ಜಗಳೂರು ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆಗೆ ಬೇಕಿದೆ ಶೀಘ್ರ ಚಿಕಿತ್ಸೆ!

| Published : Jun 24 2024, 01:32 AM IST

ಜಗಳೂರು ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆಗೆ ಬೇಕಿದೆ ಶೀಘ್ರ ಚಿಕಿತ್ಸೆ!
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದ ಬಡಜನತೆಗೆ ಸರ್ಕಾರ ಆರೋಗ್ಯ ಸೇವೆಯನ್ನು ಒದಗಿಸಲು ಕೋಟ್ಯಂತರ ಹಣ ವೆಚ್ಚ ಮಾಡುತ್ತಿದೆ. ಆದರೆ, ಜಗಳೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಮರ್ಪಕ ವೈದ್ಯರಿಲ್ಲದೇ ಸಾರ್ವಜನಿಕ ಆರೋಗ್ಯ ರಕ್ಷಣೆ ಮಾಡಿಕೊಳ್ಳಲು ರೋಗಿಗಳು ಪರದಾಡುವಂತ ಸ್ಥಿತಿ ಉದ್ಭವಿಸಿದೆ.

- ನಿರ್ಮಾಣ ಕಾಮಗಾರಿಗಳೆಲ್ಲ ಅರ್ಧಕ್ಕೇ ಸ್ಥಗಿತ, ಹಲವು ವೈದ್ಯರ ಕೊರತೆ । ಎಚ್‌ಐವಿ ಟೆಸ್ಟ್‌ ವ್ಯವಸ್ಥೆ ಇಲ್ಲ

- ಆಸ್ಪತ್ರೆಗೆ ಮುಖ್ಯವಾಗಿ ವೈಧ್ಯಾಧಿಕಾರಿಯೇ ಇಲ್ಲ । ಬಹುತೇಕ ಹುದ್ದೆಗಳು ಖಾಲಿ, ಸಮರ್ಪಕ ಸೇವೆ ಗಗನಕುಸುಮ- - - ಹೆಮ್ಮನ ಬೇತೂರ್‌ ಚಿದಾನಂದ

ಕನ್ನಡಪ್ರಭ ವಾರ್ತೆ ಜಗಳೂರು

ಸಮಾಜದ ಬಡಜನತೆಗೆ ಸರ್ಕಾರ ಆರೋಗ್ಯ ಸೇವೆಯನ್ನು ಒದಗಿಸಲು ಕೋಟ್ಯಂತರ ಹಣ ವೆಚ್ಚ ಮಾಡುತ್ತಿದೆ. ಆದರೆ, ಜಗಳೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಮರ್ಪಕ ವೈದ್ಯರಿಲ್ಲದೇ ಸಾರ್ವಜನಿಕ ಆರೋಗ್ಯ ರಕ್ಷಣೆ ಮಾಡಿಕೊಳ್ಳಲು ರೋಗಿಗಳು ಪರದಾಡುವಂತ ಸ್ಥಿತಿ ಉದ್ಭವಿಸಿದೆ.

ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದಿರುವುದು ಒಂದೆಡೆಯಾದರೆ, ಹಲವು ದಿನಗಳಿಂದ ಆಸ್ಪತ್ರೆ ದುರಸ್ತಿ ಕಾರ್ಯಗಳೇ ನಡೆದಿಲ್ಲ. ಆಸ್ಪತ್ರೆ ಆವರಣ ಸಮರ್ಪಕ ದುರಸ್ತಿಯಾಗದೇ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ಜೊತೆಗೆ ನಿರ್ಮಾಣ ಕಾಮಗಾರಿಗಳು ಅರ್ಧಕ್ಕೆ ನಿಂತಿವೆ. ಇಡೀ ಆಸ್ಪತ್ರೆಯೇ ರೋಗಗ್ರಸ್ಥ ಆಗಿದೆ. ಇದರಿಂದ ಬಡವರಿಗೆ ಸಮರ್ಪಕ ಆರೋಗ್ಯ ಸೇವೆ ಮರೀಚಿಕೆಯಾಗಿದೆ.

