ಸಂಭ್ರಮದ ಸಿದ್ಧಾರೂಢರ ಜಲರಥೋತ್ಸವ

| Published : Aug 21 2024, 12:32 AM IST

ಸಾರಾಂಶ

ಸಾವಿರಾರು ಭಕ್ತರ ಸಮ್ಮುಖದಲ್ಲಿ ಮೊಳಗಿದ ಮಂತ್ರ-ಘೋಷಗಳೊಂದಿಗೆ ಸಿದ್ಧಾರೂಢರಿಗೆ ಶ್ರೀಮಠದ ಟ್ರಸ್ಟ್‌ ಕಮೀಟಿ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟರ ಪೂಜೆ ಸಲ್ಲಿಸುವ ಮೂಲಕ ಜಲರಥೋತ್ಸವಕ್ಕೆ ಚಾಲನೆ ನೀಡಿದರು.

ಹುಬ್ಬಳ್ಳಿ:

ಇಲ್ಲಿನ ಸಿದ್ಧಾರೂಢಸ್ವಾಮಿಯ 95ನೇ ಪುಣ್ಯಾರಾಧನೆ ಅಂಗವಾಗಿ ಶ್ರೀಮಠದ ಆವರಣದಲ್ಲಿರುವ ಕಲ್ಯಾಣಿ (ಪುಷ್ಕರಣಿ)ಯಲ್ಲಿ ಶ್ರಾವಣ ಮಂಗಳವಾರ ಸಂಜೆ ಸಹಸ್ರಾರು ಭಕ್ತರ ಜಯಘೋಷಗಳ ಮಧ್ಯೆ ಶ್ರೀಸಿದ್ಧಾರೂರೂಢರ ಜಲರಥೋತ್ಸವ (ತೆಪ್ಪದತೇರು) ಅದ್ಧೂರಿಯಾಗಿ ಜರುಗಿತು.

ಬಿದಿರಿನಿಂದ ತಯಾರಿಸಿದ ತೇರಿನಲ್ಲಿ ಸಿದ್ಧಾರೂಢರ ಹಾಗೂ ಗುರುನಾಥಾರೂಢರ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಹೂವುಗಳಿಂದ ಅಲಂಕರಿಸಲಾಗಿತ್ತು. ಸಂಜೆ ನಗರದಾದ್ಯಂತ ಸಂಚರಿಸಿ ಶ್ರೀಮಠಕ್ಕೆ ಆಗಮಿಸಿದ ಪಲ್ಲಕ್ಕಿ ಬಳಿಕ ಸಾವಿರಾರು ಭಕ್ತರ ಸಮ್ಮುಖದಲ್ಲಿ ಮೊಳಗಿದ ಮಂತ್ರ-ಘೋಷಗಳೊಂದಿಗೆ ಸಿದ್ಧಾರೂಢರಿಗೆ ಶ್ರೀಮಠದ ಟ್ರಸ್ಟ್‌ ಕಮೀಟಿ ಅಧ್ಯಕ್ಷ ಬಸವರಾಜ ಕಲ್ಯಾಣಶೆಟ್ಟರ ಪೂಜೆ ಸಲ್ಲಿಸುವ ಮೂಲಕ ಜಲರಥೋತ್ಸವಕ್ಕೆ ಚಾಲನೆ ನೀಡಿದರು.

ಕಲ್ಯಾಣಿಯ ಸುತ್ತಲೂ ನಿಂತಿದ್ದ ಸಾವಿರಾರು ಭಕ್ತರು, ಜಲರಥೋತ್ಸವ ಆರಂಭಗೊಳ್ಳುತ್ತಿದ್ದಂತೆ ಶ್ರೀಸಿದ್ಧಾರೂಢ ಮಹಾರಾಜ ಕೀ ಜೈ, ಶ್ರೀಗುರುನಾಥಾರೂಢ ಮಹಾರಾಜ ಕೀ ಜೈ, ಓಂ ನಮಃ ಶಿವಾಯ, ಹರಹರ ಮಹಾದೇವ... ಎಂಬ ಜಯಘೋಷ ಮೊಳಗಿಸಿ ಸಂಭ್ರಮಿಸಿದರು.

