ಆಕಾಂಕ್ಷಿಗಳಿಂದ ಮೋದಿಗೆ ಜೈಅನಂತಕುಮಾರ ನಡೆ ನಿಗೂಢ

| Published : Mar 30 2024, 12:53 AM IST

ಆಕಾಂಕ್ಷಿಗಳಿಂದ ಮೋದಿಗೆ ಜೈಅನಂತಕುಮಾರ ನಡೆ ನಿಗೂಢ
Share this Article
  • FB
  • TW
  • Linkdin
  • Email

ಸಾರಾಂಶ

ಅನಂತಕುಮಾರ ಹೆಗಡೆ ಮುಂದಿನ ನಡೆ ಏನು ಎನ್ನುವುದು ಸ್ಪಷ್ಟವಾಗಬೇಕಿದೆ.

ಕಾರವಾರ: ಬಿಜೆಪಿ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಆಕಾಂಕ್ಷಿಗಳೆಲ್ಲ ಕಮಲ ಹಿಡಿದು ಮೋದಿಗೆ ಜೈ ಎನ್ನುತ್ತಿದ್ದಾರೆ. ಆದರೆ ಟಿಕೆಟ್ ವಂಚಿತ ಅನಂತಕುಮಾರ ಹೆಗಡೆ ಮಾತ್ರ ಏಕಾಂಗಿಯಾಗಿದ್ದು, ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಯಾವ ದಾರಿ ಹಿಡಿಯಲಿದ್ದಾರೆ ಎಂಬ ಕೂತೂಹಲ ಉಂಟಾಗಿದೆ.

ಅನಂತಕುಮಾರ ಹೆಗಡೆ ನಾಲ್ಕೂವರೆ ವರ್ಷಗಳಿಂದ ರಾಜಕೀಯದಿಂದ ದೂರ ಇದ್ದರಲ್ಲದೆ, ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಇಂಗಿತ ವ್ಯಕ್ತಪಡಿಸುತ್ತಿದ್ದಂತೆ ಬಿಜೆಪಿಯಲ್ಲಿ ಹತ್ತಕ್ಕೂ ಹೆಚ್ಚು ಆಕಾಂಕ್ಷಿಗಳು ತಲೆ ಎತ್ತಿದರು. ವಿಶ್ವೇಶ್ವರ ಹೆಗಡೆ ಕಾಗೇರಿ, ಹರಿಪ್ರಕಾಶ ಕೋಣೆಮನೆ, ರೂಪಾಲಿ ನಾಯ್ಕ, ಡಾ. ಜಿ.ಜಿ. ಹೆಗಡೆ, ಅನಂತಮೂರ್ತಿ ಹೆಗಡೆ, ನಾಗರಾಜ ನಾಯಕ, ಮನೋಜ ಬಾಡಕರ, ಶಶಿಭೂಷಣ ಹೆಗಡೆ ಹೀಗೆ ಆಕಾಂಕ್ಷಿಗಳ ಪಟ್ಟಿ ಬೆಳೆಯಿತು.

ಯಾವಾಗ ಆಕಾಂಕ್ಷಿಗಳ ಪಟ್ಟಿ ಬೆಳೆಯಿತೋ ಆಗ ಅನಂತಕುಮಾರ ಹೆಗಡೆ ಕ್ರಿಯಾಶೀಲರಾದರು. ಮತ್ತೆ ಚುನಾವಣೆಗೆ ಸ್ಪರ್ಧಿಸುವ ಉತ್ಸಾಹದಿಂದ ಜಿಲ್ಲಾದ್ಯಂತ ತಿರುಗಿ ಸಭೆ ನಡೆಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಮಸೀದಿಗಳನ್ನು ಒಡೆಯುವುದಾಗಿ ಗುಡುಗಿದರು. ಸಂವಿಧಾನ ತಿದ್ದುಪಡಿಯ ಮಾತುಗಳನ್ನೂ ಆಡಿದರು. ಮೋದಿಗೆ ಜೈ ಎಂದರು. ಭಟ್ಕಳದಲ್ಲಿ ಟೇಬಲ್ ಮೇಲೆ ಕುರ್ಚಿ ಇಟ್ಟು ಕ್ಷೇತ್ರದ ಉದ್ದ ಅಗಲ ಗೊತ್ತಿಲ್ಲದವರೂ ಸ್ಪರ್ಧಿಸಲು ಮುಂದಾಗಿದ್ದಾರೆ. ಯಾರಿಗಾದರೂ ದಮ್ ಇದ್ದರೆ ಬನ್ನಿ ಕುಳಿತುಕೊಳ್ಳಿ ಬಿಟ್ಟು ಕೊಡುತ್ತೇನೆ ಎಂದು ಸವಾಲೆಸೆದರು.

