಳಿಕ ಹೆಸರು ಗುಣಮಟ್ಟದಲ್ಲಿಲ್ಲ. ತೆಗೆದುಕೊಂಡು ಹೋಗಿ ಎಂದು ಬೆಂಬಲ ಬೆಲೆ ಕೇಂದ್ರ ತಿಳಿಸಿತ್ತು.

ಗುಣಮಟ್ಟ ಪರೀಕ್ಷಿಸಿ ಖರೀದಿಸಿ 21 ದಿನಗಳ ಬಳಿಕ ಗುಣಮಟ್ಟ ಇಲ್ಲ ಎಂದರೆ ಹೇಗೆ ಎಂಬ ಪ್ರಶ್ನೆ ರೈತರದ್ದಾಗಿತ್ತು. ಮುಂದೆ ಏನು ಮಾಡಬೇಕು ಎಂಬುದು ತಿಳಿಯದೇ ಜಿಲ್ಲಾಡಳಿತಕ್ಕೆ ಮನವಿ ಕೊಟ್ಟಿದ್ದರು. ಆದರೆ, ಸ್ಪಂದನೆ ಸಿಕ್ಕಿರಲಿಲ್ಲ. ಈ ಕುರಿತು ಕನ್ನಡಪ್ರಭ "ಖರೀದಿಸಿ ತಿಂಗಳ ಬಳಿಕ ಹೆಸರು ವಾಪಸ್‌! " ಎಂದು ಮೂರು ಸರಣಿ ಲೇಖನ ಪ್ರಕಟಿಸಿ ಜಿಲ್ಲಾಡಳಿತದ ಗಮನ ಸೆಳೆದಿತ್ತು. ಜಿಲ್ಲಾಡಳಿತವು ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಕಮಿಟಿ ರಚಿಸಿತ್ತು. ಕಮಿಟಿಯು ಕೃಷಿ ಮಾರುಕಟ್ಟೆ ಇಲಾಖೆಯ ಉಪನಿರ್ದೇಶಕರಿಗೆ ಪರಿಶೀಲಿಸಿ ವರದಿ ನೀಡುವಂತೆ ಸೂಚನೆ ನೀಡಿತ್ತು.

ಅದರಂತೆ ಇದೀಗ ಕೃಷಿ ಮಾರುಕಟ್ಟೆ ಇಲಾಖೆಯು ಪರಿಶೀಲನೆ ನಡೆಸಿ "ತಪ್ಪು ನಿಮ್ಮದೇ ಇದೆ, ರೈತರಿಗೆ ಉತ್ಪನ್ನದ ಮೌಲ್ಯ ಪಾವತಿಸಿ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದ ಶಾಖಾ ವ್ಯವಸ್ಥಾಪಕರಿಗೆ ಪತ್ರ ಬರೆದು ಸೂಚನೆ ನೀಡಿದೆ.

ಪತ್ರದಲ್ಲಿ ಏನಿದೆ?

ಖರೀದಿಸುವ ಮುನ್ನವೇ ಎಫ್‌ಎಕ್ಯೂ ಗುಣಮಟ್ಟ ಪರಿಶೀಲಿಸಬೇಕು. ಗುಣಮಟ್ಟ ಸರಿಯಿಲ್ಲದಿದ್ದಲ್ಲಿ ಆಗಲೇ ತಿರಸ್ಕರಿಸಬೇಕು. ಅದು ಬಿಟ್ಟು ಒಂದೊಮ್ಮೆ ಖರೀದಿಸಿ ಎನ್‌ಇಎಂಎಲ್‌ ಸಾಫ್ಟ್‌ಪ್ಟ್‌ವೇರ್‌ನಲ್ಲಿ ಎಂಟ್ರಿ ಮಾಡಿ ಕಂಪ್ಯೂಟರೈಸ್ಡ್‌ ಬಿಡುಗಡೆ ಪತ್ರದ ಮೂಲಕ ಉಗ್ರಾಣಗಳಿಗೆ ದಾಸ್ತಾನು ಮಾಡಿದರೆ ಮುಗಿತು. ದುಡ್ಡು ಕೊಡಬೇಕು. ಜತೆಗೆ ಖರೀದಿಸಿ ಉಗ್ರಾಣಗಳಿಗೆ ಠೇವಣಿ ಮಾಡದೇ ಇದ್ದಲ್ಲಿ ಅವುಗಳಿಗೆ ಸಂಘವೇ ಜವಾಬ್ದಾರಿಯಾಗಿರುತ್ತದೆ. ಖರೀದಿಸಿದ ತಕ್ಷಣವೇ ಉಗ್ರಾಣಗಳಿಗೆ ಕಳುಹಿಸಬೇಕು. ಬ್ಯಾಹಟ್ಟಿ ಕೇಂದ್ರವು ಖರೀದಿಸಿ 21 ದಿನ ಕಾಲ ತನ್ನಲ್ಲೇ ಇಟ್ಟುಕೊಂಡು, ವೈಜ್ಞಾನಿಕವಾಗಿ ನಿರ್ವಹಣೆ ಇಲ್ಲದೇ ದಾಸ್ತಾನಿಕರಿಸಿತ್ತು. ಇದರಿಂದ ಉತ್ಪನ್ನಗಳ ಗುಣಮಟ್ಟ ಹಾಳಾಗುವ ಸಂಭವ ಹೆಚ್ಚಿರುತ್ತದೆ. ಖರೀದಿಸಿ ತಿಂಗಳ ನಂತರ ಗುಣಮಟ್ಟ ಸರಿಯಿಲ್ಲ ಎಂದು ತಿರಸ್ಕರಿಸುವುದು ಸಮಂಜಸವಲ್ಲ. ರೈತರ ಖಾತೆಗೆ ಹೆಸರು ಕಾಳು ಉತ್ಪನ್ನದ ಮೌಲ್ಯವನ್ನು ಕೂಡಲೇ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.

