ಜೆ.ಕೆ. ಮೈದಾನದಲ್ಲಿ ಮತ್ಸ್ಯ ಲೋಕ ಸೃಷ್ಟಿ...!

| Published : Oct 06 2024, 01:20 AM IST

ಸಾರಾಂಶ

ಮೀನುಗಾರಿಕೆ ಇಲಾಖೆ ರೈತ ದಸರೆಗೆ ಆಗಮಿಸುವವರಿಗೆ ವಿಶಿಷ್ಟ ಅನುಭವ ನೀಡುವ ಸಲುವಾಗಿ ನಗರದ ಜೆ.ಕೆ. ಮೈದಾನದಲ್ಲಿ ಮತ್ಸ್ಯ ಮೇಳವನ್ನು ಆಯೋಜಿಸಿದೆ. ವಿವಿಧ ಗಾತ್ರದ ಅಕ್ವೇರಿಯಂಗಳಲ್ಲಿರುವ ಬಣ್ಣ ಬಣ್ಣದ, ವಿಭಿನ್ನ ತಳಿಯ ದೇಶಿ- ವಿದೇಶಿ ಅಲಂಕಾರಿಕ ಮೀನುಗಳು ನೋಡುಗರ ಮನಸೂರೆಗೊಳ್ಳುತ್ತಿವೆ. ಜೊತೆಗೆ ಮೀನುಗಾರಿಕೆಗೆ ಬಳಸುವ ಬಲೆ, ತೆಪ್ಪ ಸೇರಿದಂತೆ ಹಲವು ವಸ್ತುಗಳನ್ನು ಪ್ರದರ್ಶಿಸಲಾಗಿದೆ.

ಬಿ.ಶೇಖರ್‌ ಗೋಪಿನಾಥಂ

ಕನ್ನಡಪ್ರಭ ವಾರ್ತೆ ಮೈಸೂರು

ಈ ಬಾರಿಯ ರೈತ ದಸರಾ ಪ್ರಯುಕ್ತ ಮೀನುಗಾರಿಕೆ ಇಲಾಖೆಯು ಪ್ರತ್ಯೇಕವಾಗಿ ಮತ್ಸ್ಯ ಮೇಳವನ್ನು ಆಯೋಜಿಸಿದ್ದು, ಅಲ್ಲಿರುವ ಬಣ್ಣ ಬಣ್ಣದ ದೇಶಿ- ವಿದೇಶಿ ಅಲಂಕಾರಿಕ ಮೀನುಗಳು ಮತ್ಸ್ಯಪ್ರಿಯರನ್ನು ಆಕರ್ಷಿಸುತ್ತಿವೆ.

ಮೀನುಗಾರಿಕೆ ಇಲಾಖೆ ರೈತ ದಸರೆಗೆ ಆಗಮಿಸುವವರಿಗೆ ವಿಶಿಷ್ಟ ಅನುಭವ ನೀಡುವ ಸಲುವಾಗಿ ನಗರದ ಜೆ.ಕೆ. ಮೈದಾನದಲ್ಲಿ ಮತ್ಸ್ಯ ಮೇಳವನ್ನು ಆಯೋಜಿಸಿದೆ. ವಿವಿಧ ಗಾತ್ರದ ಅಕ್ವೇರಿಯಂಗಳಲ್ಲಿರುವ ಬಣ್ಣ ಬಣ್ಣದ, ವಿಭಿನ್ನ ತಳಿಯ ದೇಶಿ- ವಿದೇಶಿ ಅಲಂಕಾರಿಕ ಮೀನುಗಳು ನೋಡುಗರ ಮನಸೂರೆಗೊಳ್ಳುತ್ತಿವೆ. ಜೊತೆಗೆ ಮೀನುಗಾರಿಕೆಗೆ ಬಳಸುವ ಬಲೆ, ತೆಪ್ಪ ಸೇರಿದಂತೆ ಹಲವು ವಸ್ತುಗಳನ್ನು ಪ್ರದರ್ಶಿಸಲಾಗಿದೆ.

