ಸಾರಾಂಶ
ಹುಬ್ಬಳ್ಳಿ:
ಪತ್ನಿ ಆರುವರೆ ತಿಂಗಳ ಗರ್ಭಿಣಿ, ಮೂವರು ಪುಟ್ಟ ಮಕ್ಕಳನ್ನು ಹೊಂದಿದ್ದ ಜಲಾಲ್ ಬಾಷಾ ತರಕಾರಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದ. ಮನೆಗೆ ಆಧಾರಸ್ತಂಭವಾಗಿದ್ದವನೇ ಈಗ ಲಾರಿ ದುರಂತದಲ್ಲಿ ಸಾವನ್ನಪ್ಪಿರುವುದು ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ.ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಗುಳ್ಳಾಪುರ ಬಳಿ ಬುಧವಾರ ನಸುಕಿನ ಜಾವ ನಡೆದ ಲಾರಿ ದುರಂತದಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದ ಜಲಾಲ್ ಬಾಷಾ ಮಂಚಗಿ (27) ತೀವ್ರವಾಗಿ ಗಾಯಗೊಂಡಿದ್ದನು. ಚಿಕಿತ್ಸೆಗಾಗಿ ನಗರದ ಕೆಎಂಸಿಆರ್‌ಐಗೆ ತರುವ ವೇಳೆ ಮಾರ್ಗಮಧ್ಯೆಯೇ ಸಾವನ್ನಪ್ಪಿದ್ದನು.
ತರಕಾರಿ ಮಾರಾಟ:ಚಿಕ್ಕಂದಿನಿಂದಲೂ ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದ ಜಲಾಲ್ ಬಾಷಾ ಲಾಕ್‌ಡೌನ್ ನಂತರ ಹುಬ್ಬಳ್ಳಿಯ ಮಂಟೂರು ರಸ್ತೆಯ ಮಿಲ್ಲತ್ ನಗರದಲ್ಲಿ ಪತ್ನಿ, ತಂದೆ-ತಾಯಿಯೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು. ಪ್ರತಿ ಸೋಮವಾರ ಸಂಜೆ ಹುಬ್ಬಳ್ಳಿಯಿಂದ ಸವಣೂರಿಗೆ ಹೋಗಿ ಅಲ್ಲಿಂದ ಕಾರವಾರ, ಕುಮಟಾ, ಭಟ್ಕಳ ಸೇರಿದಂತೆ ಸುತ್ತಮುತ್ತಲಿನ ಸಂತೆಗಳಿಗೆ ತರಕಾರಿ ತಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದನು.
ಜೀವನಕ್ಕೇ ಇವನೇ ಆಧಾರ:ಮೃತ ಜಲಾಲ್ ಬಾಷಾರಿಗೆ ಆರು ವರ್ಷದ ಪುತ್ರ, 4 ಮತ್ತು 3 ವರ್ಷದ ಹೆಣ್ಣುಮಕ್ಕಳಿದ್ದಾರೆ. ಇವರ ಪತ್ನಿ ಆಯಿಶಾ ಆರುವರೆ ತಿಂಗಳ ಗರ್ಭಿಣಿಯಾಗಿದ್ದಾಳೆ. ಸೋಮವಾರ ಸಂಜೆ ತರಕಾರಿ ವ್ಯಾಪಾರಕ್ಕೆ ಹೋಗಿ ಗುರುವಾರ ರಾತ್ರಿ ಬರುವುದಾಗಿ ಪತ್ನಿಯ ಬಳಿ ಹೇಳಿ ಹೋಗಿದ್ದರು. ಆದರೆ, ಬುಧವಾರ ಶವವಾಗಿ ಮನೆಗೆ ಬಂದಿರುವುದು ಕುಟುಂಬಸ್ಥರಿಗೆ ಆಘಾತವನ್ನುಂಟು ಮಾಡಿದೆ. ಜೀವನಕ್ಕೆ ಆಧಾರವಾಗಿದ್ದ ಮಗನೆ ಈಗ ಸಾವನ್ನಪ್ಪಿರುವುದನ್ನು ಕಂಡ ತಂದೆ-ತಾಯಿಯ ರೋದನ ಮುಗಿಲು ಮುಟ್ಟಿತ್ತು.
ಹಲವು ವರ್ಷಗಳಿಂದ ಜಲಾಲ್ ಬಾಷಾ ತರಕಾರಿ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಪತ್ನಿ, ಮೂವರು ಮಕ್ಕಳು, ತಂದೆ-ತಾಯಿಗೆ ಆಧಾರವಾಗಿದ್ದವನ್ನೇ ದುರಂತದಲ್ಲಿ ಸಾವನ್ನಪ್ಪಿರುವುದು ತುಂಬಾ ನೋವುಂಟು ಮಾಡಿದೆ. ಈಗ ಅವರ ಕುಟುಂಬಕ್ಕೆ ಯಾರು ಆಧಾರ ಎಂಬುದು ತಿಳಿಯುತ್ತಿಲ್ಲ ಎಂದು ಮೃತರ ಸಂಬಂಧಿ ಯಾಸಿನ್ ಕನಕಗಿರಿ ಹೇಳಿದರು.