ಜಗಳೂರು ಮುಖ್ಯ ರಸ್ತೆ ಅಗಲೀಕರಣ ಶತಸಿದ್ಧ: ಡಿಸಿ

| Published : Sep 03 2024, 01:46 AM IST

ಸಾರಾಂಶ

ಜಗಳೂರು ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಚಳ್ಳಕೆರೆ ಗೇಟ್‌ವರೆಗೆ ಶೀಘ್ರವೇ ರಸ್ತೆ ಅಗಲೀಕರಣ ಮಾಡಿಯೇ ತೀರುತ್ತೇವೆ. ಈ ವಿಷಯದಲ್ಲಿ ಹಿಂದೆ ಸರಿಯುವ ಮಾತಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಜಿ.ಎಂ. ಗಂಗಾಧರ್ ಸ್ವಾಮಿ ಹೇಳಿದ್ದಾರೆ.

- ರಸ್ತೆ ಮಧ್ಯದಿಂದ ಎರಡೂ ಬದಿ ತಲಾ 21 ಮೀ. ವಿಸ್ತರಣೆ । ಶಾಸಕ ಬಿ.ದೇವೇಂದ್ರಪ್ಪ ಅಧ್ಯಕ್ಷತೆಯಲ್ಲಿ ಹಿರಿಯ ಅಧಿಕಾರಿಗಳ ಸಭೆ - - - ಕನ್ನಡಪ್ರಭ ವಾರ್ತೆ ಜಗಳೂರು

ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಚಳ್ಳಕೆರೆ ಗೇಟ್‌ವರೆಗೆ ಶೀಘ್ರವೇ ರಸ್ತೆ ಅಗಲೀಕರಣ ಮಾಡಿಯೇ ತೀರುತ್ತೇವೆ. ಈ ವಿಷಯದಲ್ಲಿ ಹಿಂದೆ ಸರಿಯುವ ಮಾತಿಲ್ಲ ಎಂದು ಜಿಲ್ಲಾಧಿಕಾರಿ ಡಾ. ಜಿ.ಎಂ. ಗಂಗಾಧರ್ ಸ್ವಾಮಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಶಾಸಕ ಬಿ.ದೇವೇಂದ್ರಪ್ಪ ಅಧ್ಯಕ್ಷತೆಯಲ್ಲಿ ಹಿರಿಯ ಅಧಿಕಾರಿಗಳ ಸಭೆ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಎಲ್ಲರಿಗೂ ಒಂದೇ ನ್ಯಾಯ. ನಿಗದಿ ಪಡಿಸಿದಂತೆ ರಸ್ತೆಯ ಮಧ್ಯೆದಿಂದ 21 ಮೀಟರ್ ಎರಡೂ ಬದಿ ಅಗಲೀಕರಣ ಮಾಡಲಾಗುವುದು. ಇದರಲ್ಲಿ ಹಿಂದೆ ಸರಿಯುವ ಮಾತಿಲ್ಲ. ಯಾರಿಗೂ ಯಾವುದೇ ರಿಯಾಯಿತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ರಸ್ತೆ ಅಗಲೀಕರಣಕ್ಕೆ ಈಗಾಗಲೇ ₹20 ಕೋಟಿ ಹಣ ಬಿಡುಗಡೆಯಾಗಿದೆ. 1.3 ಕಿಮೀವರೆಗೆ ರಸ್ತೆ ವಿಸ್ತೀರ್ಣ ಮಾಡುವುದು ಶತಸಿದ್ಧ. ಈಗಾಗಲೇ ಕಳೆದ ಶನಿವಾರದಿಂದ ಪಿಡಬ್ಲ್ಯೂಡಿ ಇಲಾಖೆ ಅಧಿಕಾರಿಗಳು ಮಾರ್ಕಿಂಗ್ ಮಾಡಿದ್ದಾರೆ. ನ್ಯಾಷನಲ್ ರೋಡ್ ಕಾಂಗ್ರೆಸ್ ಅನುಸಾರ ಭಾರತದ ರಸ್ತೆಗಳ ಗುಣಮಟ್ಟಕ್ಕೆ ಅಫೆಕ್ಸ್ ಬಾಡಿ ಇದೆ. ಅದರ ಪ್ರಕಾರ ಯಾವುದೇ ರಾಜ್ಯ ಹೆದ್ದಾರಿ ಬೌಂಡರಿಯಿಂದ ಆರು ಮೀಟರ್ ಅಗಲವಿರಬೇಕು ಎಂಬುದು ಕಡ್ಡಾಯ ನಿಯಮವಿದೆ ಎಂದರು.

