ಸಾರಾಂಶ
ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್‌ರಿಗೆ ಜೈನ, ಪಾಟೇದಾರ, ವಿಷ್ಣು ಸಮಾಜದವರು ಬೆಂಬಲ ಸೂಚಿಸಿದ್ದಾರೆ.
ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್‌ರಿಗೆ ಜೈನ, ಪಾಟೇದಾರ, ವಿಷ್ಣು ಸಮಾಜದವರು ಬೆಂಬಲ ಸೂಚಿಸಿದ್ದಾರೆ.
ನಗರದ ರಾಜ್ ರೆಸಿಡೆನ್ಸಿಯಲ್ಲಿ ಹಾಗೂ ಕಲ್ಲೇಶ್ವರ ಮಿಲ್‌ನ ಆವರಣದಲ್ಲಿ ನಡೆದ ಜೈನ, ಪಾಟೀದಾರ, ವಿಷ್ಣು ಸಮಾಜದವರ ಸಭೆಗಳಲ್ಲಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರ ಸಮ್ಮುಖದಲ್ಲಿ ಸಮಾಜದ ಮುಖಂಡರು ಡಾ.ಪ್ರಭಾ ಮಲ್ಲಿಕಾರ್ಜುನ್‌ರಿಗೆ ಬೆಂಬಲ ಘೋಷಣೆ ಮಾಡಿದರು.ಸಭೆಗೆ ವಿಶೇಷ ಆಹ್ವಾನಿತರಾಗಿದ್ದ ಸಚಿವ ಆರ್.ಬಿ.ತಿಮ್ಮಾಪುರ, ದೇಶದಲ್ಲಿ 10 ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಂದಿನಿಂದ ಇಂದಿನವರೆಗೂ ಸುಳ್ಳು ಹೇಳಿಕೊಂಡೇ, ಅಧಿಕಾರಾವಧಿ ಮುಗಿಸಿದೆ. ಇದೀಗ ದೇಶ, ರಾಜ್ಯ, ದಾವಣಗೆರೆ ಕ್ಷೇತ್ರದ ಮತದಾರರು ಬದಲಾವಣೆ ಬಯಸಿದ್ದಾರೆ. ದಾವಣಗೆರೆಯಿಂದ ಡಾ.ಪ್ರಭಾ ಮಲ್ಲಿಕಾರ್ಜುನರನ್ನು ಗೆಲ್ಲಿಸಿ, ಸಂಸದರಾಗಿ ಮಾಡುವ ಸಂಕಲ್ಪ ಮಾಡಿದ್ದಾರೆ ಎಂದರು.
ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಮಾತನಾಡಿ, ಪ್ರತಿ ಬಾರಿಯೂ ನಮ್ಮನ್ನು ಬೆಂಬಲಿಸುತ್ತಾ ಬಂದಿರುವ ಸಮಾಜಗಳು ಲೋಕಸಭೆ ಚುನಾವಣೆಯಲ್ಲೂ ಬೆಂಬಲಕ್ಕೆ ನಿಲ್ಲುತ್ತೀರೆಂಬ ವಿಶ್ವಾಸವಿದೆ. ದಾವಣಗೆರೆ ಜಿಲ್ಲೆ, ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯ ಮತ್ತಷ್ಟು ಪರಿಣಾಮಕಾರಿಯಾಗಿ ಕೈಗೊಳ್ಳಲು ಡಾ.ಪ್ರಭಾ ಮಲ್ಲಿಕಾರ್ಜುನರನ್ನು ಇಲ್ಲಿಂದ ಆಯ್ಕೆ ಮಾಡಿ, ಲೋಕಸಭೆಗೆ ಕಳಿಸುವಂತೆ ಮನವಿ ಮಾಡಿದರು. ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಮಾತನಾಡಿ, ದಾವಣಗೆರೆಯಲ್ಲಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಸಾಕಷ್ಟು ಅಭಿವೃದ್ಧಿ ಕಾರ್ಯಕೈಗೊಂಡಿದ್ದಾರೆ. ಸಂಕಷ್ಟಕ್ಕೆ ಸಿಲುಕಿರುವವರು ನಮ್ಮ ಬಳಿಗೆ ಬರುತ್ತಿದ್ದಾರೆ. ಇದು ನಮ್ಮ ಮನೆತನಕ್ಕೆ ದಾವಣಗೆರೆಯಲ್ಲಿ ಜನತೆಗೆ ಇರುವ ಭರವಸೆಯಾಗಿದೆ ಎಂದು ವಿವರಿಸಿದರು. ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ಚಂಪಾಲಾಲ್ ಡೆಲಿರಿಯಾ, ಶೈಲಾ ಮಹೇಂದ್ರ ಕುಮಾರ, ಜಯಚಂದ್ರ ಜೈನ್, ಸಾವನ್ ಜೈನ್, ರಾಜು ಭಂಡಾರಿ, ಪ್ರವೀಣ ಪಿಂಟು, ಕಿಶೋರಕುಮಾರ, ವಿಜಯಕುಮಾರ ಜೈನ್, ಕುಂದನ್ ಮಲ್, ಈಶ್ವರಸಿಂಗ್, ನಾಕೋಡ ಸುರೇಶ, ಡಾ.ರಮೇಶ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ ಕೆ.ಶೆಟ್ಟಿ, ಎ.ನಾಗರಾಜ ಮತ್ತಿತರರಿದ್ದರು.