ಗುಹೆ ಮಾದರಿಯ ಒಳಭಾಗದಲ್ಲಿ ಬಗೆ ಬಗೆಯ ಮೀನುಗಳನ್ನು ಪ್ರದರ್ಶಿಸಲಾಗಿದೆ. ಪ್ರವೇಶದ್ವಾರದಲ್ಲೇ ಗುಹೆಯ ಮಾದರಿಯಲ್ಲಿ ಟನಲ್ ಇದ್ದು, ಅಲ್ಲೇ ಪಕ್ಕದಲ್ಲಿರುವ ಬಗೆ ಬಗೆಯ ಬಣ್ಣ ಬಣ್ಣದ ಮೀನುಗಳು ಅತ್ಯಾಕರ್ಷವಾಗಿವೆ. ಮೇಳದಲ್ಲಿ ದೇಶ ವಿದೇಶದ 65 ಹೆಚ್ಚು ತಳಿಯ ಮೀನುಗಳನ್ನು ಪ್ರದರ್ಶಿಸಲಾಗಿದೆ.

ಅಮೆಜಾನ್‌ನಿಂದ ಪ್ಯಾರೇಟ್‌ಫಿಶ್‌, ಸೌತ್‌ಅಮೆರಿಕದಿಂದ ಜಿಯೋ ಪ್ಯಾರಿಸ್‌, ಅರೋನಾ, ಸ್ಟಿಂಗ್ರೆ, ಸಿಹಿ ನೀರಿನ ಮೀನುಗಳು, ಉಪ್ಪು ನೀರಿನ ಮೀನುಗಳು, ಜಲಸಸ್ಯಗಳಿಂದ ಅಲಂಕೃತವಾಗಿರುವ ಮೀನುಗಳು, ಪೆನರೋಡಿಯಂ, ಗ್ರ್ಯಾವಿಟಿ ಫಿಶ್‌ಸೇರಿದಂತೆ ನಾನಾ ತಳಿಯ ಮೀನುಗಳಿವೆ.

ಬಣ್ಣ ಬಣ್ಣದ ಏಂಜಲ್ ಫಿಶ್, ಮೋಲಿಸ್, ಬಾರ್ಬ್ಸ್, ಸಿಕ್ಲೀಡ್ಸ್, ಶಾರ್ಕ್ಸ್, ಸ್ವಾರ್ಡ್ ಟೈಲ್, ಗುಪ್ಪಿ, ಗೌರಮಿ, ಶಾರ್ಕ್, ಟಿಲಾಪಿಯಾ, ವಿಡೋ ಟೆಟ್ರಾಸ್, ಗೋಲ್ಡ್ ಫಿಶ್, ಫ್ಲವರ್ ಹಾರ್ನ್, ಕೋಯಿ ಕಾರ್ಪ್, ರೆಮೋರಾ ಸಕ್ಕರ್ ಫಿಶ್, ಎಸ್.ಕೆ ಗೋಲ್ಡ್, ಪರ್ಲ್ ಸ್ಪಾಟ್, ಜೈಂಟ್ ಗೌರಮಿ, ಪ್ಲಾಟಿ, ಆಸ್ಕರ್ ಫಿಶ್, ಬಿಚ್ಚರ್, ಸ್ಪಾಟೆಡ್ ಸ್ಕ್ಯಾಚ್, ಮರೀನಾ ಏಂಜಲ್, ಪ್ಯಾರೆಟ್ ಫಿಶ್, ರೆಡ್ ಝೀಬ್ರಾ ಫಿಶ್ ಸೇರಿದಂತೆ ವಿವಿಧ ತಳಿಯ ಮೀನುಗಳು ಪ್ರದರ್ಶನದಲ್ಲಿವೆ.

2 ಕೆ.ಜಿ.ಯಿಂದ ಗ್ರಾಂ ತೂಕದ ಮೀನುಗಳು ಪ್ರದರ್ಶನದಲ್ಲಿದೆ. ಸಿಹಿ, ಉಪ್ಪು ನೀರಿನ ಮೀನುಗಳ ಅಕ್ವೇರಿಯಂ, ಪ್ಲಾಂಟೆಡ್ ಅಕ್ವೇರಿಯಂ ಸೇರಿದಂತೆ 35 ಹೆಚ್ಚು ಅಕ್ವೇರಿಯಂಗಳಲ್ಲಿ ಮೀನುಗಳನ್ನು ಪ್ರದರ್ಶಿಸಲಾಗಿದೆ. ಅಕ್ವೇರಿಯಂಗಳಲ್ಲಿ ಸಮುದ್ರದ ಒಳಭಾಗದಲ್ಲಿ ಸುಂದರವಾಗಿ ಕಾಣುವ ಸಸ್ಯಗಳನ್ನಿಟ್ಟು ಪ್ರದರ್ಶಿಸುವ ಪ್ಲಾಂಟೆಡ್ ಅಕ್ವೇರಿಯಂ, ಅರ್ಧ ಭಾಗ ನೀರಿನ ಒಳಭಾಗದಲ್ಲಿ ಹಾಗೂ ಅರ್ಧ ಸಸ್ಯ ನೀರಿನಿಂದ ಹೊರಗೆ ಇರುವ ಅಕ್ವೇರಿಯಂಗಳು ಎಲ್ಲರ ಗಮನ ಸೆಳೆಯುತ್ತಿವೆ.

