ಜಲಾಲಿಯ ಮಸೀದಿ, ಮಡಿಕೇರಿ ರಕ್ತನಿಧಿ ಕೇಂದ್ರ: ರಕ್ತದಾನ ಶಿಬಿರ

| Published : Sep 13 2024, 01:31 AM IST

ಜಲಾಲಿಯ ಮಸೀದಿ, ಮಡಿಕೇರಿ ರಕ್ತನಿಧಿ ಕೇಂದ್ರ: ರಕ್ತದಾನ ಶಿಬಿರ
Share this Article
  • FB
  • TW
  • Linkdin
  • Email

ಸಾರಾಂಶ

ಸೋಮವಾರಪೇಟೆ ಜಲಾಲಿಯಾ ಮಸೀದಿ ಮತ್ತು ಮಡಿಕೇರಿ ರಕ್ತನಿಧಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಜಲಾಲಿಯ ಮದರಸ ಹಾಲ್‌ನಲ್ಲಿ ಗುರುವಾರ ರಕ್ತದಾನ ಶಿಬಿರ ನಡೆಯಿತು. ಮಡಿಕೇರಿ ರಕ್ತನಿಧಿ ಕೇಂದ್ರದ ಕರುಂಬಯ್ಯ ಮಾತನಾಡಿ, ಶ್ರೇಷ್ಠ ಕಾರ್ಯಕ್ರಮಗಳಲ್ಲಿ ರಕ್ತದಾನ ಕಾರ್ಯಕ್ರಮವು ಒಂದಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಜಲಾಲಿಯಾ ಮಸೀದಿ ಮತ್ತು ಮಡಿಕೇರಿ ರಕ್ತನಿಧಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಜಲಾಲಿಯ ಮದರಸ ಹಾಲ್‌ನಲ್ಲಿ ಗುರುವಾರ ರಕ್ತದಾನ ಶಿಬಿರ ನಡೆಯಿತು.

ಮಡಿಕೇರಿ ರಕ್ತನಿಧಿ ಕೇಂದ್ರದ ಕರುಂಬಯ್ಯ ಮಾತನಾಡಿ, ಶ್ರೇಷ್ಠ ಕಾರ್ಯಕ್ರಮಗಳಲ್ಲಿ ರಕ್ತದಾನ ಕಾರ್ಯಕ್ರಮವು ಒಂದಾಗಿದೆ. ಹಬ್ಬ ಹರಿದಿನಗಳಲ್ಲಿ ಸಂಘ ಸಂಸ್ಥೆಗಳು ರಕ್ತದಾನದಂತಹ ಕಾರ್ಯಕ್ರಮ ಹಮ್ಮಿಕೊಂಡರೆ, ಜಿಲ್ಲೆಯಲ್ಲಿ ರಕ್ತದ ಕೊರತೆ ನೀಗಬಹುದಾಗಿದೆ. ಸ್ವಯಂಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗದಿದ್ದಲ್ಲಿ ರಕ್ತದ ಕೊರತೆ ಮುಂದುವರಿಯಲಿದೆ ಎಂದರು.

ಅಪಘಾತ, ರಕ್ತ ಹೀನತೆ, ಗರ್ಭಿಣಿ ಮತ್ತು ಬಾಣಂತಿಯರಿಗೆ ಕೆಲವು ತುರ್ತು ಸಂದರ್ಭ ರಕ್ತದ ಅವಶ್ಯಕತೆ ಇದೆ. ಅಲ್ಲದೆ, ಜಿಲ್ಲೆಯಲ್ಲಿ ಡೆಂಘೀ ಜ್ವರ ಹೆಚ್ಚಳದಿಂದ ಬಿಳಿಯ ರಕ್ತ ಕಣದ ಕೊರತೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹೆಚ್ಚು ಹೆಚ್ಚಾಗಿ ರಕ್ತದಾನ ಶಿಬಿರಗಳನ್ನು ಮಾಡುವ ಮೂಲಕ ರಕ್ತ ಸಂಗ್ರಹಿಸಬೇಕಿದೆ. ಜಿಲ್ಲಾ ಕೇಂದ್ರದ ರಕ್ತನಿಧಿ ಕೇಂದ್ರಕ್ಕೆ ಬಂದು ರಕ್ತದಾನಕ್ಕೆ ಮುಂದಾಗುವ ದಾನಿಗಳಿಗೆ ಕಷ್ಟವಾಗಲಿದ್ದು, ಇಂತಹ ಶಿಬಿರ ಆಯೋಜಿಸುವುದರಿಂದ, ಸ್ಥಳೀಯವಾಗಿಯೇ ರಕ್ತದಾನ ಮಾಡಲು ಅನುಕೂಲವಾಗುವುದು ಎಂದರು.

ಇಂದಿಗೂ ಯುವ ಜನರು, ಹೆದರಿಕೆ ಮತ್ತು ತಪ್ಪು ಅಭಿಪ್ರಾಯಗಳಿಂದ ರಕ್ತದಾನಕ್ಕೆ ಮುಂದಾಗುತ್ತಿಲ್ಲ. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ. ಆರೋಗ್ಯವಂತರು ೧೮ ವರ್ಷದಿಂದ ೬೫ ವರ್ಷದವರೆಗಿನವರು ಪ್ರತಿ ಮೂರು ನಾಲ್ಕು ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ತಮ್ಮ ಆರೋಗ್ಯ ಉತ್ತಮವಾಗಿ ಇರಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.

ಸರ್ಕಾರಿ ಆಸ್ಪತ್ರೆಯ ವೈದ್ಯ ಜಮೀರ್ ಆಹಮ್ಮದ್ ಮಾತನಾಡಿ, ರಕ್ತದಾನದ ಶ್ರೇಷ್ಠದಾನವಾಗಿದ್ದು, ಸಾಕಷ್ಟು ಜೀವ ಉಳಿಸುತ್ತದೆ. ಅದರಂತೆ ನೇತ್ರ ಹಾಗೂ ಅಂಗಾಗಗಳ ದಾನದಿಂದಲೂ ಸಾಕಷ್ಟು ಜೀವ ಉಳಿಸಬಹುದಾಗಿದ್ದು, ಜನರು ಮುಂದಾಗಬೇಕು, ಪ್ರತಿ ಮಸಿದಿಗಳಲ್ಲಿ ರಕ್ತದಾನ ಮತ್ತು ಅಂಗದಾನದ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕೆಂದರು.

ಜಲಾಲಿಯ ಮಸೀದಿ ಅಧ್ಯಕ್ಷ ಎಂ.ಬಿ. ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ಮಸೀದಿ ಧರ್ಮಗುರು ಹಮೀದ್ ಸಖಾಫಿ ಇದ್ದರು.