ಆದರೆ ಇದ್ಯಾವ ಕಸರತ್ತೂ ಟಿಕೆಟ್ ಸಿಗಲು ನೆರವಾಗಲಿಲ್ಲ. ಏಕೆಂದರೆ ನಾಲ್ಕೂವರೆ ವರ್ಷ ಮನೆಯಲ್ಲೇ ಕುಳಿತಿದ್ದು, ಮೋದಿ ಜಿಲ್ಲೆಗೆ ಬಂದಾಗಲೂ ಬಾರದೆ ಇದ್ದುದು, ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಪ್ರಚಾರಕ್ಕೆ ಬಾರದೆ, ಕಾಂಗ್ರೆಸ್ ಅಭ್ಯರ್ಥಿಗಳನ್ನು ಪರೋಕ್ಷವಾಗಿ ಬೆಂಬಲಿಸಿದ ಆರೋಪ. ಸಂವಿಧಾನ ತಿದ್ದುಪಡಿ ಗದ್ದಲ ಇಂತಹ ಗಂಭೀರ ಆರೋಪಗಳು ಅವರಿಂದ ಟಿಕೆಟ್ ಕಸಿದುಕೊಂಡಿತು.

ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಉಳಿದ ಆಕಾಂಕ್ಷಿಗಳೆಲ್ಲ ಮೋದಿಗೆ ಜೈ ಎಂದು ಪಕ್ಷದ ಅಭ್ಯರ್ಥಿ ಕಾಗೇರಿ ಪರ ಒಂದುಗೂಡಿದರು. ಹರಿಪ್ರಕಾಶ ಕೋಣೆಮನೆ, ರೂಪಾಲಿ ನಾಯ್ಕ, ಡಾ. ಜಿ.ಜಿ. ಹೆಗಡೆ, ನಾಗರಾಜ ನಾಯಕ ಹೀಗೆ ಎಲ್ಲರೂ ಕಾಗೇರಿ ಅವರೊಂದಿಗೆ ಅಂದರೆ ಪಕ್ಷ ನಿಷ್ಠರಾಗಿ ಮುಂದುವರಿದಿದ್ದಾರೆ.

ಆದರೆ ಟಿಕೆಟ್ ವಂಚಿತ ಅನಂತಕುಮಾರ ಹೆಗಡೆ ಈಗ ಏಕಾಂಗಿಯಾಗಿದ್ದಾರೆ. ಕ್ಷೇತ್ರದಲ್ಲಿ ಅವರದ್ದೆ ಆದ ಬೆಂಬಲಿಗರಿದ್ದಾರೆ. ಈಗ ಟಿಕೆಟ್ ನೀಡದ ಬಿಜೆಪಿಗೆ ಹಾಗೂ ಟಿಕೆಟ್ ಪಡೆದ ಕಾಗೇರಿಗೆ ಬುದ್ಧಿ ಕಲಿಸಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಪೂರಕವೋ ಎಂಬಂತೆ ಸಂಧಾನಕ್ಕೆ ಹೋದ ಬಿಜೆಪಿ ಮುಖಂಡರ ವಿರುದ್ಧ ಕೋಪಗೊಂಡಿರುವುದು ಹಾಗೂ ಕಾಗೇರಿ ಸಂಪರ್ಕ ಸಾಧಿಸಲು ಯತ್ನಿಸಿದರೂ ದೂರವೇ ಉಳಿದಿದ್ದಾರೆ.

ಇದರ ಜತೆಗೆ ತಮ್ಮ ಬೆಂಬಲಿಗರನ್ನು ಬಂಡಾಯ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ನಿರ್ಧರಿಸಿದ್ದಾರೆ ಎನ್ನುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನಂತಕುಮಾರ ಹೆಗಡೆ ಮುಂದಿನ ನಡೆ ಏನು ಎನ್ನುವುದು ಸ್ಪಷ್ಟವಾಗಬೇಕಿದೆ.