ತಾಲೂಕಿನಲ್ಲಿ ಪ್ರತಿವರ್ಷ ಹೆಚ್ಚುತ್ತಿರುವ ಜನಸಂಖ್ಯೆ, ಬಡಮಹಿಳೆಯರು ಈ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ಬರುತ್ತಾರೆ. ಆದರೆ, ಇಲ್ಲಿ ಲಂಚಾವಳಿ ಹೆಚ್ಚಾಗಿದೆ. ಹೆರಿಗೆಗೆ ಬಂದವರ ಸಂಬಂಧಿಗಳು ಹಣ ನೀಡಿದರೆ ಮಾತ್ರ ಸರಳ ಹೆರಿಗೆ, ಇಲ್ಲವಾದರೆ ಸಿಝೇರಿಯನ್ ಅಂತ ವೈದ್ಯರು ಹೇಳುತ್ತಾರೆ, ಎಚ್‌ಐವಿ ಟೆಸ್ಟ್‌ಗಳನ್ನು ಖಾಸಗಿ ಲ್ಯಾಬ್‌ಗೆ ಬರೆದುಕೊಡುತ್ತಿದ್ದಾರೆ ಎಂಬ ದೂರುಗಳಿವೆ.

ವೈದ್ಯರ ಕೊರತೆ:

ಜಗಳೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಮುಖ್ಯವಾಗಿ ವೈಧ್ಯಾಧಿಕಾರಿಯೇ ಇಲ್ಲ. ವಿಶೇಷವಾಗಿ ಇಲ್ಲಿ ೩ ಜನ ಫಿಜಿಷಿಯನ್ ಬೇಕು. ರೇಡಿಯೋಲೋಜಿಸ್ಟ್ ವೈದ್ಯರು ಬೇಕು. ಮಕ್ಕಳು, ವೃದ್ಧರು ಹಳ್ಳಿಗಳಿಂದ ಬೇರೆ ತಾಲೂಕುಗಳಿಂದ ಚಿಕಿತ್ಸೆ ಬೇಡಿ ಬರುತ್ತಾರೆ. ಆದರೆ, ತುರ್ತು ಚಿಕಿತ್ಸಾ ವೈದ್ಯಾಧಿಕಾರಿಗಳು ೩, ಚರ್ಮರೋಗ ತಜ್ಞರು ೧, ಕಚೇರಿ ಅಧೀಕ್ಷಕರು ೧, ಪ್ರಥಮ ದರ್ಜೆ ಸಹಾಯಕರು ೨, ದ್ವಿತೀಯ ದರ್ಜೆ ಸಹಾಯಕರು ೨, ಶು.ಅ. ದರ್ಜೆ ೨, ಹಿರಿಯ ಶುಶ್ರೂಷಕ ಅಧಿಕಾರಿ ೧ ಹೀಗೆ ಬಹುತೇಕ ಹುದ್ದೆಗಳು ಖಾಲಿಯಾಗಿವೆ. ಇಂದಿಗೂ ಭರ್ತಿಯಾಗಿಲ್ಲ. ಸುಮಾರು ೧೧೧ ಡಿ ಗ್ರೂಪ್ ಸಿಬ್ಬಂದಿ ಹೊಂದಿರಬೇಕಾದ ಆಸ್ಪತ್ರೆಯಲ್ಲಿ ಕೇವಲ ೬೦ ಮಂದಿ ಕೆಲಸ ಮಾಡುತ್ತಿದ್ದಾರೆ.

ಆಸ್ಪತ್ರೆ ದುರಸ್ತಿ ಯಾವಾಗ?:

ಆಸ್ಪತ್ರೆಯ ಮೇಲ್ಚಾವಣಿ ಸೋರುತ್ತಿದೆ. ಬಣ್ಣ ಮಾಸಿ ಹೋಗಿದೆ. ವಿದ್ಯುತ್‌ ವ್ಯವಸ್ಥೆ ಹಾಳಾಗಿದೆ. ಡೈನೇಜ್ ಬ್ಲಾಕ್ ಹಾಳಾಗಿವೆ. ಆಸ್ಪತ್ರೆಯಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿಲ್ಲ. ರೋಗಿಗಳು, ಸಂಬಂಧಿಕರಿಗೆ ಸೂಕ್ತ ಶೌಚಾಲಯ ನಿರ್ಮಾಣವೂ ಇಲ್ಲ. ಇದರಿಂದಾಗಿ ಅಬಾಲವೃದ್ಧರಾದಿಯಾಗಿ ಎಲ್ಲರೂ ಶೌಚಕ್ಕೆ ಬಯಲನ್ನೇ ಆಶ್ರಯಿಸಬೇಕಾದ ದುಸ್ಥಿತಿ ಇಲ್ಲಿದೆ.

