ಸಾರಾಂಶ
ಕನ್ನಡಪ್ರಭ ವಾರ್ತೆ ಆಲೂರು
ಮೂಲಭೂತ ಸೌಲಭ್ಯ ಕಲ್ಪಿಸುವುದು ಸರ್ಕಾರದ ಜವಾಬ್ದಾರಿ. ಹಾಗೆಂದು ಒಂದು ಸೌಲಭ್ಯ ಕಲ್ಪಿಸುವ ಆತುರದಲ್ಲಿ ಇರುವ ಇನ್ನೊಂದು ಸವಲತ್ತನ್ನು ಹಾಳು ಮಾಡುವುದು ಸರಿಯಲ್ಲ. ಇದೀಗ ಮನೆಮನೆಗಳಿಗೆ ಕುಡಿಯುವ ನೀರು ಪೂರೈಸುವ ಜಲಜೀವನ್ ಮಿಷನ್ ಯೋಜನೆ ಕಥೆ ಕೂಡ ಇದೇ ಆಗಿದೆ.ಪಟ್ಟಣದಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲು ಪೈಪ್‌ಲೈನ್ ಅಳವಡಿಸಲಾಗುತ್ತಿದ್ದು, ಇದಕ್ಕಾಗಿ ಜೆಸಿಬಿ ಮೂಲಕ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಗುಂಡಿಗಳನ್ನು ಬಗೆದು ರಸ್ತೆಯನ್ನು ಹದಗೆಡಿಸಲಾಗುತ್ತಿದೆ. ಇದಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನವೇ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ರೀತಿಯ ಕಾಮಗಾರಿಗಳನ್ನು ನಡೆಸುವ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳದಲ್ಲಿರಬೇಕು, ಆದರೆ ಇಲ್ಲಿ ಗುತ್ತಿಗೆದಾರನ ಕಡೆಯ ಕಾರ್ಮಿಕರನ್ನು ಬಿಟ್ಟರೆ ಬೇರೆ ಯಾರು ಇರದ ಕಾರಣ ಬೇಕಾಬಿಟ್ಟಿಯಾಗಿ ಕಾಮಗಾರಿ ನಡೆಸಲಾಗುತ್ತಿದೆ. ಇದರಿಂದಾಗಿ ಪಟ್ಟಣದ ದೊಡ್ಡಿಬಿದ್ದಿ,ಸುಣ್ಣದ ಬೀದಿ,ಸೇರಿದಂತೆ ಅಲ್ಲವೇಡೆ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಈ ಬಗ್ಗೆ ಕಾಮಗಾರಿ ನಡೆಸುತ್ತಿರುವವರನ್ನು ಪ್ರಶ್ನಿಸಿದರೆ ನೀರಿನ ಸಂಪರ್ಕ ಕಲ್ಪಿಸುವ ಸಂದರ್ಭದಲ್ಲಿ ಪುನಃ ಬಗೆಯಬೇಕು. ಆ ನಂತರ ಡಾಂಬರೀಕರಣ ನಡೆಸಿ ಮುಚ್ಚಲಾಗುವುದೆಂದು ಹೇಳಿ ಸಾರ್ವಜನಿಕರ ಕಣ್ಣಿಗೆ ಮಣ್ಣೆರಚುತ್ತಿದ್ದಾರೆ.
