ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪಟ್ಟಣದ ಪುರಸಭೆಯ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗಾಗಿ ಚುನಾವಣೆ ನಡೆಯಿತು. ಅಧ್ಯಕ್ಷರಾಗಿ ಕಾಂಗ್ರೆಸ್‌ನ ಸದಸ್ಯೆ ಜಗದೇವಿ ಗುಂಡಳ್ಳಿ ಅವಿರೋಧ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಕಾಂಗ್ರೆಸ್‌ನ ಸದಸ್ಯ ಅಶೋಕ ಹಾರಿವಾಳ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ತಹಸೀಲ್ದಾರ್ ವೈ.ಎಸ್.ಸೋಮನಕಟ್ಟಿ ಘೋಷಿಸಿದರು.ಪುರಸಭೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಅ ಮಹಿಳೆಗೆ ಮೀಸಲಾಗಿತ್ತು. ಅಧ್ಯಕ್ಷ ಸ್ಥಾನಕ್ಕೆ ಜಗದೇವಿ ಗುಂಡಳ್ಳಿ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು. ಸಾಮಾನ್ಯ ಸ್ಥಾನಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಸದಸ್ಯ ಅಶೋಕ ಹಾರಿವಾಳ, ನಜೀರ ಗಣಿ, ಬಿಜೆಪಿ ಸದಸ್ಯ ಅಶೋಕ ಸಂಪನ್ನವರ ನಾಮಪತ್ರ ಸಲ್ಲಿಸಿದ್ದರು. ಸದಸ್ಯ ನಜೀರ ಗಣಿ ನಾಮಪತ್ರ ಹಿಂದಕ್ಕೆ ಪಡೆದರು. ಅಶೋಕ ಹಾರಿವಾಳ ಪರವಾಗಿ ಸಚಿವ ಶಿವಾನಂದ ಪಾಟೀಲ ಸೇರಿದಂತೆ ಬಿಜೆಪಿ ಹಾಗೂ ಪಕ್ಷೇತರ 19 ಸದಸ್ಯರು ಕೈ ಎತ್ತಿ ಬೆಂಬಲ ಸೂಚಿಸಿದ್ದರಿಂದ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಬಿಜೆಪಿ ಸದಸ್ಯ ಅಶೋಕ ಸಂಪನ್ನವರ ಪರ 3 ಸದಸ್ಯರು ಕೈ ಎತ್ತಿದರು. 19 ಸದಸ್ಯರ ಮತ ಪಡೆದ ಅಶೋಕ ಹಾರಿವಾಳ ಉಪಾಧ್ಯಕ್ಷರಾಗಿ ಆಯ್ಕೆಯಾದರು. ಒಟ್ಟು 23 ಸದಸ್ಯ ಬಲ ಹೊಂದಿರುವ ಪುರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಲ್ಲಿ 22 ಸದಸ್ಯರು, ಸಚಿವ ಶಿವಾನಂದ ಪಾಟೀಲ ಹಾಜರಿದ್ದರು. ಸಂಸದರು ಗೈರು ಇದ್ದರು. ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಒಬ್ಬ ಸದಸ್ಯರು ತಟಸ್ಥ ಉಳಿದರೆ, ಸದಸ್ಯೆ ಗೀತಾ ಬಾಗೇವಾಡಿ ಗೈರಾಗಿದ್ದರು ಎಂದು ತಹಸೀಲ್ದಾರ್ ವೈ.ಎಸ್.ಸೋಮನಕಟ್ಟಿ ಹೇಳಿದರು.
ಚುನಾವಣಾ ಪ್ರಕ್ರಿಯೆಯಲ್ಲಿ ಶಿರಸ್ತೇದಾರ ಎಂ.ಎಸ್.ಜಾಗೀರದಾರ, ಎಚ್.ಸಿ.ಇಂಗಳೆ, ಅನಿಲ ಅವಟಿ, ಪುರಸಭೆ ಮುಖ್ಯಾಧಿಕಾರಿ ಎಚ್.ಎಸ್.ಚಿತ್ತರಗಿ, ಪುರಸಭೆ ವ್ಯವಸ್ಥಾಪಕ ಸುರೇಶ ಬಾಗೇವಾಡಿ ಭಾಗವಹಿಸಿದ್ದರು.ವಿಜಯೋತ್ಸವ: ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯಾಗುತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ವಿಜಯೋತ್ಸವ ಆಚರಿಸಿದರು. ಈ ಸಂದರ್ಭದಲ್ಲಿ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಮುಖಂಡರಾದ ಲೋಕನಾಥ ಅಗರವಾಲ, ರವಿ ರಾಠೋಡ, ಶೇಖರ ಗೊಳಸಂಗಿ, ಸಂಗಯ್ಯ ಕಾಳಹಸ್ತೇಶ್ವರಮಠ, ಬಸವರಾಜ ತುಂಬಗಿ, ಮತಾಬ ಬಮ್ಮನಳ್ಳಿ, ಜಟ್ಟಿಂಗರಾಯ ಮಾಲಗಾರ, ಸಂಜೀವ ಕಲ್ಯಾಣಿ, ನಿಸಾರ ಚೌಧರಿ, ಶರಣಪ್ಪ ಬೆಲ್ಲದ, ಸಂಗನಬಸು ಪೂಜಾರಿ, ಮುತ್ತು ಗುಂಡಳ್ಳಿ, ಕಾಶೀನಾಥ ರಾಠೋಡ, ಉದಯ ಮಾಂಗಲೇಕರ, ಅಜೀಜ ಬಾಗವಾನ ಇತರರು ಇದ್ದರು.