ಜಗಜ್ಯೋತಿ ಬಸವಣ್ಣ ಸಾಂಸ್ಕೃತಿಕ ನಾಯಕ: ಶಾಸಕ ಎಚ್‌.ಡಿ.ತಮ್ಮಯ್ಯ

| Published : Feb 18 2024, 01:31 AM IST

ಸಾರಾಂಶ

ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಶಾಸಕ ಎಚ್‌.ಡಿ. ತಮ್ಮಯ್ಯ ಅವರು ವಿಶ್ವಗುರು ಬಸವಣ್ಣನವರ ಭಾವಚಿತ್ರವನ್ನು ಅನಾವರಣ ಮಾಡಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಜಗಜ್ಯೋತಿ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿ ಸರ್ಕಾರಿ ಕಚೇರಿಗಳಲ್ಲಿ ಅವರ ಭಾವಚಿತ್ರ ಹಾಕಬೇಕೆಂಬ ಸುತ್ತೋಲೆ ಹೊರಡಿಸಿರುವುದು ನಿಜಕ್ಕೂ ಅರ್ಥಪೂರ್ಣವಾಗಿದೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಅವರು ಹೇಳಿದರು.

ಶನಿವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತ ವತಿಯಿಂದ ಏರ್ಪಡಿಸಲಾಗಿದ್ದ ವಿಶ್ವಗುರು ಬಸವಣ್ಣನವರ ಭಾವಚಿತ್ರ ಅನಾವರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯದಲ್ಲಿ ಹಲವಾರು ಕ್ರಾಂತಿಕಾರಿ ಬದಲಾವಣೆ ಮಾಡುತ್ತಿದ್ದಾರೆ. 12ನೇ ಶತಮಾನದಲ್ಲಿ ಲಿಂಗ ಮತ್ತು ಸಾಮಾಜಿಕ ಸಮಾನತೆಗಾಗಿ ವರ್ಣಬೇಧ, ವರ್ಗಬೇಧದ ವಿರುದ್ಧವಾಗಿ ಶೋಷಿತರ ಪರವಾಗಿ ಹೋರಾಟ ಮಾಡಿ ಈ ಸಮುದಾಯಕ್ಕೆ ಆತ್ಮಸ್ಥೈರ್ಯ ತುಂಬಿ ಸಮಾಜದಲ್ಲಿ ಕ್ರಾಂತಿ ಉಂಟುಮಾಡಿದ ಶ್ರೇಯಸ್ಸು ವಿಶ್ವಗುರು ಬಸವಣ್ಣನವರಿಗೆ ಸಲ್ಲುತ್ತದೆ. ಅಂತಹವರನ್ನು ಸಾಂಸ್ಕೃತಿಕ ನಾಯಕನೆಂದು ಘೋಷಿಸಿರುವುದು ಬಹಳ ಹೆಮ್ಮೆಯ ವಿಷಯ ಎಂದು ಹೇಳಿದರು.

19ನೇ ಶತಮಾನದಲ್ಲಿ ಜನಿಸಿದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರು ಸಂವಿಧಾನ ರಚಿಸಿ, ಅದರ ಆಶಯಗಳನ್ನು ನೀಡಿದ ಪರಿಣಾಮ ಸಾಮಾಜಿಕ ನ್ಯಾಯ ದೊರೆತಿದೆ. ಅದಕ್ಕಾಗಿ ಸರ್ಕಾರ ಸಂವಿಧಾನ ಜಾಗೃತಿ ಜಾಥಾ ಪ್ರಾರಂಭಿಸಿ ರಾಜ್ಯಾದ್ಯಂತ ಸಂಚರಿಸಿ ಜನಜಾಗೃತಿ ಮೂಡಿಸುತ್ತಿದ್ದು, ಇಂತಹ ಅದ್ಭುತ ಕೆಲಸಗಳನ್ನು ಮುಖ್ಯಮಂತ್ರಿಗಳು ಮಾಡುತ್ತಿದ್ದಾರೆಂದು ಶ್ಲಾಘಿಸಿದರು.

12ನೇ ಶತಮಾನದಲ್ಲಿಯೇ ಬಸವಣ್ಣನವರು ಅನುಭವ ಮಂಟಪ ಸ್ಥಾಪನೆ ಮಾಡುವ ಮೂಲಕ ಜಗತ್ತಿನಲ್ಲಿ ಪ್ರಜಾಪ್ರಭುತ್ವದ ಬುನಾದಿ ಹಾಕಿಕೊಟ್ಟಿದ್ದಾರೆ. ಇಂತಹ ಮಹಾನ್ ಕಾರ್ಯಗಳಲ್ಲಿ ಕನ್ನಡಿಗರು ಪಾಲ್ಗೊಂಡಿರುವುದನ್ನು ಸ್ಮರಿಸಿದರು.

