ಜಲ ಜೀವನ್ ಮಿಷನ್ ಕಾಮಗಾರಿ ಕಳಪೆ: ಕೆಡಿಪಿ ಸಭೆಯಲ್ಲಿ ಸದಸ್ಯರ ದೂರು

| Published : Jun 23 2024, 02:08 AM IST

ಸಾರಾಂಶ

ನರಸಿಂಹರಾಜಪುರ, ತಾಲೂಕಿನ ಬಹುತೇಕ ಗ್ರಾಮಗಳ ವ್ಯಾಪ್ತಿಯಲ್ಲಿ ಕೈಗೊಂಡ ಜಲಜೀವನ್ ಮಿಷನ್ ಕಾಮಗಾರಿ ಕಳಪೆಯಾಗಿದೆ ಎಂದು ಕೆಡಿಪಿ ಸಭೆ ನಾಮ ನಿರ್ದೇಶನ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ದೂರಿದರು.

ಶಾಸಕ ಟಿ.ಡಿ.ರಾಜೇಗೌಡ ಅಧ್ಯಕ್ಷತೆಯಲ್ಲಿ ಕೆಡಿಪಿ ಸಭೆ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ತಾಲೂಕಿನ ಬಹುತೇಕ ಗ್ರಾಮಗಳ ವ್ಯಾಪ್ತಿಯಲ್ಲಿ ಕೈಗೊಂಡ ಜಲಜೀವನ್ ಮಿಷನ್ ಕಾಮಗಾರಿ ಕಳಪೆಯಾಗಿದೆ ಎಂದು ಕೆಡಿಪಿ ಸಭೆ ನಾಮ ನಿರ್ದೇಶನ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ದೂರಿದರು. ಶುಕ್ರವಾರ ತಾಪಂನಲ್ಲಿ ಶಾಸಕ ಟಿ.ಡಿ.ರಾಜೇಗೌಡ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ವಿಷಯ ಪ್ರಸ್ತಾಪಿಸಿದ ಕೆಡಿಪಿ ಸದಸ್ಯ ಕೆ.ವಿ.ಸಾಜು ಗುಬ್ಬಿಗಾ ಗ್ರಾಪಂ ವ್ಯಾ‍ಪ್ತಿಯ ಅರಳಿ ಕೊಪ್ಪ ಜಲಜೀವನ್ ಮಿಷನ್ ನಡಿ ಗ್ರಾಮದಲ್ಲಿ ನಿರ್ಮಿಸಿರುವ ಕುಡಿವ ನೀರಿನ ಸಂಗ್ರಹ ಟ್ಯಾಂಕ್ ಸೋರುತ್ತಿದೆ. ಈಗಾಗಲೇ ಇರುವ ಕುಡಿಯುವ ನೀರು ‍ಪೂರೈಸುವ ಕೊಳವೆ ಮಾರ್ಗ ಶಿಥಿಲಗೊಳಿಸಿದ್ದು ಸಾಕಷ್ಟು ಸಮಸ್ಯೆ ಉದ್ಭವಿಸಿದೆ ಎಂದರು.

ಸದಸ್ಯರಾದ ಚಂದ್ರಮ್ಮ. ಪ್ರವೀಣ್ ಗೇರುಬೈಲು ವಿಷಯ ಪ್ರಸ್ತಾಪಿಸಿ ಬಾಳೆಹೊನ್ನೂರು, ಮಹಲ್ಗೋಡು ರಸ್ತೆ ಪಕ್ಕದಲ್ಲೆ ಗುಂಡಿ ತೆಗೆದಿದ್ದು ವಾಹನ ಓಡಾಟಕ್ಕೆ ಸಮಸ್ಯೆಯಾಗಿದೆ. ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಒಂದು ವಾರದಿಂದ ಕುಡಿವ ನೀರಿನ ಪೂರೈಕೆಯಿಲ್ಲದೆ ಜನ ಪರದಾಡುವಂತಾಗಿದೆ ಎಂದರು.

ಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಪಿ.ಅಂಶುಮಂತ್ ಮಾತನಾಡಿ, ಜಲಜೀವನ್ ಮಿಷನ್ ಕಾಮಗಾರಿಗಳ ಬಗ್ಗೆ ಸಂಬಂಧಪಟ್ಟ ಎಂಜಿನಿಯರ್ ಸ್ಥಳ ಪರಿಶೀಲಿಸದೆ ಸಮಸ್ಯೆ ಉದ್ಭವಿಸಿದೆ. ಕಳಪೆ ಕಾಮಗಾರಿ ಮಾಡಿದವರಿಗೆ ಯಾವುದೇ ಕಾರಣಕ್ಕೂ ಬಿಲ್ ಮಾಡಬಾರದು. ನೀರಿನ ಮೂಲ ಪತ್ತೆ ಹಚ್ಚಬೇಕು. ಟ್ಯಾಂಕ್ ನಿರ್ಮಿಸಬೇಕು. ಕೊನೆಯಲ್ಲಿ ಪೈಪ್ ಅಳವಡಿಸಲು ಕ್ರಮಕೈಗೊಳ್ಳಬೇಕು ಎಂದರು.

ಸರ್ಕಾರಿ ಆಸ್ಪತ್ರೆಯಲ್ಲಿ ಆಮ್ಲಜನಕ ಘಟಕ ಆರಂಭವಾಗದಿರುವ ಹಾಗೂ ಬ್ಲಾಕ್ ಲೆವೆಲ್ ಹೆಲ್ತ್ ಲ್ಯಾಬೋರೇಟರಿ ಉದ್ಘಾಟನೆಯಾಗದಿರುವ ಬಗ್ಗೆ ತಾಲೂಕು ಆರೋಗ್ಯಾಧಿಕಾರಿ ಡಾ.ವಿಜಯಕುಮಾರ್ ಗೆ ರಾಜ್ಯ ‍ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಪ್ರಶ್ನಿಸಿದರು. ಕೋವಿಡ್ ಸಂದರ್ಭದ ನೆನಪಿಸಿ ಕಾಮಗಾರಿ ಪೂರ್ಣಗೊಳಿಸದಿದ್ದಕ್ಕೆ ಅಸಮಧಾನ ವ್ಯಕ್ತಪಡಿಸಿದರು. ವಿದ್ಯುತ್ ಪರಿವರ್ತಕ ಅಳವಡಿಕೆ ಮಾತ್ರ ಬಾಕಿ ಇದೆ ಎಂದು ವೈದ್ಯರು ಮಾಹಿತಿ ನೀಡಿದರು. ವಿದ್ಯುತ್ ಪರಿವರ್ತಕ ಅಳವಡಿಸಲು ಕ್ರಮ ಕೈಗೊಳ್ಳಬೇಕು. ಸರ್ಕಾರದಿಂದ ಅನುದಾನ ಕೊಡಿಸುವುದಾಗಿ ಮೆಸ್ಕಾಂ ಎಂಜಿನಿಯರ್ ಗೌತಮ್ ಗೆ ಶಾಸಕರು ಹೇಳಿದರು.

ಪ್ರಯೋಗಾಲಯದ ಉದ್ಘಾಟನೆಯನ್ನು ಹಿಂದೆ 2 ಬಾರಿ ನಿಗಧಿ ಮಾಡಲಾಗಿತ್ತು. ಅಂದಿನ ಸಂಸದರು ಉದ್ಘಾಟನೆಗೆ ಆಸಕ್ತಿ ತೋರಲಿಲ್ಲ. ಇದರಿಂದ ರೋಗಿಗಳಿಗೆ ಸಮಸ್ಯೆಯಾಗಿದ್ದು ಇನ್ನೂ ಕೆಲವೇ ದಿನಗಳಲ್ಲಿ ಸಮಯ ನಿಗಧಿ ಮಾಡಿ, ಯಾರು ಬರಲಿ ಬಿಡಲಿ ಸರ್ಕಾರದ ನಿಯಮಾನುಸಾರ ಉದ್ಘಾಟಿಸಿ ಸಾರ್ವಜನಿಕರ ಸೇವೆಗೆ ಸಮರ್ಪಿಸಲಾಗುವುದು ಎಂದು ಶಾಸಕ ರಾಜೇಗೌಡ ತಿಳಿಸಿದರು.

