ಜಗಳೂರು ತಾಲೂಕಿನ ಮಾಡ್ರಳ್ಳಿ (ಗುರುಸಿದ್ದಾಪುರ)ದಲ್ಲಿ ನಡೆದ ಕಾರ್ಯಕ್ರಮಕ್ಕೆ ಸಿರಿಗೆರೆಯ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ಶಾಸಕ ದೇವೇಂದ್ರಪ್ಪ ಚಾಲನೆ ನೀಡಿದರು. ಮಾಜಿ ಶಾಸಕ ರಾಮಚಂದ್ರ, ಹೆಚ್.ಪಿ.ರಾಜೇಶ್ ಇದ್ದರು.
''''ಆಧುನಿಕ ಭಗೀರಥರ 57ರ ಸಂಭ್ರಮ'''' ಕಾರ್ಯಕ್ರಮ । ನೀರಿಗಾಗಿ ಪರಿತಪಿಸಿದ್ದ ರೈತರಲ್ಲಿ ಈಗ ಸಂತಸದ ನಗೆ
ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಯಶಸ್ವಿ: ಶಾಸಕ ದೇವೇಂದ್ರಪ್ಪಕನ್ನಡಪ್ರಭ ವಾರ್ತೆ ಜಗಳೂರುಬರದ ನಾಡು ಎಂಬ ಹಣೆಪಟ್ಟಿ ಹೊತ್ತಿದ್ದ ಜಗಳೂರು ವಿಧಾನಸಭಾ ಕ್ಷೇತ್ರದ 57 ಕೆರೆಗಳಿಗೆ ಏತ ನೀರಾವರಿ ಯೋಜನೆಯ ಮೂಲಕ ನೀರು ಹರಿದಿರುವುದು ಈ ಭಾಗದ ಕೃಷಿ ಇತಿಹಾಸದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ. ದಶಕಗಳ ಕಾಲ ನೀರಿಗಾಗಿ ಪರಿತಪಿಸಿದ್ದ ಜಗಳೂರು ರೈತರ ಮೊಗದಲ್ಲಿ ಇದೀಗ ಸಂತಸದ ನಗೆ ಮೂಡಿದೆ. ಕೃಷಿ ಚಟುವಟಿಕೆಗಳಿಗೆ ಹೊಸ ಚೈತನ್ಯ ದೊರೆತಿದೆ ಎಂದು ಸಿರಿಗೆರೆಯ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.
ತಾಲೂಕಿನ ಮಾಡ್ರಳ್ಳಿ (ಗುರುಸಿದ್ದಾಪುರ) ಗ್ರಾಮದ ಚೌಡೇಶ್ವರಿ ದೇವಿ ಸನ್ನಿಧಿಯಲ್ಲಿ ಶಾಸಕ ಬಿ.ದೇವೇಂದ್ರಪ್ಪ ನೇತೃತ್ವದಲ್ಲಿ ಆಯೋಜಿಸಿದ್ದ ''''ಆಧುನಿಕ ಭಗೀರಥರ 57ರ ಸಂಭ್ರಮ'''' ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.ರೈತರಿಗೆ ರೈತರೇ ಶತ್ರುಗಳಾಗಬೇಡಿ:
ಈ ಭಾಗದ ಭೂಮಿ ಅತ್ಯಂತ ಉತ್ಕೃಷ್ಟ ಹಾಗೂ ಫಲವತ್ತತೆಯಿಂದ ಕೂಡಿದೆ. ಕೃಷಿಗೆ ಪೂರಕವಾದ ನೀರಿನ ಸೌಲಭ್ಯ ದೊರೆತಿರುವುದರಿಂದ ರೈತರು ತಮ್ಮ ಭೂಮಿಯ ಸಾಮರ್ಥ್ಯ ಸಮರ್ಪಕವಾಗಿ ಬಳಸಿಕೊಳ್ಳಬೇಕು. ಇನ್ನು ಕೆಲವೇ ವರ್ಷಗಳಲ್ಲಿ ನೀವು ಚನ್ನಗಿರಿಯನ್ನು ಮೀರಿಸುವ ಶಕ್ತಿಯನ್ನು ಪಡೆಯುತ್ತೀರಿ. ಜಗಳೂರು ಭಾಗದ ಮಣ್ಣಿನ ಫಲವತ್ತತೆ, ರೈತರ ಪರಿಶ್ರಮ ಹಾಗೂ ನೀರಾವರಿ ಯೋಜನೆಗಳ ಮಹತ್ವ ಅರಿಯಬೇಕು. ಈ ವಿಚಾರದಲ್ಲಿ ರೈತರಿಗೆ ರೈತರೇ ಶತ್ರುಗಳಾಗಬಾರದು ಎಂದೂ ತಿಳಿಸಿದರು.ರೈತರು ತಮ್ಮ ಕೆರೆಗಳಿಗೆ ಜಾಸ್ತಿ ನೀರು ಬರಲಿ ಎಂದು ವಾಲ್ವ್ ತಿರುವುತ್ತಿರುವವರ ಕುರಿತು ನುಡಿದ ಶ್ರೀಗಳು, ನಮಗೆ ಇಲ್ಲದಿದ್ದರೂ ಪರವಾಗಿಲ್ಲ, ಇನ್ನೊಬ್ಬರಿಗೆ ದೊರೆಯಲಿ ಎನ್ನುವ ವಿಶಾಲ ಭಾವನೆ ಇರುವುದು ನಿಜವಾದ ಮಾನವೀಯತೆ. ಇಂತಹ ಉದಾತ್ತ ಮನೋಭಾವ ಪ್ರತಿಯೊಬ್ಬ ರೈತರು ಬೆಳೆಸಿಕೊಳ್ಳಬೇಕು ಎಂದು ಬುದ್ಧಿವಾದ ಹೇಳೀದರು.
