ನಮ್ಮ ಮನೆ ಎಂದ ಮೇಲೆ ಸಣ್ಣಪುಟ್ಟ ಜಗಳ, ಭಿನ್ನಾಭಿಪ್ರಾಯಗಳು ಸಹಜ. ಸಚಿವ ಎಸ್. ಎಸ್.ಮಲ್ಲಿಕಾರ್ಜುನ್ ಮೇಲೆ ನಮಗಿರುವ ಮುನಿಸು ಕ್ಷೇತ್ರದ ಅಭಿವೃದ್ಧಿಗಾಗಿ ಮಾತ್ರ. ನಾನು 2028ರ ಚುನಾವಣೆಯಿಂದ ಹಿಂದೆ ಸರಿಯಬೇಕು ಎಂದು ತೀರ್ಮಾನಿಸಿದ್ದೆ. ಆದರೆ, ಕ್ಷಣ ಕ್ಷಣಕ್ಕೂ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿರುವ ಮಾಜಿ ಶಾಸಕ ಎಚ್.ಪಿ. ರಾಜೇಶ್ ನಡವಳಿಕೆಯೇ ನನಗೆ ಮತ್ತೆ ಸ್ಪರ್ಧಿಸಲು ಪ್ರೇರಣೆ ನೀಡಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ನಾನೇ ಸ್ಪರ್ಧಿಸಿ ಶಾಸಕನಾಗಿ, ಮಂತ್ರಿಯೂ ಆಗಿ ತೋರಿಸುತ್ತೇನೆ ಎಂದು ಬಹಿರಂಗವಾಗಿ ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಸವಾಲು ಹಾಕಿದರು.
ಕನ್ನಡಪ್ರಭ ವಾರ್ತೆ ಜಗಳೂರು
ನಮ್ಮ ಮನೆ ಎಂದ ಮೇಲೆ ಸಣ್ಣಪುಟ್ಟ ಜಗಳ, ಭಿನ್ನಾಭಿಪ್ರಾಯಗಳು ಸಹಜ. ಸಚಿವ ಎಸ್. ಎಸ್.ಮಲ್ಲಿಕಾರ್ಜುನ್ ಮೇಲೆ ನಮಗಿರುವ ಮುನಿಸು ಕ್ಷೇತ್ರದ ಅಭಿವೃದ್ಧಿಗಾಗಿ ಮಾತ್ರ. ನಾನು 2028ರ ಚುನಾವಣೆಯಿಂದ ಹಿಂದೆ ಸರಿಯಬೇಕು ಎಂದು ತೀರ್ಮಾನಿಸಿದ್ದೆ. ಆದರೆ, ಕ್ಷಣ ಕ್ಷಣಕ್ಕೂ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿರುವ ಮಾಜಿ ಶಾಸಕ ಎಚ್.ಪಿ. ರಾಜೇಶ್ ನಡವಳಿಕೆಯೇ ನನಗೆ ಮತ್ತೆ ಸ್ಪರ್ಧಿಸಲು ಪ್ರೇರಣೆ ನೀಡಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ನಾನೇ ಸ್ಪರ್ಧಿಸಿ ಶಾಸಕನಾಗಿ, ಮಂತ್ರಿಯೂ ಆಗಿ ತೋರಿಸುತ್ತೇನೆ ಎಂದು ಬಹಿರಂಗವಾಗಿ ಜಗಳೂರು ಶಾಸಕ ಬಿ.ದೇವೇಂದ್ರಪ್ಪ ಸವಾಲು ಹಾಕಿದರು.ಜಗಳೂರು ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿದ ಹಿನ್ನೆಲೆ ಪಟ್ಟಣಕ್ಕೆ ಆಗಮಿಸಿದ ಶಾಸಕರಿಗೆ ಮಹಾತ್ಮ ಗಾಂಧಿ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಅದ್ಧೂರಿ ಸ್ವಾಗತ ಕೋರಿದರು. ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಶಾಸಕ ಬಿ.ದೇವೇಂದ್ರಪ್ಪ ವಿರೋಧ ಪಕ್ಷದ ನಾಯಕರ ವಿರುದ್ಧ ಕಿಡಿಕಾರಿದರು. ಅಭಿವೃದ್ಧಿಗೆ ಅಡ್ಡಿಪಡಿಸುತ್ತಿರುವ ಮಾಜಿ ಶಾಸಕ ಎಚ್.ಪಿ. ರಾಜೇಶ್‌ಗೆ ತಲೆ ಸರಿಯಿಲ್ಲದಿದ್ದರೆ ತಕ್ಷಣ ಚಿಕಿತ್ಸೆ ಪಡೆಯಲಿ ಎಂದು ವಾಗ್ದಾಳಿ ನಡೆಸಿದರಲ್ಲದೇ ಮತ್ತೊಬ್ಬ ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಸವಕಲು ನಾಣ್ಯದಂತೆ ಎಂದು ವ್ಯಂಗ್ಯವಾಡಿದರು.
