ಜಲಜೀವನ್‌ ಮಿಷನ್‌ ಕಾಮಗಾರಿಯಲ್ಲಿ ಕಳಪೆ: ಅರಕಲಗೂಡು ಗ್ರಾಮಸ್ಥರ ಆರೋಪ

| Published : May 27 2024, 01:08 AM IST

ಜಲಜೀವನ್‌ ಮಿಷನ್‌ ಕಾಮಗಾರಿಯಲ್ಲಿ ಕಳಪೆ: ಅರಕಲಗೂಡು ಗ್ರಾಮಸ್ಥರ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಅರಕಲಗೂಡು ತಾಲೂಕಿನಲ್ಲಿ ಪ್ರಗತಿಯಲ್ಲಿರುವ ಜಲಜೀವನ್ ಮಿಷನ್ ಹಾಗೂ ಬಹುಗ್ರಾಮ ಕುಡಿಯುವ ನೀರು ಸರಬರಾಜು ಮಾಡುವ ‘ಮನೆ ಮನೆಗೆ ಗಂಗೆ’ ಯೋಜನೆ ಕಾಮಗಾರಿ ಹಲವು ಗ್ರಾಮಗಳಲ್ಲಿ ಕಳಪೆಯಿಂದ ಕೂಡಿರುವುದು ಗ್ರಾಮಸ್ಥರ ಆಕ್ಷೇಪಕ್ಕೆ ಕಾರಣವಾಗುತ್ತಿದೆ.

ತುಂಡು ಗುತ್ತಿಗೆ ಪಡೆದವರಿಂದ ಕೃತ್ಯ । ಕಡಿಮೆ ಗುಣಮಟ್ಟದ ಪರಿಕರಗಳ ಬಳಕೆ । ‘ಮನೆ ಮನೆಗೆ ಗಂಗೆ’ ಯೋಜನೆ ಕಾರ್ಯವೂ ಹಿಂದೆ

ಕನ್ನಡಪ್ರಭ ವಾರ್ತೆ ಅರಕಲಗೂಡು

ತಾಲೂಕಿನಲ್ಲಿ ಪ್ರಗತಿಯಲ್ಲಿರುವ ಜಲಜೀವನ್ ಮಿಷನ್ ಹಾಗೂ ಬಹುಗ್ರಾಮ ಕುಡಿಯುವ ನೀರು ಸರಬರಾಜು ಮಾಡುವ ‘ಮನೆ ಮನೆಗೆ ಗಂಗೆ’ ಯೋಜನೆ ಕಾಮಗಾರಿ ಹಲವು ಗ್ರಾಮಗಳಲ್ಲಿ ಕಳಪೆಯಿಂದ ಕೂಡಿರುವುದು ಗ್ರಾಮಸ್ಥರ ಆಕ್ಷೇಪಕ್ಕೆ ಕಾರಣವಾಗುತ್ತಿದೆ.

ಕಳೆದ 2023ರ ಜ.21 ರಂದು ಪಟ್ಟಣದ ಕ್ರೀಡಾಂಗಣದಲ್ಲಿ ಬಹುಗ್ರಾಮ ಕುಡಿಯುವ ನೀರು ಹಾಗೂ ಜಲಜೀವನ್ ಮಿಷನ್ ಯೋಜನೆಗೆ ಶಂಕುಸ್ಥಾಪನೆಯನ್ನು ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ, ಸಂಸದ ಪ್ರಜ್ವಲ್ ರೇವಣ್ಣ, ಕ್ಷೇತ್ರದ ಶಾಸಕರಾಗಿದ್ದ ಎ.ಟಿ.ರಾಮಸ್ವಾಮಿ ನೆರವೇರಿಸಿದ್ದರು. ಆದರೆ ಚುನಾವಣೆ ನಂತರ ಹಾಲಿ ಶಾಸಕ ಎ.ಮಂಜು ಅವಧಿಯಲ್ಲಿ ಕಾಮಗಾರಿಗೆ ಚಾಲನೆ ನೀಡಿದ್ದು, ಶೇ.50 ರಷ್ಟು ಕಾಮಗಾರಿ ಮುಗಿದ್ದಿದೆ. ಉಳಿದ ಕೆಲಸ ಪ್ರಗತಿಯಲ್ಲಿದೆ.

