ಜಗಜೀವನ್ ರಾಂ ಬರಿ ರಾಜಕಾರಣಿಯಲ್ಲ ಸಮಾಜ ಸುಧಾರಕರು

| Published : Apr 07 2024, 01:48 AM IST

ಸಾರಾಂಶ

ಕನಕಪುರ: ಬಾಬು ಜಗಜೀವನ್ ರಾಂ ಅವರು ಬರಿ ರಾಜಕಾರಣಿಯಲ್ಲ, ಹಸಿರು ಕ್ರಾಂತಿಯ ಹರಿಕಾರರಾಗಿ ಸಮಾಜ ಸುಧಾರಣೆ ಮಾಡಿದ್ದಾರೆ ಎಂದು ತಹಸೀಲ್ದಾರ್ ಸ್ಮಿತಾರಾಮು ತಿಳಿಸಿದರು.

ಕನಕಪುರ: ಬಾಬು ಜಗಜೀವನ್ ರಾಂ ಅವರು ಬರಿ ರಾಜಕಾರಣಿಯಲ್ಲ, ಹಸಿರು ಕ್ರಾಂತಿಯ ಹರಿಕಾರರಾಗಿ ಸಮಾಜ ಸುಧಾರಣೆ ಮಾಡಿದ್ದಾರೆ ಎಂದು ತಹಸೀಲ್ದಾರ್ ಸ್ಮಿತಾರಾಮು ತಿಳಿಸಿದರು.

ತಾಲೂಕು ಕಚೇರಿ ಆವರಣದಲ್ಲಿ ನಡೆದ ಬಾಬು ಜಗಜೀವನ್ ರಾಂ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 5ನೇ ಏಪ್ರಿಲ್‌ 1908ರಲ್ಲಿ ಬಿಹಾರದಲ್ಲಿ ಜನಿಸಿದ ಅವರು, 1946ರಲ್ಲಿ ಕಾರ್ಮಿಕ ಇಲಾಖೆ ಸಚಿವರಾಗಿದ್ದರು. ಪ್ರತಿಯೊಂದು ಸಮಾಜವನ್ನು ಸಮನಾಗಿ ಕಾಣುತ್ತಿದ್ದರು. ಕಾರ್ಮಿಕ ಇಲಾಖೆ ಸಚಿವರಾಗಿ ಕಾರ್ಮಿಕರಿಗೆ ರಕ್ಷಣೆಯ ಹಕ್ಕುಗಳನ್ನ ತಂದುಕೊಟ್ಟರು. ರೈಲ್ವೆ ಸಚಿವರಾಗಿ ಕೆಲಸ ಮಾಡಿದರೂ ಸಮ ಸಮಾಜ ನಿರ್ಮಿಸಲು ಹಲವಾರು ಕೊಡುಗೆಗಳನ್ನು ಕೊಟ್ಟಿದ್ದಾರೆ. ದೇಶಕ್ಕೆ ಮುಖ್ಯವಾಗಿ ಆಹಾರದ ಭದ್ರತೆಗೆ ಬುನಾದಿ ಹಾಕಿದರು. ಬಾಬು ಜಗಜೀವನ್ ರಾಮ್ ಅವರು ಬರೀ ರಾಜಕಾರಣಿ ಅಲ್ಲ ಸಮಾಜ ಸುಧಾರಕರೂ ಆಗಿದ್ದರು ಎಂದರು.

ಬಾಬೂಜಿ ಜಗಜೀವನ ರಾಂ ಅವರು ಬ್ರಿಟೀಷ್ ಸರ್ಕಾರದ ಅವಧಿಯಲ್ಲೇ ತನ್ನ 28ನೇ ವಯಸ್ಸಿಗೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಅಸ್ಪೃಶ್ಯತೆ ಕರಾಳ ನೆರಳು ಆವರಿಸಿದ್ದ ಕಾಲಘಟ್ಟದಲ್ಲಿ 30 ವರ್ಷ ಸಚಿವರಾಗಿ ಕೆಲಸ ಮಾಡಿದರು. ಅವರಲ್ಲಿದ್ದ ಕಿಚ್ಚು ಹೋರಾಟ ಅವರನ್ನು ದಾರ್ಶನಿಕ ವ್ಯಕ್ತಿಯನ್ನಾಗಿ ಮಾಡಿತು. 1946ರಲ್ಲಿ ಪ್ರಥಮವಾಗಿ ಕಾರ್ಮಿಕ ಇಲಾಖೆ ಸಚಿವರಾಗಿ ಅನೇಕ ಸುಧಾರಣೆಗಳನ್ನು ತಂದರು.

