ಪ್ರತಿ ವರ್ಷದಂತೆ ಈ ಬಾರಿಯೂ ಮೂರು ದಿನಗಳ ಕಾಲ ಜಾತ್ರಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಮಂಗಳವಾರ ರಾತ್ರಿ ಹಸಿಕರಗ ಹಾಗೂ ಮಧ್ಯಾಹ್ನ ತಂಬಿಟ್ಟು ದೀಪೋತ್ಸವಕ್ಕೆ ಚಾಲನೆ ದೊರೆಯಿತು

ಗುಡಿಬಂಡೆ: ಪಟ್ಟಣದ ಸೊಪ್ಪಿನ ಪೇಟೆಯಲ್ಲಿ ನೆಲೆಸಿರುವ ಶ್ರೀ ಜಾಲಾರಿ ಸಪ್ಪಲಮ್ಮ ದೇವಿಯ 28ನೇ ವರ್ಷದ ಕರಗ ಮಹೋತ್ಸವವು ಸಡಗರ ಹಾಗೂ ಸಂಭ್ರಮದಿಂದ ನೆರವೇರಿತು. ವಿವಿಧ ಸಾಂಸ್ಕೃತಿಕ ಕಲಾತಂಡಗಳ ಪ್ರದರ್ಶನ ಹಾಗೂ ಭಕ್ತಾದಿಗಳ ಜಯಘೋಷದ ನಡುವೆ ದೇವಿಯ ಹೂವಿನ ಕರಗವು ಅದ್ಧೂರಿಯಾಗಿ ಜರುಗಿತು.

ಪ್ರತಿ ವರ್ಷದಂತೆ ಈ ಬಾರಿಯೂ ಮೂರು ದಿನಗಳ ಕಾಲ ಜಾತ್ರಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಮಂಗಳವಾರ ರಾತ್ರಿ ಹಸಿಕರಗ ಹಾಗೂ ಮಧ್ಯಾಹ್ನ ತಂಬಿಟ್ಟು ದೀಪೋತ್ಸವಕ್ಕೆ ಚಾಲನೆ ದೊರೆಯಿತು. ಬುಧವಾರ ರಾತ್ರಿ ನಡೆದ ಪ್ರಮುಖ ಆಕರ್ಷಣೆಯಾದ ಹೂವಿನ ಕರಗ ಉತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾದರು. ಆಂಧ್ರಪ್ರದೇಶದ ರಾಮ್ ಕುಪ್ಪಂನ ಬಾಲಾಜಿ ಅವರು ಹೂವಿನ ಕರಗವನ್ನು ಹೊತ್ತು ನರ್ತಿಸಿದರು. ಬುಧವಾರ ರಾತ್ರಿ ಸುಮಾರು 11 ಗಂಟೆಗೆ ದೇವಾಲಯದಿಂದ ಹೊರಬಂದ ಕರಗವು ಪಟ್ಟಣದ 11 ವಾರ್ಡ್‌ಗಳು ಸೇರಿದಂತೆ ಹಳೇ ಗುಡಿಬಂಡೆ ಹಾಗೂ ನಿಚ್ಚನಬಂಡಹಳ್ಳಿ ಗ್ರಾಮಗಳಲ್ಲಿ ಸಂಚರಿಸಿತು.

ವಿಶೇಷವಾಗಿ ದೇವಾಲಯದ ಮುಂಭಾಗ ಹಾಗೂ ಪ್ರಮುಖ ವೃತ್ತಗಳಲ್ಲಿ ಕರಗಧಾರಿಗಳು ಪ್ರದರ್ಶಿಸಿದ ''''ನಾಗಿಣಿ ನೃತ್ಯ'''' ಮತ್ತು ವಿವಿಧ ಸಾಹಸಮಯ ಭಂಗಿಗಳು ನೋಡುಗರ ಎದೆಬಡಿತ ಹೆಚ್ಚಿಸುವಂತಿದ್ದವು. ಮೊಣಕಾಲೂರಿ ಕುಳಿತು ನರ್ತಿಸುವುದು ಹಾಗೂ ದೇಹವನ್ನು ಹಿಂದಕ್ಕೆ ಬಾಗಿಸಿ ಪ್ರದರ್ಶಿಸಿದ ಕಲೆಗೆ ನೆರೆದಿದ್ದ ಭಕ್ತರಿಂದ ಹರ್ಷೋದ್ಗಾರ ಹಾಗೂ ಚಪ್ಪಾಳೆಗಳ ಸುರಿಮಳೆಯೇ ಸಂದಿತು. ಉತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ವಾದ್ಯಗೋಷ್ಠಿ, ಗಾರುಡುಗೊಂಬೆ, ಕೀಲುಕುದುರೆ ಹಾಗೂ ಯಕ್ಷಗಾನ ನೃತ್ಯ ಕಾರ್ಯಕ್ರಮಗಳು ಪಟ್ಟಣದ ಜನತೆಯ ಮನಸೂರೆಗೊಳಿಸಿದವು. ಪಟ್ಟಣದಾದ್ಯಂತ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಹಬ್ಬದ ವಾತಾವರಣ ಮನೆಮಾಡಿತ್ತು.

ದೇವಸ್ಥಾನದ ಧರ್ಮದರ್ಶಿ ಶ್ರೀನಿವಾಸ್ ಸ್ವಾಮಿ ಅವರು ವಿಶೇಷ ಪೂಜೆ ಸಲ್ಲಿಸಿ, ತಾಲೂಕಿನ ಜನತೆಗೆ ಶುಭ ಕೋರಿದರು. ದೇವಿಗೆ ವಿಶೇಷ ಹೂವಿನ ಅಲಂಕಾರ ಹಾಗೂ ಮಹಾ ಮಂಗಳಾರತಿಯನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಆಶಾಜಯಪ್ಪ, ಗಜನಾಣ್ಯ ನಾಗರಾಜ್, ರಾಜೇಶ್, ಗಣೇಶ್, ಯಶ್ವಂತ್, ಬಿ. ಮಂಜುನಾಥ್ ಹಾಗೂ ಸೊಪ್ಪಿನ ಪೇಟೆಯ ಯುವಕರು ಉತ್ಸವದ ನೇತೃತ್ವ ವಹಿಸಿದ್ದರು. ದೇವಾಲಯದ ಅರ್ಚಕ ರಾಮಾಂಜಿ ಸೇರಿಸಮಿತಿಯ ಸದಸ್ಯರು ಹಾಗೂ ಸಾವಿರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.