ಭರಮಸಾಗರ ಮತ್ತು ಜಗಳೂರು ಏತ ನೀರಾವರಿ ಯೋಜನೆಗಳು ವೈಜ್ಞಾನಿಕವಾಗಿ ಯಶಸ್ಸಿಗೆ ಅಂದಿನ ಕಾಂಗ್ರೆಸ್ ನೇತೃತ್ವದ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿಯ ಆಡಳಿದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಜೆಡಿಎಸ್ ಅವಧಿಯ ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವರು, ಶಾಸಕರು, ಸಂಸದರು, ಎಸ್.ವಿ.ರಾಮಚಮದ್ರ, ಎಚ್.ಪಿ. ರಾಜೇಶ್, ಹಾಲಿ ಶಾಸಕ ದೇವೇಂದ್ರಪ್ಪ ಕೊಡುಗೆ ಬಗ್ಗೆ ಸ್ಮರಿಸಿದರು. ಶಾಸಕನಾಗಲು ಶ್ರೀಗಳು ಕಾರಣ:ಶಾಸಕ ದೇವೇಂದ್ರಪ್ಪ ಮಾತನಾಡಿ, ಒಂದು ತುತ್ತಿಗೂ ಗತಿಯಿಲ್ಲದ ಬಡ ಕುಟುಂಬದಲ್ಲಿ ಜನಿಸಿದ ನಾನು ಇಂದು ಶಾಸಕನಾಗಲು ಹಾಗೂ ಐಎಎಸ್ ಅಧಿಕಾರಿಯಾಗಲು ಪರಮಪೂಜ್ಯರ ಮಾರ್ಗದರ್ಶನವೇ ಕಾರಣ. ಸಿರಿಗೆರೆ ಶ್ರೀಗಳ ಆಶೀರ್ವಾದದಿಂದ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಯಶಸ್ವಿಯಾಗಿದೆ. ಕಳೆದ ವರ್ಷ ವರುಣನ ಕೃಪೆಯಿಂದ ಕೆರೆಗಳು ಕೋಡಿ ಬಿದ್ದಿದ್ದವು. ಈ ವರ್ಷ ಪ್ರಕೃತಿಯ ಮುನಿಸಿನಿಂದ ಕೆರೆಗಳಿಗೆ ನೀರು ಬಂದಿರಲಿಲ್ಲ. ನೀರಾವರಿ ನಿಗಮದ ಎಂಜಿನಿಯರ್ಗಳು ಹಾಗೂ ಗುತ್ತಿಗೆದಾರರ ಸಹಕಾರದಿಂದ ಗುರುಸಿದ್ದಾಪುರದ ಎರಡು ಕೆರೆಗಳು, ಮಾಗಡಿ ಹಾಗೂ ಅಗಸನಹಳ್ಳಿ ಕೆರೆಗಳಿಗೆ ಪೈಪ್ಲೈನ್ ಕಾಮಗಾರಿ ಪೂರ್ಣಗೊಳಿಸಿ ನೀರು ಹರಿಸಲು ಸಾಧ್ಯವಾಗಿದೆ. ಚುನಾವಣೆ ಬಂದಾಗ ರಾಜಕಾರಣ ಮಾಡೋಣ. ಮತ ನೀಡಿದ ಜನರ ಅಭ್ಯುದಯವನ್ನು ರಾಜಕಾರಣಿಗಳಾದ ನಾವು ಬಯಸೋಣ. ಎಲ್ಲ ಕೆರೆಗಳಿಗೂ ನೀರು ಹರಿದ ಮೇಲೆ ಶ್ರೀಗಳನ್ನು ಕರೆಸಿ ದೊಡ್ಡಮಟ್ಟದ ಕಾರ್ಯಕ್ರಮ ಮಾಡಿರುವುದು ಖುಷಿಯ ವಿಚಾರ. ಈ ಯೋಜನೆಗೆ ಸಹಕರಿಸಿದ ಮೂರೂ ಅವಧಿಗಳ ಜನ ಮುಖ್ಯಮಂತ್ರಿಗಳು, ಆಯಾ ಕಾಲದ ಜಲ ಸಂಪನ್ಮೂಲ ಸಚಿವರು, ಮಾಜಿ ಶಾಸಕರಾದ ಎಸ್.ವಿ.ರಾಮಚಂದ್ರ, ಎಚ್.ಪಿ.ರಾಜೇಶ್ ಅವರ ಶ್ರಮ ಅಪಾರವಾದುದು ಎಂದು ಸ್ಮರಿಸಿದರು.
