ಜಿಲ್ಲಾದ್ಯಂತ ಅನುರಣಿಸಿದ ಜೈಶ್ರೀರಾಮ್‌

| Published : Jan 23 2024, 01:47 AM IST

ಸಾರಾಂಶ

ಜಿಲ್ಲಾದ್ಯಂತ ದೇವಸ್ಥಾನಗಳಲ್ಲಿ ರಾಮ ಜಪ, ಹೋಮ ಹವನ, ಅನ್ನ ಸಂತರ್ಪಣೆಯೊಂದಿಗೆ ಜೈಶ್ರೀರಾಮ್‌ ಘೋಷಣೆ ಅನುರಣಿಸಿತು.

ಕನ್ನಡಪ್ರಭ ವಾರ್ತೆ ಹಾವೇರಿ

ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಹಾಗೂ ಬಾಲರಾಮನ ಮೂರ್ತಿ ಪ್ರಾಣಪ್ರತಿಷ್ಠಾಪನೆ ನಿಮಿತ್ತ ಜಿಲ್ಲಾದ್ಯಂತ ದೇವಸ್ಥಾನಗಳಲ್ಲಿ ರಾಮ ಜಪ, ಹೋಮ ಹವನ, ಅನ್ನ ಸಂತರ್ಪಣೆಯೊಂದಿಗೆ ಜೈಶ್ರೀರಾಮ್‌ ಘೋಷಣೆ ಅನುರಣಿಸಿತು.

ಅತ್ತ ಅಯೋಧ್ಯೆಯಲ್ಲಿ ರಾಮಲಲ್ಲಾನ ಮೂರ್ತಿ ಪ್ರತಿಷ್ಠಾಪನೆ ವಿಜೃಂಭಣೆಯಿಂದ ನಡೆಯುತ್ತಿದ್ದರೆ, ಜಿಲ್ಲೆಯ ದೇವಸ್ಥಾನಗಳಲ್ಲಿ ರಾಮತಾರಕ ಹೋಮ, ರಾಮ ಭಜನೆ, ಜಪ, ವಿಶೇಷ ಪೂಜೆ ಶ್ರದ್ಧಾ ಭಕ್ತಿಯಿಂದ ನಡೆದವು. ನಗರ, ಗ್ರಾಮೀಣ ಪ್ರದೇಶಗಳೆನ್ನದೇ ಓಣಿ ಓಣಿಗಳಲ್ಲಿ ರಾಮನ ಭಾವಚಿತ್ರವಿಟ್ಟು ಪೂಜೆ ನೆರವೇರಿಸಲಾಯಿತು. ಜಿಲ್ಲಾದ್ಯಂತ ಹಬ್ಬದ ವಾತಾವಣ ನಿರ್ಮಾಣಗೊಂಡು ವಿವಿಧ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿದವು.

ನಗರದ ರಾಮ ಮಂದಿರ, ವಿವಿಧ ದೇವಸ್ಥಾನ ಸೇರಿದಂತೆ ಪ್ರಮುಖ ವೃತ್ತಗಳಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಭಕ್ತಿ ಸಿಂಚನದಲ್ಲಿ ಮಿಂದು ಪುಳಕಿತರಾದರು.

ವಿದ್ಯುತ್ ಅಲಂಕಾರದಿಂದ ಸಿಂಗರಿಸಿದ್ದ ನಗರದ ವಿವಿಧ ದೇವಸ್ಥಾನಗಳಲ್ಲಿ ಬೆಳ್ಳಂಬೆಳಗ್ಗೆ ವಿಶೇಷ ಪೂಜೆ ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಇಡೀ ದಿನ ನಡೆದವು. ಶ್ರೀ ರಾಮ ಹಾಗೂ ಹನುಮನ ಧ್ವಜ ಹಿಡಿದುಕೊಂಡು ರಾಮ ಭಕ್ತರು ಜೈ ಶ್ರೀ ರಾಮ, ಜೈ ಹನುಮಾನ ಎಂದು ಘೋಷಣೆ ಕೂಗಿ ಭಕ್ತಿಯ ಪರಾಕಾಷ್ಠೆ ಮೆರೆದರು. ಪ್ರತಿ ಮನೆ ಮನೆಗಳಲ್ಲೂ ವಿಶೇಷವಾಗಿ ರಾಮನ ಪೂಜೆ, ಪುರಸ್ಕಾರ ನೆರವೇರಿಸಲಾಯಿತು. ಎಲ್ಲರ ಮನೆಯಲ್ಲಿ ಒಂದು ರೀತಿಯ ಹಬ್ಬದ ವಾತಾವರಣ ಕಂಡು ಬಂದಿತು.