ಮಾಸ್ಟರ್ ಪ್ಲಾನ್‌ನಂತೆ ರಸ್ತೆಗಳ ಪ್ರಕಾರ ಇಂತಿಷ್ಟು ರಸ್ತೆ, ಅದರ ಎತ್ತರ, ವಿನ್ಯಾಸಗಳನ್ನು ಮಾಡಲಾಗಿದೆ. ಅದರಂತೆ ಈ ಮಹಾಯೋಜನೆಯಡಿ 2008ರಲ್ಲಿ ಈ ರಸ್ತೆ ನೋಟಿಫಿಕೇಷನ್ ಆಗಿದ್ದು, ರಸ್ತೆ ಮಧ್ಯೆದಿಂದ ಎರಡೂ ಬದಿಯಲ್ಲಿ 21 ಮೀಟರ್ ವಿಸ್ತರಣೆ ಮಾಡಲು ಈಗಾಗಲೇ ಅಳತೆ ಮಾಡಲಾಗಿದೆ. ಅದರಂತೆ ವಿಸ್ತರಣೆ ಮಾಡಿಯೇ ತೀರುತ್ತೇವೆ ಎಂದು ಪುನರುಚ್ಚರಿಸಿದರು.

ಪಟ್ಟಣದಲ್ಲಿ ಇತ್ತೀಚೆಗೆ ಅಪಘಾತವಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗುವಂಥ ಘಟನೆಯೊಂದು ನಡೆಯಿತು. ಎರಡು ಅಮಾಯಕ ಜೀವಗಳು ಬಲಿಯಾದವು. ಹೀಗಾಗಿ, ರಸ್ತೆ ವಿಸ್ತರಣೆ ಆಗಲೇ ಬೇಕು ಎಂಬ ದೃಢನಿಶ್ವಿಯದೊಂದಿಗೆ ಸಭೆ ಮಾಡಿದ್ದೇವೆ ಎಂದು ಡಿಸಿ ಹೇಳಿದರು.

ರಸ್ತೆಯ ಪಕ್ಕದಲ್ಲೇ ಇರುವ ಬೆಸ್ಕಾಂ ಇಲಾಖೆಯ 50 ರಿಂದ 70 ವಿದ್ಯುತ್ ಪೋಲ್‌ಗಳ ಸ್ಥಳಾಂತರವಾಗಬೇಕು. ಟೆಲಿಫೋನ್ ಮತ್ತು ಕುಡಿಯುವ ನೀರಿನ ಪೈಪ್‌ಗಳಿಗೆ ಧಕ್ಕೆ ಆಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಆಯಾ ಇಲಾಖೆ ಅಧಿಕಾರಿಗಳ ಜೊತೆ ಸುದೀರ್ಘವಾಗಿ ಚರ್ಚಿಸಿದ್ದೇವೆ. ಕೆಲವರು ರಸ್ತೆಯಲ್ಲಿ ಅನಧಿಕೃತ ಕಟ್ಟಡಗಳನ್ನು ಕಟ್ಟಿರುವುದು ಗಮನಕ್ಕೆ ಬಂದಿದೆ. ಅವುಗಳನ್ನು ನಿಯಮಾನುಸಾರ ಖಾತ್ರಿಪಡಿಸಿಕೊಂಡು, ತೆರವುಗೊಳಿಸಲು ಸಭೆಯಲ್ಲಿ ತೀರ್ಮಾನಿಸಿದ್ದೇವೆ ಎಂದರು.