ಬಾಳೆಹೊನ್ನೂರಿನಿಂದ ಮಾಗುಂಡಿಯವರೆಗೆ ರಸ್ತೆ ನಿರ್ಮಾಣಕ್ಕೆ 20.50 ಕೋಟಿ ಅನುದಾನ ಬಿಡುಗಡೆಯಾಗಿದೆ. ಮಳೆಗಾಲ ಮುಗಿದಕೂಡಲೇ ಕಾಮಗಾರಿ ಆರಂಭಿಸುವುದಾಗಿ ಲೋಕೋಪಯೋಗಿ ಎಂಜಿನಿಯರ್ ತಿಳಿಸಿದರು.ತಾಲೂಕಿನ ಮುಳವಳ್ಳಿ ಗ್ರಾಮದ ಮುಖ್ಯರಸ್ತೆ ಪಕ್ಕದಲ್ಲಿನ ಕೆರೆಗೆ ಕಾರೊಂದು ಬಿದ್ದ ಪರಿಣಾಮ ಇಬ್ಬರು ಮರಣಹೊಂದಿದ್ದರು. ಹಾಗಾಗಿ ಕೆರೆಗೆ ತಡೆಗೋಡೆ ನಿರ್ಮಾಣಕ್ಕೆ ಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ಪ್ರಾಧಿಕಾರಿದ ಅಧ್ಯಕ್ಷರಿಗೆ ಕೆ.ಪಿ. ಅಂಶುಮಂತ್ ಒತ್ತಾಯಿಸಿದರು.

ಬೇಸಿಗೆ ಸಂದರ್ಭದಲ್ಲಿ ಕೈಗೊಳ್ಳ ಬೇಕಾಗಿದ್ದ ಜಂಗಲ್ ಕ್ಲಿಯರೆನ್ಸ್ ಬಗ್ಗೆ ಶಾಸಕರು ಮೆಸ್ಕಾಂ ಎಂಜಿನಿಯರ್ ಗೆ ‍ಪ್ರಶ್ನಿಸಿದರು. ಚುನಾವಣಾ ನೀತಿ ಸಂಹಿತೆ ಕಾರಣ ಕೈಗೊಂಡಿರಲಿಲ್ಲ. ಪ್ರಸ್ತುತ ಜಂಗಲ್ ಬ್ಯಾಜ್ ನೀಡಲಾಗಿದೆ ಎಂದರು. ಮೂಲ ಸೌಕರ್ಯ ಕಾಮಗಾರಿಗೆ ಚುನಾವಣಾ ನೀತಿ ಸಂಹಿತೆ ಹೇಗೆ ಅನ್ವಯವಾಗುತ್ತದೆ ? ಎಂದು ಶಾಸಕರು ಪ್ರಶ್ನಿಸಿದರು.

ಪಟ್ಟಣದ ಕೆಪಿಎಸ್ ಸಿ ಶಾಲೆಯಲ್ಲಿ ಎಲ್ ಕೆಜಿಗೆ 45 ಮಕ್ಕಳು ದಾಖಲಾಗಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಾಹಿತಿ ನೀಡಿದರು. 2 ವಿಭಾಗ ಮಾಡಲು ಸರ್ಕಾರದ ಆದೇಶವಿದ್ದರೂ ಹೆಚ್ಚು ಮಕ್ಕಳನ್ನು ದಾಖಲು ಮಾಡದಿರುವ ಬಗ್ಗೆ ಕೆ.ಪಿ. ಅಂಶುಮಂತ್ ಆಕ್ಷೇಪ ವ್ಯಕ್ತಪಡಿಸಿದರು. ಸರ್ಕಾರಿ ಶಾಲೆಗೆ ಹೆಚ್ಚು ಮಕ್ಕಳು ದಾಖಲಾಗಲು ಬಂದಾಗ ವಾಪಸ್ಸು ಕಳಿಸಿದ ಬಗ್ಗೆ ಶಾಸಕರು ಅಸಮಧಾನ ವ್ಯಕ್ತಪಡಿಸಿದರು.

