ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳಗಾವಿ
ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಪರ ಪ್ರಚಾರಕ್ಕೆ ಆಗಮಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಮಂಗಳವಾರ ಬೆಳಗಾವಿ ಜಿಲ್ಲೆಯಲ್ಲಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದರು.
ಮಂಗಳವಾರ ಬೆಳಗ್ಗೆ ಚಿಕ್ಕೋಡಿಗೆ ಆಗಮಿಸಿದ ನಡ್ಡಾಗೆ ಪಕ್ಷದ ವತಿಯಿಂದ ಭರ್ಜರಿ ಸ್ವಾಗತ ಕೋರಲಾಯಿತು. ತೆರೆದ ವಾಹನದಲ್ಲಿ ಅವರನ್ನು ಮೆರವಣಿಗೆಯಲ್ಲಿ ಕರೆ ತರಲಾಯಿತು.
ಬಳಿಕ ಅವರು ಚಿಕ್ಕೋಡಿಯ ಕಿವುಡಾ ಮೈದಾನದಲ್ಲಿ ನಡೆದ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗಿಯಾದರು.
ಬಳಿಕ, ಬೆಳಗಾವಿಗೆ ಆಗಮಿಸಿದ ನಡ್ಡಾ, ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಭಾಗಿಯಾದರು. ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ರಾಧಾ ಮೋಹನ್‌ದಾಸ್ ಅಗರವಾಲ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ.
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಬೊಮ್ಮಾಯಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ ಹಾಗೂ ಚಿಕ್ಕೋಡಿ ಲೋಕಸಭಾ ವ್ಯಾಪ್ತಿಯ ಸಂಸದರು, ಮಾಜಿ ಸಂಸದರು, ಶಾಸಕರು, ಮಾಜಿ ಶಾಸಕರು ಸಭೆಯಲ್ಲಿ ಪಾಲ್ಗೊಂಡಿದ್ದರು.
ನಂತರ, ವಿಶ್ವೇಶ್ವರಯ್ಯ ನಗರದಲ್ಲಿರುವ ಸಂಸದೆ ಮಂಗಲ ಅಂಗಡಿ ಅವರ ನಿವಾಸಕ್ಕೆ ಭೇಟಿ ನೀಡಿ, ಉಪಾಹಾರ ಸೇವಿಸಿದರು. ಬಳಿಕ, ಮಂಗಲ ಅಂಗಡಿ ಜೊತೆ ನಡ್ಡಾ ಹಾಗೂ ವಿಜಯೇಂದ್ರ ಪ್ರತ್ಯೇಕವಾಗಿ ಸಭೆ ನಡೆಸಿದರು.
ನಂತರ, ಅನಾರೋಗ್ಯದಿಂದ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅವರನ್ನು ಭೇಟಿ ಮಾಡಿ, ಅವರ ಆರೋಗ್ಯ ವಿಚಾರಿಸಿದರು.