ಡಿ.ಸಿ.ಎಚ್. ಲ್ಯಾಬ್ ಉದ್ಘಾಟನೆಯಾಗಿಲ್ಲ:

ಸರ್ಕಾರಗಳು ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಬಡವರಿಗೆ ಅನುಕೂಲ ಆಗಲೆಂದು ಸರ್ಕಾರಿ ಆಸ್ಪತ್ರೆಗಳಿಗೆ ಹಲವಾರು ಸವಲತ್ತುಗಳನ್ನು ನೀಡುತ್ತವೆ. ಜಗಳೂರಿನ ಆಸ್ಪತ್ರೆಯಲ್ಲಿ ₹೮೦ ಲಕ್ಷದ ವೆಚ್ಚದಲ್ಲಿ ಡಿ.ಸಿ.ಎಚ್ ಲ್ಯಾಬ್ ಆರಂಭವಾಗಿದೆ. ಈ ಸೌಲಭ್ಯ ರಾಜ್ಯದಲ್ಲಿ ಕೆಲವೇ ಕಡೆ ಮಾತ್ರ ನೀಡಲಾಗಿದೆ. ಇದಕ್ಕೆ ಬೇರೆ ಕಟ್ಟಡವೂ ಇದೆ. ಇದು ಆರಂಭವಾದರೆ ಬಡಜನರಿಗೆ ಹೆಚ್ಚು ಅನುಕೂಲ. ಆದರೆ, ಈ ಲ್ಯಾಬ್‌ ಉಪಯೋಗ ಮಾತ್ರ ಬಡಜನರಿಗೆ ಸಿಗುತ್ತಿಲ್ಲ. ಕಾರಣ ಇನ್ನೂ ಉದ್ಘಾಟನೆ ಆಗಿಲ್ಲ. ವಿಳಂಬ ಯಾಕೆ ಎಂಬುದು ಗೊತ್ತಿಲ್ಲ. ಈ ನಿರ್ಲಕ್ಷ್ಯ ಗಮನಿಸಿದರೆ, ಇಲ್ಲಿನ ಸರ್ಕಾರಿ ವೈದ್ಯರು ಖಾಸಗಿ ಲ್ಯಾಬ್‌ಗಳನ್ನೇ ಅವಲಂಬಿಸಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

ಆಸ್ಪತ್ರೆ ನವೀಕರಣಕ್ಕೆ ಜನಪ್ರತಿನಿಧಿಗಳು, ಅಧಿಕಾರಿಗಳು ಕ್ರಮ ತೆಗೆದುಕೊಂಡಿಲ್ಲ. ಸಮರ್ಪಕ ವೈದ್ಯರ ನೇಮಕ ಮಾಡಿ ಬಡ ರೋಗಿಗಳ ಆರೋಗ್ಯ ರಕ್ಷಣೆಗೆ ಮುಂದಾಗಬೇಕು ಎಂಬುದು ಜಗಳೂರು ಪ್ರಜ್ಞಾವಂತರ ಒತ್ತಾಯವಾಗಿದೆ.

- - -

ಬಾಕ್ಸ್‌ ವೈದ್ಯರ ಕೊರತೆ ನೀಗಲು ಸಿಎಂ ಜತೆ ಚರ್ಚೆ: ಶಾಸಕ ಜಗಳೂರು ಆಸ್ಪತ್ರೆ ಅವ್ಯವಸ್ಥೆ ಸ್ಥಳೀಯ ಶಾಸಕ ಬಿ ದೇವೇಂದ್ರಪ್ಪ ಅವರಿಗೂ ತಿಳಿದಿದೆ. ಅವರೇ ಹೇಳುವಂತೆ, ಸರ್ಕಾರಿ ಆಸ್ಪತ್ರೆ ಸಮಸ್ಯೆಗಳನ್ನು ನಾನು ನೋಡಿದ್ದೇನೆ. ಸರ್ಕಾರಿ ಸೇವೆಗೆ ವೈದ್ಯರು ಮುಂದಾಗುತ್ತಿಲ್ಲ ಎಂದಿದ್ದಾರೆ.

