ಜಲಜೀವನ್‌ ಮಿಶನ್ ಉಡುಪಿ ಜಿಲ್ಲೆಯಲ್ಲಿ ಶೇ.93 ಸಾಧನೆ: ಪ್ರತೀಕ್ ಬಾಯಲ್

| Published : Aug 29 2025, 01:00 AM IST

ಜಲಜೀವನ್‌ ಮಿಶನ್ ಉಡುಪಿ ಜಿಲ್ಲೆಯಲ್ಲಿ ಶೇ.93 ಸಾಧನೆ: ಪ್ರತೀಕ್ ಬಾಯಲ್
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯಲ್ಲಿ ಗ್ರಾಮೀಣ ಭಾಗದ 2,47,190 ಮನೆಗಳಿಗೆ ಕುಡಿಯುವ ನೀರಿನ ನಳ ಸಂಪರ್ಕವನ್ನು ಕಲ್ಪಿಸಲು ಜಲ ಜೀವನ್ ಅಡಿಯಲ್ಲಿ ಗುರಿ ಹೊಂದಲಾಗಿದ್ದು, ಈವರೆಗೆ 2,15,499 ಮನೆಗಳಿಗೆ ನಳ ಸೌಲಭ್ಯವನ್ನು ಒದಗಿಸುವುದರೊಂದಿಗೆ ಶೇ.93 ರಷ್ಟು ಪೂರ್ಣಗೊಂಡಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ಸರ್ಕಾರ ಜಿಲ್ಲೆಯ ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಉದ್ದೇಶದಿಂದ ಜಲ್‌ಜೀವನ್ ಮಿಷನ್ ಅಡಿ ಉಡುಪಿ ಜಿಲ್ಲೆಯಲ್ಲಿ ಶೇ.93 ಸಾಧನೆ ಮಾಡಲಾಗಿದೆ. ಇದನ್ನು ಶೇ.100 ಗುರಿ ತಲುಪಿಸಬೇಕು ಎಂದು ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರತೀಕ್ ಬಾಯಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ಅವರು ಗುರುವಾರ ರಜತಾದ್ರಿಯ ಜಿಪಂ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ನೀರು ಸರಬರಾಜು ಮತ್ತು ನೈರ್ಮಲ್ಯ ಮಿಷನ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಜಿಲ್ಲೆಯಲ್ಲಿ ಗ್ರಾಮೀಣ ಭಾಗದ 2,47,190 ಮನೆಗಳಿಗೆ ಕುಡಿಯುವ ನೀರಿನ ನಳ ಸಂಪರ್ಕವನ್ನು ಕಲ್ಪಿಸಲು ಜಲ ಜೀವನ್ ಅಡಿಯಲ್ಲಿ ಗುರಿ ಹೊಂದಲಾಗಿದ್ದು, ಈವರೆಗೆ 2,15,499 ಮನೆಗಳಿಗೆ ನಳ ಸೌಲಭ್ಯವನ್ನು ಒದಗಿಸುವುದರೊಂದಿಗೆ ಶೇ.93 ರಷ್ಟು ಪೂರ್ಣಗೊಂಡಿದೆ. ಬಾಕಿ ಉಳಿದ 31,691 ಮನೆಗಳಿಗೆ ನಳ ಸೌಲಭ್ಯ ಕಲ್ಪಿಸುವ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಲ ಜೀವನ್ ಮಿಷನ್ ಯೋಜನೆಯಡಿ 525 ಕಾಮಗಾರಿಗಳನ್ನು 687.66 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದೆ. ಈಗಾಗಲೇ 487 ಕಾಮಗಾರಿಗಳು ಪೂರ್ಣಗೊಂಡಿವೆ. ಬಾಕಿ ಉಳಿದ 38 ಕಾಮಗಾರಿಗಳು ಪ್ರಗತಿಯಲ್ಲಿವೆ. ಈಗಾಗಲೇ 540.76 ಕೋಟಿ ರೂ. ವಹಿಸಲಾಗಿದೆ ಎಂದರು.ಜಿಲ್ಲಾದ್ಯಂತ ಕುಡಿಯಲು ಯೋಗ್ಯವಾಗಿರುವ ಸ್ವಚ್ಛ ನೀರನ್ನು ಸರಬರಾಜು ಮಾಡಬೇಕು. ಕಲುಷಿತ ನೀರು ಸರಬರಾಜಾಗದಂತೆ ನೋಡಿಕೊಳ್ಳಬೇಕು. ಈಗಾಗಲೇ ಪ್ರತೀ ಗ್ರಾಮ ಪಂಚಾಯಿತಿಗಳಿಗೂ ಫೀಲ್ಡ್ ಟೆಸ್ಟ್ ಕಿಟ್ ಅನ್ನು ವಿತರಿಸಲಾಗಿದ್ದು, ನಳ, ಬಾವಿ, ಬೋರ್‌ವೆಲ್ ಹಾಗೂ ಟ್ಯಾಂಕ್‌ಗಳಲ್ಲಿರುವ ನೀರು ಕುಡಿಯಲು ಯೋಗ್ಯ ಇದೆಯೇ ಎಂಬ ಬಗ್ಗೆ ಪ್ರತೀ ತಿಂಗಳು ನೀರು ಪರೀಕ್ಷೆ ಮಾಡಬೇಕು. ಗ್ರಾಪಂ ಮಟ್ಟದಲ್ಲಿರುವ ಗ್ರಾಮ ನೀರು ನೈರ್ಮಲ್ಯ ಸಮಿತಿಗಳು ಕಾಲಕಾಲಕ್ಕೆ ಸಭೆ ಸೇರಿ ಶುದ್ಧ ಕುಡಿಯುವ ನೀರು ಸರಬರಾಜು ವ್ಯವಸ್ಥಿತ ರೀತಿಯಲ್ಲಿ ಆಗುತ್ತಿರುವಂತೆ ಮೇಲುಸ್ತುವಾರಿ ಕಾರ್ಯಗಳನ್ನು ಮಾಡಬೇಕು ಎಂದು ಹೇಳಿದರು.ನಳ ನೀರು ಸಂಪರ್ಕ ಕಲ್ಪಿಸಿರುವ ಪ್ರತಿಯೊಂದು ಮನೆಗೂ ಮೀಟರ್ ಅನ್ನು ಅಳವಡಿಸಬೇಕು. ಪ್ರತಿ ಮಾಹೆ ನೀರು ಬಳಕೆಯ ಮಾಪನ ಆಧಾರದ ಮೇಲೆ ಬಿಲ್ ಅನ್ನು ಜನರಿಗೆ ನೀಡುವುದರೊಂದಿಗೆ ನೀರಿನ ಶುಲ್ಕವನ್ನು ಸಂಗ್ರಹಿಸಬೇಕು ಎಂದರು.ಸಭೆಯಲ್ಲಿ ಜಿಪಂ ಮುಖ್ಯ ಯೋಜನಾಧಿಕಾರಿ ಡಾ. ಉದಯ್ ಕುಮಾರ್ ಶೆಟ್ಟಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಉದಯ್ ಕುಮಾರ್, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು, ಅಭಿಯಂತರರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.