ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುರೈಲ್ವೇ ಸಹಕಾರ ಬ್ಯಾಂಕ್ ತನ್ನ ಶತಮಾನೋತ್ಸವ ಹಾಗೂ 105ನೇ ವರ್ಷದ ಸಂಭ್ರಮವನ್ನು ‘ಶತ ಪಯಣ’ ಎಂಬ ಹೆಸರಿನಲ್ಲಿ ಸೆ. 6ರಂದು ಬೆಳಿಗ್ಗೆ 10.30ಕ್ಕೆ ಜೆ.ಕೆ. ಮೈದಾನದ ಎಂಎಂಸಿ ಮತ್ತು ಆರ್‌ಐ ಅಮೃತ ಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಿದೆ.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ಯಾಂಕ್ ಅಧ್ಯಕ್ಷ ಹಾಗೂ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಎಂ.ಬಿ. ಮಂಜೇಗೌಡ, ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸುವ ನಿರೀಕ್ಷೆ ಇದೆ ಎಂದರು.1920ರ ಏ. 1 ರಂದು ಬೆಂಗಳೂರು ರೈಲ್ವೇ ಆಡಿಟ್ ಕಚೇರಿಯ ಸಣ್ಣ ಕೊಠಡಿಯಲ್ಲಿ ಸಹಕಾರ ಸಂಘವಾಗಿ ಹುಟ್ಟಿಕೊಂಡ ಈ ಬ್ಯಾಂಕ್, ಮೈಸೂರು ರಾಜ್ಯ ರೈಲ್ವೇ ಖಾತೆಗಳ ಪ್ರವಾಸಿ ಪರಿಶೀಲಕ ಎಲ್.ವಿ. ಗೋಪಾಲನ್ ಅವರ ದೃಷ್ಟಿಯಿಂದ ಕೇವಲ 112 ಸದಸ್ಯರು ಹಾಗೂ ರೂ. 2,580 ಹಂಚಿಕೆ ಬಂಡವಾಳದಿಂದ ಆರಂಭವಾಗಿತ್ತು. ಇಂದು, 10,000ಕ್ಕೂ ಹೆಚ್ಚು ಸದಸ್ಯರು ಹಾಗೂ 650 ಕೋಟಿ ರೂ. ಮೀರಿದ ಠೇವಣಿಗಳೊಂದಿಗೆ ಇದು ನಂಬಿಕೆಯ ಪ್ರತೀಕವಾಗಿರುವ ಪ್ರಮುಖ ಸಹಕಾರ ಬ್ಯಾಂಕ್ ಆಗಿ ಬೆಳೆಯಿತು. ಮೈಸೂರು ಅಶೋಕಪುರಂ ರೈಲ್ವೇ ವರ್ಕ್‌ಶಾಪ್, ಶೇಷಾದ್ರಿ ಅಯ್ಯರ್ ರಸ್ತೆ (ಮುಖ್ಯ ಶಾಖೆ), ಬೆಂಗಳೂರು, ಯಲಹಂಕ ಮತ್ತು ಅರಸೀಕೆರೆಯ ಐದು ಶಾಖೆಗಳ ಮೂಲಕ ಜನರಿಗೆ ಸಾಲ, ಮುಂಗಡ ಮತ್ತು ಠೇವಣಿ ಯೋಜನೆ ಸೇರಿದಂತೆ ನಾನಾ ಸೇವೆಗಳನ್ನು ಒದಗಿಸುತ್ತಿದೆ ಎಂದರು.ಕೇವಲ 30 ನಿಮಿಷಗಳಲ್ಲಿ ಸಾಲ ಮಂಜೂರಾತಿ ಮಾಡುವ ವ್ಯವಸ್ಥೆಯು ಇದರ ವೈಶಿಷ್ಟ್ಯ. 2007ರಲ್ಲಿ ಜಿಲ್ಲೆಯ ಅತ್ಯುತ್ತಮ ಸಹಕಾರ ಬ್ಯಾಂಕ್ ಎಂಬ ಗೌರವವನ್ನು ಈ ಸಂಸ್ಥೆ ಪಡೆದಿತ್ತು.ತಂತ್ರಜ್ಞಾನೀಕರಣದತ್ತ ಗಮನ ಹರಿಸಿದ ಬ್ಯಾಂಕ್, ಕಂಪ್ಯೂಟರೀಕರಣದ ನಂತರ ಎ- ಗ್ರೇಡ್ ಸ್ಥಾನಮಾನ ಗಳಿಸಿ, 2009ರಲ್ಲಿ ಕೋರ್ ಬ್ಯಾಂಕಿಂಗ್ ವ್ಯವಸ್ಥೆ ಅಳವಡಿಸಿಕೊಂಡಿತು. ಮುಂದಿನ ದಿನಗಳಲ್ಲಿ ಬ್ಯಾಂಕ್ ಅನ್ನು ಬಹುರಾಜ್ಯ ಸಹಕಾರ ಬ್ಯಾಂಕ್ ಆಗಿ ಪರಿವರ್ತಿಸಲು ಹಾಗೂ ಹುಬ್ಬಳ್ಳಿ, ಮಂಗಳೂರು, ಮಂಡ್ಯ ಮತ್ತು ದಾವಣಗೆರೆಯಲ್ಲಿ ಹೊಸ ಶಾಖೆಗಳನ್ನು ತೆರೆಯುವ ಉದ್ದೇಶವಿದೆ ಎಂದು ಅವರು ವಿವರಿಸಿದರು.ಶತಮಾನೋತ್ಸವ ಸಮಾರಂಭದಲ್ಲಿ ಬ್ಯಾಂಕ್ ಸ್ಥಾಪನೆಗೆ ಕೊಡುಗೆ ನೀಡಿದ ಹಿರಿಯ ಸದಸ್ಯರು ಹಾಗೂ ಪ್ರಮುಖ ವ್ಯಕ್ತಿಗಳನ್ನು ಸನ್ಮಾನಿಸಲಾಗುವುದು. ಜೊತೆಗೆ, ಬ್ಯಾಂಕ್ ಸದಸ್ಯರ ಮಕ್ಕಳು ಎಸ್ಸೆಸ್ಸೆಲ್ಸಿ ಹಾಗೂ ಅದಕ್ಕಿಂತ ಮೇಲಿನ ಪರೀಕ್ಷೆಗಳಲ್ಲಿ ಶೇ. 80ಕ್ಕಿಂತ ಹೆಚ್ಚು ಅಂಕ ಗಳಿಸಿದರೆ ಅವರಿಗೆ ‘ಪ್ರತಿಭಾ ಪ್ರಶಸ್ತಿ’ ಪ್ರದಾನ ಮಾಡುವುದಾಗಿ ಅವರು ತಿಳಿಸಿದರು. ಬ್ಯಾಂಕ್ ಉಪಾಧ್ಯಕ್ಷ ಎಸ್. ಆನಂದ್, ಸಿಇಒ ನಾರಾಯಣ್, ನಿರ್ದೇಶಕ ಸಿ. ಶಿವಶಂಕರ, ಶ್ವೇತಾ, ಉತ್ತೇಜ್, ಚಂದ್ರು, ನಿರ್ಮಲಾ, ಪ್ರಧಾನ ವ್ಯವಸ್ಥಾಪಕ ಸತ್ಯನಾರಾಯಣ ಮತ್ತು ಲಕ್ಷ್ಮೀಪ್ರಸಾದ್ ಮೊದಲಾದವರು ಇದ್ದರು.