ನಗರದ ರಾಮ ಮಂದಿರದಲ್ಲಿ ಅಯೋಧ್ಯೆಯಲ್ಲಿ ಜರುಗಿದ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ನೇರ ಪ್ರಸಾರದ ವೀಕ್ಷಣೆಗಾಗಿ ಬೃಹತ್ ಟಿವಿ ಅಳವಡಿಸಲಾಗಿತ್ತು. ರಾಣಿಬೆನ್ನೂರ ನಗರದ ಕುರುಬರಗೇರಿ ಮಾಯಮ್ಮ ದೇವಸ್ಥಾನ ಬಳಿ ಹಾಗೂ ರಂಗನಾಥ ನಗರದ ಬಾಬಾರಾಮದೇವ ಗುಡಿ ಬಳಿ ಅಳವಡಿಸಲಾಗಿದ್ದ ಎಲ್‌ಇಡಿ ಪರದೆಯಲ್ಲಿ ಶ್ರೀರಾಮ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮವನ್ನು ವೀಕ್ಷಿಸುವ ಮೂಲಕ ಕಣ್ತುಂಬಿಕೊಂಡರು.

ಹಾವೇರಿಯ ಶ್ರೀರಾಮ ದೇವಸ್ಥಾನದಲ್ಲಿ ಬೆಳಗ್ಗೆ ೮ಕ್ಕೆ ಶ್ರೀರಾಮನಿಗೆ ಅಭಿಷೇಕ, ಶ್ರೀರಾಮ ತಾರಕ ಯಾಗದ ಪುಣ್ಯಾಹ ವಾಚನ, ತ್ರಯೋದಶ ಸಹಸ್ರ ಹೋಮ, ಮಧ್ಯಾಹ್ನ ಪೂರ್ಣಾಹುತಿ ನಡೆಯಿತು. ನಂತರ ಭಕ್ತಾದಿಗಳಿಗೆ ಮಹಾಪ್ರಸಾದ ವಿತರಿಸಲಾಯಿತು. ಸಂಜೆ ಮಹಿಳಾ ಮಂಡಳದವರಿಂದ ರಾಮಾಯಣದ ಆಯ್ದಭಾಗ, ಸೀತೆ ಪೂನೀತೆ ನಾಟಕ ಪ್ರದರ್ಶನಗೊಂಡಿತು. ರಾಮಜನ್ಮದ ಗೀತೆಯೊಂದಿಗೆ ಕೋಲಾಟ, ಅಷ್ಟಾವಧಾನ, ಮಹಾಮಂಗಳಾರತಿ ಕಾರ್ಯಕ್ರಮ ಸಂಭ್ರಮದಿಂದ ನೆರವೇರಿತು.

ರಾಣಿಬೆನ್ನೂರು ತಾಲೂಕಿನ ಸುಣಕಲ್‌ಬಿದರಿ ಗ್ರಾಮದ ಶ್ರೀ ಬಸವೇಶ್ವರ, ಆಂಜನೇಯ ಸ್ವಾಮಿ ಹಾಗೂ ಗ್ರಾಮದ ವಿವಿಧ ದೇವಸ್ಥಾನಗಳಲ್ಲಿ ಬ್ರಾಹ್ಮೀ ಮೂರ್ತದಲ್ಲಿ ರುದ್ರಾಭಿಷೇಕ ಸೇರಿದಂತೆ ವಿಶೇಷ ಪೂಜೆಗಳು ಜರುಗಿದವು. ಮಧ್ಯಾಹ್ನ ಆಂಜನೇಯ ದೇವಸ್ಥಾನದ ಗೋಪುರಕ್ಕೆ ಭಗವಾನ್ ಧ್ವಜ ಏರಿಸಲಾಯಿತು. ಸಂಜೆ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಅನ್ನ ಸಂತರ್ಪಣೆ ನಡೆಯಿತು.

ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಗಾಯತ್ರಿ ತಪೋಭೂಮಿಯಲ್ಲಿ ಅಯೋಧ್ಯೆ ಬಾಲರಾಮ್ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿದವು. ಬೆಳಗ್ಗೆ ರಾಮ ತಾರಕ ಹಾಗೂ ಗಾಯತ್ರಿ ಹೋಮ, ಶ್ರೀ ರಾಮ ಭಜನೆ, ರಾಮ ರಕ್ಷ ಪಠಣ, ಹನುಮಾನ್ ಚಾಲೀಸ್ ಪಾಠಣ ನಡೆಯಲಿತು. ಸಂಜೆ ೭ಕ್ಕೆ ವಿಜೃಂಭಣೆಯಿಂದ ದೀಪೋತ್ಸವ ನಡೆಯಿತು.

ಜಿಲ್ಲೆಯ ಜನತೆ ದಿನವಿಡಿ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಸಂಜೆ ಮನೆಗಳಲ್ಲಿ ದೀಪ ಬೆಳಗುವ ಮೂಲಕ ಧನ್ಯತಾ ಭಾವ ಮೆರೆದರು.

ಶ್ರೀರಾಮ ಭಾವಚಿತ್ರದ ಮೆರವಣಿಗೆ:

ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಹಾಗೂ ಶ್ರೀರಾಮ ಮೂರ್ತಿ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ನಗರದಲ್ಲಿ ಶ್ರೀರಾಮ ಭಾವಚಿತ್ರದ ಮೆರವಣಿಗೆ ಸೋಮವಾರ ಸಂಜೆ ವಿಜೃಂಭಣೆಯಿಂದ ಜರುಗಿತು.

ಶ್ರೀರಾಮ ದೇವರ ಗುಡಿಯಿಂದ ಸಕಲ ವಾದ್ಯ ವೈಭವದೊಂದಿಗೆ ಆರಂಭಗೊಂಡ ಮೆರವಣಿಗೆ ಗದ್ದಿಗೇರ ಓಣಿ, ಕಾಮಣ್ಣನ ಕಟ್ಟೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಶ್ರೀರಾಮ ದೇವರ ಗುಡಿಗೆ ಮರಳಿತು. ಮೆರವಣಿಗೆಯಲ್ಲಿ ನೂರಾರು ಭಕ್ತಾದಿಗಳು ಪಾಲ್ಗೊಂಡು ಜೈ ಶ್ರೀರಾಮ ಘೋಷಣೆ ಕೂಗಿದರು.

ಶ್ರೀರಾಮನ ಪೂಜೆ; ಐವರನ್ನು ವಶಕ್ಕೆ ಪಡೆದ ಪೊಲೀಸರು:

ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಂಕಾಪುರ ಬಸ್ ನಿಲ್ದಾಣದ ಮುಂಭಾಗ ಗಣೇಶೋತ್ಸವ ಆಚರಿಸುವ ಸ್ಥಳದಲ್ಲಿ ಶ್ರೀರಾಮನ ಭಾವಚಿತ್ರವಿಟ್ಟು ಪೂಜೆಗೆ ಮುಂದಾಗಿದ್ದ ಐವರು ಆರ್‌ಎಸ್‌ಎಸ್ ಹಾಗೂ ಹಿಂದೂ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದ ಸೋಮವಾರ ಘಟನೆ ನಡೆದಿದೆ.

ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಹಾಗೂ ಶ್ರೀರಾಮ ಮೂರ್ತಿ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಬಂಕಾಪುರದಲ್ಲಿ ಶ್ರೀರಾಮನ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಲು ಮುಂದಾಗಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಸ್ಥಳೀಯ ಪೊಲೀಸರು ಪೂಜೆಗೆ ಅನುಮತಿ ಪಡೆದಿಲ್ಲವೆಂದು ಆರ್‌ಎಸ್‌ಎಸ್ ಸಂಚಾಲಕ ಗಂಗಾಧರ ಪಟ್ಟನಶೆಟ್ಟರ್, ಮುಖಂಡರಾದ ಸೋಮಶೇಖರ ಗೌರಿಮಠ, ವೀರಣ್ಣ ಬಳೆಗಾರ, ಮೋಹನ ಮಿರಜಕರ, ಹನುಮಂತ ಹೊಸಮನಿ ಸೇರಿದಂತೆ ಐವರು ಹಿಂದೂ ಕಾರ್ಯಕರ್ತರು ವಶಕ್ಕೆ ಪಡೆದರು. ಪರಿಸ್ಥಿತಿ ಸುಧಾರಿಸಿದ ಐವರನ್ನು ಬಳಿಕ ಪೊಲೀಸರು ಬಿಡುಗಡೆ ಮಾಡಿದರು.