ತಾಲೂಕಿನ ರಾಮನಾಥಪುರ ಹೋಬಳಿಯ ಆನಂದೂರು ಬಳಿ ಕಾವೇರಿ ನದಿಯಿಂದ ತಾಲೂಕು ಮತ್ತು ಹಳ್ಳಿಮೈಸೂರು ಹೋಬಳಿಯ ಒಟ್ಟು 84 ಗ್ರಾಮಗಳಿಗೆ ಶಾಶ್ವತ ಶುದ್ಧ ಕುಡಿಯುವ ನೀರು ಸರಬರಾಜು ಯೋಜನೆಗೆ ಅಂದಾಜು ಮೊತ್ತ 94.24 ಕೋಟಿ ರು. ತಾಲೂಕಿನ ಕೊಣನೂರು ಹೋಬಳಿಯ ಬಾನುಗುಂದಿ ಗ್ರಾಮದ ಬಳಿ ಕಾವೇರಿ ನದಿಯಿಂದ ತಾಲೂಕಿನ ಒಟ್ಟು 260 ಗ್ರಾಮಗಳಿಗೆ ನೀರು ಸರಬರಾಜು ಯೋಜನೆಗೆ ಒಟ್ಟು ಅಂದಾಜು ಮೊತ್ತ 217 ಕೋಟಿ ರು. ಹಾಗೂ ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಬೋಳಕ್ಯಾತನಹಳ್ಳಿ ಗ್ರಾಮದ ಬಳಿ ಹೇಮಾವತಿ ನದಿಯಿಂದ ತಾಲೂಕಿನ ಗ್ರಾಮಗಳು ಸೇರಿದಂತೆ ಹಳ್ಳಿಮೈಸೂರು ಹೋಬಳಿಯ ಒಟ್ಟು 138 ಗ್ರಾಮಗಳಿಗೆ ಶುದ್ಧಕುಡಿಯುವ ನೀರು ಸರಬರಾಜು ಯೋಜನೆಯ ಮೊತ್ತ 94.71ಕೋಟಿ ರು. ಆಗಿದೆ.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಮೂರು ಬಹುಗ್ರಾಮ ಕುಡಿಯುವ ನೀರು ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ.

ಕಾಮಗಾರಿ ಕಳಪೆ:

ಈಗಾಗಲೇ ಜಲಜೀವನ್ ಮಿಷನ್ ಯೋಜನೆಯಡಿ ಪ್ರತಿ ಗ್ರಾಮದಲ್ಲಿ ಪೈಪ್‌ಲೈನ್, ಮೀಟರ್ ಅಳವಡಿಕೆ ಕೆಲಸ ಪ್ರಗತಿಯಲ್ಲಿದೆ. ಅದೇ ರೀತಿ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ನದಿಯಿಂದ ಓವರ್ ಹೆಡ್ ಟ್ಯಾಂಕ್ ತನಕ ಎಚ್‌ಡಿಪಿಒ ಗುಣಮಟ್ಟದ ಪೈಪ್‌ಲೈನ್ ಅಳವಡಿಸಲಾಗುತ್ತಿದೆ. ಯೋಜನೆಯಲ್ಲಿ ಒಟ್ಟು 303 ಓವರ್‌ಹೆಡ್ ಟ್ಯಾಂಕ್ ನಿರ್ಮಾಣ ಮಾಡಬೇಕಿದೆ. ಈ ಪೈಕಿ ಈಗಾಗಲೇ 150 ಟ್ಯಾಂಕ್ ನಿರ್ಮಾಣಗೊಂಡಿವೆ. ಶೇ.50 ರಷ್ಟು ಪೈಪ್‌ಲೈನ್ ಕೆಲಸ ಕೂಡ ಮುಗಿದಿದೆ. ಆದರೆ ಕೆಲವು ಕಡೆ ಕಳಪೆ ಟ್ಯಾಂಕ್ ನಿರ್ಮಾಣ ಮತ್ತು ಅವೈಜ್ಞಾನಿಕ ಪೈಪ್‌ಲೈನ್ ಅಳವಡಿಕೆ ಮಾಡಿರುವುದು ಕಂಡು ಬಂದಿದೆ.

