ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಜಗಜ್ಯೋತಿ ಬಸವಣ್ಣನವವರು ಜ್ಞಾನ ಭಂಡಾರವಿದ್ದಂತೆ ಅವರ ಆಧ್ಯಾತ್ಮಿಕ ಮೌಲ್ಯ, ಚಿಂತನೆ ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.ನಗರದ ಜಿಪಂ ಕಾವೇರಿ ಸಭಾಂಗಣದಲ್ಲಿ ನಡೆದ ಬಸವಣ್ಣ ಮತ್ತು ಹೇಮರೆಡ್ಡಿ ಮಲ್ಲಮ್ಮ ದಿನಾಚರಣೆ ಅಂಗವಾಗಿ ಮಹನೀಯರ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಪ್ರತಿ ಮನೆಯಲ್ಲಿ ಮಕ್ಕಳಿಗೆ ಬಸವಣ್ಣನವರ ವಚನ ತಿಳಿಸಿ. ವಚನಗಳ ಮೌಲ್ಯಗಳನ್ನು ಮಕ್ಕಳ ಜೀವನದಲ್ಲಿ ರೂಡಿಸಬೇಕು ಎಂದರು.
ಬಸವಣ್ಣನವರ ಆಧ್ಯಾತ್ಮಿಕ, ತತ್ವ, ಆದರ್ಶಗಳನ್ನು ಕೇವಲ ತರಗತಿಗಳಲ್ಲಿ ಆಯ್ಕೆ ಮಾಡಿರುವ ಪಾಠಗಳಲ್ಲಿ ಅಥವಾ ಒಂದೆರಡು ಪುಟಗಳಲ್ಲಿ ತಿಳಿಯಲು ಸಾಧ್ಯವಿಲ್ಲ. ಅವರೊಬ್ಬ ಜ್ಞಾನ ಭಂಡಾರ ವಿದ್ದಂತೆ. ಅವರ ಬಗ್ಗೆ ತಿಳಿಸುವ ಎಲ್ಲಾ ಪುಸ್ತಕಗಳನ್ನು ಅರಿಯಬೇಕು ಎಂದರು.ಈಗಿನ ಕಾಲದಲ್ಲಿ ಸಮಾಜವನ್ನು ಎದುರು ಹಾಕಿಕೊಂಡು ಬದುಕುವುದು ಸುಲಭ. ಆದರೆ, ಬಸವಣ್ಣನವರು ಅಂದಿನ ಕಾಲದಲ್ಲೇ ಜಾತಿ ಪದ್ಧತಿ ವಿರೋಧಿಸಿ ಸಮಾಜವನ್ನು ಎದುರಿಸಿ ಜಾತಿ ಪದ್ಧತಿ ಹೋಗಲಾಡಿಸಲು ಪ್ರತಿಯೊಬ್ಬರಿಗೂ ವಚನಗಳ ಮೂಲಕ ವಿಚಾರ ವಿನಿಮಯ ಮಾಡುತ್ತಿದ್ದರು ಎಂದರು.
ದೇವಾಲಯಕ್ಕೆ ಹೋಗಿ ಕೈ ಮುಗಿದುಕೊಂಡು ಬಂದರೆ ಸಾಲದು ನಾವು ಮಾಡುವಂತಹ ಕೆಲಸ ಕಾರ್ಯದಲ್ಲಿ ದೇವರನ್ನು ಕಾಣಬೇಕು ಎಂಬ ಬಸವಣ್ಣನವರ ನುಡಿಯಂತೆ ದೇಹವೇ ದೇಗುಲ, ಶಿರವೇ ಕಳಸ ಎಂಬ ನುಡಿ ಪಾಲಿಸಬೇಕು. ಮಾನವೀಯತೆಗಿಂತ ದೊಡ್ಡದ್ದು ಯಾವುದು ಇಲ್ಲ ಎಂಬ ಸಂದೇಶವನ್ನು ಜಗತ್ತಿಗೆ ನೀಡಿದವರು ಬಸವಣ್ಣ ಎಂದರು.ಸಾಂಸ್ಕೃತಿಕ ಹರಿಕಾರ ಬಸವಣ್ಣನವರ ವಚನಗಳು ಕರ್ನಾಟಕಕ್ಕೆ ಮಾತ್ರ ಸೀಮಿತವಾಗದೇ ಅವರು ನೀಡಿದ ವಚನಗಳ ಪುಸ್ತಕಗಳನ್ನು ಜಗತ್ತಿನಾದ್ಯಂತ ನೋಡಬಹುದು. ಕಾಯಕವೇ ಕೈಲಾಸ ಎಂಬ ತತ್ವವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದರು.
ಮಹಾ ಶರಣೆ ಹೇಮರೆಡ್ಡಿ ಮಲ್ಲಮ್ಮ ಅವರು ಸಾಂಪ್ರದಾಯಿಕ ಕುಟುಂಬದಲ್ಲಿ ಜನಿಸಿ ಮದುವೆ ಆದ ನಂತರ ತನ್ನ ಸಂಸಾರದಲ್ಲಿ ಅಥವಾ ಸುತ್ತಮುತ್ತ ಪರಿಸರದಲ್ಲಿ ಕಂಡಂತಹ ತೊಡಕು, ಸಮಸ್ಯೆಗಳನ್ನು ಆಧ್ಯಾತ್ಮಿಕ ನೆಲಗಟ್ಟೆಯಲ್ಲೆ ಮನ ಪರಿವರ್ತನೆ ಮಾಡುತ್ತಿದ್ದರು. ಸ್ವತಃ ಆಕೆ ಕುಟುಂಬದಲ್ಲಿ ಇದ್ದಂತಹ ಮೈದುನನ ಮನ ಪರಿವರ್ತನೆ ಮಾಡಿದರು ಎಂದರು.ಸಂತ ಶಿಶುನಾಳ ಷರೀಫ್ ರ ಶಿಷ್ಯ ಆಗಿದ್ದು ತನ್ನ ಗುರುಗಳ ಕೈಯಲ್ಲಿ ಹೋಗಳಿಸಿ ಕೊಂಡಂತಹ ಶಿಷ್ಯೆ ಹೇಮರೆಡ್ಡಿ ಮಲ್ಲಮ್ಮ ವಿವಾಹಿತ ಜೀವನವನ್ನು ಹೊಂದಿದ್ದರೂ ಕೂಡ ಯಾವುದಕ್ಕೂ ಹಿಂಜರಿಯದೇ ಆಧ್ಯಾತ್ಮಿಕ ಜೀವನದ ಕಡೆ ಹೆಚ್ಚಾಗಿ ಒಲವು ನೀಡಿದರು ಎಂದರು.
ಅಪರ ಜಿಲ್ಲಾಧಿಕಾರಿ ಎಚ್.ಎಲ್.ನಾಗರಾಜ್ ಮಾತನಾಡಿ, ಬಸವಣ್ಣನವರ ಚಿಂತನೆಗಳನ್ನು ಅಳವಡಿಸಿಕೊಂಡು ನಿರಂತರ ಕಾಯಕದ ಮೂಲಕ ಸಮಾಜ ಕಟ್ಟೋಣ ಎಂದು ಕರೆ ನೀಡಿದರು.ಕಾರ್ಯಕ್ರಮದಲ್ಲಿ ಜಿಪಂ ಉಪ ಕಾರ್ಯದರ್ಶಿ ಎಂ.ಬಾಬು ಹಾಗೂ ವಿವಿಧ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು.