ಸಾರಾಂಶ
ಕನ್ನಡಪ್ರಭ ವಾರ್ತೆ ಬಂಟ್ವಾಳ
ಜಕ್ರಿಬೆಟ್ಟು ಎಂಬಲ್ಲಿ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಾಣಗೊಂಡ ಕಿಂಡಿ ಅಣೆಕಟ್ಟು ನೀರು ಸಂಗ್ರಹಣೆಗಾಗಿ ಗೇಟ್ ಅಳವಡಿಸಿದ ಪರಿಣಾಮವಾಗಿ, ಸ್ಥಳೀಯ ಕೃಷಿಕರ ತೋಟಗಳಿಗೆ ನೀರು ನುಗ್ಗಿದ ಘಟನೆಗೆ ಸಂಬಂಧಿಸಿದಂತೆ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಸೋಮವಾರ ಸ್ಥಳಕ್ಕೆ ಆಧಿಕಾರಿಗಳೊಂದಿಗೆ ಆಗಮಿಸಿ ಗೇಟ್ ತೆರವು ಮಾಡಿಸಿ, ಸಮಸ್ಯೆಗೆ ತಾತ್ಕಾಲಿಕ ಮುಕ್ತಿ ದೊರಕಿಸಿದ್ದಾರೆ.ಅಣೆಕಟ್ಟಿನ 21 ಗೇಟ್ ಗಳನ್ನು ಈಗಾಗಲೇ ಅಳವಡಿಸಿ, ಸುಮಾರು 5 ಮೀ.ನಷ್ಟು ನೀರು ಶೇಖರಣೆಯಾಗಿತ್ತು. ನೇತ್ರಾವತಿ ನದಿಯಲ್ಲಿ ನೀರು ತುಂಬಿ ಹಚ್ಚಹಸಿರು ಕಾಣತೊಡಗಿದಂತೆ ಇತ್ತ ನದಿ ಭಾಗದ ತಗ್ಗು ಪ್ರದೇಶವಾದ ಮಣಿಹಳ್ಳ, ಪಣೆಕಲ ಹೀಗೆ ಕೆಲವು ಕಡೆಗಳಲ್ಲಿ ಅಡಕೆ ತೋಟಗಳಿಗೆ ನೀರು ನುಗ್ಗಿದ್ದು, ಸುಮಾರು ಒಂದುವರೆ ಅಡಿಯಷ್ಟು ನೀರು ತೋಟದಲ್ಲಿ ಶೇಖರಣೆಯಾಗಿತ್ತು.
ಅಡಕೆ ತೋಟದಲ್ಲಿ ನಿರಂತರವಾಗಿ ಮೂರು ತಿಂಗಳ ಕಾಲ ನೀರು ನಿಂತರೆ ಮರಗಳು ಸಾಯುವುದು ನಿಶ್ಚಿತ ಎಂಬ ಆತಂಕ ಕೃಷಿಕರಿಗೆ ಉಂಟಾಗಿತ್ತು.ಜಕ್ರಿಬೆಟ್ಟಿನಲ್ಲಿರುವ ಕಿಂಡಿ ಅಣೆಕಟ್ಟಿನಲ್ಲಿ ಪ್ರಾಯೋಗಿಕವಾಗಿ ನೀರು ನಿಲ್ಲಿಸಿದ ಸಂದರ್ಭದಲ್ಲಿ ಇದೀಗ ಕೃಷಿಕರ ತೋಟಗಳಿಗೆ ನೀರು ನುಗ್ಗಿದೆಯಾದರೂ ಈ ಬಗ್ಗೆ ಮುಂದಿನ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಶಾಸಕರು ಸೋಮವಾರ ಮಂಗಳೂರಿನಲ್ಲಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ನಡೆದ ಕೆ.ಡಿ.ಪಿ.ಸಭೆಯಲ್ಲಿ ಸಮಸ್ಯೆಯ ಬಗ್ಗೆ ಪ್ರಸ್ತಾಪ ಮಾಡಿದ್ದರು.
