ಸಾರಾಂಶ
ಮಾದಿಗ ದಂಡೋರ ಸಮಿತಿಯ ಎಂ.ಶಂಕ್ರಪ್ಪ ವಿಷಾದ । ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಆದಿ ಜಾಂಬವ ಜಯಂತಿಕನ್ನಡಪ್ರಭ ವಾರ್ತೆ ಅರಸೀಕೆರೆ
ಜಾಂಬವಂತನು ಸಕಲಕಾಲಕ್ಕೂ ಪ್ರಸ್ತುತ ಆಗಬೇಕಿದೆ. ಭೂಮಿಯ ಮೇಲೆ ಕುರಿ, ಕೋಳಿ ಸೇರಿದಂತೆ ಪ್ರಾಣಿ ಬಲಿ ಪಡೆಯುವ ದೇವಾನು ದೇವತೆಗಳಿಗೆ ದೇವಸ್ಥಾನಗಳಿವೆ. ಆದರೆ ಆಂಜನೇಯ ಸ್ವಾಮಿ ದೇವರಿಗೆ ದೈವಶಕ್ತಿ ನೀಡಿದ ಜಾಂಬವಂತ ಸ್ವಾಮಿಗೆ ಇಲ್ಲಿಯವರೆಗೂ ಯಾವುದೇ ದೇವಾಲಯ ಇಲ್ಲದೇ ಇರುವುದು ದುರಂತ ಮತ್ತು ವಿಪರ್ಯಾಸವಾಗಿದೆ ಎಂದು ಕರ್ನಾಟಕ ರಾಜ್ಯ ಮಾದಿಗ ದಂಡೋರ ಸಮಿತಿಯ ರಾಜ್ಯಾಧ್ಯಕ್ಷ ಎಂ.ಶಂಕ್ರಪ್ಪ ಹೇಳಿದರು.ನಗರದ ಸಿಂಧೂ ಭವನದಲ್ಲಿ ಕರ್ನಾಟಕ ಮಾದಿಗ ದಂಡೋರ ಮೀಸಲಾತಿ ಹೋರಾಟ ಸಮಿತಿ ಹಾಗೂ ಮಾದಿಗ ಜನಾಂಗದ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಆದಿ ಜಾಂಬವ ಜಯಂತ್ಯತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದ್ವಾಪರ ಯುಗ ಹಾಗೂ ತ್ರೇತಾಯುಗಗಳಲ್ಲಿ ಜಾಂಬವಂತನಿಗೆ ವಿಶೇಷ ಮಹತ್ವವಿದೆ. ಶಾಪಗ್ರಸ್ತ ಆಂಜನೇಯ ಸ್ವಾಮಿಗೆ ದೈವಶಕ್ತಿ ನೀಡಿದ್ದು ಜಾಂಬವಂತ, ಶ್ರೀರಾಮನಿಗೂ, ರಾವಣನಿಗೂ ಜರುಗಿದ ಯುದ್ಧ ಸಂದರ್ಭದಲ್ಲಿ ಲಕ್ಷ್ಮಣ ಸಾವನ್ನಪ್ಪಿದಾಗ ಆಂಜನೇಯನಿಗೆ ಸಂಜೀವಿನಿ ಸಸ್ಯ ತರಲು ಸೂಚಿಸಿದರು. ಬಳಿಕ ಆಂಜನೇಯ ಇಡೀ ಪರ್ವತವನ್ನೇ ಕಿತ್ತು ತಂದಾಗ ಜಾಂಬವಂತನು ಸಂಜೀವಿನಿ ಗಿಡದಿಂದ ಲಕ್ಷ್ಮಣನಿಗೆ ಮರು ಜೀವ ಬರಿಸಿದರು. ಅಷ್ಟೇ ಅಲ್ಲದೆ ಮಹಾಭಾರತದಲ್ಲಿ ಶ್ರೀಕೃಷ್ಣನಿಗೂ ಜಾಂಬವಂತನಿಗೂ 21 ದಿನಗಳ ಕಾಲ ನಡೆದ ಯುದ್ಧದ ಅಂತ್ಯದಲ್ಲಿ ಜಾಂಬವಂತನಿಗೆ ಶ್ರೀಕೃಷ್ಣನ ಹಿಂದಿನ ಜನ್ಮದ ಶ್ರೀರಾಮನ ಅವತಾರ ಗೋಚರಿಸಿದ ತಕ್ಷಣ ಶ್ರೀಕೃಷ್ಣನೊಂದಿಗಿನ ಯುದ್ಧವನ್ನು ಸ್ಥಗಿತಗೊಳಿಸಿ ಶ್ರೀಕೃಷ್ಣನಿಗೆ ತನ್ನ ಮಗಳಾದ ಜಾಂಬವತಿಯನ್ನು ಕೊಟ್ಟು ವಿವಾಹ ಮಾಡಿಕೊಟ್ಟ ಎಂದು ಮಾಹಿತಿ ನೀಡಿದರು.ಜಂಬುವಂತ ಜಯಂತಿಯ ಹಿನ್ನೆಲೆಯಲ್ಲಿ ಅರಸೀಕೆರೆ ನಗರದ ರಾಷ್ಟ್ರೀಯ ಹೆದ್ದಾರಿ 206 ರಲ್ಲಿನ ಧನವಂತರಿ ಔಷಧಿಯ ಅಂಗಡಿಯ ಬಳಿಯಿಂದ ಹೊರಟ ಜಾಂಬುವಂತ ಸ್ವಾಮಿಯ ಭಾವಚಿತ್ರ ಮೆರವಣಿಗೆ ಹಾಗೂ ಬೈಕ್ ಜಾಥಾವು ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಹಾಸನ ರಸ್ತೆಯ ಮಾರ್ಗವಾಗಿ ನಗರದ ಜೇನುಕಲ್ ನಗರ ಕ್ರೀಡಾಂಗಣ ಬಳಿ ಇರುವ ಸಿಂಧೂ ಭವನವನ್ನು ತಲುಪಿತು. ಮೆರವಣಿಗೆಯ ಉದ್ದಕ್ಕೂ ಜಾಂಬುವಂತ ಸ್ವಾಮಿಯ ನಾಮಸ್ಮರಣೆ ಹಾಗೂ ಜಯ ಘೋಷಣೆಗಳನ್ನು ಕೂಗಿಕೊಂಡು ಕಾರ್ಯಕರ್ತರು ಸಾಗಿದರು.
