ಜನಮನ ಸೆಳೆದ ಜಗನ್ನಾಥ ಭವ್ಯ ರಥ ಯಾತ್ರೆ

| Published : Jul 08 2024, 12:30 AM IST

ಸಾರಾಂಶ

ಬೀದರ್‌ ನಗರದಲ್ಲಿ ಜಗನ್ನಾಥ, ಬಲರಾಮ ಮತ್ತು ಸುಭದ್ರ ಅವರ ಒಳಗೊಂಡ ಮೂರ್ತಿಗಳನ್ನು ಹೊಂದಿದ್ದ ಅತ್ಯಾಕರ್ಷಕ ರಥ.

5 ಕಿಮೀ ರಥ‍ ಎಳೆದ ಸಾವಿರಾರು ಭಕ್ತಾದಿಗಳು । ಮುಗಿಲು ಮುಟ್ಟಿದ ಜೈಕಾರ, ಭಕ್ತಾದಿಗಳಿಂದ ರಸ್ತೆಯುದ್ದಕ್ಕೂ ಸೇವೆಕನ್ನಡಪ್ರಭ ವಾರ್ತೆ ಬೀದರ್‌

ನಗರದಲ್ಲಿ ಜಗನ್ನಾಥ, ಬಲರಾಮ ಮತ್ತು ಸುಭದ್ರ ಅವರ ಒಳಗೊಂಡ ಮೂರ್ತಿಗಳನ್ನು ಹೊಂದಿದ್ದ ಅತ್ಯಾಕರ್ಷಕ ರಥವನ್ನು ಸಾವಿರಾರು ಭಕ್ತರು ಜಗನ್ನಾಥ ಜೈ ಕಾರದ ಘೋಷಣೆಯೊಂದಿಗ ಎಳೆಯುವ ಮೂಲಕ ನಡೆಸಿಕೊಟ್ಟರು.

ನಗರದ ರಾಂಪೂರ ಬಡಾವಣೆಯಲ್ಲಿರುವ ಶ್ರೀ ಲಕ್ಷ್ಮಿ ಸತ್ಯನಾರಾಯಣ ಮಂದಿರದಿಂದ ಭಾನುವಾರ ಮಧ್ಯಾಹ್ನ 1ಗಂಟೆಗೆ ಜಗನ್ನಾಥ ರಥಯಾತ್ರೆ ಆರಂಭವಾಗಿ ನಗರದ ರಾಂಪೂರೆ ಬಡಾವಣೆ ಮಾರ್ಗವಾಗಿ, ಬಿ.ವಿ ಭೂಮರೆಡ್ಡಿ ಮಹಾವಿದ್ಯಾಲಯದಿಂದ ಬೊಮ್ಮಗೊಂಡೇಶ್ವರ ವೃತ್ತ, ಬಸವೇಶ್ವರ ವೃತ್ತ, ಮಹಾವೀರ ಚೌಕ್‌, ಭಗತಸಿಂಗ್‌ ವೃತ್ತ, ಡಾ.ಅಂಬೇಡ್ಕರ್‌ ವೃತ್ತ ಜನವಾಡಾ ರಸ್ತೆ ಮಾರ್ಗವಾಗಿ ಚಿಕ್ಕಪೇಟ್‌ ಮೂಲಕ ನಗರದ ಹೊರವಯದ ವರ್ತುಲ ರಸ್ತೆಯಲ್ಲಿರುವ ಜಗನ್ನಾಥ ಮಂದಿರವನ್ನು ರಾತ್ರಿ 8ರ ಸುಮಾರಿಗೆ ತಲುಪಿತು.

ಸುಮಾರು 5ಕಿಮೀ ಸಾಗಿದ ರಥಯಾತ್ರೆಯ ಮಾರ್ಗದುದ್ದಕ್ಕೂ ಸಾವಿರಾರು ಭಕ್ತಾದಿಗಳಿಂದ ನಡೆದ ಜೈಕಾರ ಮುಗಿಲು ಮುಟ್ಟಿತ್ತು. ನಾಮುಂದು ತಾಮುಂದು ಎಂದು ರಥವನ್ನು ಎಳೆಯಲು ಮಹಿಳೆಯವರು ಪುರುಷರು ಮುಗಿಬಿದ್ದು ಭಕ್ತಿಭಾವ ಮೆರೆದರು. ಇದಲ್ಲದೆ ರಥದ ಮುಂಭಾಗದಲ್ಲಿ ಮಹಾರಷ್ಟ್ರದ ಪುಣೆಯ ಕಲಾವಿದರಿಂದ ರಂಗೋಲಿ ಬಿಡಿಸಲಾಗಿದ್ದು ಸರ್ವರ ಗಮನ ಸೆಳೆಯುವಂತಿತ್ತು.

