ಸಾರಾಂಶ
ಕಂಪ್ಲಿ: ತಾಲೂಕಿನ ದೇವಸಮುದ್ರ ಗ್ರಾಮದ ಆಶ್ರಯ ಕಾಲನಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತನ್ನ ವಿಶಿಷ್ಟ ಪ್ರಯತ್ನಗಳಿಂದ ಮಾದರಿ ಶಾಲೆಯಾಗಿ ಹೊರಹೊಮ್ಮಿದೆ. ಇದಕ್ಕೆ ಮುಖ್ಯ ಶಿಕ್ಷಕ ಎಚ್. ಜಡಿಯಪ್ಪ ಅವರ ವಿಶೇಷ ಕಾಳಜಿಯೇ ಕಾರಣವಾಗಿದೆ. ಇಲ್ಲಿನ ಶಿಕ್ಷಕರು ಶಾಲಾ ಆವರಣದಲ್ಲಿ ಸುಂದರ ಕೈತೋಟ ಹಾಗೂ ಉದ್ಯಾನವನ ನಿರ್ಮಿಸಿ ಹಸಿರು ವಾತಾವರಣ ಕಲ್ಪಿಸಿರುವುದು ಗಮನಾರ್ಹವಾಗಿದೆ.
ಮುಖ್ಯ ಶಿಕ್ಷಕರ ವಿಶೇಷ ಕಾಳಜಿ:ಮುಖ್ಯ ಶಿಕ್ಷಕ ಎಚ್. ಜಡಿಯಪ್ಪ ಅವರ ಮುಂದಾಳತ್ವದಲ್ಲಿ ಶಾಲೆಯ ಆವರಣದಲ್ಲಿ ಬಾದಾಮಿ, ತೆಂಗು, ಪೇರಲ, ಹಲಸು, ದಾಳಿಂಬೆ, ನೇರಳೆ, ಸೀತಾಫಲ, ಉತ್ತತ್ತಿ ಮರ, ಲಿಂಬೆ, ಅಶೋಕ, ಹುಣಸೆ, ಬೇವು, ಕಾನಗಿ ಮರ, ಬಾಳೆಗಿಡ, ಆಲದ ಮರ ಸೇರಿದಂತೆ ಅನೇಕ ಹಣ್ಣು ಹಾಗೂ ಔಷಧಿ ಗಿಡಗಳನ್ನು ಬೆಳೆಸಲಾಗಿದೆ. ಇದರ ಫಲವಾಗಿ ಶಾಲಾ ಆವರಣ ಸಂಪೂರ್ಣ ಹಸಿರಿನಿಂದ ಕಂಗೊಳಿಸುತ್ತಿದ್ದು, ಮಕ್ಕಳಿಗೆ ಪ್ರಕೃತಿ ಮಧ್ಯದಲ್ಲಿ ಅಧ್ಯಯನ ಮಾಡಲು ಅವಕಾಶ ಕಲ್ಪಿಸಿದೆ.
ಹನಿ ನೀರಾವರಿಯ ನೂತನ ಪ್ರಯೋಗ: ಕೈತೋಟದಲ್ಲಿ ನೀರಿನ ಉಳಿತಾಯ ಸಾಧಿಸಲು ಶಿಕ್ಷಕರು ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಇದರ ಜೊತೆಗೆ ತೋಟದ ಮಧ್ಯಭಾಗದಲ್ಲಿ ಪುಟ್ಟ ಕಾರಂಜಿಯನ್ನೂ ನಿರ್ಮಿಸಿರುವುದು ಶಾಲೆಯ ಆಕರ್ಷಣೆಯಾಗಿದೆ. ವಿದ್ಯಾರ್ಥಿಗಳು ಸೀತಾಫಲ, ನೇರಳೆ ಹಣ್ಣುಗಳನ್ನು ಸವಿದ ನಂತರ ಅದರ ಬೀಜಗಳನ್ನು ತೋಟದಲ್ಲೇ ನೆಡುವ ಸಂಪ್ರದಾಯ ಬೆಳೆದು ಬಂದಿದೆ. ಈ ಮೂಲಕ ಮಕ್ಕಳು ಪರಿಸರ ಸ್ನೇಹಿ ಚಟುವಟಿಕೆಗಳಲ್ಲಿ ತೊಡಗಿಕೊಂಡು ಮರ ನೆಡುವ ಸಂಸ್ಕೃತಿಯನ್ನು ರೂಢಿಸಿಕೊಂಡಿದ್ದಾರೆ.ಪುರಸ್ಕಾರ: ಶಾಲೆಯ ಈ ನೂತನ ಪ್ರಯತ್ನವನ್ನು ಕೇಂದ್ರ ಮಾನವ ಸಂಪನ್ಮೂಲ ಇಲಾಖೆ ಗುರುತಿಸಿ, ನೀರಿನ ಉಳಿತಾಯ ಹಾಗೂ ಹನಿ ನೀರಾವರಿ ಪದ್ಧತಿಯ ಸದ್ಬಳಕೆಯನ್ನು ಶ್ಲಾಘಿಸಿ 2017ನೇ ಸಾಲಿನ “ಸ್ವಚ್ಛ ವಿದ್ಯಾಲಯ ಪುರಸ್ಕಾರ” ನೀಡಿ ಗೌರವಿಸಿದೆ. ಈ ಪ್ರಶಸ್ತಿ ಶಾಲೆಯ ಶ್ರಮಕ್ಕೆ ಮತ್ತಷ್ಟು ಕೀರ್ತಿ ತಂದಿದೆ.
