ಸಾರಾಂಶ
ಹುಬ್ಬಳ್ಳಿ:
ಸಿದ್ಧಾರೂಢ ಸ್ವಾಮೀಜಿ 95ನೇ ಪುಣ್ಯಾರಾಧನೆ ಸಪ್ತಾಹ ಆ. 20ರ ವರೆಗೆ ನಡೆಯಲಿದ್ದು, ಅಂದು ಸಂಜೆ 5.30ಕ್ಕೆ ಶ್ರೀ ಮಠದ ಆವರಣದಲ್ಲಿರುವ ಪುಷ್ಕರಣಿಯಲ್ಲಿ ಜಲರಥೋತ್ಸವ ಜರುಗಲಿದೆ ಎಂದು ಶ್ರೀಸಿದ್ಧಾರೂಢ ಸ್ವಾಮಿಯವರ ಮಠ ಟ್ರಸ್ಟ್ ಕಮಿಟಿ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟರ ತಿಳಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ವಾದ್ಯಮೇಳದೊಂದಿಗೆ ಶ್ರೀಗಳ ಪಲ್ಲಕ್ಕಿ ಉತ್ಸವ ನಡೆಯಲಿದೆ. ಅಂದು ನಗರದ ವಿವಿಧೆಡೆ ಸಂಚರಿಸುವ ಪಲ್ಲಕ್ಕಿಯು ಶ್ರೀಮಠಕ್ಕೆ ಮರಳಿದ ಬಳಿಕ ಜಲರಥೋತ್ಸವ, ಮಹಾಪೂಜೆ ಜರುಗಲಿದೆ. ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ ಮೊದಲಾದೆಡೆಯಿಂದ 50 ಸಾವಿರಕ್ಕೂ ಅಧಿಕ ಭಕ್ತರು ಸೇರುವ ನಿರೀಕ್ಷೆಯಿದೆ ಎಂದರು.
ಬುಧವಾರ ಸಿದ್ಧಾರೂಢರ ಸಮಾಧಿಗೆ ರುದ್ರಾಭಿಷೇಕ ನೆರವೇರಿಸಿ, ಸಪ್ತಾಹಕ್ಕೆ ಚಾಲನೆ ನೀಡಲಾಗಿದೆ. 20ರ ವರೆಗೆ ಕೈಲಾಸ ಮಂಟಪದಲ್ಲಿ ನಿತ್ಯವೂ ಬೆಳಗ್ಗೆ 7.45ಕ್ಕೆ ಶಿವಾನಂದ ಜೋಶಿ ಅವರಿಂದ ಶ್ರೀ ಸಿದ್ಧಾರೂಢ ಭಾರತಿ ಕಲ್ಪದೃಮ ಪುರಾಣ ಪಠಣ, 9.30ಕ್ಕೆ ಶಾಸ್ತ್ರ ಪ್ರವಚನ, ಸಂಜೆ 5 ಗಂಟೆಗೆ ಕೀರ್ತನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿದಿನ ಬೆಳಗ್ಗೆ 9ರಿಂದ 12ರ ವರೆಗೆ 7 ದಿನ ತತ್ಪೋಪದೇಶ ಉಪನ್ಯಾಸ ಕಾರ್ಯಕ್ರಮಗಳು ನಡೆಯಲಿವೆ. ಆ.15ರಂದು ತತ್ಪೋಪದೇಶ ಉಪನ್ಯಾಸ ನೆರವೇರಲಿದ್ದು, ತಿಮ್ಮಾಪುರ ಶಿವಾನಂದ ಆಶ್ರಮದ ಬಸವರಾಜ ಶ್ರೀಗಳು ಸಾನ್ನಿಧ್ಯ ವಹಿಸುವರು. ಜಡಿಸಿದ್ದೇಶ್ವರ ಮಠದ ರಾಮಾನಂದ ಶ್ರೀ ನೇತೃತ್ವ ವಹಿಸುವರು. ಬಳಕಟ್ಟಿ ಬ್ರಹ್ಮವಿದ್ಯಾಶ್ರಮದ ನಿಜಗುಣಶ್ರೀ ಅಧ್ಯಕ್ಷತೆ, ಮತ್ತಿಕಟ್ಟಿ ಶಿವಬಸವ ಶ್ರೀ ಸಮ್ಮುಖ ವಹಿಸುವರು ಎಂದರು.ಆ. 16ರಂದು ತತ್ಪೋಪದೇಶ ಉಪನ್ಯಾಸದ ಸಾನ್ನಿಧ್ಯವನ್ನು ಖುರ್ದಕಂಚನಹಳ್ಳಿ ನಿತ್ಯಾಂದ ಆಶ್ರಮದ ಸುಬ್ರಹ್ಮಣ್ಯ ಶ್ರೀ, ನಯಾನಗರ ಸಿದ್ದಸುಕ್ಷೇತ್ರದ ಅಭಿನವ ಸಿದ್ಧಲಿಂಗ ಶ್ರೀ ನೇತೃತ್ವ, ತೊಂಡಿಕಟ್ಟಿ ಅಭಿನವ ವೆಂಕಟೇಶ ಮಹಾರಾಜರು ಅಧ್ಯಕ್ಷತೆ, ಚಿಕ್ಕುಂಬಿ ನಾಗಲಿಂಗೇಶ್ವರ ಮಠದ ಅಭಿನವ ನಾಗಲಿಂದ ಶ್ರೀ ಸಮ್ಮುಖ ವಹಿಸುವರು. ಆ. 17ರಂದು ತತ್ಪೋಪದೇಶ ಉಪನ್ಯಾಸದಲ್ಲಿ ದೇವರ ಹುಬ್ಬಳ್ಳಿ ಸಿದ್ಧಾಶ್ರಮದ ಸಿದ್ಧಶಿವಯೋಗಿಗಳು ಸಾನ್ನಿಧ್ಯ, ಮಹಾಲಿಂಗಪುರ ಬ್ರಹ್ಮವಿದ್ಯಾಶ್ರಮದ ಸಹಜಾನಂದ ಶ್ರೀ ನೇತೃತ್ವ, ಯಡಳ್ಳಿ ಬಸವಾನಂದಭಾರತಿ ಶ್ರೀ ಅಧ್ಯಕ್ಷತೆ, ಹುಣಶ್ಯಾಳ ಸಿದ್ಧಲಿಂಗ ಕೈವಲ್ಯಾಶ್ರಮದ ನಿಜಗುಣದೇವರು ಸಮ್ಮುಖ ವಹಿಸುವರು. 18ರಂದು ನಡೆಯುವ ತತ್ಪೋಪದೇಶ ಉಪನ್ಯಾಸದಲ್ಲಿ ಹುಬ್ಬಳ್ಳಿ ಶಾಂತಾಶ್ರಮದ ಅಭಿನವ ಸಿದ್ಧಾರೂಢ ಶ್ರೀ ಸಾನ್ನಿಧ್ಯ, ಹಂಪಿ ಬಳ್ಳೂರು ಸಿದ್ಧಾರೂಢಾಶ್ರಮದ ವಿದ್ಯಾನಂದ ಶ್ರೀ ನೇತೃತ್ವ, ಅಣ್ಣಿಗೇರಿ ದಾಸೋಹ ಮಠದ ಶಿವಕುಮಾರ ಶ್ರೀ ಅಧ್ಯಕ್ಷತೆ ವಹಿಸುವರು. ನರಗುಂದ ಪತ್ರಿವನ ಮಠದ ಸಿದ್ಧವೀರ ಶಿವಯೋಗಿಗಳು ಸಮ್ಮುಖ ವಹಿಸುವರು ಎಂದು ಮಾಹಿತಿ ನೀಡಿದರು.
