ಸಿದ್ದಯ್ಯ ಹಿರೇಮಠ

ಕನ್ನಡಪ್ರಭ ವಾರ್ತೆ ಕಾಗವಾಡ

ಸ್ವಾಭಿಮಾನ ಮತ್ತು ಪ್ರಾಮಾಣಿಕತೆಗೆ ಮಾದರಿಯಾಗಿರುವ ರಾಜ್ಯದ ಅತ್ಯಂತ ಸಣ್ಣ ಹಾಗೂ ಸುಶಿಕ್ಷಿತ ಸಮಾಜವಾಗಿರುವ ಜೈನ ಸಮುದಾಯ ಅಭಿವೃದ್ಧಿಗಾಗಿ ನಿಗಮ ಸ್ಥಾಪಿಸಬೇಕೆಂಬ ದಶಕಗಳ ಬಹುಬೇಡಿಕೆಗೆ ಈ ಬಾರಿಯೂ ಬಜೆಟ್‌ನಲ್ಲಿ ನಿಗಮ ಸೇರಿದಂತೆ ಜೈನ ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಸಲು ಪೂರಕವಾಗಿ ಯಾವುದೇ ವಿಶೇಷ ಘೋಷಣೆಗಳು ಆಗದೇ ಇರುವುದು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಜೈನ ಸಮುದಾಯದಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಜೈನ ಶಿಕ್ಷಣ ಸಂಸ್ಥೆಗಳಲ್ಲಿ ಮೊಟ್ಟೆ ವಿತರಿಸುವುದು ನಿಲ್ಲಿಸಬೇಕು. ಅಲ್ಪಸಂಖ್ಯಾತರಾಗಿರುವ ಜೈನ ಸಮುದಾಯದ ಮಕ್ಕಳಿಗೆ ಪ್ರತ್ಯೇಕ ವಸತಿ ನಿಲಯ ಮಂಜೂರು ಮಾಡುವುದು ಸೇರಿದಂತೆ ಸಮುದಾಯ ಅಭಿವೃದ್ಧಿಗಾಗಿ ಜೈನ ಅಭಿವೃದ್ಧಿ ನಿಗಮ ಸ್ಥಾಪನೆಗಾಗಿ ಕಳೆದ ದಶಕಗಳಿಂದ ಮನವಿ ಮಾಡಿಕೊಂಡರೂ ಬೇಡಿಕೆಗಳು ಬೇಡಿಕೆಗಳಾಗಿಯೇ ಮುಂದುವರೆದಿದೆ.

2024ರ ಡಿಸೆಂಬರ್‌ನಲ್ಲಿ ಬೆಳಗಾವಿ ತಾಲೂಕಿನ ಬಸ್ತವಾಡದಲ್ಲಿ ಕರ್ನಾಟಕ ಸಮಸ್ತ ಜೈನ ಅಲ್ಪಸಂಖ್ಯಾತರ ಹೋರಾಟ ಸಮಿತಿ ಆಯೋಜಿಸಿದ್ದ ಜೈನ ಸಮಾವೇಶದಲ್ಲಿ ಭಾಗವಹಿಸಿದ್ದ ಡಿಸಿಎಂ ಡಿ.ಕೆ.ಶಿವಕುಮಾರ ಅವರು, ಜೈನ ಸಮುದಾಯಕ್ಕೆ ಅಲ್ಪಸಂಖ್ಯಾತ ಸ್ಥಾನಮಾನ ಕೊಟ್ಟಿದ್ದು ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ. ಮುಂದಿನ ಸಂಪುಟ ಸಭೆಯಲ್ಲಿ ಅವುಗಳನ್ನು ಈಡೇರಿಸಲು ಪ್ರಯತ್ನಿಸಲಾಗುವುದು. ನಿಮ್ಮ ಯಾವುದೇ ಬೇಡಿಕೆ ಈಡೇರಿಸಲು ನಮ್ಮ ಸರ್ಕಾರ ಬದ್ಧವಿದೆ. ನಮ್ಮ ಮೇಲೆ ಭರವಸೆ ಇಡಿ ಎಂದು ಸಮಾಧಾನ ಮಾಡಿದ್ದು ಬಿಟ್ಟರೆ ಇಲ್ಲಿಯವರೆಗೂ ಏನೂ ಆಗಿಲ್ಲ. ಸದ್ಯದ ಬಜೆಟ್‌ನಲ್ಲಿ ನಿಗಮ ಘೋಷಣೆಯಾಗದೇ ಇರುವುದು ಕಾಂಗ್ರೆಸ್‌ ಸರ್ಕಾರದ ಮೇಲೆ ಅಸಮಾಧಾನ ಹೊರಹಾಕುವಂತಾಗಿದೆ.