ಒಟ್ಟಿನಲ್ಲಿ ಬ್ಯಾಹಟ್ಟಿ ಕೇಂದ್ರದಲ್ಲಿ ಹೆಸರು ಮಾರಾಟ ಮಾಡಿರುವ ರೈತರಿಗೆ ದುಡ್ಡು ಕೊಡಬೇಕೆಂದು ಸೂಚನೆಯಂತೂ ನೀಡಿರುವುದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿರುವುದಂತೂ ಸತ್ಯ. ಆದಷ್ಟು ಬೇಗ ದುಡ್ಡು ಬಿಡುಗಡೆ ಮಾಡಬೇಕು ಎಂಬುದು ರೈತರ ಆಗ್ರಹ.ರೈತರಿಂದ ಖರೀದಿಸುವ ಮುನ್ನವೇ ಗುಣಮಟ್ಟ ಪರೀಕ್ಷಿಸಿ ತಿರಸ್ಕರಿಸುವುದಿದ್ದರೆ ತಿರಸ್ಕರಿಸಬೇಕು. ಖರೀದಿಸಿ 21 ದಿನ ವೈಜ್ಞಾನಿಕವಾಗಿ ದಾಸ್ತಾನು ಮಾಡಿಲ್ಲ. ಬಳಿಕ ಉಗ್ರಾಣಕ್ಕೆ ಕಳುಹಿಸಲಾಗಿದೆ. ಹೀಗಾಗಿ ರೈತರಿಗೆ ಉತ್ಪನ್ನದ ದುಡ್ಡು ನೀಡಬೇಕು ಎಂದು ರಾಜ್ಯ ಸಹಕಾರ ಮಾರಾಟ ಮಹಾಮಂಡಳಕ್ಕೆ ತಿಳಿಸಲಾಗಿದೆ.

ವಿರೂಪಾಕ್ಷ ಲಮಾಣಿ, ಉಪನಿರ್ದೇಶಕರು, ಕೃಷಿ ಮಾರಾಟ ಇಲಾಖೆಕೃಷಿ ಮಾರುಕಟ್ಟೆ ಇಲಾಖೆಯೂ ಸೊಸೈಟಿಯ ತಪ್ಪು ಎಂದು ನಿಯಮಗಳ ಉಲ್ಲೇಖಿಸಿ ತಿಳಿಸಿ ಪತ್ರ ಬರೆದಿದೆ. ಪತ್ರ ಬರೆದು ವಾರ ಕಳೆದರೂ ಹೆಸರು ಮಾರಾಟ ಮಾಡಿರುವ ರೈತರಿಗೆ ಹಣ ನೀಡಿಲ್ಲ. ತಕ್ಷಣವೇ ನೀಡಬೇಕು ಇಲ್ಲದಿದ್ದಲ್ಲಿ ಉಗ್ರ ಹೋರಾಟ ಮಾಡಲಾಗುವುದು.

ಗುರು ರಾಯನಗೌಡರ, ರೈತ ಮುಖಂಡ