ವಿಜೃಂಭಣೆಯಿಂದ ಜಂಬೂರು ಶನೇಶ್ವರ ಬ್ರಹ್ಮರಥೋತ್ಸವ

| Published : Nov 05 2024, 12:34 AM IST

ವಿಜೃಂಭಣೆಯಿಂದ ಜಂಬೂರು ಶನೇಶ್ವರ ಬ್ರಹ್ಮರಥೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ನುಗ್ಗೇಹಳ್ಳಿ ಹೋಬಳಿಯ ಜಂಬೂರು ಗ್ರಾಮದ ಪುರಾಣ ಪ್ರಸಿದ್ಧ ಶನೇಶ್ವರ ಸ್ವಾಮಿಯವರ 37ನೇ ಜಾತ್ರಾ ಮಹೋತ್ಸವ ಹಾಗೂ ಬ್ರಹ್ಮರಥೋತ್ಸವ ಕಾರ್ತಿಕ ಸೋಮವಾರದಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಶ್ರೀ ಶನೇಶ್ವರ ಸ್ವಾಮಿಗೆ ವಿಶೇಷ ಪೂಜೆ ಅಭಿಷೇಕ ಹೂವಿನ ಅಲಂಕಾರ ಸೇರಿದಂತೆ ಗ್ರಾಮದ ರಾಜಭೀದಿಗಳಲ್ಲಿ ಶ್ರೀ ಶನೇಶ್ವರ ಸ್ವಾಮಿ ಹಾಗೂ ಕೋಟೆ ಮಾರಮ್ಮನವರ ಉತ್ಸವ ನಡೆಯಿತು.

ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ

ಹೋಬಳಿಯ ಜಂಬೂರು ಗ್ರಾಮದ ಪುರಾಣ ಪ್ರಸಿದ್ಧ ಶನೇಶ್ವರ ಸ್ವಾಮಿಯವರ 37ನೇ ಜಾತ್ರಾ ಮಹೋತ್ಸವ ಹಾಗೂ ಬ್ರಹ್ಮರಥೋತ್ಸವ ಕಾರ್ತಿಕ ಸೋಮವಾರದಂದು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ಬೆಳಗ್ಗೆಯಿಂದಲೇ ಶ್ರೀ ಶನೇಶ್ವರ ಸ್ವಾಮಿಗೆ ವಿಶೇಷ ಪೂಜೆ ಅಭಿಷೇಕ ಹೂವಿನ ಅಲಂಕಾರ ಸೇರಿದಂತೆ ಗ್ರಾಮದ ರಾಜಭೀದಿಗಳಲ್ಲಿ ಶ್ರೀ ಶನೇಶ್ವರ ಸ್ವಾಮಿ ಹಾಗೂ ಕೋಟೆ ಮಾರಮ್ಮನವರ ಉತ್ಸವ ನಡೆಯಿತು. ಜಾತ್ರಾ ಮಹೋತ್ಸವದ ಅಂಗವಾಗಿ ಜಂಬೂರು ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳಿಂದ ಮಹಿಳೆಯರು ತುಂಬಿಟ್ಟಿನ ಆರತಿಯೊಂದಿಗೆ ದೇವಾಲಯಕ್ಕೆ ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಸಂಪ್ರದಾಯದಂತೆ ಶ್ರೀ ಶನೇಶ್ವರ ಸ್ವಾಮಿಯನ್ನು ರಥದ ಸುತ್ತ ಮೂರು ಸುತ್ತು ಪ್ರದಕ್ಷಿಣೆ ನಡೆಸಿ ನಂತರ ದೇವರನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ವಿವಿಧ ಪೂಜೆಗಳು ನಡೆದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ರಥಕ್ಕೆ ಹಣ್ಣು ದವನ ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು.

ಬೆಂಗಳೂರು ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡರು. ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಅನೇಕ ಗ್ರಾಮಗಳ ಗ್ರಾಮದೇವತೆಗಳ ಉತ್ಸವ ನಡೆಸಲಾಯಿತು. ವೀರಗಾಸೆ ಕುಣಿತ ಹಾಗೂ ಮಹಿಳಾ ಕೋಲಾಟ ಭಕ್ತರ ಗಮನ ಸೆಳೆಯಿತು. ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಸೋಮವಾರ ರಾತ್ರಿ ಶ್ರೀ ಶನೇಶ್ವರ ಸ್ವಾಮಿಯವರ ಹರಿಕಥೆ ನಡೆಯಲಿದೆ.

ಜಾತ್ರಾ ಮಹೋತ್ಸವದಲ್ಲಿ ದೇವಾಲಯದ ಪ್ರಧಾನ ಅರ್ಚಕ ಮಾದೇವಸ್ವಾಮಿ, ಅರ್ಚಕ ಚೆಲುವರಾಜು, ಕಾಂಗ್ರೆಸ್ ಮಹಿಳಾ ನಾಯಕಿ ಗೀತಾ ಗೋಪಾಲಸ್ವಾಮಿ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಎಂಎ ರಂಗಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ ಎಂ ಎ. ನಾರಾಯಣಸ್ವಾಮಿ, ಗುಡಿ ಗೌಡ್ರು ಕುಮಾರಸ್ವಾಮಿ ಸೇರಿದಂತೆ ಜಂಬೂರು ಗ್ರಾಮಸ್ಥರು ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.