ಕಾಪರ್ ವೈರ್ ಕಳವು:

ಈಗಾಗಲೇ ಬಾನುಗುಂದಿ ಗ್ರಾಮದಿಂದ ನೀರು ಸರಬರಾಜು ಮಾಡುವ ನೂತನ ಓವರ್ ಹೆಡ್ ಟ್ಯಾಂಕ್‌ಗಳಿಗೆ ಕಾಪರ್ ವೈರ್ ಇರುವ ಪೈಪ್‌ಲೈನ್ ಹೂಳುವ ಕೆಲಸ ನಡೆಯುತ್ತಿದೆ. ಆಂಧ್ರಪ್ರದೇಶ ಮೂಲದ ಗುತ್ತಿಗೆದಾರನಿಗೆ ಕಾಮಗಾರಿ ನೀಡಲಾಗಿದೆ. ಸ್ಥಳೀಯವಾಗಿ ಗುತ್ತಿಗೆ ಪಡೆದು ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು ಪೈಪ್‌ನಲ್ಲಿ ಅಳವಡಿಸಿರುವ ಕಾಪರ್ ವೈರ್‌ಗಳನ್ನು ಬಿಚ್ಚಿ ಹಣಕ್ಕಾಗಿ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಈ ಕಾಪರ್ ವೈರ್ ಅಳವಡಿಕೆ ಪೈಪ್‌ನಲ್ಲಿ ಸಮಸ್ಯೆ ಕಂಡು ಬಂದರೆ ಎಷ್ಷು ದೂರದಲ್ಲಿ ಸಮಸ್ಯೆ ಇದೆ ಎಂಬುದನ್ನು ತಿಳಿಯುವ ಸಲುವಾಗಿ ಪೈಪ್ ಉತ್ಪಾದನೆ ಮಾಡುವ ಸಂದರ್ಭದಲ್ಲಿ ಅಳವಡಿಸಲಾಗಿದೆ.

ನೀರು ಸರಬರಾಜು ಮಾಡುವ ವೇಳೆ ಪೈಪ್‌ನಲ್ಲಿ ಸಮಸ್ಯೆ ತಿಳಿಯುವ ಸಲುವಾಗಿ ಇಡೀ ಸರಬರಾಜು ಆಗಿರುವ 300 ಅಡಿ ರೋಲ್‌ನಲ್ಲಿ ಕಾಪರ್ ಅಳವಡಿಸಿರುವುದು ಕಂಡು ಬಂದಿದೆ. ಇದು ಸ್ಸ್ಯೆ ತಿಳಿಯುವ ಡಿಟೆಕ್ಟರ್ ಆಗಿದೆ. ಮುಂದೆ ಹೀಗಾಗದಂತೆ ಎಚ್ಚರಿಕೆ ವಹಿಸಲಾಗುವುದು.

ನವೀನ್‌ಕುಮಾರ್, ಎಇಇ,ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರಿಗೆ ನಿರಂತರವಾಗಿ ಶುದ್ಧ ಕುಡಿಯುವ ನೀರು ಸರಬರಾಜಿಗೆ ಕೋಟ್ಯಂತರ ರು. ವೆಚ್ಚದ ಯೋಜನೆಯನ್ನು ಜಾರಿಗೆ ತಂದಿವೆ. ಆದರೆ ಅಧಿಕಾರಿಗಳ ಮಟ್ಟದಲ್ಲಿ ಗುಣಮಟ್ಟದಿಂದ ಕೆಲಸ ನಡೆಯುತ್ತಿಲ್ಲ.

ಮಾಗೋಡು ಧರ್ಮ, ರೈತ.