ಬಸ್ತವಾಡ ಸಮಾವೇಶದ ನೇತೃತ್ವ ವಹಿಸಿದ್ದ ರಾಷ್ಟ್ರಸಂತ ಗುಣಧರನಂದಿ ಮಹಾರಾಜರು ಜೈನ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆಯಾಗಬೇಕೆಂಬ ಕನಸನ್ನು ಹೊರಹಾಕಿದ್ದರು. ಅಲ್ಲದೇ, ನಮ್ಮ ಸಮುದಾಯದ ಬೇಡಿಕೆಗಳನ್ನು ಸರ್ಕಾರ 20 ದಿನಗಳೊಳಗೆ ಈಡೇರಿಸಬೇಕು. ಜೈನ ಅಭಿವೃದ್ಧಿ ನಿಗಮ ಸ್ಥಾಪಿಸಿ ಪ್ರಥಮ ಹಂತವಾಗಿ ಕನಿಷ್ಠ ₹10 ಕೋಟಿಯಾದರೂ ಮೀಸಲಿಡಬೇಕೆಂದು ತಾಕಿತು ಮಾಡಿದ್ದರು. ಸಮಾವೇಶವಾಗಿ 2 ವರ್ಷ ಸಂದರೂ ರಾಜ್ಯ ಕಾಂಗ್ರೆಸ್‌ ಸರ್ಕಾರ ಮಾತ್ರ ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೇ ಜೈನ ಸಮುದಾಯ ಕಡೆಗಣಿಸುತ್ತಿದೆ ಎಂದು ಸಮಾಜದ ಹಿರಿಯ ಮುಖಂಡರು ಆಕ್ರೋಶ ಹೊರಹಾಕುತ್ತಿದ್ದಾರೆ.-----

ಕೋಟ್‌..

ರಾಜ್ಯದಲ್ಲಿ ಒಕ್ಕಲಿಗ, ವಿಶ್ವಕರ್ಮ, ಉಪ್ಪಾರ, ಸವಿತಾ, ಮಡಿವಾಳ, ಕಾಡುಗೊಲ್ಲ, ಆರ್ಯವೈಶ್ಯ, ಬ್ರಾಹ್ಮಣ, ಗಾಣಿಗ, ಮರಾಠ, ಕುಂಬಾರ, ಡಾ.ಬಿ.ಆರ್.ಅಂಬೇಡ್ಕರ್, ದೇವರಾಜ ಅರಸು ಸೇರಿದಂತೆ ವೀರಶೈವ ಸಮಾಜ ಅಭಿವೃದ್ಧಿಗಾಗಿ ಈಗಾಗಲೇ ಆಯಾ ಸಮಾಜದ ಅಭಿವೃದ್ಧಿ ನಿಗಮ ಸ್ಥಾಪಿಸಿ ಸಮಾಜದ ಶ್ರೇಯೋಭಿವೃದ್ಧಿಗೆ ಶ್ರಮಿಸಲಾಗುತ್ತಿದೆ. ಆದರೆ, ಅಲ್ಪಸಂಖ್ಯಾತರಾಗಿರುವ ಜೈನ ಸಮುದಾಯ ನಿಗಮ ಸ್ಥಾಪನೆಗೆ ಸರ್ಕಾರ ಕಾಳಜಿ ವಹಿಸದೇ ಇರುವುದು ನಮ್ಮ ಸಮಾಜವನ್ನು ಮತ್ತಷ್ಟು ಕಡೆಗಣಿಸಿದೆ. ಪ್ರಸಕ್ತ ಅಧಿವೇಶನದಲ್ಲಿಯೇ ಜೈನ ನಿಗಮ ಮಂಡಳಿಯನ್ನು ಘೋಷಣೆ ಮಾಡಬೇಕು. ಇಲ್ಲವಾದರೇ ಬೇಡಿಕೆ ಈಡೇರಿಕೆಗೆ ಉಗ್ರ ಹೋರಾಟ ಅನಿವಾರ್ಯವಾಗುತ್ತದೆ.

-ಅರುಣ ಎಸ್‌.ಯಲಗುದ್ರಿ, ಭಾರತೀಯ ಜೈನ ಸಂಘಟನೆಯ ರಾಜ್ಯ ಸಂಚಾಲಕರು.