ಸೆ.14,15 ರಂದು ಶಿವನಸಮುದ್ರದ ಗಗನಚುಕ್ಕಿಯಲ್ಲಿ ಜಲಪಾತೋತ್ಸವ

| Published : Sep 06 2024, 01:06 AM IST

ಸೆ.14,15 ರಂದು ಶಿವನಸಮುದ್ರದ ಗಗನಚುಕ್ಕಿಯಲ್ಲಿ ಜಲಪಾತೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಗಗನದಿಂದ ಧುಮ್ಮಿಕ್ಕಿ ಹರಿಯುವ ಕಾವೇರಿ ನದಿ ನಡುವೆ ನೈಸರ್ಗಿಕ ಸೊಬಗಿನ ಸೌಂದರ್ಯವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳುವ ಜೊತೆಗೆ ಗಗನಚುಕ್ಕಿ ಜಲಪಾತ ಪ್ರವಾಸಿ ತಾಣವನ್ನು ವಿಶ್ವ ಮಟ್ಟದಲ್ಲಿ ಪ್ರಚಾರ ಪಡಿಸಲು ಜಲಪಾತೋತ್ಸವವನ್ನು ಎರಡು ದಿನಗಳ ಕಾಲ ಆಚರಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪ್ರಸಿದ್ಧ ಪ್ರವಾಸಿ ತಾಣ ಶಿವನಸಮುದ್ರದ ಗಗನಚುಕ್ಕಿಯಲ್ಲಿ ಸೆ.14 ಮತ್ತು 15 ರಂದು ಜಲಪಾತೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಗುರುವಾರ ತಿಳಿಸಿದರು.

ಗಗನಚುಕ್ಕಿ ಜಲಪಾತೋತ್ಸವದ ಲೋಗೋವನ್ನು ಬಿಡುಗಡೆ ಮಾಡಿದ ನಂತರ ಲಕ್ಷದ್ವೀಪ್ ಹೋಟೆಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಗಗನದಿಂದ ಧುಮ್ಮಿಕ್ಕಿ ಹರಿಯುವ ಕಾವೇರಿ ನದಿ ನಡುವೆ ನೈಸರ್ಗಿಕ ಸೊಬಗಿನ ಸೌಂದರ್ಯವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳುವ ಜೊತೆಗೆ ಗಗನಚುಕ್ಕಿ ಜಲಪಾತ ಪ್ರವಾಸಿ ತಾಣವನ್ನು ವಿಶ್ವ ಮಟ್ಟದಲ್ಲಿ ಪ್ರಚಾರ ಪಡಿಸಲು ಜಲಪಾತೋತ್ಸವವನ್ನು ಎರಡು ದಿನಗಳ ಕಾಲ ಆಚರಿಸಲಾಗುತ್ತಿದೆ ಎಂದರು.

ಪ್ರವಾಸಿಗರನ್ನು ಆಕರ್ಷಣೆ ಮಾಡಲು ಹಾಗೂ ಪ್ರವಾಸೋಧ್ಯಮ ಅಭಿವೃದ್ಧಿ ಪಡಿಸಲು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಯುವ ಪೀಳಿಗೆ ಆಕರ್ಷಣೆಗೆ ಒಳಗಾಗಿ ಹೆಚ್ಚಿನ ಪ್ರಮಾಣದಲ್ಲಿ ಜಲಪಾತೋತ್ಸವಕ್ಕೆ ಆಗಮಿಸುವುದರಿಂದ ಪ್ರವಾಸಿತಾಣದ ಬಗ್ಗೆ ನಾಡಿನಾದ್ಯಂತ ಹೆಚ್ಚು ಪ್ರಚಾರಗೊಳ್ಳಲಿದೆ ಎಂದರು.

ಸಿಎಂರಿಂದ ಉದ್ಘಾಟನೆ:

ಸೆ.14ರಂದು ಮಲ್ಲಿಕ್ಯಾತನಹಳ್ಳಿಯ ರಾಮಮಂದಿರದಿಂದ ಜಲಪಾತದವರೆಗೆ ವಿವಿಧ ಜಾನಪದ ಕಲಾವಿದರ ಪ್ರದರ್ಶನ ಮೆರವಣಿಗೆ ನಡೆಯಲಿದೆ. ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಲಪಾತೋತ್ಸವಕ್ಕೆ ಲೇಸರ್, ಲೈಟಿಂಗ್ಸ್‌ಗೆ ಚಾಲನೆ ನೀಡಲಿದ್ದಾರೆ. ಸರ್ಕಾರದ ಸಚಿವರು, ಶಾಸಕರು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದರು.

