ಹೊರಗುತ್ತಿಗೆ ನೌಕರರನ್ನು ಕೈಬಿಟ್ಟ ಜಲಮಂಡಳಿ !

| Published : Oct 04 2024, 01:02 AM IST

ಸಾರಾಂಶ

ದಶಕದಿಂದ ಕಾರ್ಯನಿರ್ವಹಿಸುತ್ತಿರುವ 16 ಮಂದಿ ಹೊರಗುತ್ತಿಗೆ ನೌಕರರನ್ನು ಜಲ ಮಂಡಳಿ ಏಕಾಏಕಿ ಕೆಲಸದಿಂದ ವಜಾಗೊಳಿಸಿದೆ.

ಎಂ.ಅಫ್ರೋಜ್ ಖಾನ್ ಕನ್ನಡಪ್ರಭ ವಾರ್ತೆ ರಾಮನಗರದಶಕದಿಂದ ಕಾರ್ಯನಿರ್ವಹಿಸುತ್ತಿರುವ 16 ಮಂದಿ ಹೊರಗುತ್ತಿಗೆ ನೌಕರರನ್ನು ಜಲ ಮಂಡಳಿ ಏಕಾಏಕಿ ಕೆಲಸದಿಂದ ವಜಾಗೊಳಿಸಿದೆ.ರಾಮನಗರ ಮತ್ತು ಚನ್ನಪಟ್ಟಣ ನಗರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಅವಶ್ಯಕತೆಗೆ ಅನುಗುಣವಾಗಿ ಮಿತಗೊಳಿಸಬೇಕಾದ ಕಾರಣ ಹೊರ ಗುತ್ತಿಗೆ ನೌಕರರನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿದೆ. ಅಷ್ಟಕ್ಕೂ ಈ ಎಲ್ಲ ಗುತ್ತಿಗೆ ನೌಕರರು ಕೋವಿಡ್ ಸಂಕಷ್ಟ ಕಾಲದಲ್ಲಿ ಜೀವದ ಹಂಗ ತೊರೆದು ಕರ್ತವ್ಯ ನಿರ್ವಹಿಸಿದ್ದವರು.ಈವರೆಗೆ ಮಂಡಳಿಯಲ್ಲಿ ಕಾಯಂ ನೌಕರರಿಗಿಂತ ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುವವರ ಸಂಖ್ಯೆಯೇ ಹೆಚ್ಚಿದೆ. ಖಾಸಗಿ ಕಂಪನಿಯೊಂದಕ್ಕೆ ಹೊರಗುತ್ತಿಗೆಯ ಹೊಣೆ ವಹಿಸುತ್ತಾ ಬರಲಾಗಿದೆ. ಈ ಮೊದಲು ಗುರು ರಾಘವೇಂದ್ರ ಎಂಟರ್ ಪ್ರೈಸಸ್ ಸುಮಾರು 10 ವರ್ಷಗಳ ಕಾಲ ಹೊರಗುತ್ತಿಗೆ ನೌಕರರನ್ನು ನೇಮಿಸಿಕೊಂಡಿತ್ತು. ಈ ಅವಧಿಯಲ್ಲಿ ನೌಕರರಿಗೆ ಇಎಸ್‌ಐ, ಪಿಎಫ್‌ ಸೌಲಭ್ಯಗಳನ್ನು ನೀಡದೆ ವಂಚಿಸಿದ ಆರೋಪ ಕಂಪನಿ ಮೇಲಿದೆ. ಕಳೆದೊಂದು ವರ್ಷದಿಂದ ಆರ್ ಆರ್ ಸರ್ವಿಸಸ್ ಕಂಪನಿ ಗುತ್ತಿಗೆ ಪಡೆದಿತ್ತು. ಈಗ ಮತ್ತೆ ಗುರು ರಾಘವೇಂದ್ರ ಎಂಟರ್ ಪ್ರೈಸಸ್ ಕಂಪನಿಯೇ ಹೊರಗುತ್ತಿಗೆ ನೌಕರರ ಟೆಂಡರ್ ಪಡೆದುಕೊಳ್ಳುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಜಲ ಮಂಡಳಿಯ ಪ್ರತಿ ವಿಭಾಗದಲ್ಲಿ ಹುದ್ದೆಗಳನ್ನು ಕಡಿತಗೊಳಿಸಿ ಗುತ್ತಿಗೆ ನೌಕರರನ್ನು ಹೊರ ಹಾಕಲಾಗುತ್ತಿದೆ. ಪ್ರತಿ ವಿಭಾಗದಲ್ಲಿ ಕೆಲಸದಿಂದ ತೆಗದು ಹಾಕುವ ಅಧಿಕಾರವನ್ನು ಕಾರ್ಯನಿರ್ವಾಹಕ ಎಂಜಿನಿಯರ್‌ಗಳಿಗೆ ನೀಡಲಾಗಿದೆ. ಈ ಕುರಿತು ನೌಕರರು ಪ್ರಶ್ನಿಸಿದರೆ ಸರ್ಕಾರದ ಆದೇಶವನ್ನು ಪಾಲಿಸಲಾಗುತ್ತಿದೆ ಎಂದು ಅಧಿಕಾರಿಗಳು ಉತ್ತರಿಸಿದ್ದಾರೆ ಎಂದು ತಿಳಿದುಬಂದಿದೆ.ನೌಕರರಿಗೆ ನೀಡಿರುವ ಪತ್ರದಲ್ಲಿ ಏನಿದೆ ?: ಟಿ.ಕೆ.ಹಳ್ಳಿ, ಗ್ರಾಮದಲ್ಲಿರುವ ಶಿಂಷಾ ನದಿ ಹಾಗೂ ಬೆಂಗಳೂರು ಜಲಮಂಡಳಿಯ ಜಲಶುದ್ದೀಕರಣ ಘಟಕದ ಬ್ಯಾಕ್ ವಾಶ್ ಮೂಲಗಳಿಂದ ಚನ್ನಪಟ್ಟಣ ಹಾಗೂ ರಾಮನಗರ ನಗರಗಳು ಮತ್ತು ಮಾರ್ಗಮಧ್ಯದ ಹಳ್ಳಿಗಳಿಗೆ ಕುಡಿಯುವ ನೀರು ಸರಬರಾಜು ನಿರ್ವಹಣೆಯ ಕಾಮಗಾರಿಯನ್ನು ಗುತ್ತಿಗೆ ಕರಾರನ್ನು ಉಲ್ಲೇಖಿತದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವಿಭಾಗ ಬೆಂಗಳೂರು ಅವರೊಡನೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಸದರಿ ಕರಾರಿನ ಅವಧಿ ಮುಗಿದು ಆಗಸ್ಟ್-2024 ವಿಸ್ತರಿಸಲಾಗಿದೆ.ನೆಟ್ಕಲ್ ಜಲಾಶಯ ಮೂಲದಿಂದ ರಾಮನಗರ ನಗರಕ್ಕೆ ಪ್ರತ್ಯೇಕ ಕುಡಿಯುವ ನೀರು ಸರಬರಾಜು ಯೋಜನೆ ಕಲ್ಪಿಸುವ ಕಾಮಗಾರಿಯ ಟ್ರಯಲ್ ರನ್ ಪ್ರಗತಿಯಲ್ಲಿದ್ದು ಶೀಘ್ರದಲ್ಲಿ ಚಾಲನೆಗೊಳಿಸಿ ಶಿಂಷಾ ನದಿ ಹಾಗೂ ಬೆಂಗಳೂರು ಜಲಮೂಡಳಿಯ ಜಲಶುದ್ದೀಕರಣ ಘಟಕದ ಬ್ಯಾಕ್ ವಾಶ್ ಮೂಲದ ಕುಡಿಯುವ ನೀರುಸರಬರಾಜು ಯೋಜನೆಯ ನಿರ್ವಹಣೆಯನ್ನು ರಾಮನಗರ ನಗರದಲ್ಲಿ ಸ್ಥಗಿತಗೊಳಿಸಲಾಗುವುದು. ಚನ್ನಪಟ್ಟಣ ನಗರಕ್ಕೆ ಶಿಂಷಾ ನದಿ ಮೂಲದ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಪ್ರಸ್ತುತ ನೀರನ್ನು ದಿನದ 24 ಗಂಟೆಗಳಲ್ಲಿ ಪಂಪ್ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ 12 ರಿಂದ 16 ಗಂಟೆ ಅವಧಿಗೆ ಪಂಪ್ ಮಾಡಿ, ಚನ್ನಪಟ್ಟಣ ಜನರಿಗೆ ನೀರು ಸರಬರಾಜು ಮಾಡಬೇಕಿದೆ. ಟಿ.