- ಜಗಳೂರಲ್ಲಿ ತಹಸೀಲ್ದಾರ್‌ ಮೂಲಕ ಸಿಎಂಗೆ ರಾಜ್ಯ ರೈತ ಸಂಘ, ಹಸಿರು ಸೇನೆ ಮನವಿ

- - -

ಕನ್ನಡಪ್ರಭ ವಾರ್ತೆ ​ಜಗಳೂರು

ತಾಲೂಕಿನಲ್ಲಿ ಈ ಬಾರಿ ತೀವ್ರ ಮಳೆ ಕೊರತೆ ಎದುರಾಗಿದೆ. ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ಥಗಿತಗೊಂಡಿವೆ. ಈ ಹಿನ್ನೆಲೆಯಲ್ಲಿ ಜಗಳೂರು ತಾಲೂಕನ್ನು ಅಧಿಕೃತವಾಗಿ ಶಾಶ್ವತ ಬರಪೀಡಿತ ಪ್ರದೇಶ ಎಂದು ಘೋಷಿಸಿ ರೈತರ ರಕ್ಷಣೆಗೆ ಧಾವಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ) ಪದಾಧಿಕಾರಿಗಳು ಜಗಳೂರು ಪಟ್ಟಣದಲ್ಲಿ ಮಂಗಳವಾರ ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ರೈತ ಸಂಘದ ತಾಲೂಕು ಅಧ್ಯಕ್ಷ ಚಿರಂಜೀವಿ ಮಾತನಾಡಿ, ಪಟ್ಟಣದಲ್ಲಿ ​ಇತ್ತೀಚೆಗೆ ನಡೆದ ''''ದಿಶಾ'''' ಸಭೆಯಲ್ಲೂ ಅಧಿಕಾರಿಗಳು ಮಳೆ ಕೊರತೆಯಿಂದ ಬರಗಾಲ ಎದುರಾಗುವ ಮುನ್ಸೂಚನೆ ನೀಡಿದ್ದರು. ಇದಕ್ಕೆ ಪೂರಕವೆಂಬಂತೆ ರೈತ ಸಂಘಟನೆ ಸಲ್ಲಿಸಿರುವ ಮನವಿಯಲ್ಲಿ, ಜಗಳೂರು ತಾಲೂಕು ಮೊದಲಿನಿಂದಲೂ ಸಾಕಷ್ಟು ಬಾರಿ ಮಳೆ ಅಭಾವಕ್ಕೆ ತುತ್ತಾಗಿದೆ. ಶಾಶ್ವತ ಬರಗಾಲದ ಹಣೆಬರಹ ಹೊತ್ತಿದೆ. ಪ್ರಸ್ತುತ ವರ್ಷದಲ್ಲಿ ಮಳೆ ಬಾರದೆ ರೈತರು ತೀವ್ರ ಕಂಗಾಲಾಗಿದ್ದಾರೆ. ಬಂದಿದ್ದ ಅಲ್ಪಸ್ವಲ್ಪ ಮಳೆಗೆ ಭೂಮಿಯನ್ನು ಹದ ಮಾಡಿಕೊಂಡು ಬಿತ್ತನೆಗಾಗಿ ಕಾಯುತ್ತಿದ್ದರಾದರೂ, ಮುಂಗಾರು ಸಂಪೂರ್ಣ ಕೈಕೊಟ್ಟಿದೆ. ಇದರಿಂದಾಗಿ ಕೃಷಿಕರು ಜೀವನ ನಿರ್ವಹಣೆಗೆ ಬೇರೆ ನಗರಗಳಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.


ಜಗಳೂರು ತಾಲೂಕಿನ ಇಂದಿನ ಗಂಭೀರ ಪರಿಸ್ಥಿತಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ತಕ್ಷಣವೇ ತಾಲೂಕನ್ನು ''''ಶಾಶ್ವತ ಬರಪೀಡಿತ ಪ್ರದೇಶ''''ವೆಂದು ಘೋಷಿಸಿ, ನೊಂದ ಅನ್ನದಾತನಿಗೆ ವಿಶೇಷ ಪ್ಯಾಕೇಜ್ ಹಾಗೂ ಆರ್ಥಿಕ ಸವಲತ್ತುಗಳನ್ನು ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಸಿದ್ದಪ್ಪ, ಜಿಲ್ಲಾ ಗೌರವಾಧ್ಯಕ್ಷ ಗಂಗಾಧರಪ್ಪ, ಜಿಲ್ಲಾ ಕಾರ್ಯದರ್ಶಿ ಗೌಡಗೊಂಡನಹಳ್ಳಿ ಸತೀಶ, ​ರಾಜನಹಟ್ಟಿ ರಾಜು, ತಾಲೂಕು ಪ್ರಧಾನ ಕಾರ್ಯದರ್ಶಿ, ತಾಲೂಕು ಉಪಾಧ್ಯಕ್ಷ ಸಹದೇವ ರೆಡ್ಡಿ, ಹಸಿರು ಸೇನೆ ಅಧ್ಯಕ್ಷ ಕಸವನಹಳ್ಳಿ ನಾಗರಾಜ, ಕೆಂಚಪ್ಪ, ಎಂ.ಶರಣಪ್ಪ, ತಿಪ್ಪೇಸ್ವಾಮಿ, ಪರುಸಪ್ಪ, ಪಾಪಣ್ಣ, ಸಿದ್ದಮ್ಮನಹಳ್ಳಿ ರಂಗಜ್ಜ, ಬಂಗಾರಕ್ಕನಗುಡ್ಡ ಲಕ್ಷ್ಮಣ, ರಂಗಾಪುರ ಹನುಮಂತಪ್ಪ, ನಿಂಗಣ್ಣ, ಪ್ರಕಾಶ್, ಮಂಜುನಾಥ್, ಚಿತ್ರೇಶ, ಆಕನೂರು ಬಸವರಾಜ್, ನಾಗರಾಜ, ಕ್ಯಾಸೇನಹಳ್ಳಿ ರಂಗಪ್ಪ, ಬಸಣ್ಣ ಹಾಗೂ ಮಲ್ಲಿಕಾರ್ಜುನ ಭಟ್ಟ ಸೇರಿದಂತೆ ನೂರಾರು ರೈತರು ಪಾಲ್ಗೊಂಡಿದ್ದರು.

- - -

-30ಜೆ.ಜಿ.ಎಲ್1:

ಜಗಳೂರನ್ನು ‘ಶಾಶ್ವತ ಬರಪೀಡಿತ ಪ್ರದೇಶ’ವೆಂದು ಘೋಷಿಸಲು ತಹಸೀಲ್ದಾರ್‌ ಮೂಲಕ ಸಿಎಂಗೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಮನವಿ ಸಲ್ಲಿಸಲಾಯಿತು.