ಚಿಕ್ಕಮಗಳೂರುಶೃಂಗೇರಿ ವಿಧಾನಸಭಾ ಕ್ಷೇತ್ರದ ಸ್ಟಾಂಪ್ ಪೇಪರ್ ಹಗರಣ ಮತ್ತು ಜಲಜೀವನ್ ಮಿಷನ್ ಕಾಮಗಾರಿಯ ಭ್ರಷ್ಟಾಚಾರದ ಬಗ್ಗೆ ಸರ್ಕಾರ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಶೃಂಗೇರಿ ವಿಧಾನಸಭಾ ಕ್ಷೇತ್ರದ ಸ್ಟಾಂಪ್ ಪೇಪರ್ ಹಗರಣ ಮತ್ತು ಜಲಜೀವನ್ ಮಿಷನ್ ಕಾಮಗಾರಿಯ ಭ್ರಷ್ಟಾಚಾರದ ಬಗ್ಗೆ ಸರ್ಕಾರ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮಾಜಿ ಸಚಿವ ಡಿ.ಎನ್.ಜೀವರಾಜ್ ಒತ್ತಾಯಿಸಿದರು.ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ದಿಶಾ ಸಭೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಜಲಜೀವನ ಮಿಷನ್‌ನಲ್ಲಿ ನಡೆದಿರುವ ಭ್ರಷ್ಟಾಚಾರ ಕುರಿತು ತನಿಖೆಗೆ ಒತ್ತಾಯಿಸಿದ್ದಾರೆ. ಆಡಳಿತ ಪಕ್ಷದ ಮುಖಂಡರಾದ ಡಾ. ಅಂಶುಮಂತ್, ಎಚ್.ಎಂ. ಸತೀಶ್ ಅವರು ಜೆಜೆಎಂನಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಹೇಳಿಕೆ ನೀಡಿದ್ದಾರೆ.
ಅಶ್ವನ್ ಎಂಬುವರು ಸಮಗ್ರ ತನಿಖೆಗೆ ಒತ್ತಾಯಿಸಿ ಜಿಲ್ಲಾಧಿಕಾರಿ, ಜಿಲ್ಲಾಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗೆ ದೂರು ನೀಡಿದ್ದಾರೆ. ಆದರೂ ತನಿಖೆ ಆರಂಭವಾಗುವ ಲಕ್ಷಣಗಳು ಕಂಡುಬರುತ್ತಿಲ್ಲ ಎಂದರು.ಜಲಜೀವನಮಿಷನ್‌ನಲ್ಲಿ ನಡೆದಿರುವ ಕಾಮಗಾರಿಗಳ ಮಾಹಿತಿ ಕೇಳಿದ್ದು, ದಾಖಲೆನೀಡಲು ₹2.6 ಲಕ್ಷ ಖರ್ಚಾಗುತ್ತದೆ. ಹಣ ಕಟ್ಟಿದರೆ ದಾಖಲೆ ಒದಗಿಸುವುದಾಗಿ ಸಂಬಂಧಿಸಿದ ಅಧಿಕಾರಿಗಳು ತಿಳಿಸಿದ್ದಾರೆ. ಅಷ್ಟು ಹಣ ಕಟ್ಟಲು ಸಾಧ್ಯವಿಲ್ಲದೆ ಹಣಕಟ್ಟಿ ಕೇವಲ 30 ದಾಖಲೆಗಳನ್ನು ಪಡೆದು ಅವುಗಳನ್ನು ಪರಿಶೀಲಿಸಲಾಯಿತು. ಅಸಲಿ ಸ್ಟಾಂಪ್‌ಪೇಪರ್‌ನಲ್ಲಿ ಪ್ರತಿಯೊಂದಕ್ಕೆ ಬೇರೆ ಬೇರೆ ನಂಬರ್‌ಗಳಿರುತ್ತವೆ. ಕ್ಯೂಆರ್‌ಕೋಡ್ ಸ್ಕ್ಯಾನ್‌ಮಾಡಿದಾಗ ಯಾರ ಹೆಸರಿನಲ್ಲಿ ಸ್ಟಾಂಪ್‌ಪೇಪರ್ ಪಡೆದವರ ಮಾಹಿತಿ ಲಭ್ಯವಾಗುತ್ತದೆ ಎಂದರು.