ನಂತರ ಮಾತನಾಡಿದ ಹರಳಯ್ಯ ಗುರುಪೀಠದ ಹರಳಯ್ಯ ಮಹಾಸ್ವಾಮಿ, ರಾಮಾಯಣ ಮತ್ತು ಮಹಾಭಾರತಗಳಲ್ಲಿ ಕೆಲವು ಕಾಲ್ಪನಿಕ ಕಥೆಗಳಿವೆ ಎಂಬ ಪ್ರತೀತಿ ಇದೆ. ಕಥೆ ಕಾದಂಬರಿಗಳು ಓದಲು ಅಷ್ಟೇ ಚೆಂದ, ಜೀವನದಲ್ಲಿ ಅಳವಡಿಸಿಕೊಳ್ಳುವುದು ಕಷ್ಟ, ಜ್ಞಾನದ ಸಂಸ್ಕಾರದಿಂದ ಅಂತರಂಗದ ಜ್ಯೋತಿ ಬೆಳಗುತ್ತದೆ ಎಂದು ಹರಳಯ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.ಆದಿ ಜಾಂಬವ ನೌಕರ ಸಂಘದ ಗೌರವಾಧ್ಯಕ್ಷ ಎನ್.ಎಂ.ಶೇಖರಪ್ಪ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಟಿ.ಶಿವಮೂರ್ತಿ, ಕರ್ನಾಟಕ ಮಾದಿಗ ದಂಡೋರ ಸಮಿತಿಯ ಜಿಲ್ಲಾಧ್ಯಕ್ಷ ಎಂ.ಟಿ. ವೆಂಕಟೇಶ್ ತಾಲೂಕು ಅಧ್ಯಕ್ಷ ಎ.ಪಿ. ಚಂದ್ರಯ್ಯ ನಗರ ಅಧ್ಯಕ್ಷ ಎನ್. ಜಯಕುಮಾರ್, ಪ್ರಧಾನ ಕಾರ್ಯದರ್ಶಿ ಎನ್.ಎಚ್. ಕರಿಯಪ್ಪ, ಉಪಾಧ್ಯಕ್ಷ ಮಾಡಾಳು ಸೋಮಶೇಖರ್, ಹಬ್ಬನಗಟ್ಟ ರುದ್ರಮುನಿ, ಜಾಂಬವಂತ ಆಚರಣೆ ಸಮಿತಿಯ ಅಧ್ಯಕ್ಷ ಎಂ ಹನುಮಂತಯ್ಯ, ದೇಶಾಣಿ ಗಿರೀಶ್, ಸಾಮಾಜಿಕ ಕಾರ್ಯಕರ್ತ ಅರಕೆರೆ ಕಿರಣ್ ಕುಮಾರ್, ನಾಗವೇದಿ ಸಿದ್ದಪ್ಪ. ಜಜೂರು ಭಾಸ್ಕರ, ನಿವೃತ್ತ ಶಿಕ್ಷಕ ನರಸಿಂಹಮೂರ್ತಿ. ಜವರಯ್ಯ, ಹೊಂಗಯ್ಯ, ಗುಂಡುಕನಹಳ್ಳಿ ರಾಜು, ವಸೂರು ಗೋವಿಂದರಾಜು ಇದ್ದರು. ಶ್ರೀ ಗುರು ಆದಿ ಜಾಂಬವ ಜಯಂತಿ ಪ್ರಯುಕ್ತ ಸಮಾಜದ ಬಂಧುಗಳು ಅರಸೀಕೆರೆ ನಗರದಲ್ಲಿ ಬೈಕ್ ರ್‍ಯಾಲಿ ನಡೆಸುತ್ತಿರುವುದು.