ಪಟ್ಟಣದಲ್ಲಿರುವ ಮುಖ್ಯ ರಸ್ತೆ ಸೇರಿದಂತೆ ಇತರ ರಸ್ತೆಗಳ ಸ್ಥಿತಿ ಹದಗೆಟ್ಟಿದ್ದು, ಈಗ ಗಾಯದ ಮೇಲೆ ಬರೆ ಎಳೆದಂತೆ, ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿ ನಡೆಸುವವರು ರಸ್ತೆಗಳನ್ನು ಸಂಪೂರ್ಣ ಹದಗೆಡಿಸುತ್ತಿದ್ದು, ರಸ್ತೆಯ ಬದಿಗಳಲ್ಲಿ ಪೈಪ್‌ಲೈನ್ ಅಳವಡಿಸಬೇಕೆಂಬ ನಿಯಮವಿದ್ದರೂ, ಇದನ್ನು ಗಾಳಿಗೆ ತೂರಿ ಕೆಲವೆಡೆ ರಸ್ತೆಯ ಮಧ್ಯದಲ್ಲಿ ಗುಂಡಿ ತೋಡಲಾಗುತ್ತಿದ್ದು, ಇದರಿಂದಾಗಿ ರಸ್ತೆಯ ಅಕ್ಕಪಕ್ಕದ ಮನೆಗಳೆಲ್ಲ ಧೂಳುಮಯವಾಗಿ ಹಲವಾರು ಮಕ್ಕಳು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಮುಂದಿನ ದಿನಗಳಲ್ಲಿ ಮಳೆ ಏನಾದರೂ ಬಂದರೆ ಈ ರಸ್ತೆಗಳು ಸಂಪೂರ್ಣ ಕೆಸರುಮಯವಾಗಲಿದ್ದು, ಜನರು ಓಡಾಡಲು ಹರಸಾಹಸ ಪಡಬೇಕಾಗುತ್ತದೆ.ಗುತ್ತಿಗೆದಾರರು ಈ ರೀತಿ ಬೇಕಾಬಿಟ್ಟಿಯಾಗಿ ಕಾಮಗಾರಿ ನಡೆಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಏಕೆ ಕಣ್ಮುಚ್ಚಿ ಕುಳಿತಿದ್ದಾರೆ ಎಂಬುದು ತಿಳಿಯದಾಗಿದೆ. ಪಟ್ಟಣ ಪಂಚಾಯಿತಿಯವರೇಕೆ ಚಕಾರವೆತ್ತುತ್ತಿಲ್ಲ ಎಂಬುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಆದುದರಿಂದ ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಇತ್ತ ಗಮನಹರಿಸಿ ಸಾರ್ವಜನಿಕರು ಪ್ರತಿಭಟನೆಯ ಹಾದಿ ಹಿಡಿಯುವ ಮೊದಲು ಸಮಸ್ಯೆಗೆ ಸೂಕ್ತ ಪರಿಹಾರ ಕಲ್ಪಿಸಬೇಕಾಗಿದೆ.
ಈ ಸಂಬಂಧವಾಗಿ ಪತ್ರಿಕೆಯೊಂದಿಗೆ ಮಾತನಾಡಿದ ದೊಡ್ಡ ಬೀದಿ ವಾರ್ಡ್‌ನ ಸದಸ್ಯ ತೌಫಿಕ್ ಅಹಮದ್, ಜಲ್‌ಜೀವನ್ ಮಿಷನ್ ವತಿಯಿಂದ ನಮ್ಮ ವಾರ್ಡ್‌ಗಳಲ್ಲಿ ಕೆಲಸದ ಮಾಡುತ್ತಿರುವ ವಿಚಾರ ನಮ್ಮ ಗಮನಕ್ಕೆ ಬಂದಿಲ್ಲ. ಪಟ್ಟಣ ಪಂಚಾಯಿತಿ ವತಿಯಿಂದ ಅನುಮತಿ ಪಡೆದಿದ್ದಾರೋ ಇಲ್ಲವೋ ಎಂಬುದು ತಿಳಿಯದಾಗಿದ್ದು, ಸೋಮವಾರ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ರಸ್ತೆ ಮಧ್ಯದಲ್ಲೇನಾದರೂ ಗುಂಡಿ ತೋಡಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.ಸ್ಥಳೀಯ ನಿವಾಸಿ ಅಸ್ಲಾಂ ಪಾಷ ಮಾತನಾಡಿ, ನಮ್ಮ ಮನೆಯ ಮುಂದೆಯೇ ರಸ್ತೆ ಮಧ್ಯೆ ಪೈಪ್ ಅಳವಡಿಸಿದ್ದು, ರಸ್ತೆಯನ್ನು ಸಂಪೂರ್ಣ ಹಾಳು ಮಾಡಿದ್ದಾರೆ. ಇದರಿಂದಾಗಿ ನಮ್ಮ ಮನೆಯೊಳಗೆಲ್ಲ ಧೂಳು ತುಂಬಿದ್ದು, ಮಕ್ಕಳು, ವಯೋವೃದ್ಧರು ಓಡಾಡಲಾರದಂತ ಸ್ಥಿತಿ ನಿರ್ಮಾಣವಾಗಿದೆ. ಗುತ್ತಿಗೆದಾರ ಬೇಕಾಬಿಟ್ಟಿಯಾಗಿ ಕಾಮಗಾರಿ ನಡೆಸುತ್ತಿದ್ದರೂ ಯಾರೊಬ್ಬರೂ ಧ್ವನಿ ಎತ್ತುತ್ತಿಲ್ಲ, ನಾವು ಪ್ರಶ್ನಿಸಿದರೆ ಬೇಕಾಬಿಟ್ಟಿ ಉತ್ತರ ನೀಡುತ್ತಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಇತ್ತ ಗಮನಹರಿ ರಸ್ತೆಯನ್ನು ಸರಿಪಡಿಸದಿದ್ದರೆ, ಪಟ್ಟಣ ಪಂಚಾಯತಿಯ ಮುಂದೆ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.