ಆದರೆ ಜಲಜೀವನ ಯೋಜನೆಯಡಿ ಆರ್‌ಡಬ್ಲ್ಯುಎಸ್ ಮತ್ತು ಗುತ್ತಿಗೆದಾರರ ನಡುವಿನ ಒಪ್ಪಂದ ಪತ್ರಕ್ಕೆ ಪಡೆದಿರುವ ಛಾಪಾಕಾಗದಗಳು ನಕಲಿಯಾಗಿರುವುದು ಕಂಡು ಬಂದಿದೆ. 1- 9 ವರೆಗಿನ ಒಂದೇ ನಂಬರಿನ ಛಾಪಾಕಾಗದಗಳು ಮುದ್ರಣ ಗೊಂಡಿವೆ. ಇ ಸ್ಟ್ಯಾಂಪಿಂಗ್ ತಂತ್ರಾಂಶದಲ್ಲಿ ಪರಿಶೀಲಿಸಿದಾಗ ನೋ ಸ್ಟಾಂಪ್‌ಸರ್ಟಿಫಿಕೆಟ್ ಹ್ಯಾಸ್‌ಬೀನ್‌ಫೌಂಡ್ ಎಂದು ಕಂಡುಬರುತ್ತದೆ. ಇದನ್ನು ಗಮನಿಸಿದರೆ ಸ್ಟಾಂಪ್‌ಪೇಪರ್‌ನಲ್ಲೂ ಹಗರಣ ನಡೆದಿರುವುದು ಕಂಡುಬರುತ್ತದೆ ಎಂದು ತಿಳಿಸಿದರು.ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಯೊಂದು ಮನೆಗೂ ಕುಡಿವ ನೀರು ನೀಡುವ ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಜಲಜೀವನ ಮಿಷನ್ ಕಾಮಗಾರಿ ನಡೆಯುತ್ತಿದೆ. ಕೆಲವೆಡೆ ಕೊಳವೆಬಾವಿ ಕೊರೆಸಲಾಗಿದೆ. ಪೈಪ್‌ಲೈನ್, ಓವರ್‌ಹೆಡ್ ಟ್ಯಾಂಕ್ ನಿರ್ಮಿಸಿದ್ದು, ನೀರು ಮಾತ್ರ ನಲ್ಲಿಗಳಿಗೆ ಹರಿದಿಲ್ಲ. ಜಲಜೀವನ ಮಿಷನ್ ಈಗ ಜಲಜೀವನ್ ಕಮಿಷನ್ ಆಗಿ ಪರಿವರ್ತನೆಗೊಂಡಿದೆ ಎಂದು ವ್ಯಂಗ್ಯವಾಡಿದರು.
ಕೊಪ್ಪ ತಾಲೂಕಿನಲ್ಲಿ ಕೊರೆಸಲಾದ ಕೊಳವೆಬಾವಿಗಳ ಆಳದ ಅಳತೆ ಮತ್ತು ಸರ್ಕಾರದಿಂದ ಹಣ ಸಂದಾಯವಾಗಿರುವ ಅಳತೆಯಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಉದಾಹರಣೆಗೆ ಬಿಂತ್ರವಳ್ಳಿ ಗ್ರಾಪಂ ವ್ಯಾಪ್ತಿಯ ಕಡೆಗದ್ದೆ ಗ್ರಾಮದಲ್ಲಿ 228 ಅಡಿ ಅಳದ ಕೊಳವೆಬಾವಿ ಕೊರೆದಿದ್ದು ಸರ್ಕಾರಿ ದಾಖಲೆಯಲ್ಲಿ 360 ಅಡಿಯಾಗಿದೆ. ಮುತ್ತುಗದಾನಿಯಲ್ಲಿ 260 ಅಡಿ ಕೊಳವೆಬಾವಿ ಕೊರೆದಿದ್ದು, ಸರ್ಕಾರಿ ಲೆಕ್ಕ 587 ಅಡಿ ವ್ಯತ್ಯಾಸ 107ಅಡಿಯಾಗಿದೆ ಎಂದು ಮಾಹಿತಿ ನೀಡಿದರು.