ಭದ್ರಾ ಅಭಯಾರಣ್ಯದಿಂದ ಬರುತ್ತಿರುವ ಆನೆಗಳ ಸ್ಥಳಾಂತರಕ್ಕೆ ಕ್ರಮವಹಿಸುವಂತೆ ಸದಸ್ಯ ರಮೇಶ್ ಮಾಳೂರುದಿಣ್ಣೆ ಒತ್ತಾಯಿಸಿದರು. ಎನ್.ಆರ್.ಪುರ ಮತ್ತು ಬಾಳೆಹೊನ್ನೂರು ವ್ಯಾಪ್ತಿಯ 64 ಕಿ.ಮೀ ಟೆಂಟಕಲ್ ಸೋಲಾರ್ ಫೆನ್ಸಿಗ್ ನಿರ್ಮಾಣಕ್ಕೆ 4 ಕೋಟಿ ರು. ಪ್ರಸ್ತಾವನೆ ಸಲ್ಲಿಸಲಾಗಿದೆ. ಆನೆಗಳು ಹೆಚ್ಚು ಸಂಚರಿಸುವ 3 ಕಿಮೀ ಸ್ಥಳದಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗುವುದು ಎಂದು ಡಿಎಫ್ ಓ ನಂದೀಶ್ ವಿವರಿಸಿದರು.

ಪಟ್ಟಣದ ವ್ಯಾಪ್ತಿಯಲ್ಲಿ 94ಸಿಸಿ ಅಡಿ ಅರ್ಜಿಸಲ್ಲಿಸಿ ಹಣ ಪಾವತಿಸಿದವರಿಗೆ ಹಕ್ಕು ಪತ್ರ ನೀಡಲು ಸದಸ್ಯ ಅಂಜುಮ್ ಆಗ್ರಹಿಸಿ ದರು. ಆಶ್ರಯ ಯೋಜನೆ ಫಲಾನುಭವಿಗಳಿಗೆ ನಿವೇಶನ ಹಂಚಲು ಕ್ರಮಕೈಗೊಳ್ಳಬೇಕು. ಅಮೃತ ನಗರೋತ್ಥಾನ ಯೋಜನೆಯ 400 ಫಲಾನುಭವಿಗಳಿಗೆ ಅನುದಾನಕ್ಕೆ ಕ್ರಮ ಕೈಗೊಳ್ಳುವಂತೆ ಕೆ.ಪಿ.ಅಂಶುಮಂತ್ ಸಭೆ ಗಮನ ಸೆಳೆದರು.

ಶಾಸಕ ಟಿ.ಡಿ.ರಾಜೇಗೌಡ, ರಾಜ್ಯ ಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್, ಭದ್ರಾ ಅಚ್ಚುಕಟ್ಟು ಪ್ರದೇಶ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಪಿ.ಅಂಶುಮಂತ್, ಇಓ ನವೀನ್ ಕುಮಾರ್, ತಹಸೀಲ್ದಾರ್ ತನುಜಾ ಟಿ.ಸವದತ್ತಿ, ಸದಸ್ಯರಾದ ಸಮೀರಾ ನಹೀಂ, ಶಶಿಕುಮಾರ್, ಈ.ಸಿ.ಜೋಯಿ, ಶಶಿಕುಮಾರ್, ಸಂದೀ‍ಪ್, ಬೆಮ್ಮನೆ ಮೋಹನ್ ಮತ್ತಿತರರಿದ್ದರು.