ಸಾರಾಂಶ
ಶಿರಸಿ: ಎಲ್ಲಿ ನೋಡಿದರೂ ಹಲಸಿನ ಹಣ್ಣಿನ ಘಮಘಮ. ಹಣ್ಣಿನಿಂದ ತಯಾರಾಗುತ್ತಿರುವ ಹಲಸಿನ ಖಾದ್ಯ, ಮತ್ತೊಂದೆಡೆ ಆಕರ್ಷಿಸುತ್ತಿರುವ ಹಲಸು,ಬಕ್ಕೆ ಹಣ್ಣುಗಳಿಂದ ಮಾಡಿದ ಅಲಂಕಾರ ನಗರದ ಕದಂಬ ಮಾರ್ಕೆಟಿಂಗ್‌ನಲ್ಲಿ ಆಯೋಜಿಸಲಾದ ಹಲಸಿನ ಮೇಳದಲ್ಲಿ ನೂರಾರು ಜನರು ಭೇಟಿ ನೀಡಿ ಆಸ್ವಾದ ಸವಿದರು.
ಉಕ ಜಿಲ್ಲಾ ಅಡಿಕೆ ಮತ್ತು ಸಂಬಾರ ಬೆಳೆಗಾರರ ಸಂಘ, ತೋಟಗಾರಿಕಾ ಇಲಾಖೆ, ಉ.ಕ ಸಾವಯವ ಒಕ್ಕೂಟ, ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ, ಕೃಷಿ ಇಲಾಖೆ (ಆತ್ಮ ಯೋಜನೆ) ಸಂಯುಕ್ತಾಶ್ರಯದಲ್ಲಿ ನಗರದ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ಆವರಣದಲ್ಲಿ ಎರಡು ದಿನಗಳು ಹಮ್ಮಿಕೊಂಡ ೧೨ನೇ ಹಲಸಿನ ಮೇಳವು ಜನರನ್ನು ಆಕರ್ಷಿಸಿತು.ಮೇಳದಲ್ಲಿ ಹಸಲು, ಬಕ್ಕೆ ಹಣ್ಣು ಮಾತ್ರವಲ್ಲದೇ ಹಲಸಿನ ಹೊಳಿಗೆ, ಹಲಸಿನ ಕೇಕ್, ಪತ್ರೊಡೆ ಸೇರಿದಂತೆ ನೂರಕ್ಕೂ ಅಧಿಕ ಖಾದ್ಯ, ೭೫ ಕ್ಕೂ ಅಧಿಕ ಹಲಸಿನ ಕಾಯಿ, ತಳಿಗಳ ಪ್ರದರ್ಶನದಲ್ಲಿ ನೂರಾರು ಗ್ರಾಹಕರು ತಮಗಿಷ್ಟವಾದ ಖಾದ್ಯ ಖರೀದಿಸಿ ಖುಷಿಪಟ್ಟರು.
ಹಲಸಿನಿಂದ ತಯಾರಿಸಿದ ಕೇಕ್ ಕತ್ತರಿಸುವ ಮೂಲಕ ೧೨ನೇ ಹಲಸಿನ ಮೇಳ ಬೆಂಗಳೂರಿನ ಬಯೋಟೆಕ್ನಾಲಜಿ ವಿಭಾಗದ ಪ್ರಾಧ್ಯಾಪಕಿ ಡಾ. ಶಾಮಲಮ್ಮ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ರೈತರು ಭಾಗಿಯಾದರೆ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ. ಅಸ್ಸಾಂ, ಮಣಿಪುರ, ಮೇಘಾಲಯ ರಾಜ್ಯದಲ್ಲಿ ಹಲಸು ಸಾಕಷ್ಟು ಪ್ರಮಾಣದಲ್ಲಿ ಬೆಳೆಯುತ್ತಿದೆ. ಆದರೆ ಅವರಿಗೆ ಮೌಲ್ಯವರ್ಧನೆ ತಿಳಿದಿಲ್ಲ. ಅವರಿಗೆ ತರಬೇತಿ ನೀಡಿದ ಪರಿಣಾಮ ಹಪ್ಪಳ, ಚಿಪ್ಸ್, ಉಪ್ಪಿನಕಾಯಿ ತಯಾರಿಸುತ್ತಿದ್ದಾರೆ.