ರಾಜ್ಯಮಟ್ಟದ ನಮ್ಮ ಶಾಲೆ ನಮ್ಮ ಹೆಮ್ಮೆ ಪ್ರಶಸ್ತಿ:ದೇವಸಮುದ್ರ ಶಾಲೆಯ ಆಡಳಿತ ನಿರ್ವಹಣೆ, ಪ್ರಗತಿ, ಉತ್ತಮ ಪರಿಸರ ಮತ್ತು ವಿಶೇಷವಾಗಿ ಮಕ್ಕಳ ಸರ್ವತೋಮುಖ ಬೆಳವಣಿಗೆ, ಪಠ್ಯೇತರ ಚಟುವಟಿಕೆಗಳನ್ನು ಪರಿಗಣಿಸಿ ಬೆಂಗಳೂರಿನ ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್, ಸೂರ್ಯ ಫೌಂಡೇಶನ್ ಮತ್ತು ಸ್ಪರ್ಕ ಅಕಾಡೆಮಿಯು ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಶೈಕ್ಷಣಿಕ ಸಮ್ಮೇಳದಲ್ಲಿ ಶಾಲೆಯ ಮುಖ್ಯ ಶಿಕ್ಷಕ ಎಚ್. ಜಡೆಪ್ಪ ಅವರಿಗೆ ರಾಜ್ಯಮಟ್ಟದ ನಮ್ಮ ಶಾಲೆ ನಮ್ಮ ಹೆಮ್ಮೆ ಪ್ರಶಸ್ತಿ ನೀಡಿ ಗೌರವಿಸಿದೆ.ಮಕ್ಕಳ ಸ್ನೇಹಿ ಶಾಲೆ:ಇಲ್ಲಿ ಶಿಕ್ಷಕರು ಪಠ್ಯ ಪುಸ್ತಕದ ಕಲಿಕೆಯೊಂದಿಗೆ ಪ್ರಕೃತಿ ಆಧಾರಿತ ಶಿಕ್ಷಣಕ್ಕೂ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ. ನೈತಿಕ ಮೌಲ್ಯಗಳ ಅರಿವು, ಪರಿಸರ ಸಂರಕ್ಷಣೆ, ಮರ ನೆಡುವ ಅಭ್ಯಾಸವನ್ನು ಮಕ್ಕಳಿಗೆ ಬೆಳೆಸುವುದರ ಮೂಲಕ ಶಾಲೆಯನ್ನು ನಿಜವಾದ “ಮಕ್ಕಳ ಸ್ನೇಹಿ ಶಾಲೆ” ಯನ್ನಾಗಿ ರೂಪಿಸಿದ್ದಾರೆ.
ಗ್ರಾಮಸ್ಥರ ಮೆಚ್ಚುಗೆ: ಶಾಲೆಯ ಹಸಿರು ವಾತಾವರಣವನ್ನು ಕಂಡು ಗ್ರಾಮಸ್ಥರು ಸಂತೋಷ ವ್ಯಕ್ತಪಡಿಸಿದ್ದು, “ಇಂತಹ ಶಾಲೆಯಲ್ಲಿ ಮಕ್ಕಳಿಗೆ ಕೇವಲ ಪಾಠವಷ್ಟೇ ಅಲ್ಲ, ಪ್ರಕೃತಿಯೊಂದಿಗೆ ಬೆರೆತು ಬದುಕುವ ಪಾಠವೂ ಕಲಿಯಲು ಸಾಧ್ಯವಾಗುತ್ತಿದೆ. ಶಿಕ್ಷಕರ ಸಮರ್ಪಣೆ ಶ್ಲಾಘನೀಯ” ಎಂದು ಪ್ರಶಂಸಿಸಿದ್ದಾರೆ.