ಇನ್ನು ರಥಯಾತ್ರೆ ಸಾಗಿ ಬರುವ ಎಲ್ಲ ವೃತ್ತಗಳಲ್ಲಿ ನಗರದ ವ್ಯಾಪಾರಸ್ಥರು, ಭಕ್ತಾದಿಗಳು ಕುಡಿವ ನೀರು, ಪಾನಕ ಮತ್ತು ಪ್ರಸಾದ ವಿತರಣೆ ಮಾಡುವ ಮೂಲಕ ಭಕ್ತಿಯನ್ನು ಮೆರೆದರು.

ರಥಯಾತ್ರೆ ಬಳಿಕ ಜೈ ಜಗನ್ನಾಥ ಮಂದಿರದಲ್ಲಿ ಜಗನ್ನಾಥ ಪುರಾಣ, ಜಗನ್ನಾಥ ಕಥಾಲೀಲೆ ಮಾಲಿಕೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಇದೇ ಸಂದರ್ಭದಲ್ಲಿ ಓರಿಸ್ಸಾ ಪುರಿ ಜಗನ್ನಾಥ ಮಂದಿರದಲ್ಲಿ ಜಗನ್ನಾಥ ರಥಯಾತ್ರೆ ನಡೆಯುತ್ತಿದ್ದು, ಅದರ ಅನುಕರಣೀಯವಾಗಿ ಈ ಭವ್ಯಯಾತ್ರೆ ಜರುಗಿದ್ದು, ಜಿಲ್ಲೆಯ ಹಾಗೂ ನೆರೆಯ ರಾಜ್ಯಗಳಾದ ಮಹಾರಾಷ್ಟ್ರ ಹಾಗೂ ತೆಲಂಗಾಣದ ಜಗನ್ನಾಥನ ಭಕ್ತಾದಿಗಳೂ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ರಥೋತ್ಸವದಲ್ಲಿ ನರಸಿಂಹ ದೀಕ್ಷಿತ, ಅಯೋಧ್ಯಾಪತಿ ಅ‍ವರುಗಳು ಪೂಜೆ ನೆರವೇರಿಸಿದರು. ಜೈ ಜಗನ್ನಾಥ ರಥೋತ್ಸವ ಸಮಿತಿಯ ಅಧ್ಯಕ್ಷ ರಾಮಕೃಷ್ಣ ಸಾಳೆ, ಶ್ರೀಕೃಷ್ಣ ಚೈತನ್ಯ ಟ್ರಸ್ಟ್‌ ಅಧ್ಯಕ್ಷ ಡಾ. ನೀಲೇಶ ದೇಶಮುಖ, ಮೆರವಣಿಗೆ ಸಮಿತಿ ಅಧ್ಯಕ್ಷ ಸೋಮಶೇಖರ ಪಾಟೀಲ್‌ ಗಾದಗಿ, ಕಾರ್ಯಕ್ರಮದ ಉಸ್ತುವಾರಿ ವೀರಶೆಟ್ಟಿ ಮಣಗೆ, ಶ್ರೀಕೃಷ್ಣ ಚೈತನ್ಯ ಟ್ರಸ್ಟ್‌ ಕಾರ್ಯದರ್ಶಿ ಶಿವರಾಮ ಜೋಶಿ, ಕಾರ್ಯಕ್ರಮದ ಸಂಯೋಜಕರಾದ ರಾಜಕುಮಾರ ಅಳ್ಳೆ, ಅಶೋಕ ರೆಜಂತಾಲ್‌, ಸಂತೋಷ ಬೆಲ್ದಾಳೆ, ಪ್ರಭಾಕರ ಮೈಲಾಪೂರ, ರಾಜೇಶ ಕುಲಕರ್ಣಿ, ಹಣಮಯ್ಯ ಅರ್ಥಂ, ವಸಂತ ಪಟೇಲ್‌, ಅವರು ಸೇರಿದಂತೆ ವಿವಿಧ ಸಮಾಜದ ಅನೇಕರು ಉಪಸ್ಥಿತರಿದ್ದರು.