ಬಾಬೂಜಿ ಅವರು ಸತತ 50 ವರ್ಷ ಸಂಸದೀಯ ಪಟುವಾಗಿದ್ದರು. ರೈತರು, ಕಾರ್ಮಿಕರು ಮತ್ತು ಯೋಧರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಕಾರ್ಮಿಕರಿಗೆ ಕನಿಷ್ಠ ಕೂಲಿ ನಿಗದಿ ಮಾಡುವಂತೆ ಧ್ವನಿ ಎತ್ತಿದ್ದರು. ಕೃಷಿ ವಲಯದಲ್ಲಿ ಅಮೂಲಾಗ್ರ ಬದಲಾವಣೆ ತಂದು ಭಾರತ ದೇಶಕ್ಕೆ ಆಹಾರ ಭದ್ರತೆಯನ್ನು ತಂದುಕೊಟ್ಟು ಈ ದೇಶದಲ್ಲಿ ಅಸ್ಪೃಶ್ಯರು, ದಲಿತರು ಸಮಾನರಾಗಿ ಬದುಕಬೇಕು ಎಂದು ಹೋರಾಟ ಮಾಡಿದ್ದಾರೆ ಎಂದರು.

ದಮ್ಮ ದೀವಿಗೆ ಟ್ರಸ್ಟ್ ಮಲ್ಲಿಕಾರ್ಜುನ್ ಮಾತನಾಡಿ, ದೇಶದಲ್ಲಿ ಆಹಾರ ಕ್ಷಾಮ ಎದುರಾದಾಗ ಬಾಬು ಜಗಜೀವನ್ ರಾಂ ಅವರು ಕೃಷಿ ವಲಯದಲ್ಲಿ ಸುಧಾರಣೆ ತಂದು ಆಹಾರ ಭದ್ರತೆಯನ್ನು ಕೊಟ್ಟು ಹಸಿರು ಕ್ರಾಂತಿ ಮಾಡಿ ಆಹಾರ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬನೆ ಸಾಧಿಸಲು ಪ್ರಮುಖ ಪಾತ್ರ ವಹಿಸಿದ್ದರು. ಅವರ ರಾಜಕೀಯ ಜೀವನವನ್ನು ಇಂದಿನ ರಾಜಕಾರಣಿಗಳು ಅಳವಡಿಸಿಕೊಳ್ಳಬೇಕು ಎಂದರು.

ಕಾಯಕ್ರಮದಲ್ಲಿ ಶಿರಸ್ತೇದಾರ್ ಜಗದೀಶ್, ತಾಪಂ ಪ್ರಭಾರ ಇಒ ಮೋಹನ್ ಬಾಬು, ಸಮಾಜ ಕಲ್ಯಾಣ ಇಲಾಖೆಯ ಜಯಪ್ರಕಾಶ್, ವಿವಿಧ ಇಲಾಖೆ ಅಧಿಕಾರಿಗಳು, ದಲಿತ ಮುಖಂಡರು, ಸಂಘ ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.

(ಫೋಟೋ ಪ್ಯಾನಲ್‌ಗೆ ಬಳಸಿ)

ಕೆ ಕೆ ಪಿ ಸುದ್ದಿ 03 :

ಕನಕಪುರ ತಾಲೂಕು ಕಚೇರಿ ಆವರಣದಲ್ಲಿ ಬಾಬು ಜಗಜೀವನ್‌ ರಾಂ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ತಹಸೀಲ್ದಾರ್ ಸ್ಮಿತಾರಾಮು ಪುಷ್ಪನಮನ ಸಲ್ಲಿಸಿದರು. ಶಿರಸ್ತೇದಾರ್ ಜಗದೀಶ್, ತಾಪಂ ಪ್ರಭಾರ ಇಒ ಮೋಹನ್ ಬಾಬು, ಸಮಾಜ ಕಲ್ಯಾಣ ಇಲಾಖೆಯ ಜಯಪ್ರಕಾಶ್ ಇತರರಿದ್ದರು.