ಸಾರಾಂಶ
ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ನೀತಿಗೆಟ್ಟ ರಾಜಕಾರಣಿ. ಯಾವುದೇ ಕಾರಣಕ್ಕೂ ವೀರಶೈವ ಲಿಂಗಾಯತ ಸಮಾಜವು ಅವರನ್ನು ಬೆಂಬಲಿಸುವುದಿಲ್ಲ ಎಂದು ವಿಪ ಮಾಜಿ ಸದಸ್ಯ, ವೀರಶೈವ ಲಿಂಗಾಯತ ಸಮಾಜದ ಮುಖಂಡ ಮೋಹನ ಲಿಂಬಿಕಾಯಿ ಕಿಡಿಕಾರಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಏಕೆ ಬಿಜೆಪಿಗೆ ವಾಪಸ್ ಹೋದರು ಎನ್ನುವುದು ನಿಗೂಢವಾಗಿದೆ. 30 ವರ್ಷಗಳ ಅನುಭವ ಹೊಂದಿರುವ ಅವರು ಯುವಕರಿಗೆ ಏನು ಸಂದೇಶ ನೀಡುತ್ತಾರೆ? ಎಂದು ಪ್ರಶ್ನಿಸಿದರು.ಬಿಜೆಪಿಯಲ್ಲಿ ಶೆಟ್ಟರ್‌ಗೆ ಟಿಕೆಟ್ ಕೊಡದೇ ಅನ್ಯಾಯ ಮಾಡಿದ ವೇಳೆ ಮನನೊಂದು, ಯಾವುದೇ ಕಾರಣಕ್ಕೂ ನಾನು ಮರಳಿ ಬಿಜೆಪಿಗೆ ಹೋಗುವುದಿಲ್ಲ ಎಂದು ಕಾಂಗ್ರೆಸ್ ಸೇರ್ಪಡೆಯಾಗಿದ್ದರು. ಪಕ್ಷವೂ ಅವರಿಗೆ ಟಿಕೆಟ್ ನೀಡಿತ್ತು. ಆದರೆ, 30 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಸೋಲು ಕಂಡರು. ಆದರೂ ರಾಜ್ಯದ ಮುಖ್ಯಮಂತ್ರಿ ಹಾಗೂ ರಾಜ್ಯಾಧ್ಯಕ್ಷರು ಶೆಟ್ಟರ್‌ಗೆ ವಿಪ ಸದಸ್ಯರಾಗಿ ಆಯ್ಕೆ ಮಾಡುವ ಮೂಲಕ ಗೌರವದಿಂದ ನಡೆದುಕೊಂಡಿತ್ತು. ಆದರೆ, ಇದನ್ನೆಲ್ಲ ತಿರಸ್ಕರಿಸಿದ ಶೆಟ್ಟರ್ ಮರಳಿ ಬಿಜೆಪಿಗೆ ಹೋಗಿರುವುದು ಖಂಡನಾರ್ಹ. ಇದರಿಂದಾಗಿ ಲಿಂಗಾಯತ ವೀರಶೈವ ಸಮಾಜಕ್ಕೆ ಅವರು ಅಪಮಾನ ಮಾಡಿದ್ದಾರೆ ಎಂದರು.
ಜಗದೀಶ ಶೆಟ್ಟರ್ ಧಾರವಾಡದ ನಿತೀಶ್ ಕುಮಾರ್ ಇದ್ದಂತೆ. ಕೇವಲ ಸ್ವಾರ್ಥಕ್ಕಾಗಿ ಇಂದು ಇಲ್ಲೆ, ನಾಳೆ ಮತ್ತೊಂದು ಕಡೆ ಅನ್ನೋದಕ್ಕೆ ಜಗದೀಶ್ ಶೆಟ್ಟರ್ ಉತ್ತಮ ಉದಾಹರಣೆ. ಇಂತಹ ನೀತಿಗೆಟ್ಟ ರಾಜಕಾರಣ ಮಾಡುವವರನ್ನು ಸಮಾಜ ಎಂದಿಗೂ ಬೆಂಬಲಿಸುವುದಿಲ್ಲ. ಶೆಟ್ಟರ್ ಸಮಾಜದ ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದಾಗ ಬಿಜೆಪಿಗೆ ಹಿಗ್ಗಾಮುಗ್ಗಾ ಬೈದಿದ್ದರು. ಒಂದು ವಾರದ ಹಿಂದೆಯೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆದರೆ, ಇದೀಗ ಬಿಜೆಪಿಗೆ ಹೋಗಿದ್ದಾರೆ ಎಂದರು.
ಲಿಂಗಾಯತರಿಗೆ ನೀಡಲಿ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಪಕ್ಷಾಂತರ ಹಿನ್ನೆಲೆಯಲ್ಲಿ ತೆರವಾಗಿರುವ ವಿಧಾನಪರಿಷತ್ ಸದಸ್ಯತ್ವಕ್ಕೆ ವೀರಶೈವ ಲಿಂಗಾಯತ ಸಮುದಾಯಕ್ಕೆ ನೀಡಬೇಕು. ಹಾಗೆಯೇ ಲೋಕಸಭಾ ಚುನಾವಣೆಗೂ ನಮ್ಮ ಸಮುದಾಯಕ್ಕೆ ಟಿಕೆಟ್ ಕೊಡಬೇಕು. ನಿಗಮ, ಮಂಡಳಿಯನ್ನು ಹಿರಿಯ ಪಕ್ಷದ ಕಾರ್ಯಕರ್ತರಿಗೆ ನೀಡಬೇಕೆಂದು ಒತ್ತಾಯಿಸಿದರು.ವಿಜಯ ಕುಲಕರ್ಣಿ ಮಾತನಾಡಿ, ಜಗದೀಶ ಶೆಟರ್ ಇಡಿ, ಐಟಿಗೆ ಹೆದರಿ ಬಿಜೆಪಿಗೆ ಹೋಗಿದ್ದಾರೆ. ಅವರು ಬಿಜೆಪಿಗೆ ಹೋಗಿರುವುದರಿಂದ ನಮಗೇನೂ ಸಮಸ್ಯೆಯಿಲ್ಲ. ಏಕೆಂದರೆ ಕಳೆದ ಚುನಾವಣೆಯಲ್ಲಿ ಹೆಚ್ಚು ಅಂತರದಿಂದ ಸೋಲು ಕಂಡಿದ್ದರು. ಇಂತಹ ಪ್ರವೃತ್ತಿ ಹಿರಿಯರಿಗೆ ಶೋಭೆ ತರುವುದಿಲ್ಲ ಎಂಬುದನ್ನು ಶೆಟ್ಟರ್ ಅರ್ಥೈಸಿಕೊಳ್ಳಬೇಕು ಎಂದರು.
ಈ ವೇಳೆ ಮಾಜಿ ಶಾಸಕ ಎಂ.ಎಸ್. ಅಕ್ಕಿ, ಶರಣಪ್ಪ ಕೊಟಗಿ, ರಾಜಶೇಖರ ಮೆಣಸಿನಕಾಯಿ, ವೆಂಕನಗೌಡ್ರ, ಅಪ್ಪಣ್ಣ ಹಳ್ಳದ, ಶಿವರಾಜ ಮಂಟೂರ, ಬಾಪುಗೌಡ ಪಾಟೀಲ ಸೇರಿದಂತೆ ಹಲವರಿದ್ದರು.