ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ದ.ಕ. ಜಿಲ್ಲೆಯಲ್ಲಿ ಕಳೆದ ಐದು ವರ್ಷದಲ್ಲಿ ವಸತಿ ಇಲಾಖೆಯಿಂದ ಮನೆ ನಿರ್ಮಾಣ ಪ್ರಗತಿ ಕುಂಠಿತವಾಗಿದೆ. ಈ ಬಗ್ಗೆ ಸರ್ಕಾರ ಶ್ವೇತಪತ್ರ ಹೊರಡಿಸಬೇಕು. ಅಲ್ಲದೆ ವಸತಿ ಸಚಿವರು ಮಂಗಳೂರಿಗೆ ಆಗಮಿಸಿ ಇಲಾಖಾ ಪ್ರಗತಿ ಪರಿಶೀಲನೆ ಸಭೆ ನಡೆಸಿ ಮನೆ ನಿರ್ಮಾಣಕ್ಕೆ ಇರುವ ತಾಂತ್ರಿಕ ತೊಡಕುಗಳನ್ನು ನಿವಾರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಆಗ್ರಹಿಸಿದ್ದಾರೆ.ಮಹಾನಗರ ಪಾಲಿಕೆಯ ತನ್ನ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ವಿಧಾನಸಭಾ ಅಧಿವೇಶನದಲ್ಲಿ 45 ಪ್ರಶ್ನೆಗಳನ್ನು ಕೇಳಿದ್ದು, ವಿವಿಧ ಸಮಸ್ಯೆಗಳಿಗೆ ಸರ್ಕಾರ ನೀಡಿದ ಉತ್ತರದ ಬಗ್ಗೆ ಮಾತನಾಡಿದ ಅವರು, ಮನೆ ನಿರ್ಮಾಣಕ್ಕೆ ಸಂಬಂಧಿಸಿ ಜಿಲ್ಲಾಡಳಿತ ಕೂಡ ಅದಾಲತ್ ನಡೆಸಬೇಕು. ಫಲಾನುಭವಿಗಳಿಗೆ ಬ್ಯಾಂಕ್‌ಗಳು ಸಾಲ ನೀಡುತ್ತಿಲ್ಲ, ಫಲಾನುಭವಿಗಳು ಕೂಡ ತಮ್ಮ ಪಾಲಿನ ಮೊತ್ತ ಪಾವತಿ ಮಾಡುತ್ತಿಲ್ಲ. ಈ ಕಗ್ಗಂಟಿನಿಂದಾಗಿ ವಸತಿ ಯೋಜನೆಯಲ್ಲಿ ಮನೆ ನಿರ್ಮಾಣ ಸಾಧ್ಯವಾಗುತ್ತಿಲ್ಲ. ಬಾಡಿಗೆ ಮನೆಯಲ್ಲಿ ವಾಸ ಇರುವವರಿಗೆ ಮಾಲೀಕ ಒಪ್ಪಂದ ಪತ್ರ ನೀಡುತ್ತಿಲ್ಲ. ಈ ಎಲ್ಲ ಕಾರಣಗಳಿಂದ ಮನೆಯ ಹಕ್ಕು ಪತ್ರ ಪಡೆಯಲು ಸಾಧ್ಯವಾಗುತ್ತಿಲ್ಲ ಎಂದರು.
ಕರಾವಳಿಗೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಅನುಷ್ಠಾನಕ್ಕೆ ಸರ್ಕಾರ ಭರವಸೆ ನೀಡಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಂಗಳೂರಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿ ಕರಾವಳಿಯ ಮೂರು ಜಿಲ್ಲೆಗಳ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ಸಭೆಯನ್ನು 10-15 ದಿನಗಳಲ್ಲಿ ನಡೆಸಲಿದ್ದಾರೆ. ನವೆಂಬರ್ ಒಳಗೆ ಸಚಿವ ಸಂಪುಟ ಸಭೆಯೂ ಮಂಗಳೂರಲ್ಲಿ ನಡೆಯುವ ಸಾಧ್ಯತೆ ಇದೆ ಎಂದರು.ಮಂಗಳೂರಿನ ಇಡೀ ನಗರ ಪ್ರದೇಶದಲ್ಲಿ ಎಐ ಕ್ಯಾಮರಾ ಅಳವಡಿಸಲು ಮಹಾನಗರ ಪಾಲಿಕೆ ಹಾಗೂ ಸಂಚಾರಿ ಪೊಲೀಸರು ಕ್ರಮ ಕೈಗೊಳ್ಳಬೇಕು. ಇದರಿಂದಾಗಿ ಅಪರಾಧಗಳಿಗೆ ಕಡಿವಾಣಕ್ಕೆ ಸುಲಭವಾಗಲಿದೆ ಮತ್ತು ಸಂಚಾರ ದಟ್ಟಣೆ ನಿವಾರಣೆಗೊಂಡು ಸುಗಮ ಸಂಚಾರ ಸಾಧ್ಯವಾಗಲಿದೆ ಎಂದರು.
ಈ ಸಂದರ್ಭ ವಿವಿಧ ಫಲಾನುಭವಿಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 5.19 ಲಕ್ಷ ರು.ಗಳ ಚೆಕ್‌ನ್ನು ವಿತರಿಸಿದರು.ಮುಖಂಡರಾದ ಶಶಿಧರ ಹೆಗ್ಡೆ, ನವೀನ್ ಡಿಸೋಜಾ ಮತ್ತಿತರರು ಇದ್ದರು.
-----------