ಕೆ.ಹಳ್ಳಿ ಜಲಶುದ್ದೀಕರಣ ಘಟಕದಿಂದ ಚನ್ನಪಟ್ಟಣದವರೆಗೆ ಹಾಗೂ ಚನ್ನಪಟ್ಟಣ ನಗರ ಮತ್ತು ರಾಮನಗರ ನಗರ ವ್ಯಾಪ್ತಿಯಲ್ಲಿ ಹಾಲಿ ಇರುವ ಸಿಬ್ಬಂದಿಗಳನ್ನು ಅವಶ್ಯಕತೆಗೆ ಅನುಗುಣವಾಗಿ ಮಿತಗೊಳಿಸಬೇಕಾಗಿದೆ.ಆರ್ ಆರ್ ಸರ್ವಿಸ್ ನಲ್ಲಿ ಕೆಲಸ ಮಾಡುತ್ತಿರುವ ನಿಮಗೆ ಈ ಮೊದಲೆ 2024ರ ಜುಲೈ 4ರಂದು ತಿಳುವಳಿಕೆಯ ಪತ್ರದ ಪ್ರಕಾರ ಹಾಗೂ ಮಂಡಳಿಯ ಪತ್ರ 2024ರ ಸೆ.21ರ ಪ್ರಕಾರ ತಮ್ಮನ್ನು ಕರ್ತವ್ಯದಿಂದ 2024ರ ಸೆ.30ರಿಂದ ಬಿಡುಗಡೆ ಗೊಳಿಸಲಾಗಿದೆ ಎಂದು ಆರ್ ಆರ್ ಕಂಪನಿ ಹೊರಗುತ್ತಿಗೆ ಸಿಬ್ಬಂದಿಗಳಿಗೆ ನೀಡಿರುವ ತಿಳುವಳಿಕೆ ಪತ್ರದಲ್ಲಿ ತಿಳಿಸಿದೆ. ಮಂಡಳಿಯ ನೌಕರರು ನೀರಿನ ಕರ ಸಂಗ್ರಹ, ಬಿಲ್ ವಿತರಣೆ, ಅನಧಿಕೃತ ಕೊಳಾಯಿಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಹಗಲಿರುಳು ಎನ್ನದೇ ಕೆಲಸ ಮಾಡುತ್ತಿದ್ದಾರೆ. ನೆಟ್ಕಲ್ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕಾಗಿ ಹೆಚ್ಚಿನ ನೌಕರರ ಅಗತ್ಯವೂ ಇದೆ. ಹೀಗಿದ್ದರೂ ನೌಕರರನ್ನು ಕೆಲಸದಿಂದ ತೆಗೆಯಲಾಗುತ್ತಿದೆ. ಕಂಪನಿಯ ಈ ನಿರ್ಧಾರಕ್ಕೆ ಹೊರ ಗುತ್ತಿಗೆ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಹೊರ ಗುತ್ತಿಗೆ ನೌಕರರಲ್ಲಿ ಕಡಿಮೆ ಸೇವಾನುಭವ ಇರುವವರನ್ನು ಉಳಿಸಿಕೊಂಡು ಹಿರಿಯರನ್ನು ತೆಗೆಯಲಾಗಿದೆ. ಕಚೇರಿಯಲ್ಲಿನ ಪರಿಕರಗಳನ್ನು ಗುಳುಂ ಮಾಡಿರುವ ನೌಕರರು, ನೀರಿನ ಬಿಲ್ ಕಡಿಮೆ ಮಾಡಿಸುವ ನೆಪದಲ್ಲಿ ಗ್ರಾಹಕರನ್ನು ವಂಚಿಸಿರುವ ಬಿಲ್ ಕಲೆಕ್ಟರ್‌ಗಳನ್ನು ಕೈಬಿಡಲಾಗಿದೆ. ಸಹಾಯಕ ಅಭಿಯಂತರರೊಬ್ಬರು ಚಿತ್ರದುರ್ಗಕ್ಕೆ ವರ್ಗಾವಣೆಯಾಗಿದ್ದರೂ ಸ್ಥಳ ಬಿಡದೆ ಅನಧಿಕೃವಾಗಿ ಕರ್ತವ್ಯ ನಿರ್ವಹಿಸಿ ಹೊರಗುತ್ತಿಗೆ ನೌಕರರಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.