ಬಸವಣ್ಣನವರ ಬದುಕು, ಸಂದೇಶ, ಚಿಂತನೆ ವ್ಯಾಪಕವಾಗಿ ಪ್ರಚುರಪಡಿಸಬೇಕೆಂಬ ಸದುದ್ದೇಶದಿಂದ ಸರ್ಕಾರ ಬಸವ ಜಯಂತಿಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಿದೆ. ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟು, ಬಸವನ ಬಾಗೇವಾಡಿಯಲ್ಲಿ ಅಭಿವೃದ್ಧಿ ಪ್ರಾಧಿಕಾರ ರಚಿಸಿ, ಈ ಮೂಲಕ ಬಸವಾದಿ ಶರಣರ ವಚನಗಳನ್ನು ಸಂಗ್ರಹಿಸಿ ವಿಶ್ವಕ್ಕೆ ಪರಿಚಯಿಸಲು ಕಲಬುರಗಿಯಲ್ಲಿ ವಚನ ಮಂಟಪ ಸ್ಥಾಪಿಸಲು ನಿರ್ಧರಿಸಿದೆ ಎಂದರು.

ದೇಶದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿದವರು ಸಂವಿಧಾನ ಶಿಲ್ಪಿ ಅಂಬೇಡ್ಕರ್. ಸಂವಿಧಾನ ಜಾರಿಗೆ ಬಂದು 75 ವರ್ಷಗಳು ತುಂಬುತ್ತಿರುವ ಈ ಸಂದರ್ಭದಲ್ಲಿ ಸಂವಿಧಾನ ಜಾಗೃತಿ ಜಾಥದ ಮೂಲಕ ಜನರಲ್ಲಿ ಸಂವಿಧಾನದ ಬಗ್ಗೆ ಸಮಗ್ರ ಮಾಹಿತಿ ನೀಡಿ, ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.

ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ ಮಾತನಾಡಿ, ಮಹನೀಯರ ತತ್ವ ಆದರ್ಶಗಳನ್ನು ಆಳವಡಿಸಿಕೊಂಡು ಸಾಗಬೇಕು ಎಂದರು.

ಬಸವ ಮಂದಿರದ ಬಸವ ಮರುಳಸಿದ್ದ ಸ್ವಾಮೀಜಿ ಮಾತನಾಡಿ, ನಿನ್ನ ದೇವರನ್ನು ನಿನ್ನ ಅಂಗೈಯಲ್ಲಿಯೇ ಇಟ್ಟು ಪೂಜಿಸಿ, ನಿನ್ನ ಕಷ್ಟಗಳನ್ನು ಹೇಳಿಕೊಳ್ಳುವ ಧಾರ್ಮಿಕ ಸ್ವಾತಂತ್ರ್ಯವನ್ನು, ಪೂಜಾ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಸಾಮಾಜಿಕ ಸ್ವಾತಂತ್ರ್ಯವನ್ನು ನೀಡಿದವರು ಬಸವಣ್ಣ ಎಂದು ಹೇಳಿದರು.

ಅನುಭವ ಮಂಟಪದ ಮೂಲಕ ಧ್ವನಿಯೇ ಇಲ್ಲದವರಿಗೆ ಧ್ವನಿ ನೀಡಿದವರು, ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದ್ದ ಪರಿಣಾಮ ಇಂದು ಅವರು ಸಾಂಸ್ಕೃತಿಕ ನಾಯಕ. ಸಂಸ್ಕೃತಿ ಮತ್ತು ಶಿಕ್ಷಣ ಕಲಿಸಲು ಮನೆಗಳಿಗೇ ಶಾಲಿಮಠ ಎಂದು ಸ್ಥಾಪಿಸಿ ಅಲ್ಲಿ ಸಂಜೆ ಪ್ರತಿಯೊಬ್ಬರೂ ಅಕ್ಷರ ಕಲಿಯಬೇಕೆಂದು ಪ್ರತಿಪಾದಿಸಿದ್ದರು ಎಂದು ತಿಳಿಸಿದರು.

ನಗರಸಭೆ ವತಿಯಿಂದ ಶೇ. 24.10 ರಡಿ ಪೌರ ಕಾರ್ಮಿಕ ಯೋಜನೆಯ ಅನುದಾನದಲ್ಲಿ ವಿವಿಧ ಸೌಲಭ್ಯ ಫಲಾನುಭವಿಗಳಿಗೆ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಗೋಪಾಲಕೃಷ್ಣ, ಉಪ ವಿಭಾಗಾಧಿಕಾರಿ ದಲ್ಜಿತ್ ಕುಮಾರ್ ಹಾಗೂ ವಿವಿಧ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.