ಸಭೆ ಮುಗಿದ ಬಳಿಕ ಶಾಸಕರು ಇಲಾಖೆಯ ಅಧಿಕಾರಿಗಳೊಂದಿಗೆ ನೇರವಾಗಿ ಜಕ್ರಿಬೆಟ್ಟು ಕಿಂಡಿ ಅಣೆಕಟ್ಟಿನ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಶಾಸಕರು ಬೇಟಿ ನೀಡಿದ ಸಂದರ್ಭದಲ್ಲಿ ಸಂತ್ರಸ್ತ ರೈತರು ಕೂಡ ಸ್ಥಳದಲ್ಲಿದ್ದು, ಸಮಸ್ಯೆಯನ್ನು ಶಾಸಕರ ಗಮನಕ್ಕೆ ತಂದರು.ಸ್ಥಳದಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿದ ಶಾಸಕ ರಾಜೇಶ್ ನಾಯ್ಕ್ ಅವರು ಕೃಷಿಕರ ತೋಟಗಳಿಗೆ ತೊಂದರೆಯಾಗದಂತೆ ನೀರಿನ ಮಟ್ಟ ಕಡಿಮೆಗೊಳಿಸಲು ಕನಿಷ್ಠ ಗೇಟ್ ಗಳನ್ನು ತೆರವು ಮಾಡಲು ಸೂಚನೆ ನೀಡಿದರು.
ನೀರು ಸಂಗ್ರಹಣೆಗಾಗಿ ಒಟ್ಟು ಅಳವಡಿಸಲಾದ 21 ಗೇಟ್ ಗಳ ಪೈಕಿ 7 ಗೇಟ್ ಗಳನ್ನು ಶಾಸಕರ ಸೂಚನೆಯಂತೆ ತೆರವು ಮಾಡಲಾಯಿತು.ಇದೀಗ 7 ಗೇಟ್ ಗಳಲ್ಲಿ ನೀರು ತುಂಬೆ ಡ್ಯಾಂ ಗೆ ನೀರು ಹರಿಯುತ್ತಿದ್ದು, ಇಲ್ಲಿ ನೀರಿನ ಮಟ್ಟ 5 ಮೀ . ನಿಂದ 4 ಮೀ ಗೆ ಇಳಿದಿದೆ.
ನೀರು ಶೇಖರಣೆಯ ಮಟ್ಟದಲ್ಲಿ ಕಡಿಮೆಯಾದ ಕೂಡಲೇ ನದಿ ಬದಿಯ ಕೃಷಿಕರ ಅಡಕೆ ತೋಟಗಳಲ್ಲಿ ನಿಂತಿದ್ದ ನೀರು ಇಳಿದು ನದಿಯನ್ನು ಸೇರಿದೆ ಎಂದು ಕೃಷಿಕರು ಹೇಳಿದ್ದಾರೆ.ಪುರಸಭಾ ಸದಸ್ಯರಾದ ಎ. ಗೋವಿಂದ ಪ್ರಭು, ಬಿಜೆಪಿ ಪ್ರಮುಖರಾದ ಜಗದೀಶ್ ಚೆಂಡ್ತಿಮಾರ್, ಸುದರ್ಶನ ಬಜ, ಕಾರ್ತಿಕ್ ಬಲ್ಲಾಳ್, ಎಕ್ಸಿಕ್ಯುಟಿವ್ ಇಂಜಿನಿಯರ್ ಸಯ್ಯದ್ ಅತಿಕೋಡ್, ಎ.ಇ.ಇ. ಸಾಜುದ್ದೀನ್, ಎ.ಇ.-2 ರಾಕೇಶ್, ಎ.ಇ.ಇ.ಶಿವಪ್ರಸನ್ನ ಮತ್ತಿತರರು ಉಪಸ್ಥಿತರಿದ್ದರು