ಬೆಳಗಾವಿಯಲ್ಲಿ ನಾಳೆ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ: ಡಿಕೆಶಿ

| Published : Dec 26 2024, 01:04 AM IST

ಬೆಳಗಾವಿಯಲ್ಲಿ ನಾಳೆ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ: ಡಿಕೆಶಿ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿಯಲ್ಲಿ ಶುಕ್ರವಾರ ನಡೆಯಲಿರುವ ಸಾರ್ವಜನಿಕ ಸಭೆಗೆ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಎಂದು ಹೆಸರಿಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿಯಲ್ಲಿ ಶುಕ್ರವಾರ ನಡೆಯಲಿರುವ ಸಾರ್ವಜನಿಕ ಸಭೆಗೆ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ ಎಂದು ಹೆಸರಿಡಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ನಗರದ ಸಿಪಿಎಡ್‌ ಕಾಲೇಜು ಮೈದಾನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಈ ಪ್ರದೇಶವನ್ನು ಮಹಾತ್ಮ ಗಾಂಧೀಜಿ ನವನಗರ ಎಂದು ಘೋಷಣೆ ಮಾಡಿದ್ದೇವೆ. ಗುರುವಾರದಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯನ್ನು ಗಾಂಧಿ ಬಾವಿ (ಪಂಪ ಸರೋವರ) ಬಳಿ ಹಮ್ಮಿಕೊಳ್ಳಲಾಗಿದೆ. 1924ರಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಮಹಾತ್ಮ ಗಾಂಧಿ ಅವರು ಅಧ್ಯಕ್ಷರಾಗಿದ್ದರು. ಇಂದು ಆ ಸ್ಥಾನದಲ್ಲಿ ಕರ್ನಾಟಕದವರೇ ಆದ ಮಲ್ಲಿಕಾರ್ಜುನ ಖರ್ಗೆ ಅವರು ಕುಳಿತಿರುವುದು ಹೆಮ್ಮೆಯ ವಿಚಾರ. ಕರ್ನಾಟಕದವರೇ ಆದ ಗಂಗಾಧರ ದೇಶಪಾಂಡೆ ಹಾಗೂ ಜವಾಹರಲಾಲ್‌ ನೆಹರು ಅವರು ಅಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾಗಿದ್ದರು. ಅವರೂ ಸೇರಿ ಬೆಳಗಾವಿಯಲ್ಲಿ ಈ ಅಧಿವೇಶನ ಮಾಡಿದ್ದರು. ಅಂದು 80 ಎಕರೆ ಜಾಗದಲ್ಲಿ ಅಧಿವೇಶನ ನಡೆದಿತ್ತು. ಇಂದು ಅದೇ ಸ್ಥಳದಲ್ಲಿ ಕಾರ್ಯಕಾರಿ ಸಮಿತಿಯ ಸಭೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಇದು ಕೇವಲ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಲ್ಲ, ಎಲ್ಲರ ಕಾರ್ಯಕ್ರಮ. ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕಾರಿ ಸಮಿತಿ ಸದಸ್ಯರು, ದೇಶದ ವಿವಿಧ ರಾಜ್ಯಗಳ ಕಾಂಗ್ರೆಸ್ ಪಕ್ಷದ ಹಾಲಿ ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು, ಎಲ್ಲಾ ರಾಜ್ಯಗಳ ಶಾಸಕಾಂಗ ಪಕ್ಷದ ನಾಯಕರು, ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು, ಎಲ್ಲಾ ಸಂಸತ್ ಸದಸ್ಯರು, ಶಾಸಕರು, ರಾಜ್ಯದ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಹ್ವಾನ ನೀಡಿದ್ದೇವೆ ಎಂದು ತಿಳಿಸಿದರು.

ಗುರುವಾರ ಬೆಳಗ್ಗೆ 10 ಗಂಟೆಗೆ ವೀರಸೌಧದಲ್ಲಿ ಗಾಂಧಿ ಅವರ ಪುತ್ಥಳಿ ಅನಾವರಣ ಮಾಡಲಾಗುವುದು. ಜತೆಗೆ, ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಲಾಗುವುದು. ಬೆಳಗ್ಗೆ 10.45ಕ್ಕೆ ಖಾದಿ ಮೇಳ ಉದ್ಘಾಟನೆ ಮಾಡಲಾಗುವುದು. 11.15ಕ್ಕೆ ಗಂಗಾಧರ ದೇಶಪಾಂಡೆ ಅವರ ಸ್ಮಾರಕವನ್ನು ನಾನು ಹಾಗೂ ಮುಖ್ಯಮಂತ್ರಿಗಳು ಅನಾವರಣ ಮಾಡಲಿದ್ದೇವೆ. ನಂತರ ಗಂಗಾಧರ ದೇಶಪಾಂಡೆ ಅವರ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಲಾಗುವುದು. ಮಧ್ಯಾಹ್ನ 3 ಗಂಟೆಗೆ ಕಾರ್ಯಕಾರಿ ಸಮಿತಿ ಸಭೆ ನಡೆಯಲಿದ್ದು, ರಾತ್ರಿ 7ಕ್ಕೆ ಎಐಸಿಸಿ ಅಧ್ಯಕ್ಷರಿಂದ ಭೋಜನಕೂಟ ಏರ್ಪಡಿಸಲಾಗಿದೆ.

ಶುಕ್ರವಾರ ಬೆಳಗ್ಗೆ 10.30ಕ್ಕೆ ಸುವರ್ಣಸೌಧದಲ್ಲಿ ಗಾಂಧಿ ಪ್ರತಿಮೆಯನ್ನು ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಅನಾವರಣಗೊಳಿಸುವರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಲಿದ್ದು, ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಹಾಗೂ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರ ಮುಖಂಡತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. 12 ಗಂಟೆಗೆ ಮುಖ್ಯಮಂತ್ರಿಗಳಿಂದ ಔತಣಕೂಟ, ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.