ಸಭೆಯಲ್ಲಿ ಎಡಿಸಿ ಲೋಕೇಶ್, ಎಎಸ್‌ಪಿ ಮಂಜುನಾಥ್, ಎಂ.ಡಿ. ಕೀರ್ತಿಕುಮಾರ್, ತಹಸೀಲ್ದಾರ್, ಸೈಯದ್ ಕಲೀಂ ಉಲ್ಲಾ, ಕೆ.ಪಿ.ಪಾಲಯ್ಯ, ಪಿಡ್ಲ್ಯೂಡಿ ಎಕ್ಸಿಕುಟೀವ್ ಎಂಜಿನಿಯರ್ ನರೇಂದ್ರಬಾಬು, ಎಇಇ ನಾಗರಾಜ್, ಪಪಂ ಚೀಫ್ ಆಫೀಸರ್ ಲೋಕ್ಯಾನಾಯ್ಕ್, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

- - -

ಬಾಕ್ಸ್‌-1 * ಕಾನೂನಿನ ಮುಂದೆ ಎಲ್ಲರೂ ಒಂದೇ ಶಾಸಕ ಬಿ.ದೇವೇಂದ್ರಪ್ಪ ಮಾತನಾಡಿ, ರಸ್ತೆ ವಿಸ್ತರಣೆ ಮಾಡುವುದು ಶತಸಿದ್ಧ. ಕಾನೂನಿನ ನಿಯಮಾನುಸಾರಕ್ಕಾಗಿ ಕಾಯುತ್ತಿದ್ದೇವೆ. ಮೊನ್ನೆ ನಡೆದ ಕೆಡಿಪಿ ಸಭೆಯಲ್ಲಿ ತೀರ್ಮಾನಿಸಿದಂತೆ ಶನಿವಾರ ಮಾರ್ಕಿಂಗ್ ಆರಂಭವಾಗಿ ಈಗಾಗಲೇ ಎಲ್ಲ ಮಾರ್ಕಿಂಗ್ ಪ್ರಕ್ರಿಯೆ ಮುಗಿದಿದೆ. ಕಾನೂನಿನ ಮುಂದೆ ಎಲ್ಲರೂ ಒಂದೇ. ಕಾನೂನು ನಿಯಮಾನುಸಾರ ಹೋಗಬೇಕಾಗಿರುವುದರಿಂದ ಯಾವಾಗ, ಏನು ಎಂಬ ಪ್ರಶ್ನೆಗೆ ಮತ್ತೊಮ್ಮೆ ಮಾಧ್ಯಮಗಳಿಗೆ ತಿಳಿಸುತ್ತೇವೆ ಎಂದರು.

- - - ಬಾಕ್ಸ್-2 * ಅನಧಿಕೃತ ಕಟ್ಟಡಗಳಿಗೆ ಪರಿಶೀಲನೆ ಜಗಳೂರು ಪಟ್ಟಣದಲ್ಲಿ ರಾಜಕಾಲುವೆ ಒತ್ತುವರಿ ಮಾಡಿ ಅನಧಿಕೃತ ಕಟ್ಟಡಗಳನ್ನು ಕಟ್ಟಲಾಗಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ. ಎಡಿಎಲ್ಆರ್, ಡಿಡಿಎಲ್ಆರ್ ಜೊತೆ ಮಾಹಿತಿ ಪಡೆಯುತ್ತೇವೆ. ನ್ಯಾಷನಲ್ ಗ್ರೀನ್‌ ಟ್ರಿಬುನಲ್ ಪ್ರಕಾರಣ ಬಫರ್ ಝೋನ್ ವ್ಯಾಪ್ತಿಯಲ್ಲಿ ಯಾವುದೇ ಅನಧಿಕೃತ ಕಟ್ಟಡಗಳನ್ನು ಕಟ್ಟುವಂತಿಲ್ಲ. ಯಾವುದೇ ಮುಲಾಜಿಲ್ಲದೇ ತೆರವುಗಳಿಸುತ್ತೇವೆ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.

- - - -2ಜೆಎಲ್ಆರ್ಚಿತ್ರ1:

ಜಗಳೂರು ಪಟ್ಟಣದ ಪ್ರವಾಸಿ ಮಂದಿರದ ಅತಿಥಿ ಗೃಹದಲ್ಲಿ ಶಾಸಕ ಬಿ.ದೇವೇಂದ್ರಪ್ಪ ಅಧ್ಯಕ್ಷತೆಯಲ್ಲಿ ರಸ್ತೆ ಅಗಲೀಕರಣ ಕುರಿತು ಸಭೆ ನಡೆಯಿತು. ಜಿಲ್ಲಾಧಿಕಾರಿ ಡಾ. ಜಿ.ಎಂ.ಗಂಗಾಧರ್, ಅಧಿಕಾರಿಗಳು ಇದ್ದರು.