ಬಕ್ಕೆ ತಳಿ ಗುರುತಿಸಿ, ಕೃಷಿ ವಿದ್ಯಾಲಯದಲ್ಲಿ ಕಸಿ ಮಾಡಿ ತಳಿ ಅಭಿವೃದ್ಧಿಪಡಿಸಿದ್ದೇವೆ. ಉತ್ತಮ ತಳಿ ಗುರುತಿಸಿ, ಅದನ್ನು ಸಂರಕ್ಷಿಸಿ, ಆ ರೈತರಿಗೆ ಹಕ್ಕುಪತ್ರ ನೀಡುವುದನ್ನು ಮಾಡುತ್ತಿದ್ದೇವೆ. ಮಲೆನಾಡಿನ ಪ್ರದೇಶದಲ್ಲಿ ಹೆಚ್ಚು ಮಳೆಯಾಗುವುದಕ್ಕೆ ಹಲಸಿನ ಗಿಡಗಳು ಬೇಗವಾಗಿ ಬೆಳೆಯುವುದಿಲ್ಲ. ಈ ಪ್ರದೇಶಕ್ಕೆ ಹೊಂದಾಣಿಕೆಯಾಗುವ ತಳಿ ನೀಡಬೇಕಿದೆ. ತಳಿ ಗುರುತಿಸಿ, ಉಳಿಸಿಕೊಂಡು ಹೋಗಬೇಕಿದೆ. ಹಲಸಿನ ಕಟ್ಟಿಗೆ ಬೇಡಿಕೆ ಇರುವುದಿಂದ ಕಡಿದು ಮಾರಾಟ ಮಾಡುತ್ತಿದ್ದಾರೆ.ಅದು ಕಡಿಮೆಯಾಗಿ ತಳಿ ಸಂರಕ್ಷಣೆಯಾಗಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ತೋಟಗಾರಿಕಾ ಕಾಲೇಜಿನ ನಿವೃತ್ತ ಡೀನ್ ಹಾಗೂ ವಿಜ್ಞಾನಿ ಡಾ. ಲಕ್ಷ್ಮೀನಾರಾಯಣ ಹೆಗಡೆ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು.ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಅಡಿಕೆ ಕಾಳಮೆಣಸು ವ್ಯಾಪಾರಸ್ಥರು ಲಾಭದ ಸ್ವಲ್ಪ ಭಾಗ ಸಂಶೋಧನೆಗೆ ನೀಡಿದರೆ ಅನುಕೂಲವಾಗುತ್ತದೆ. ಸರ್ಕಾರಗಳು ಮೆಡಿಕಲ್, ಎಂಜೀನಿಯರಿಂಗ್ ವಿಭಾಗಕ್ಕೆ ನೀಡಿದ ಪ್ರಾಮುಖ್ಯತೆ ಕೃಷಿ ಹಾಗೂ ತೋಟಗಾರಿಕೆಗೆ ನೀಡುತ್ತಿಲ್ಲ. ನಮ್ಮಲ್ಲಿರುವ ಹಲಸು, ಉಪ್ಪಾಗೆ ಸಂಸ್ಕರಿಸಿ, ಮಾರಾಟ ಮಾಡಿದರೆ ಆರ್ಥಿಕವಾಗಿ ಬಲಿಷ್ಠರಾಗಬಹುದು ಎಂದ ಅವರು, ಉತ್ತರಕನ್ನಡ ಚಿನ್ನದ ಗಣಿ, ಅದಿರನ್ನು ತೆಗೆದು ನಮಗಿಷ್ಟವಾದ ವಸ್ತು ಮಾಡಿಕೊಳ್ಳಬಹುದು. ರೈತರು ಕೊರಗಬಾರದು. ಬಹಳಷ್ಟು ಅವಕಾಶವಿದೆ. ಅಡಿಕೆಗೆ ಪೂರಕ ಬೆಳೆಯಿದೆ. ಶೇ. ೮೦ ರಷ್ಟು ಪಣಿಯೂರು ಕಾಳುಮೆಣಸು ಇಳುವರಿಯಲ್ಲಿ ಪ್ರಸಿದ್ಧಿಪಡಿಸಿದೆ ಎಂದು ಹೇಳಿದರು.
ಹಲಸಿನ ಕೃಷಿಯಲ್ಲಿ ಸಾಧನೆಗೈದ ರಾಜೇಶ ಭಟ್ಟ ಮೂರುರು-ಕಲ್ಲಬ್ಬೆ ಕುಮಟಾ, ಸುಬ್ರಹ್ಮಣ್ಯ ಗಾಂವ್ಕರ ಭಾಗಿನಕಟ್ಟಾ, ನರಹರಿ ಮಂಗಳೂರು, ಭವನಿ ಶಂಕರ ಭಟ್ಟ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.ಆನಂದ ಹಲಸು ಎಂಬ ಹಲಸು ತಳಿ ಮತ್ತು ಕದಂಬ ಹಾಗೂ ನೆಲಸಿರಿಯ ಅಡಿಯಲ್ಲಿ ಹಲಸಿನ ಬೀಜದ ಬ್ರಾಂಡ್‌ನ್ನು ಬಿಡುಗಡೆಗೊಳಿಸಲಾಯಿತು.