ಬಾಕ್ಸ್‌:

ಶೆಟ್ಟರ್ ಮನೆಗೆ ರತ್ನಗಂಬಳಿ ಹಾಸೋಣ:

ಗಾಂಧಿ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಗೌರವಯುತವಾಗಿ ಆಹ್ವಾನ ನೀಡಿಲ್ಲ ಎಂಬ ಸಂಸದ ಜಗದೀಶ ಶೆಟ್ಟರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರ ಮನೆವರೆಗೂ ರತ್ನಗಂಬಳಿ ಹಾಕಿಸೋಣ. ನನ್ನ ಸಮ್ಮುಖದಲ್ಲೇ ಮುಖ್ಯಮಂತ್ರಿಯವರು ಅವರಿಗೆ ಕರೆ ಮಾಡಿ ಆಹ್ವಾನ ನೀಡಿದ್ದಾರೆ. ಆರ್.ಅಶೋಕ್, ನಾರಾಯಣಸ್ವಾಮಿ, ಸಭಾಪತಿಗಳಿಗೆ ಆಹ್ವಾನ ನೀಡಿದ್ದಾರೆ. ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರು ಸೇರಿಸಿದ್ದೇವೆ ಎಂದು ಹೇಳಿದರು.

ಗಾಂಧಿ ಮೇಲೆ ಪ್ರೀತಿ ಇದ್ದಿದ್ದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೇರಿ ಕಾರ್ಯಕ್ರಮ ಮಾಡಿದ್ದರೆ ₹500 ಕೋಟಿ ಖರ್ಚು ಮಾಡಲು ಸಿದ್ಧವಿದ್ದೆವು ಎಂಬ ಶೆಟ್ಟರ್‌ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಈಗಲೂ ಮಾಡಲಿ, ನಾವು ಈ ಕಾರ್ಯಕ್ರಮವನ್ನು ಒಂದು ವರ್ಷಗಳ ಕಾಲ ಆಚರಣೆ ಮಾಡುತ್ತೇವೆ. ಅವರೂ ಕೂಡ ಈ ಕಾರ್ಯಕ್ರಮ ಮಾಡಲಿ ಎಂದು ಮನವಿ ಮಾಡುತ್ತೇನೆ. ಅವರೇ ಮುಂದಾಳತ್ವ ವಹಿಸಿಕೊಂಡು ಕಾರ್ಯಕ್ರಮ ಮಾಡಲಿ, ಅವರ ಹಿಂದೆ ನಿಂತು ನಾವು ಸೇವಕರಂತೆ ಕೆಲಸ ಮಾಡುತ್ತೇವೆ ಎಂದರು.ವರ್ಷಪೂರ್ತಿ ಗಾಂಧಿ ವಿಚಾರಧಾರೆ ಪ್ರಚಾರ: ಮುಖ್ಯಮಂತ್ರಿ

ಮಹಾತ್ಮ ಗಾಂಧೀಜಿಯವರ ವಿಚಾರಧಾರೆಯನ್ನು ಪ್ರಚುರಪಡಿಸಲು ವರ್ಷಪೂರ್ತಿ ರಾಜ್ಯದೆಲ್ಲೆಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.1924ರ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆಯ ಪೂರ್ವಸಿದ್ಧತೆ ವೀಕ್ಷಿಸಲು ಬುಧವಾರ ಬೆಳಗಾವಿಗೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು. 1924ರಲ್ಲಿ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನ 100 ವರ್ಷ ಪೂರೈಸಿದೆ. ಆ ಪ್ರಯುಕ್ತ ಶತಮಾನೋತ್ಸವದ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಗುರುವಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ, ಸುವರ್ಣಸೌಧದ ಪಕ್ಕದಲ್ಲಿ ಗಾಂಧೀಜಿಯವರ ಪ್ರತಿಮೆ ಅನಾವರಣದ ಕಾರ್ಯಕ್ರಮವಿದ್ದು, ಶುಕ್ರವಾರ ಸಾರ್ವಜನಿಕ ಸಭೆ ಏರ್ಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.ಕಾಂಗ್ರೆಸ್ ಅಧಿವೇಶನದಿಂದ ಪಕ್ಷದಲ್ಲಿ ಬದಲಾವಣೆ ಪರ್ವ ಆರಂಭವಾಗುವುದೇ ಎಂಬ ಪರ್ತಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಬದಲಾವಣೆ ನಿರಂತರವಾದ ಪ್ರಕ್ರಿಯೆ. ನೂರು ವರ್ಷಗಳ ಹಿಂದಿದ್ದ ಪರಿಸ್ಥಿತಿ ಈಗಿಲ್ಲ. ರಾಜಕೀಯ ಬದಲಾವಣೆ ಹಾಗೂ ಬೆಳವಣಿಗೆಗಳು ನಿರಂತರವಾಗಿ ಆಗುತ್ತಿರುತ್ತವೆ ಎಂದು ತಿಳಿಸಿದರು.

ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ಶಾಸಕ ಸಿ.ಟಿ.ರವಿ ದೂರು ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಸಿ.ಟಿ.ರವಿ ಅವರು ತಮ್ಮ ತಪ್ಪನ್ನು ಮರೆಮಾಚಲು ಈ ರೀತಿ ಮಾಡುತ್ತಿದ್ದಾರೆ. ಅವರ ಬಂಧನ ಪ್ರಕರಣದ ತನಿಖೆಯನ್ನು ಸಿಐಡಿ ಮಾಡುತ್ತಿದೆ. ತನಿಖಾ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.