ಈ ವೇಳೆ ಟ್ರಸ್ಟ್‌ ಉಪಾಧ್ಯಕ್ಷ ಮಂಜುನಾಥ ಮುನವಳ್ಳಿ, ಗೌರವ ಕಾರ್ಯದರ್ಶಿ ಸರ್ವಮಂಗಳಾ ಪಾಠಕ, ಧರ್ಮದರ್ಶಿಗಳಾದ ರಮೇಶ ಬೆಳಗಾವಿ, ಗೋವಿಂದ ಮಣ್ಣೂರ, ವಿನಾಯಕ ಘೋಡ್ಕೆ, ಉದಯಕುಮಾರ ನಾಯ್ಕ, ಕೆ.ಎಲ್‌. ಪಾಟೀಲ, ವಿ.ಡಿ. ಕಾಮರಡ್ಡಿ, ವಿ.ವಿ. ಮಲ್ಲಾಪುರ, ಬಾಳು ಮಗಜಿಕೊಂಡಿ, ಚನ್ನವೀರ ಮುಂಗರವಾಡಿ, ಗೀತಾ ಕಲಬುರ್ಗಿ, ಶಾಮಾನಂದ ಪೂಜೇರಿ, ಸಿದ್ದನಗೌಡ ಪಾಟೀಲ ಹಾಗೂ ನೂರಾರು ಸ್ವಾಮೀಜಿಗಳು, ಸಾವಿರಾರು ಭಕ್ತರು ಜಲರಥೋತ್ಸವದ ವೈಭವ ಕಣ್ತುಂಬಿಕೊಂಡರು.ಏಳು ದಿನಗಳಿಂದ ವಿಶೇಷ ಕಾರ್ಯಕ್ರಮ:

ಸಿದ್ಧಾರೂಢರ ಪುಣ್ಯಾರಾಧನೆ ಹಿನ್ನೆಲೆಯಲ್ಲಿ ಆ. 14ರಿಂದ 7 ದಿನ ಕೈಲಾಸ ಮಂಟಪದಲ್ಲಿ ಸಿದ್ಧಾರೂಢಸ್ವಾಮಿ ಪುರಾಣ ಪಠಣ, ವಿವಿಧ ಶ್ರೀಗಳಿಂದ ಏಳು ದಿನ ಶ್ರೀಸಿದ್ಧಾರೂಢ ಭಾರತಿ ಕಲ್ಪದೃಮ ಪುರಾಣ ಪಠಣ, ತತ್ಪೋಪದೇಶ ಉಪನ್ಯಾಸ ನೆರವೇರಿತು. ನಿತ್ಯವೂ ಹಲವು ಮಠಾಧೀಶರಿಂದ ವಿಶೇಷ ಉಪನ್ಯಾಸ, ಪುರಾಣ ಪ್ರವಚನ ಹಮ್ಮಿಕೊಳ್ಳಲಾಯಿತು.ಸಂಭ್ರಮದ ಪಲ್ಲಕ್ಕಿ ಉತ್ಸವ

ಜಲರಥೋತ್ಸವದ ಅಂಗವಾಗಿ ಬೆಳಗ್ಗೆಯಿಂದಲೇ ಸಿದ್ಧಾರೂಢಸ್ವಾಮಿ ಹಾಗೂ ಗುರುನಾಥಾರೂಢರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ವಿವಿಧ ಧಾರ್ಮಿಕ ಕಾರ್ಯಗಳು ನಡೆದವು. ಬೆಳಗ್ಗೆ ಶ್ರೀಮಠದಿಂದ ಪಲ್ಲಕ್ಕಿ ಉತ್ಸವವು ಹೊರಟು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಮಠಕ್ಕೆ ಆಗಮಿಸಿತು. ಬಳಿಕ ಜಲರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಈ ಉತ್ಸವಕ್ಕೆ ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಸಾವಿರಾರು ಭಕ್ತರು ಆಗಮಿಸಿದ್ದರು.