ಪ್ರವಾಸಿ ತಾಣದ ಅಭಿವೃದ್ಧಿ:

ಪ್ರವಾಸಿ ತಾಣ ವೀಕ್ಷಣೆ, ಅಭಿವೃದ್ಧಿಗೆ ಹಂತ ಹಂತವಾಗಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಪ್ರವಾಸಿಗರಿಗೆ ವಸತಿ ಸೌಕರ್ಯ ಕಲ್ಪಿಸಲು ಯಾತ್ರಿ ನಿವಾಸ ನಿರ್ಮಾಣ ಮಾಡಲು ಜಾಗ ಗುರುತಿಸಿ ಅನುದಾನಕ್ಕೆ ಸರ್ಕಾರದ ಗಮನ ಸೆಳೆಯಲಾಗಿದೆ ಎಂದರು.

ಬೃಹತ್ ಪ್ರವಾಸಿ ಆಕರ್ಷಣಿಯ ಕೇಂದ್ರವಾಗಿಸಲು ಕೇಂದ್ರ ಸರ್ಕಾರದ ಸಹಕಾರದಲ್ಲಿ ಯೋಜನೆ ಸಿದ್ಧಪಡಿಸಲಾಗಿದೆ.

ಅನುಷ್ಠಾನಗೊಂಡ ನಂತರ ಘೋಷಣೆ ಮಾಡಲಾಗುವುದು, ಜಲಪಾತ ವೀಕ್ಷಣೆ ಕೆಲ ತಿಂಗಳು ಮಾತ್ರ ಸೀಮಿತವಾಗಿರುವುದರಿಂದ ವರ್ಷಪೂರ್ತಿ ಪ್ರವಾಸಿಗರನ್ನು ಸೆಳೆಯಲು ನೀರಿನ ಆಧಾರಿತ ಕ್ರೀಡಾ ಚಟುಚಟಿಕೆಗಳು ಸೌಮ್ಯಸ್ವಾಭಾವದ ಪ್ರಾಣಿ ಸಂಗ್ರಹಾಲಯ ಜೊತೆಗೆ ಇನ್ನಿತರ ಯೋಜನೆಗಳನ್ನು ಅಭಿವೃದ್ಧಿ ಮಾಡಲು ಅವಕಾಶವಿರುವುದರಿಂದ ಮಂಜುರಾತಿಗಾಗಿ ಕಾಯಲಾಗುತ್ತಿದೆ ಎಂದರು.

ಜಲಪಾತೋತ್ಸವದ ವೇಳೆ ಪ್ರವಾಸೋಧ್ಯಮ ಸಚಿವರಿಗೆ ಪ್ರವಾಸಿ ತಾಣದ ಅಭಿವೃದ್ಧಿಗೆ ಬೇಕಾದ ಅನುದಾನಕ್ಕೆ ಮನವಿ ಸಲ್ಲಿಸಲಾಗುವುದು. ಅಭಿವೃದ್ಧಿ ಯೋಜನೆಯಿಂದ ಗಗನಚುಕ್ಕಿ ಪ್ರಸಿದ್ದ ಪ್ರೇಕ್ಷಣೀಯ ಸ್ಥಳವಾದರೆ ಹಲವು ಸ್ಥಳೀಯರಿಗೆ ಉದ್ಯೋಗ ದೊರೆಯಲಿದೆ ಎಂದರು.

ಪ್ರವಾಸಿಗರಿಗೆ ಮೂಲ ಸೌಲಭ್ಯ:

ಜಲಪಾತೋತ್ಸವಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಮಂದಿ ಆಗಮಿಸುವ ನಿರೀಕ್ಷೆ ಹೊಂದಲಾಗಿದೆ. ತಾಲೂಕಿನ ಮಲ್ಲಿಕ್ಯಾತನಹಳ್ಳಿ ಬಳಿ ಪಾರ್ಕಿಂಗ್ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ, ಸಾರಿಗೆ ಹಾಗೂ ಉಚಿತವಾಗಿ ಊಟದ ವ್ಯವಸ್ಥೆ ಮಾಡಲಾಗಿದೆ. ಪ್ರವಾಸಿಗರಿಗೆ ಯಾವುದೇ ತೊಂದರೆಯಾಗಂತೆ ಮುನ್ನೆಚ್ಚರಿಕೆ ಕ್ರಮವನ್ನು ವಹಿಸಲಾಗಿದೆ ಎಂದರು.