19ರಂದು ನಡೆಯುವ ತತ್ಪೋಪದೇಶ ಉಪನ್ಯಾಸದಲ್ಲಿ ಬಾಗಲಕೋಟೆ ರಾಮಾರೂಢ ಮಠದ ಪರಮಾರೂಢ ಶ್ರೀ ಸಾನ್ನಿಧ್ಯ, ಮುಂಬೈನ ಸಹಜಾನಂದ ಶ್ರೀ ನೇತೃತ್ವ, ಗೋಕಾಕ ಶಾಮಾನಂದ ಆಶ್ರಮದ ಅತ್ಯಾನಂದ ಶ್ರೀ ಅಧ್ಯಕ್ಷತೆ, ತಂಗಡಗಿಯ ಅನ್ನದಾನಭಾರತಿ ಶ್ರೀ ಸಮ್ಮುಖ ವಹಿಸುವರು. ಆ. 20ರಂದು ಆರೂಢ ಮಹಿಮೆ ತತ್ಪೋಪದೇಶ ಉಪನ್ಯಾಸದಲ್ಲಿ ಇಂಚಲ ಸಾಧುಸಂಸ್ಥಾನ ಮಠದ ಶಿವಾನಂದ ಭಾರತಿ ಶ್ರೀ ಹಾಗೂ ಹೊಸದುರ್ಗ ಬ್ರಹ್ಮವಿದ್ಯಾನಗರದ ಪುರುಷೋತ್ತಮಾನಂದಪುರಿ ಶ್ರೀ ಸಾನ್ನಿಧ್ಯ, ಕಾಡರಕೊಪ್ಪ ಪೂರ್ಣಾನಂದ ಆಶ್ರಮದ ದಯಾನಂದ ಸರಸ್ವತಿ ಶ್ರೀ ನೇತೃತ್ವ, ಚಿತ್ರದುರ್ಗ ಕಬೀರಾನಂದಾಶ್ರಮದ ಶಿವಲಿಂಗಾನಂದ ಶ್ರೀಗಳು ಸಮ್ಮುಖವಹಿಸುವರು ಎಂದರು.ಮಠದಲ್ಲಿ 100ಕ್ಕೂ ಹೆಚ್ಚು ಕೊಠಡಿ, 100 ಶೌಚಾಲಯಗಳ ನಿರ್ಮಾಣ, ಬೆಳ್ಳಿ ಆನೆ ಅಂಬಾರಿ ಅಳವಡಿಕೆ, ಭಕ್ತರು ಮಲಗಲು ಚಾಪೆ–ದಿಂಬು ವ್ಯವಸ್ಥೆ, ಸಿದ್ಧಾರೂಢರ ತತ್ವಗಳುಳ್ಳ 108 ಗ್ರಂಥಗಳ ಮುದ್ರಣ, ಅತ್ಯಾಧುನಿಕ ಸೌಲಭ್ಯವುಳ್ಳ ಅಡುಗೆಮನೆ, ಅಂಚಟಗೇರಿಯಲ್ಲಿ ಪತ್ರಿವನ, ಗೋ ಕೇಂದ್ರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು, ಮುಂದಿನ ವರ್ಷದ ಶಿವರಾತ್ರಿಯೊಳಗೆ ಎಲ್ಲವೂ ಪೂರ್ಣಗೊಳ್ಳಲಿವೆ. ಕೆರೆ ಸೌಂದರ್ಯೀಕರಣ, ಗುರುಕುಲ, ಸಂಶೋಧನಾ ಕೇಂದ್ರ ಸ್ಥಾಪನೆ ಕಾರ್ಯ ಆರಂಭಿಸಲಾಗುವುದು ಎಂದರು.
ಈ ವೇಳೆ ಕಮಿಟಿ ಉಪಾಧ್ಯಕ್ಷ ಮಂಜುನಾಥ ಎಸ್. ಮುನವಳ್ಳಿ, ಗೌರವ ಕಾರ್ಯದರ್ಶಿ ಸರ್ವಮಂಗಳಾ ಎನ್. ಪಾಠಕ, ಧರ್ಮದರ್ಶಿಗಳಾದ ಬಾಳು ಮಗಜಿಕೊಂಡಿ, ವಿನಾಯಕ ಘೋಡ್ಕೆ, ಶಾಮಾನಂದ ಪೂಜೇರಿ, ಚನ್ನವೀರ ಮುಂಗುರವಾಡಿ, ಉದಯಕುಮಾರ ನಾಯ್ಕ ಸೇರಿದಂತೆ ಹಲವರಿದ್ದರು.