ಇಷ್ಟು ದಿನ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಅಧಿಕಾರಿಗಳು ಬೇರೆ ಬೇರೆ ಕಡೆ ಹೋಗಿದ್ದರು. ಈಗ ಬಂದಿದ್ದಾರೆ. ಡಿಸಿಎಚ್ ಲ್ಯಾಬ್ ಬಗ್ಗೆ ನನಗೆ ಮಾಹಿತಿ ಇರಲಿಲ್ಲ. ಅಧಿಕಾರಿಗಳನ್ನು ಕರೆಸಿ ಅದರ ಉದ್ಘಾಟನೆ ಮಾಡುವಂತೆ ಹೇಳುತ್ತೇನೆ. ವೈದ್ಯರ ಕೊರತೆ ನೀಗಿಸಲು ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಇಲಾಖೆ ಸಚಿವರೊಂದಿಗೆ ಚರ್ಚಿಸುತ್ತೇನೆ. ಜಗಳೂರು ಸರ್ಕಾರಿ ಆಸ್ಪತ್ರೆ ಪುನಶ್ಚೇತನಕ್ಕೆ ಮುಂಬರುವ ದಿನಗಳಲ್ಲಿ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ.

- - -

ಕೋಟ್ಸ್‌ ಜಗಳೂರು ಸರ್ಕಾರಿ ಆಸ್ಪತ್ರೆ ಅವ್ಯವಸ್ಥೆ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನವನ್ನು ಸೆಳೆಯಲಾಗಿದೆ. ಆದರೂ, ಯಾವುದೇ ಪ್ರಯೋಜವಾಗಿಲ್ಲ. ಸರ್ಕಾರ ಈ ಕುರಿತು ಶೀಘ್ರ ಗಮನಹರಿಸಿ ವೈದ್ಯರ ನೇಮಕದೊಂದಿಗೆ ಬಡವರ ಆರೋಗ್ಯರ ರಕ್ಷಣೆಗೆ ಅನುಕೂಲ ಆಗಬಲ್ಲ ಆಸ್ಪತ್ರೆ ಪುನಶ್ಚೇತನಕ್ಕೆ ಮುಂದಾಗಬೇಕು

- ಮಾಲೆಮಾಚಿಕೆರೆ ಸತೀಶ್‌, ತಾಲೂಕು ಅಧ್ಯಕ್ಷ, ಡಿಎಸ್‌ಎಸ್‌

ಆಸ್ಪತ್ರೆ ದುರಸ್ತಿ, ವೈದ್ಯರ ನೇಮಕ ಸೇರಿದಂತೆ ಹಲವಾರು ಸಮಸ್ಯೆಗಳ ಕುರಿತು ಮೇಲಾಧಿಕಾರಿಗಳು ಹಾಗೂ ಶಾಸಕರ ಗಮನಕ್ಕೆ ತಂದಿದ್ದೇನೆ. ಸಮರ್ಪಕ ವೈದ್ಯರ ನೇಮಕ ಮಾಡಲು ಕ್ರಮ ತೆಗೆದುಕೊಂಡು ಆಸ್ಪತ್ರೆ ದುರಸ್ತಿ ಮಾಡಿದಲ್ಲಿ ಜನತೆಗೆ ಉತ್ತಮವಾದ ಸೇವೆ ಕಲ್ಪಿಸಲು ಸಾಧ್ಯವಿದೆ

- ಷಣ್ಮುಖಪ್ಪ ಆರ್‌., ಪ್ರಭಾರ ಮುಖ್ಯ ವೈದ್ಯಾಧಿಕಾರಿ, ಜಗಳೂರು

- - - 23 ಜೆ.ಜಿ.ಎಲ್.1) ಜಗಳೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ದೃಷ್ಯ.