ಆನಂದ ಹಲಸು ತಳಿಯ ವಿಶೇಷ ಕುರಿತು ಜಿ.ವಿ. ಹೆಗಡೆ ಮಾಹಿತಿ ನೀಡಿದರು. ಡಾ.ಕೇಶವ ಕೊರ್ಸೆ ಅಭಿನಂದನಾ ಭಾಷಣ ಮಾಡಿದರು.ಉಕ ಜಿಲ್ಲಾ ಅಡಿಕೆ ಮತ್ತು ಸಂಬಾರ ಬೆಳೆಗಾರರ ಸಂಘದ ಉಪಾಧ್ಯಕ್ಷ ನಾರಾಯಣ ಹೆಗಡೆ ಗಡಿಕೈ ಸ್ವಾಗತಿಸಿದರು. ಕದಂಬ ಮಾರ್ಕೆಟಿಂಗ್ ಗೌರವ ಸಲಹೆಗಾರ ವಿಶ್ವೇಶ್ವರ ಭಟ್ಟ ಕೋಟೆಮನೆ ಪ್ರಾಸ್ತಾವಿಕ ಮಾತನಾಡಿದರು. ಶ್ರೀಕಾಂತ ಹೆಗಡೆ ಅಗಸಾಲ ವಂದೆ ಮಾತರಂ ಗೀತೆ ಹಾಡಿದರು. ಭಾರ್ಗವ ಹೆಗಡೆ ನಿರೂಪಿಸಿದರು.ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿಯ ಅಧ್ಯಕ್ಷ ಶಂಭುಲಿಂಗ ಹೆಗಡೆ ನಿಡಗೋಡ ಅಧ್ಯಕ್ಷತೆ ವಹಿಸಿದ್ದರು.
ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಬಿ.ಪಿ. ಸತೀಶ, ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಟಿಎಂಎಸ್ ಅಧ್ಯಕ್ಷ ಜಿ.ಎಂ. ಮುಳಖಂಡ, ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಚಂದ್ರಶೇಖರ ಹಂಚಿನಮನಿ, ಡಾ. ರಾಘವೇಂದ್ರ ರಾವ್, ಡಾ. ಜ್ಯೋತಿ ಠಾಕರೆ ಮಹಾರಾಷ್ಟ್ರ, ಗಣೇಶ ಕೊಲ್ಲಾಪುರ, ತನ್ಯಾ ಫಡ್ನೇಕರ್ ಮತ್ತಿತರರು ಉಪಸ್ಥಿತರಿದ್ದರು. ಸುಚೇತಾ ಹೆಗಡೆ ಸಣ್ಣಕೇರಿ ಹಲಸಿನ ಕೇಕ್ ತಯಾರಿಸಿದ್ದರು.ಗಮನಸೆಳೆದ ರಂಗೋಲಿ:
ಹಲಸಿನ ಸ್ವಾರೆ, ಬ್ಯಾಳೆ, ಸಿಪ್ಪೆ, ಸೊಳೆ, ಕಾಯಿಯಿಂದ ತಯಾರಿಸಿದ ಹಲಸಿನ ಮೇಳ ೨೦೨೫ ಸ್ವಾಗತದ ರಂಗೋಲಿಯನ್ನು ತಯಾರಿಸಿದ್ದು, ನೋಡಕರ ಆಕರ್ಷಣೀಯವಾಗಿ ಕೈಬೀಸಿ ಕರೆಯುತ್ತಿತ್ತು.ಇಂದಿನ ಕಾರ್ಯಕ್ರಮ:
ಜೂ. ೬ರಂದು ಬೆಳಗ್ಗೆ ಬೆಳಗ್ಗೆ ೧೦.೩೦ರಿಂದ ಪಶ್ಚಿಮಘಟ್ಟದ ಸಸ್ಯ ವೈವಿಧ್ಯ ಸಂರಕ್ಷಣೆ ಹಾಗೂ ಕೃಷಿಯಲ್ಲಿ ಅದರ ಮಹತ್ವ ಕುರಿತು ಡಾ. ಎಸ್.ಬಿ. ದಂಡಿನ್ ಉಪನ್ಯಾಸ ನೀಡಲಿದ್ದಾರೆ. ಬಳಿಕ ಬೆಳಗ್ಗೆ ೧೧.೩೦ ರಿಂದ ಎರಡನೇ ಗೋಷ್ಠಿಯಲ್ಲಿ ಹಲಸಿನ ಉತ್ಪನ್ನಗಳ ಗುಣಮಟ್ಟ ಹಾಗೂ ಮಾರುಕಟ್ಟೆಕುರಿತು ಪ್ರಾಧ್ಯಾಪಕಿ ಡಾ.ಎಸ್. ಶ್ಯಾಮಲಮ್ಮ ಅಧ್ಯಕ್ಷತೆಯಲ್ಲಿ ಜಿಲ್ಲೆಯ ಪಿ.