ಬಿಜೆಪಿಯ ಪ್ರತಿಭಟನೆಯನ್ನು ಉಲ್ಲೇಖಿಸಿ, ನೀವು ಕೇಸರಿ ಶಾಲು ಹಾಕಿ ಬೆಂಕಿ ಹಚ್ಚುವ ಕೆಲಸ ಮಾಡಿದ್ದಕ್ಕೆ ಜಗಳೂರು ಬರ ಪಟ್ಟಿಗೆ ಸೇರಿತು ಎನ್ನುವುದಾದರೆ, ರಾಜ್ಯದಲ್ಲಿ ಹೊಸದಾಗಿ ಸೇರ್ಪಡೆಯಾದ 11 ತಾಲೂಕುಗಳಲ್ಲಿ ಯಾರು ಬೆಂಕಿ ಹಚ್ಚಿದ್ದರು? ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಕನಕಪುರ ಕ್ಷೇತ್ರ ಬರ ಪಟ್ಟಿಗೆ ಸೇರಲು ಅವರ ಶಕ್ತಿ ಕಾರಣವೇ? ಎಂದು ಪ್ರಶ್ನಿಸಿದರು.ಅಭಿವೃದ್ಧಿ ಸವಾಲು ಹಾಗೂ ವೈಯಕ್ತಿಕ ಟೀಕೆಗೆ ಉತ್ತರ: ಕೇವಲ 3 ವರ್ಷಗಳಲ್ಲಿ ಜಗಳೂರಿನಲ್ಲಿ ಏನೇನು ಅಭಿವೃದ್ಧಿ ಮಾಡಿದ್ದೇನೆ ಎಂದು ತೋರಿಸಲು ಸಿದ್ಧ. 57 ಕೆರೆ ತುಂಬಿಸುವ ಯೋಜನೆಯಲ್ಲಿ ಸ್ವಂತ ಊರಿನ ಕೆರೆ ಸೇರಿಸಲು ರಾಜೇಶ್‌ಗೆ ಆಗಲಿಲ್ಲ. ಆದರೆ, ಪಟ್ಟಿಯಲ್ಲೇ ಇಲ್ಲದ ಚಿಕ್ಕಮ್ಮನಹಟ್ಟಿ ಕೆರೆಗೆ ನೀರು ಹರಿಸಿದ ತೃಪ್ತಿ ನನಗಿದೆ ಎಂದರು. ಅಲ್ಲದೆ, ಅಮೆರಿಕ ಪ್ರವಾಸದಿಂದ ಬಂದಾಗ ಬೆಂಬಲಿಗರಿಗೆ ಪಾರ್ಟಿ ಕೊಟ್ಟಿದ್ದನ್ನು ಟೀಕಿಸುತ್ತೀರಾ, ನನ್ನ ಅಭಿಮಾನಿಗಳಿಗೆ ಖರ್ಚು ಮಾಡುವ ತಾಕತ್ತು ನನಗಿದೆ. ನಿಮ್ಮ ಮಾತುಗಳನ್ನು ನಂಬಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ್ ಸೋಲುವಂತಾಯಿತು ಎಂದು ಕಾಲೆಳೆದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ತಿಪ್ಪೇಸ್ವಾಮಿ ಗೌಡ, ಪಲ್ಲಾಗಟ್ಟೆ ಶೇಖರಪ್ಪ, ಓಮಣ್ಣ, ಷಂಷೀರ್ ಅಹಮದ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.