ಶಿಲ್ಪಕಲೆಗಳಲ್ಲಿ ದೇವರ ತೋರಿದ ಜಕಣಾಚಾರಿ: ಚನ್ನಬಸಪ್ಪ

| Published : Jan 02 2024, 02:15 AM IST

ಸಾರಾಂಶ

ಶಿಲೆಯೂ ಮಾತಾಡುತ್ತದೆ ಎಂಬುದನ್ನು ತಿಳಿಸಿಕೊಟ್ಟವರು ಅಮರಶಿಲ್ಪಿ ಜಕಣಾಚಾರಿ. ಜಕ್ಕಣ್ಣ ಕೆತ್ತಿದ ಶಿಲ್ಪಕಲೆಗಳಿಂದಾಗಿ ಭಾರತ ವಿಶ್ವವನ್ನೇ ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಭಾರತೀಯರೆಲ್ಲ ದೇವರನ್ನು ಪ್ರತ್ಯಕ್ಷವಾಗಿ ಕಂಡಿಲ್ಲ, ಆದರೆ, ಶಿಲ್ಪಿಲೆಗಳಲ್ಲಿ ದೇವರು ಹೀಗೇ ಇರೋದು ಎಂಬ ನಂಬಿಕೆ ಬಲವಾಗಿಸಿರುವುದು ಇದೇ ಜಕಣಾಚಾರಿ ಎಂದು ಶಾಸಕ ಎಚ್‌.ಎಸ್‌. ಚನ್ನಬಸಪ್ಪ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ತಮ್ಮ ಶಿಲ್ಪಕಲೆಯ ಮೂಲಕ ಇಡೀ ಜಗತ್ತಿಗೆ ದೇವರು ಹೇಗಿದ್ದಾನೆ ಎಂದು ತೋರಿಸಿಕೊಟ್ಟವರು ಅಮರಶಿಲ್ಪಿ ಜಕಣಾಚಾರಿ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಅಭಿಪ್ರಾಯಪಟ್ಟರು.

ನಗರದ ಕುವೆಂಪು ರಂಗಮಂದಿರದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ವಿಶ್ವಕರ್ಮ ಮಹಾಸಭಾ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮದು ಸಾಂಸ್ಕೃತಿಕ ನೆಲೆಗಟ್ಟಿನ ಮತ್ತು ಉನ್ನತ ಪರಂಪರೆಯ ರಾಷ್ಟ್ರವಾಗಿದ್ದು, ತಮ್ಮದೇ ಆದ ರೀತಿಯಲ್ಲಿ ಶಿಲ್ಪಕಲೆಯ ಮೂಲಕ ದೇಶ ಕಟ್ಟುವ ಕಾರ್ಯವನ್ನು ಜಕಣಾಚಾರಿಯಂತಹ ಶಿಲ್ಪಿಗಳು ಮಾಡಿದ್ದಾರೆ ಎಂದರು.

ಇಂತಹ ಶಿಲ್ಪಿಗಳು ದೇಶದ ಶಿಲ್ಪಕಲೆಗೆ ದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ನಮ್ಮ ದೇಶಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಶಿಲ್ಪಕಲೆ ದೇಶದ ಅಸ್ಮಿತೆ. ದೇವಾಲಯಗಳ ಬಗ್ಗೆ ಶ್ರದ್ಧೆ, ನಂಬಿಕೆ ಹೊಂದಿದ್ದೇವೆ. ಹಿಂದೆ ಸನಾತನ, ದೇವನಿರ್ಮಿತ ದೇಶ ಸೋಮನಾಥಪುರ ಸೇರಿದಂತೆ ಅಯೋಧ್ಯ, ಕಾಶಿ ವಿಶ್ವನಾಥ ಹೀಗೆ ಅನೇಕ ದೇವಾಲಯಗಳನ್ನು ಭಗ್ನಗೊಳಿಸಲಾಗಿದೆ. ಹೋರಾಟದ ಮೂಲಕ ನಮ್ಮ ದೇವಾಲಯಗಳು ಮತ್ತು ಪರಂಪರೆಯನ್ನು ಉಳಿಸಿಕೊಂಡಿದ್ದೇವೆ ಎಂದು ಹೇಳಿದರು.