ಕಪ್ಪೆ ಚಿಪ್ಪುಗಳನ್ನು ಸಂಗ್ರಹಿಸುವ ಮೂಲಕ ಕೃತಕ ಮುತ್ತುಗಳನ್ನು ಅಭಿವೃದ್ಧಿ ಪಡಿಸುವ ಸಿಹಿನೀರು ಮುತ್ತು ಉತ್ಪಾದನೆಯ ಕೃಷಿ ಬಗ್ಗೆ ವಿವರಣೆ ನೀಡುವದರ ಜೊತೆಗೆ ಮಣ್ಣಿನ ಏಡಿ ಸಾಕಾಣಿಕೆ ಹಾಗೂ ಅವುಗಳ ಸೇವನೆಯಿಂದ ಆಗುವ ಆರೋಗ್ಯದ ಲಾಭಗಳ ಬಗ್ಗೆ ಮಾಹಿತಿಯನ್ನು ಪ್ರದರ್ಶಿಸಲಾಗಿದೆ.ಮೀನು ಕೃಷಿ ಮಾಹಿತಿ:

ಮತ್ಸ್ಯ ಮೇಳದಲ್ಲಿ ಅಲಂಕಾರಿಕ ಮೀನುಗಳ ಪ್ರದರ್ಶನ ಮಾತ್ರವಲ್ಲದೆ ಮೀನುಗಾರಿಕೆ ಇಲಾಖೆಯ ವಿವಿಧ ಯೋಜನೆಗಳು ಹಾಗೂ ಮೀನುಗಾರಿಕೆ ಕುರಿತು ಮಾಹಿತಿ ನೀಡುವ ಮಳಿಗೆಗಳನ್ನು ತೆರೆಯಲಾಗಿದೆ.

ಜಮೀನು ಇಲ್ಲದವರು ಜಲಾಶಯಗಳಲ್ಲಿ ಪಂಜರ ಮೀನು ಕೃಷಿ, ಅಕ್ವಾಫೋನಿಕ್ಸ್‌ಕೃಷಿ ಸೇರಿದಂತೆ ಮೀನುಗಾರಿಕೆ ಕ್ಷೇತ್ರದ ಇತ್ತೀಚಿನ ತಾಂತ್ರಿಕತೆಗಳ ವಿವರಣೆ ನೀಡುವ ಮಳಿಗೆಗಳನ್ನು ಕಾಣಬಹುದು.

ಜೊತೆಗೆ ಮೀನಿನ ಆಹಾರ ಮತ್ತು ಮೀನು ಕೃಷಿಗೆ ಬೇಕಾಗುವ ಇನ್ನಿತರ ವಸ್ತುಗಳ ವಿವರಣೆ ನೀಡುವ ಮಳಿಗೆಗೆಳನ್ನು ತೆರೆಯಲಾಗಿದೆ. ಇದಲ್ಲದೆ ಮೀನುಗಾರಿಕೆಗೆ ಪೂರಕವಾಗಿ ಪಶುಪಾಲನೆ, ಭತ್ತ ಬೆಳೆಯುವುದು, ಕೋಳಿ ಸಾಕಣೆ, ಮೀನು ಕೃಷಿಯಲ್ಲಿ ಅಳವಡಿಸಿಕೊಂಡಿರುವ ವಿಜ್ಞಾನ ಮತ್ತು ತಾಂತ್ರಿಕತೆಗಳು ಸೇರಿದಂತೆ ಸಮಗ್ರ ಮೀನು ಕೃಷಿ ಬಗ್ಗೆ ವಿವರಣೆ ಲಭ್ಯವಿದೆ. ಅಕ್ವೇರಿಯಂ ಹಾಗೂ ಮೀನುಗಳ ಮಾರಾಟ ಕೇಂದ್ರವೂ ಇದೆ.