ರಾಜೀನಾಮೆ ನೀಡಲೂ ಸಿದ್ಧನಾಗಿದ್ದೆ:ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿ ಅರಣ್ಯ ಇಲಾಖೆಯ ಕಾನೂನು ತೊಡಕುಗಳನ್ನು ಇತ್ಯರ್ಥಗೊಳಿಸಿ ಕೆರೆಗಳಿಗೆ ನೀರು ಹರಿಸಿದ ಕೀರ್ತಿ ಶಾಸಕ ಬಿ.ದೇವೇಂದ್ರಪ್ಪ ಹಾಗೂ ಅವರ ಪುತ್ರ ಕೀರ್ತಿಕುಮಾರ್ ಅವರಿಗೆ ಸಲ್ಲುತ್ತದೆ. ನನ್ನ ಆಡಳಿತಾವಧಿಯಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಯೋಜನೆಗೆ ₹250 ಕೋಟಿ ಮಂಜೂರು ಮಾಡಿದಾಗ, ಉಳಿದ ಅನುದಾನ ಬಿಡುಗಡೆಗಾಗಿ ರಾಜೀನಾಮೆ ನೀಡಲೂ ಸಿದ್ಧನಾಗಿದ್ದೆ. ಸಿರಿಗೆರೆ ಶ್ರೀಗಳು ಗುಡುಗಿದರೆ ವಿಧಾನಸೌಧ ನಡುಗುತ್ತದೆ ಎಂಬುದಕ್ಕೆ ತಕ್ಷಣವೇ ₹650 ಕೋಟಿ ಬಿಡುಗಡೆ ಮಾಡಿದ್ದು ಹಾಗೂ ನ್ಯಾಯಾಲಯದಲ್ಲಿದ್ದ ರೈತರ ತಡೆಯಾಜ್ಞೆ ತೆರವುಗೊಂಡಿದ್ದೇ ಸಾಕ್ಷಿ. ಕೊಂಡಕುರಿ ಅಭಯಾರಣ್ಯವನ್ನು ಕೊಂಡಕುರಿ ಧಾಮ ಹಾಗೂ ಕಾಯ್ದಿಟ್ಟ ಅರಣ್ಯ ಪ್ರದೇಶವಾಗಿ ರೂಪಿಸುವಲ್ಲಿಯೂ ಕಾಳಜಿ ವಹಿಸಿದ್ದೇನೆ. ಪರಿಸರ ಮತ್ತು ವನ್ಯಜೀವಿಗಳ ಸಂರಕ್ಷಣೆಯೂ ಅಷ್ಟೇ ಮುಖ್ಯ ಎಂದರು.