ಈಗಾಗಲೇ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ , ಸಂಸದ ಡಾ.ಸಿ.ಎನ್ .ಮಂಜುನಾಥ್ ಹಾಗೂ ಶಾಸಕ ಇಕ್ಬಾಲ್ ಹುಸೇನ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿರುವ ಹೊರಗುತ್ತಿಗೆ ನೌಕರರು ವಾಸ್ತವ ಸ್ಥಿತಿಯನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ. ಅವರಿಂದಲೂ ನ್ಯಾಯ ಸಿಗದಿದ್ದರೆ ಹೋರಾಟದ ಹಾದಿ ಹಿಡಿಯಲು ತೀರ್ಮಾನಿಸಿದ್ದಾರೆ.

ಜಲ ಮಂಡಳಿಯಲ್ಲಿ ಹೊರ ಗುತ್ತಿಗೆ ಆಧಾರದ ಮೇಲೆ ಹಲವು ವರ್ಷಗಳಿಂದ ಕಡಿಮೆ ವೇತನಕ್ಕೆ ದುಡಿಯುತ್ತಿದ್ದೇವೆ. ನಾನಾ ಸೌಲಭ್ಯ ನೀಡುವುದಾಗಿ ಭರವಸೆ ನೀಡಿದ್ದರೂ, ಈವರೆಗೆ ಈಡೇರಿಸಿಲ್ಲ. ಸಿಬ್ಬಂದಿಗಳಿಗೆ ಇಎಸ್‌ಐ, ಪಿಎಫ್‌ ಸೌಲಭ್ಯವೂ ಇಲ್ಲ. ಇದನ್ನೇ ನಂಬಿ ಜೀವನ ಸಾಗಿಸುತ್ತಿದ್ದೇವೊ. ಆದರೀಗ ಸೇವೆಯಿಂದ ವಜಾಗೊಳಿಸುವ ಮೂಲಕ ನಮ್ಮನ್ನು ಬೀದಿಗೆ ತಳ್ಳಿದ್ದಾರೆ.- ನೊಂದ ಹೊರಗುತ್ತಿಗೆ ಸಿಬ್ಬಂದಿ.

ಜಲ ಮಂಡಳಿಯಿಂದ ಯಾವುದೇ ಹೊರಗುತ್ತಿಗೆದಾರರನ್ನು ನಿಯೋಜಿಸಿಲ್ಲ. ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಖಾಸಗಿ ಕಂಪನಿಯವರು ಅಗತ್ಯ ಸಿಬ್ಬಂದಿಯನ್ನು ಉಳಿಸಿಕೊಂಡು ಉಳಿದವರನ್ನು ಸೇವೆಯಿಂದ ಕೈಬಿಟ್ಟಿದ್ದಾರೆ. ನೆಟ್ಕಲ್ ಕುಡಿಯುವ ನೀರಿನ ಯೋಜನೆ ಜಾರಿಯಾಗುತ್ತಿರುವ ಕಾರಣ ಹಳೆ ಪಂಪ್‌ಸೆಟ್ ಇರುವುದಿಲ್ಲ. ನೀರಿನ ಕರ ಸಂಗ್ರಹ ನೋಡಿಕೊಂಡು ಕಂಪನಿಯವರು ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಲಿದೆ.- ಕುಸುಮಾ, ಎಇಇ, ಜಲಮಂಡಳಿ, ರಾಮನಗರ.