ಮತ್ತಿನಕೊಪ್ಪ ಪಂಚಾಯಿತಿ ವ್ಯಾಪ್ತಿಯ ಅಸಾಪುರದಲ್ಲಿ 407 ಅಡಿ ಕೊಳವೆಬಾವಿ ಕೊರೆದಿದ್ದು, ಸರ್ಕಾರಿ ಲೆಕ್ಕದಲ್ಲಿ 551 ಅಡಿಯಾಗಿದೆ. ವ್ಯತ್ಯಾಸ 156 ಅಡಿ ಭೌತಿಕವಾಗಿ 60 ಅಡಿ ಕೇಸಿಂಗ್ ಪೈಪ್‌ಹಾಕಿದ್ದರೆ ಸರ್ಕಾರಿ ಲೆಕ್ಕದಲ್ಲಿ 106 ಅಡಿಯಾಗಿದೆ. ವ್ಯತ್ಯಾಸ 45ಅಡಿ, ಶಂಕರಪುರದಲ್ಲಿ 485ಅಡಿ ಕೊಳವೆಬಾಗಿಗೆ ಸರ್ಕಾರಿ ಲೆಕ್ಕದಲ್ಲಿ 528 ಅಡಿ. 77 ಅಡಿ ಕೇಸಿಂಗ್ ಪೈಲ್‌ನಲ್ಲಿ 105 ಕೇಸಿಂಗ್ ಲೆಕ್ಕತೋರಿಸಲಾಗಿದೆ. ವ್ಯತ್ಯಾಸ 28 ಅಡಿಯಾಗಿದೆ. ಬಾಳೆ ಗ್ರಾಮಪಂಚಾಯಿತಿ ವ್ಯಾಪ್ತಿಯ ಬಾಳೆಗ್ರಾಮದಲ್ಲಿ 268 ಅಡಿಕೊಳವೆಬಾವಿ ಕೊರೆದು 525 ಅಡಿ ಆಳವನ್ನು ಸರ್ಕಾರಿ ಲೆಕ್ಕದಲ್ಲಿ ತೋರಿಸಲಾಗಿದೆ. ತಲಮಕ್ಕಿ, ಬಲಗಾರು ಮ್ತು ಗೌರಿ ಹಳ್ಳದಲ್ಲಿ ಕೊಳವೆಬಾವಿ ಕೊರೆಯದೆ ₹1.60 ಲಕ್ಷ,₹1.49 ಲಕ್ಷ, ₹1.38 ಲಕ್ಷ ಪಾವತಿಸಲಾಗಿದೆ ಎಂದು ಹೇಳಿದರು.
ಈ ಕ್ಷೇತ್ರದಲ್ಲಿ ₹115 ಕೋಟಿ ಹೆಚ್ಚು ಹಣ ನೀಡಲಾಗಿದೆ. ಈ ಕೆಲಸದಲ್ಲಿ ಶಾಸಕರ ಎಡಗೈ, ಬಲಗೈ, ಹೃದಯಕ್ಕೆ ಸಂಬಂಧಿಸಿದ ವ್ಯಕ್ತಿಗಳಾಗಿದ್ದಾರೆಂದು ಆರೋಪಿಸಿ, ಸದಸ್ಯದಲ್ಲೇ ಈ ಹಗರಣ, ಹಣದುರುಪಯೋಗಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಮುಖ್ಯಮಂತ್ರಿ ಕಚೇರಿಗೆ ದೂರು ನೀಡಲಾಗುವುದು. ದೆಹಲಿಗೆ ತೆರಳಿ ಕೇಂದ್ರ ಸಚಿವರಿಗೆ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದರು.ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜಶೆಟ್ಟಿ, ರೈತಮೋರ್ಚಾ ರಾಜ್ಯ ಪ್ರಧಾನಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ, ಜಿಲ್ಲಾ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಮಾಧ್ಯಮ ಪ್ರಮುಖ್ ಕೋಟೆ ದಿನೇಶ್, ನಗರಮಂಡಲ ಅಧ್ಯಕ್ಷ ಕೆ.ಎಸ್.ಪುಷ್ಪರಾಜ್, ಪ್ರಕೋಸ್ಟ ಮುಖಂಡ ಚಮಿನ್ ಇದ್ದರು.