ಪಕ್ಷಾತೀತ ಸಹಕಾರ:ಮಾಜಿ ಶಾಸಕ ಎಚ್.ಪಿ.ರಾಜೇಶ್ ಮಾತನಾಡಿ, 2018ರಲ್ಲಿ ₹1,150 ಕೋಟಿ ವೆಚ್ಚದ ಭರಮಸಾಗರದ 45 ಕೆರೆಗಳು ಹಾಗೂ ಜಗಳೂರಿನ 57 ಕೆರೆಗಳಿಗೆ ನೀರು ಹರಿಸುವ ಯೋಜನೆಗೆ ಜನ್ಮ ನೀಡಲಾಗಿತ್ತು. ಸಿರಿಗೆರೆ ಶ್ರೀಗಳ ಸಂಕಲ್ಪದಂತೆ ಆಡಳಿತ ನಡೆಸಿದ ಸರ್ಕಾರಗಳ ಪಕ್ಷಾತೀತ ಸಹಕಾರದಿಂದ ಇಂದು ಎರಡೂ ಯೋಜನೆಗಳು ಯಶಸ್ವಿಯಾಗಿ ನೀರು ಹರಿಸುತ್ತಿವೆ. ರಾಜ್ಯದ ಹಲವು ಕಡೆ ಏತ ನೀರಾವರಿ ಯೋಜನೆಗಳು ನಿರೀಕ್ಷಿತ ಯಶಸ್ಸು ಕಂಡಿಲ್ಲ. ಆದರೆ, ಭರಮಸಾಗರ ಮತ್ತು ಜಗಳೂರಿನಲ್ಲಿ ಯಶಸ್ವಿ ಆಗಿರುವುದು ಹೆಮ್ಮೆಯ ಸಂಗತಿ. ಸಿರಿಗೆರೆ ಶ್ರೀಗಳು ಫಸಲ್ ಭೀಮಾ ಯೋಜನೆ ಜಾರಿಯಲ್ಲಿಯೂ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.
ಸಮಾರಂಭದಲ್ಲಿ ಕೆಪಿಸಿಸಿ ಎಸ್ಟಿ ಘಟಕದ ಪ್ರಧಾನ ಕಾರ್ಯದರ್ಶಿ ಕೀರ್ತಿಕುಮಾರ್, ಕೆಪಿಸಿಸಿ ಎಸ್ಟಿ ಘಟಕದ ಮಾಜಿ ರಾಜ್ಯಾಧ್ಯಕ್ಷ ಕೆ.ಪಿ.ಪಾಲಯ್ಯ ಮಾತನಾಡಿದರು.57 ಎತ್ತಿನ ಬಂಡಿಗಳೊಂದಿಗೆ ವೈಭವದ ಮೆರವಣಿಗೆ:
ಕಾರ್ಯಕ್ರಮಕ್ಕೂ ಮುನ್ನ ಕೊಂಡಕುರಿ ಅರಣ್ಯ ಭಾಗದ ವಿವಿಧ ಗ್ರಾಮಗಳ ರೈತರು ಸಿರಿಗೆರೆ ಶ್ರೀಗಳು, ಶಾಸಕ ಬಿ.ದೇವೇಂದ್ರಪ್ಪ, ಮಾಜಿ ಶಾಸಕರನ್ನು ಒಳಗೊಂಡಂತೆ ಭವ್ಯ ಮೆರವಣಿಗೆ ನಡೆಸಿದರು. ಕೆರೆಯಿಂದ ತೇರುಬೀದಿಯ ವೇದಿಕೆಯವರೆಗೆ 57 ಎತ್ತಿನಬಂಡಿಗಳು, ಬೈಕ್ ರ್ಯಾಲಿ, 57 ಕಹಳೆ, 57 ಉರಿಮೆಗಳು, 101 ಪೂರ್ಣಕುಂಭ ಹೊತ್ತ ಮಹಿಳೆಯರು ಹಾಗೂ ಡೊಳ್ಳು ಕಲಾವಾದ್ಯಗಳೊಂದಿಗೆ ಸಾಗಿದ ಮೆರವಣಿಗೆ ಸಂಭ್ರಮಕ್ಕೆ ಮೆರುಗು ನೀಡಿತು.ಈ ಸಂದರ್ಭ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್.ಕೆ.ಮಂಜುನಾಥ್, ಕೆ.ಪಿಸಿಸಿ ಸದಸ್ಯ ಕಲ್ಲೇಶ್ ರಾಜ್ ಪಟೇಲ್, ಪಿ.ಸುರೇಶ್ ಗೌಡ, ಬಿಸ್ತುವಳ್ಳಿ ಬಾಬು, ಚಟ್ನಹಳ್ಳಿ ರಾಜಣ್ಣ, ಶಶಿಧರ, ವೇಣುಗೋಪಾಲರೆಡ್ಡಿ, ಷಂಷೀರ್ ಅಹಮ್ಮದ್, ವಕೀಲ ಪ್ರಕಾಶ್, ಮಡ್ರಹಳ್ಳಿ ಪ್ರಕಾಶ್, ರಮೇಶ್, ಗಿರೀಶ್, ಮಾಗಡಿ ಮಂಜಪ್ಪ, ದೀಪಕ್ ಪಟೇಲ್, ಗಡಿಮಾಕುಂಟೆ ಸಿದ್ದೇಶ್, ಶೇಖರಪ್ಪ ಇತರರು ಉಪಸ್ಥಿತರಿದ್ದರು.