ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನ್ ರಾಮ್ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯನ್ನು ಕೇವಲ ಸರ್ಕಾರಿ ಕಾರ್ಯಕ್ರಮವನ್ನಾಗಿ ನೋಡದೆ, ನಮ್ಮ ಜವಾಬ್ದಾರಿಯೆಂದು ಭಾವಿಸಿ ಅತ್ಯಂತ ಅರ್ಥಪೂರ್ಣವಾಗಿ ಮತ್ತು ಅಚ್ಚುಕಟ್ಟಾಗಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಉಭಯ ಮಹನೀಯರ ಜಯಂತಿ ಆಚರಣೆ ಕುರಿತು ಜರುಗಿದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಏ.5ರಂದು ಲಿಡ್ಕರ್ ಭವನದ ಶಿವಶರಣ ಮಾದಾರ ಚನ್ನಯ್ಯ ಸಭಾಭವನದಲ್ಲಿ ಡಾ.ಬಾಬು ಜಗಜೀವನ್ ರಾಮ್ ಅವರ ಜಯಂತಿ ಆಚರಿಸಲಾಗುವುದು. ತರಾಸು ರಂಗಮಂದಿರ ನವೀಕರಣ ಕಾರ್ಯ ಪ್ರಗತಿಯಲ್ಲಿದ್ದು, ಶೀಘ್ರ ಪೂರ್ಣಗೊಳ್ಳಲಿದೆ. ಏ.14ರಂದು ನವೀಕರಣಗೊಂಡ ತರಾಸು ರಂಗಮಂದಿರ ಉದ್ಘಾಟನೆಯ ಜತೆಗೆ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನ ಸಹ ಆಚರಿಸಲಾಗುವುದು ಎಂದರು.

ಅವಕಾಶ ವಂಚಿತರಿಗೆ ಪ್ರಾತಿನಿದ್ಯ ಕಲ್ಪಿಸುವಲ್ಲಿ ಈ ಇಬ್ಬರು ಮಹನೀಯರ ಕೊಡುಗೆ ಮಹತ್ವವಾದುದು. ಸಮಾಜದ ಪ್ರತಿಯೊಂದು ವರ್ಗದವರು ಸಹ ಸಂತಸದಿಂದ ಜಯಂತಿಯಲ್ಲಿ ಪಾಲ್ಗೊಳ್ಳಬೇಕು. ಜಯಂತಿ ದಿನಗಳಂದು ಪೊಲೀಸ್ ಇಲಾಖೆಯ ಸಲಹೆಯ ಮೇರೆಗೆ ಮೆರವಣಿಗೆ ಮಾರ್ಗವನ್ನು ನಿಗದಿಗೊಳಿಸಲಾಗುವುದು. ಜಯಂತಿಗಳ ಯಶಸ್ಸಿಗೆ ವಿವಿಧ ಸಮಿತಿಗಳನ್ನು ರಚಿಸಲಾಗುತ್ತದೆ. ವಿವಿಧ ಇಲಾಖೆಗಳಿಂದ ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ. ಇಬ್ಬರೂ ಮಹನೀಯರ ಜೀವನ ಸಾಧನೆ ಕುರಿತು ಕರ ಪತ್ರಗಳನ್ನು ಜಯಂತಿ ದಿನಗಳಲ್ಲಿ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಉಪನ್ಯಾಸಕ್ಕಾಗಿ ಸಮುದಾಯದ ಮುಖಂಡರು ಸೂಚಿಸಿದ ಸಂಪನ್ಮೂಲ ವ್ಯಕ್ತಿಗಳನ್ನು ಸಂಪರ್ಕಿಸಿ, ಲಭ್ಯ ಇರುವವರನ್ನು ಆಯ್ಕೆ ಮಾಡಲಾಗುವುದು ಎಂದರು.

ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಂದು ಪೌರ ಕಾರ್ಮಿಕರಿಗೆ ಸನ್ಮಾನಿಸಲಾಗುವುದು. ಕಳೆದ ವರ್ಷದಿಂದ ಸಮಾಜಸೇವೆಯಲ್ಲಿ ತೊಡಗಿರುವ ಗಣ್ಯರನ್ನು ಗುರುತಿಸಿ ಗೌರವಿಸುವ ಪರಂಪರೆ ಜಯಂತಿಯಲ್ಲಿ ಅಳವಡಿಸಲಾಗಿದೆ. ಜಿಲ್ಲೆಯಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸುವ ಮೂಲಕ ಅವರಲ್ಲಿ ಮತ್ತಷ್ಟು ಉತ್ಸಾಹ ತುಂಬುವ ಕೆಲಸ ಮಾಡಲಾಗುವುದು ಎಂದು ಹೇಳಿದರು.


ಐತಿಹಾಸಿಕ ಕೋಟೆ ಮುಂಭಾಗದಿಂದ ಮೆರವಣಿಗೆಯನ್ನು ಆಯೋಜಿಸಬೇಕು. ಸಚಿವರು ಹಾಗೂ ಶಾಸಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾಧಕರು ವಿದ್ಯಾರ್ಥಿಗಳನ್ನು ಸನ್ಮಾನಿಸಬೇಕು. ಜನಪ್ರತಿನಿಧಿಗಳು ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳು ಹಾಗೂ ಸರ್ಕಾರಿ ನೌಕರರು, ತಪ್ಪದೇ ಜಯಂತಿಗಳಲ್ಲಿ ಪಾಲ್ಗೊಳ್ಳಬೇಕು ಎಂದರು.

ಜಿಪಂ ಸಿಇಒ ಡಾ.ಆಕಾಶ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ದಲಿತ ಪರ ಸಂಘಟನೆಗಳ ಮುಖಂಡರುಗಳಾದ ಕೆ.ರಾಜಪ್ಪ, ತಿಪ್ಪೇಸ್ವಾಮಿ, ಅವಿನಾಶ್, ಡಿ.ಓ.ಮೊರಾರ್ಜಿ, ವಿಶ್ವ ನಾರಾಯಣ ಮೂರ್ತಿ, ಗುರುಮೂರ್ತಿ ಸೇರಿದಂತೆ ಹಲವು ಮುಖಂಡರು, ವಕೀಲರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.