ಗಂಗಾವತಿ: ತಾಲೂಕಿನ ಹೇಮಗುಡ್ಡದ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಆನೆಯ ಮೇಲೆ ಅಂಬಾರಿ ಜಂಬೂ ಸವಾರಿಯ ಮೆರವಣಿಗೆಗೆ ಅದ್ಧೂರಿಯಾಗಿ ಜರುಗಿತು. ಎರಡನೇ ಮೈಸೂರು ಮಾದರಿಯ ದಸರಾ ಉತ್ಸವಕ್ಕೆ ಸಾಕ್ಷಿಯಾಯಿತು.

ಹೇಮಗುಡ್ಡದ ದುರ್ಗಾಪರಮೇಶ್ವರಿ ದೇಗುಲದಲ್ಲಿ ನವರಾತ್ರಿ ಉತ್ಸವ ಪ್ರಾರಂಭಗೊಂಡು 9 ದಿನಗಳು ಕಳೆದಿದ್ದು, ಅಂಬಾರಿ ಮೆರವಣಿಗೆ ಜರುಗಿತು. ಹೇಮಗುಡ್ಡದಲ್ಲಿ ಕಳೆದ 42 ವರ್ಷಗಳಿಂದ ಪ್ರಾರಂಭಗೊಂಡ ನವರಾತ್ರೋತ್ಸವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪ್ರಸನ್ನಗೊಂಡವು. ಜಂಬೂ ಸವಾರಿಗೆ ಹಾವೇರಿ ಜಿಲ್ಲೆಯ ಆನೆಯ ತಂದು ಅಂಬಾರಿ ಮೆರವಣಿಗೆ ತರಲಾಯಿತು.

ರಾಣಿ ಹೆಸರಿನ ಆನೆಯನ್ನು ಹಾವೇರಿ ಜಿಲ್ಲೆಯ ಶ್ರೀ ದತ್ತಾತ್ರೇಯ ಅವಧೂತ ಗುರುಪೀಠ ಐರಣಿ ಹೊಳೆಮಠದ ಮಹಾಸಂಸ್ಥಾನದಿಂದ ಕರೆತಂದಿದ್ದು, ಆನೆಯ ಮೇಲೆ ದುರ್ಗಾ ಪರಮೇಶ್ವರಿ ಮೂರ್ತಿ ಸಿಂಗರಿಸಿ ಮೆರವಣಿಗೆ ನಡೆಸಲಾಯಿತು. ಕೋಲಾರ, ದೊಡ್ಡಬಳ್ಳಾಪುರ, ಗದಗ, ಹಗರಿಬೊಮ್ಮನಹಳ್ಳಿ, ಹೇಮಗುಡ್ಡ, ಸಿದ್ದಾಪುರದಿಂದ ವಿವಿಧ ಕಲಾ ತಂಡಗಳು ಆಗಮಿದ್ದವು.

ಮಾಜಿ ಸಂಸದ ಎಚ್.ಜಿ. ರಾಮುಲು ಅವರು ಪೂಜೆ ಸಲ್ಲಿಸಿ ಮೆರವಣಿಗೆಗೆ ಚಾಲನೆ ನೀಡಿದರು. ವಿಧಾನಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಅವರು ಜಂಬೂ ಸವಾರಿ ಮರೆವಣಿಗೆಯ ನೇತೃತ್ವವಹಿಸಿದ್ದರು.

ಸಂಸದ ರಾಜಶೇಖರ ಹಿಟ್ನಾಳ, ಶಾಸಕ ಗಾಲಿ ಜನಾರ್ದನ ರೆಡ್ಡಿ, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಸಿದ್ದಪ್ಪ ನೀರಲೂಟಿ, ನಗರಸಭೆ ಮಾಜಿ ಅಧ್ಯಕ್ಷ ಜೋಗದ ಹನುಮಂತಪ್ಪನಾಯಕ ಭಾಗವಹಿಸಿದ್ದರು.


ಸಾಮೂಹಿಕ ವಿವಾಹ ಕಾರ್ಯಕ್ರಮ ಜರುಗಿತು. ಕಳೆದ 42 ವರ್ಷಗಳಿಂದ ಹೇಮಗುಡ್ಡದಲ್ಲಿ ಸಾಮೂಹಿಕ ವಿವಾಹ ನಡೆಯುತ್ತಿದೆ.

ಲಕ್ಷ್ಮೀವೆಂಕಟೇಶ್ವರ ದೇವರ ಸಂಭ್ರಮದ ಬ್ರಹ್ಮರಥೋತ್ಸವ:

ಅಭಿನವ ತಿರುಪತಿ ಎಂದೇ ಪ್ರಖ್ಯಾತಿ ಹೊಂದಿರುವ ಹನುಮಸಾಗರ ಬೆಟ್ಟದ ಮೇಲಿರುವ ಶ್ರೀಲಕ್ಷ್ಮೀವೆಂಕಟೇಶ್ವರ ದೇವಸ್ಥಾನದಲ್ಲಿ ದಸರಾ ಮಹೋತ್ಸವದ ನಿಮಿತ್ತ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರೀಲಕ್ಷ್ಮೀವೆಂಕಟೇಶ್ವರ ದೇವರ ಬ್ರಹ್ಮರಥೋತ್ಸವ ಸೋಮವಾರ ಸಂಜೆ ವಿಜೃಂಭಣೆಯಿಂದ ಜರುಗಿತು.

ಕಳೆದ ಹತ್ತು ದಿನಗಳಿಂದ ಬೆಟ್ಟದ ಶ್ರೀನಿವಾಸನಿಗೆ ನಂದಾದೀಪ ಸೇರಿದಂತೆ ನಿತ್ಯ ಸುಪ್ರಭಾತ, ಪಂಜಾಮೃತ ಅಭಿಷೇಕ, ಪ್ರವಚನ, ಕನಕಾಭಿಷೇಕ, ಪುಷ್ಪಾರ್ಚನೆ, ರಥಾಂಗ ಹೋಮ, ಪಲ್ಲಕ್ಕಿ ಉತ್ಸವದಂತಹ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದವು.ರಥೋತ್ಸವದಲ್ಲಿ ವಿವಿಧ ಭಜನಾ ಮಂಡಳಿಗಳ ಸದಸ್ಯರು ದೇವರ ನಾಮಸಂಕೀರ್ತನೆ ಹಾಡಿದರು. ಬೆಂಗಳೂರು, ಹೈದರಾಬಾದ್, ಕುಷ್ಟಗಿ, ಕೊಪ್ಪಳ, ಇಳಕಲ್, ಕುಂಬಳಾವತಿ, ಚಳಗೇರಿ, ಹನುಮನಾಳ, ಹೂಲಗೇರಿ ಸೇರಿದಂತೆ ಮುಂತಾದ ಹತ್ತಾರು ಗ್ರಾಮಗಳ ಭಕ್ತರು, ಚುನಾಯಿತ ಪ್ರತಿನಿಧಿಗಳು, ಮುಖಂಡರು, ದೇವಸ್ಥಾನದ ವಿಶ್ವಸ್ಥ ಮಂಡಳಿಯವರು, ಅರ್ಚಕರು ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.