ಎಂ.ಎಫ್.ಎಂ.ಇ.ಯೋಜನೆಯ ಸಂಪನ್ಮೂಲ ವ್ಯಕ್ತಿ ಸುಜಯ್ ಭಟ್ಟ ಪ್ರಾಸ್ತಾವಿಕ ವಿಚಾರ ಹಂಚಿಕೊಳ್ಳಲಿದ್ದಾರೆ. ಮಧ್ಯಾಹ್ನ ೧೨.೪೫ ರಿಂದ ಮೂರನೇ ಗೋಷ್ಠಿಯಲ್ಲಿ ಹಲಸಿನ ತಳಿವೈವಿಧ್ಯ ಸಂರಕ್ಷಣೆ ಹಾಗೂ ಕೃಷಿ ಕುರಿತು ಪ್ರಗತಿಪರ ಕೃಷಿಕ ರಾಜೇಂದ್ರ ಹಿಂಡುಮನೆ ಹಾಗೂ ರಾಜೇಂದ್ರ ಹೆಗಡೆ, ನೈಗಾರ ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ ೧.೧೫ ರಿಂದ ನಾಲ್ಕನೇ ಗೋಷ್ಠಿಯಲ್ಲಿ ಮೌಲ್ಯವರ್ಧಿತ ಕೃಷಿ ಹಾಗೂ ಆಹಾರ ಉತ್ಪನ್ನಗಳು ನವೋದ್ಯಮಿಗಳೊಂದಿಗೆ ಮಂಥನ ಕುರಿತು ಸಂವಾದ ನಡೆಯಲಿದೆ. ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿಯ ನಿರ್ದೇಶಕ ನಾರಾಯಣ ಹೆಗಡೆ ಗಡಿಕೈ ಗೋಷ್ಠಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಸ್ಕೋಡ್‌ವೆಸ್, ಶಿರಸಿ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವೆಂಕಟೇಶ ನಾಯ್ಕ ವಿಷಯ ಪ್ರಸ್ತಾವನೆ ಮಾಡಲಿದ್ದಾರೆ.ಸಾತ್ವಿಕ ಫುಡ್ ಪ್ರೈ. ಲಿ, ಬೆಳ್ಳೆಕೆರೆ ಇದರ ವ್ಯವಸ್ಥಾಪಕ ನಿರ್ದೇಶಕ ಜಿ.ಆರ್.ಬೆಳ್ಳೆಕೆರೆ ತಮ್ಮ ಕಂಪನಿಯ ಯಶೋಗಾಥೆ ಹಂಚಿಕೊಳ್ಳಲಿದ್ದಾರೆ. ಮಧ್ಯಾಹ್ನ ೨.೩೦ ಸಮಾರೋಪ ನಡೆಯಲಿದ್ದು, ಕೃಷಿ ವಿಜ್ಞಾನ ಕೇಂದ್ರದ ಅಧ್ಯಕ್ಷೆ ಡಾ. ರೂಪಾ ಪಾಟೀಲ್ ಅಧ್ಯಕ್ಷತೆ ವಹಿಸಲಿದ್ದಾರೆ. ಕರ್ನಾಟಕ ಸರ್ಕಾರದ ಜೀವ ವೈವಿದ್ಯ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. "ಹೊಸ ತಲೆಮಾರಿನ ಕೃಷಿಕರ ಮುಂದಿರುವ ಅನನ್ಯ ಸಾಧ್ಯತೆಗಳು " ಎನ್ನುವ ವಿಷಯ ಕುರಿತು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಸಂಯೋಜಕ ದಿವಾಕರ ಹೆಗಡೆ ಕೆರೆಹೊಂಡ ಅವರ ವಿಶೇಷ ಉಪನ್ಯಾಸವಿದೆ. ಹಲಸಿನ ತಳಿ ಸಂರಕ್ಷಣೆ ಮಾಡಿರುವ ಉತ್ಸಾಹಿ ರೈತರಿಗೆ ಹಾಗೂ ಉದ್ಯಮಿಗಳಿಗೆ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