ವಿಶೇಷ ಉಪನ್ಯಾಸ ನೀಡಿದ ಶೃಂಗೇರಿಯ ಕನ್ನಡ ಪ್ರಾಧ್ಯಾಪಕ ಡಾ. ಕೆ.ಎಸ್.ವೆಂಕಪ್ಪ ಆಚಾರ್ಯ ಮಾತನಾಡಿ, ನಮ್ಮ ದೇಶದಲ್ಲಿರುವ ಕಲೆ, ಕೌಶಲ್ಯ, ಸಾಧನೆಗಳಿಂದಾಗಿ ವಿಶ್ವ ಇಂದು ನಮ್ಮನ್ನು ಗುರುತಿಸುತ್ತಿದೆ. ಆದರೆ, ಹಿಂದಿನ ಅನೇಕ ಶಿಲ್ಪಕಲೆಗಳ ನಿರ್ಮಾತೃಗಳನ್ನು ಎಲ್ಲೂ ತೋರಿಸಿಲ್ಲ. ಕಲೆಯ ನಿರ್ಮಾತೃಗಳನ್ನು ಜಗತ್ತಿಗೆ ತೋರಿಸಬೇಕಿದೆ. ಶಿಲ್ಪಿ ಅಥವಾ ಕಲಾವಿದನನ್ನು ಮುಂದಿನ ಪೀಳಿಗೆಗೆ ತಿಳಿಯಪಡಿಸಬೇಕಿದ್ದು, ಈ ಸಂಸ್ಮರಣಾ ದಿನಚರಣೆಯು ಇಂತಹ ಶಿಲ್ಪಿಗಳನ್ನು ಸಂಸ್ಮರಿಸಲು ಮತ್ತು ಸಮುದಾಯದವರೆಲ್ಲ ಒಟ್ಟುಗೂಡಲು ಒಂದು ಉತ್ತಮ ವೇದಿಕೆಯಾಗಿದೆ ಎಂದರು.

12ನೇ ಶತಮಾನದಲ್ಲಿ ತುಮಕೂರು ಬಳಿಯ ಕ್ರೀಡಾಪುರದಲ್ಲಿ ಜಕಣಾಚಾರಿಯವರು ಜನಿಸಿದರು. ವಿಶ್ವ ಪ್ರಸಿದ್ಧ ಬೇಲೂರು, ಹಳೇಬೀಡು, ಸೋಮನಾಥ ದೇವಾಲಯ ನಿರ್ಮಾಣ ಮಾಡಿ ತಮ್ಮ ಕಲೆ, ಕೌಶಲ್ಯ, ಜಾಣ್ಮೆ, ಶ್ರದ್ಧೆ ಮತ್ತು ಹಠವನ್ನು ಈ ಶಿಲ್ಪಕಲೆ ಮೂಲಕ ವಿಶ್ವಕ್ಕೇ ಸಾರಿದ್ದಾರೆ. ನಾವೆಲ್ಲ ಈ ಕುರಿತು ಚಿಂತಿಸಬೇಕು ಎಂದರು.

ಅತ್ಯಂತ ಚಾಣಾಕ್ಷ, ಕುಶಲಿ ಜಕಣಾಚಾರಿ ಆವರ ನೇತೃತ್ವದಲ್ಲಿ ಸಮುದಾಯದ ಅನೇಕ ಶಿಲ್ಪಿಗಳು ಕಾರ್ಯನಿರ್ವಹಿಸಿದ್ದು, ದೇಶಕ್ಕೆ ವಿಶ್ವಕರ್ಮ ಸಮಾಜದ ಕೊಡುಗೆ ಅನನ್ಯವಾಗಿದೆ. ಅಯೋಧ್ಯೆಯ ರಾಮಮಂದಿರ ನಿರ್ಮಾಣದ ಭಾಗವಾಗಿ ರಥವನ್ನು ಹಾಗೂ ಒಂದು ಮೂರ್ತಿಯನ್ನು ನಮ್ಮ ಸಮುದಾಯದವರು ನಿರ್ಮಿಸಿರುವುದು ಹೆಮ್ಮೆಯ ವಿಷಯ. ನಮ್ಮ ಕೌಶಲ್ಯ, ಪ್ರತಿಭೆಗೆ ಜನಮನ್ನಣೆ ಸಿಗುತ್ತಿದ್ದು, ಈ ಕಲೆಯನ್ನು ಮುಂದಿನ ಪೀಳಿಗೆಗೆ ಕೊಂಡಯ್ಯಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಮಾಜದ ಇಬ್ಬರು ಸಾಧಕರಾದ ನವೀನ್ ಮತ್ತು ಶ್ರೀ ಭರತ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್‌.ಉಮೇಶ್ ಸ್ವಾಗತಿಸಿದರು. ಜಿಲ್ಲಾ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಆಗರದಹಳ್ಳಿ ನಿರಂಜನಮೂರ್ತಿ, ಗೌರವಾಧ್ಯಕ್ಷ ಸತ್ಯನಾರಾಯಣ್, ಕಾರ್ಯದರ್ಶಿ ಎನ್.ಟಿ.ಬಸವರಾಜ್, ಜಿಲ್ಲಾ ವಿಶ್ವಕರ್ಮ ಬ್ರಾಹ್ಮಣರ ಸಮಾಜದ ಅಧ್ಯಕ್ಷ ಸೋಮಾಚಾರಿ, ಮಾಜಿ ನಗರಸಭಾ ಉಪಾಧ್ಯಕ್ಷ ರಮೇಶ್, ಕಾಳಿಕಾಂಬ ದೇವಸ್ಥಾನದ ಶ್ರೀನಿವಾಸ ಮೂರ್ತಿ ಮತ್ತಿತರರು ಇದ್ದರು.

- - - -1ಎಸ್‌ಎಂಜಿಕೆಪಿ03:

ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯನ್ನು ಶಾಸಕ ಎಸ್.ಎನ್.ಚನ್ನಬಸಪ್ಪ ಉದ್ಘಾಟಿಸಿದರು.