ಜಲಪಾತೋತ್ಸವಕ್ಕೆ ಸಾರ್ವಜನಿಕರನ್ನು ಸೆಳೆಯಲು ಬೆಳಗ್ಗೆ 11ರಿಂದ ರಾತ್ರಿ 11ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಸ್ಥಳೀಯ ಜಾನಪದ ಕಲಾವಿದರಿಗೆ ಅವಕಾಶ ಕಲ್ಪಿಸಲಾಗಿದೆ. ಸಂಜೆ 5 ಗಂಟೆ ನಂತರ ನಾಡಿನ ಹೆಸರಾಂತ ಕಲಾವಿದರಿಂದ ಸಂಗೀತ ರಸಸಂಜೆ ನಡೆಯಲಿದೆ ಎಂದರು.

ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಪ್ರಸಕ್ತ ವರ್ಷ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಕೆ.ಆರ್.ಎಸ್ ಅಣೆಕಟ್ಟೆ ತುಂಬಿ ಮುಖ್ಯಮಂತ್ರಿಗಳು ಬಾಗಿನ ಅರ್ಪಿಸಿದ್ದಾರೆ. ಕಾವೇರಿ ನೀರಿನಿಂದ ಗಗನಚುಕ್ಕಿ ಮತ್ತು ಬರಚುಕ್ಕಿ ಜಲಪಾತಗಳಿಗೆ ಜೀವ ಕಲೆ ಬಂದಿದೆ ಎಂದರು.

ಪ್ರವಾಸಿತಾಣವನ್ನು ಅಭಿವೃದ್ಧಿಯ ಜೊತೆಗೆ ಮತ್ತಷ್ಟು ಪರಿಚಯಿಸಲು ಸರ್ಕಾರದಿಂದ ಗಗನಚುಕ್ಕಿ ಜಲಪಾತೋತ್ಸವವನ್ನು ವಿಶೇಷವಾಗಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.

ಸೆ.14ರಂದು ಬೆಳಗ್ಗೆ 11ಗಂಟೆಗೆ ಸ್ಥಳೀಯ ಕಲಾವಿದರಿಂದ ಸಂಸ್ಕೃತಿಕ ಕಾರ್ಯಕ್ರಮ, ಸಂಜೆ 4.30ಕ್ಕೆ ಕಾಮಿಡಿ ಕಿಲಾಡಿಗಳು ಕಲಾವಿದರಿಂದ ಮನರಂಜನೆ, ನಂತರ ಅಧಿಕೃತವಾಗಿ ಕಾರ್ಯಕ್ರಮ ಉದ್ಘಾಟನೆಯಾಗಲಿದೆ. ಸಂಜೆ 7ರಿಂದ ಮಣಿಕಾಂತ್ ಕದ್ರಿ, ಚಂದನ್‌ಶೆಟ್ಟಿ, ಹಂಸಿಕಾ ಅಯ್ಯರ್, ತಂಡದವರಿಂದ ನೃತ್ಯ, ಮತ್ತು ಸಂಗೀತ ಸಂಜೆ. ಸೆ.15ರಂದು ಸರಿಗಮಪ ತಂಡದದಿಂದ ಸಂಗೀತ, ಗಿಚ್ಚಿ ಗಿಲಿಗಿಲಿ ತಂಡದಿಂದ ಹಾಸ್ಯ ಹಾಗೂ ರವಿ ಬಸ್ರೂರ್ ಮತ್ತು ತಂಡದಿಂದ ಸಂಗೀತ ರಸಸಂಜೆ ಕಾರ್ಯಕ್ರಮ ನಡೆಯಲಿದೆ ಎಂದರು.

ಖ್ಯಾತ ಸಂಗೀತ ಸಂಯೋಜಕ ರವಿ ಬಸ್ರೂರು ಅವರು ಇದೇ ಮೊದಲ ಬಾರಿಗೆ ಲೈವ್ ಆಗಿ ಸೆ.15ರಂದು ಕಾರ್ಯಕ್ರಮ ನೀಡುತ್ತಿದ್ದಾರೆ. ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿ ಯಶಸ್ವಿಗೊಳಿಸಬೇಕೆಂದು ಕೋರಿದರು.

ಸುದ್ದಿಗೋಷ್ಠಿಯಲ್ಲಿ ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಉಪವಿಭಾಗಾಧಿಕಾರಿ ಶಿವಮೂರ್ತಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.